ಮೈಸೂರು, (ಸೆ.21): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕುಟುಂಬದ ಹಸ್ತಕ್ಷೇಪದಿಂದಲೇ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಮಾಜಿ ಸಂಸದ ಧ್ರುವನಾರಾಯಣ್ ಭವಿಷ್ಯ ನುಡಿದಿದ್ದಾರೆ.

ಇಂದು (ಸೋಮವಾರ) ಮೈಸೂರಿನ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಯಡಿಯೂರಪ್ಪನವರು ಈ ಹಿಂದೆ ಅಧಿಕಾರದಲ್ಲಿದ್ದಾಗ ಕುಟುಂಬದವರ ಹಸ್ತಕ್ಷೇಪದಿಂದ ಈಗಾಗಲೇ ಒಂದು ಬಾರಿ ಅಧಿಕಾರ ಕಳೆದುಕೊಂಡು ಜೈಲಿಗೆ ಹೋಗಿದ್ದರು. ಅದರ ಎರಡನೇ ಅಧ್ಯಾಯ ಈಗ ಶುರುವಾಗಲಿದೆ ಎಂದು ಹೇಳಿದರು.

ಕರ್ನಾಟಕದ ಮೇಲೆ ರಾಹು-ಕೇತು ಬದಲಾವಣೆ ಪರಿಣಾಮ, BSY ಕುರ್ಚಿ ಏನಾಗಲಿದೆ? 

ರಾಜ್ಯದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಎಲ್ಲದರಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಸರ್ಕಾರದಲ್ಲಿ ಮಂತ್ರಿಗಳಲ್ಲೇ ಸಾಮರಸ್ಯದ ಕೊರತೆಯಿದೆ. ಆರೋಗ್ಯ ಸಚಿವ ಶ್ರೀರಾಮುಲು ಒಂದು ಹೇಳಿದರೆ, ವೈದ್ಯಕೀಯ ಶಿಕ್ಷಣ ಸಚಿವ ಮತ್ತೊಂದು ಹೇಳುತ್ತಾರೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರ, ರಾಜ್ಯಕ್ಕೆ ನ್ಯಾಯವಾಗಿ ನೀಡಬೇಕಾದ ಜಿಎಸ್ ಟಿ ಹಣವನ್ನೇ ನೀಡಿಲ್ಲ. ಜಿಎಸ್ ಟಿ ಪಾಲಿನ ಹಣವನ್ನು ಕೇಳಿದರೆ, ಸಾಲ ಮಾಡಿ ಎಂದು ಕೇಂದ್ರದವರು ಹೇಳುತ್ತಾರೆ. ಈಗಾಗಲೇ ರಾಜ್ಯ ಸರ್ಕಾರದ ಬೊಕ್ಕಸ ಬರಿದಾಗಿದೆ. ಒಬ್ಬೊಬ್ಬರ ಮೇಲೂ ಅಂದಾಜು 63 ಸಾವಿರಗಳಷ್ಟು ಸಾಲದ ಹೊರೆ ಹೊರಿಸಲಾಗಿದೆ. ಇನ್ನು ಜನಸಾಮಾನ್ಯರನ್ನು ಎಲ್ಲಿಯವರೆಗೆ ಸಾಲದ ಕೂಪಕ್ಕೆ ತಳ್ಳುತ್ತೀರಿ ಎಂದು ಧ್ರುವನಾರಾಯಣ್ ಪ್ರಶ್ನಿಸಿದರು.