ಭಯೋತ್ಪಾದಕರ ವಿರುದ್ಧ ಹೋರಾಟ ಮಾಡಲು ನಾವು ಬಿಜೆಪಿಯಿಂದ ಕಲಿಯಬೇಕಾಗಿಲ್ಲ, ಅವರ ಸರ್ಟಿಫಿಕೇಟ್ ಕೂಡಾ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.‌

ಶಿರಸಿ (ಡಿ.18): ಭಯೋತ್ಪಾದಕರ ವಿರುದ್ಧ ಹೋರಾಟ ಮಾಡಲು ನಾವು ಬಿಜೆಪಿಯಿಂದ ಕಲಿಯಬೇಕಾಗಿಲ್ಲ, ಅವರ ಸರ್ಟಿಫಿಕೇಟ್ ಕೂಡಾ ಬೇಡ ಎಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.‌ ಮಹಾತ್ಮಗಾಂಧಿಯವರನ್ನು ಕೊಂದದ್ದು ಯಾರೂಂತ ಇವರು‌ ಹೇಳಲಿ. ರಾಷ್ಟ್ರದ ಏಕತೆಗೆ ಧಕ್ಕೆ ಬಂದಾಗ ಪ್ರಾಣಾರ್ಪಣೆ ಮಾಡಿದ್ದು ಇಂದಿರಾ ಗಾಂಧಿ. ರಾಷ್ಟ್ರದ ಅಖಂಡತೆಗೆ ಧಕ್ಕೆ ಬಂದಾಗ ರಾಜೀವ ಗಾಂಧಿಯವರ ಪ್ರಾಣಾರ್ಪಣೆಯಾಗಿತ್ತು. ಸಾವಿರಾರು ಜನರು ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ್ದಾರೆ. ಬ್ರಿಟೀಷರ ಬೂಟು ನೆಕ್ಕುವ ಜನರಿಂದ ನಾವೇನು ಕಲಿಯಬೇಕಾಗಿಲ್ಲ. 

ಭಯೋತ್ಪಾದಕರು ಅಂದ್ರೆ ಕಾಂಗ್ರೆಸ್‌ಗೆ ಪ್ರೀತಿ ಅಂತಾ ಹೇಳೋ ಇವರು ಮನೆಯ ಅಳಿಯನ ತರ ಉಗ್ರಗಾಮಿಯನ್ನು ಕಂದಹಾರ್‌ನಲ್ಲಿ ಬಿಟ್ಟು ಬಂದಿದ್ರು. ಮನೋಹರ್‌ಪುರದಲ್ಲಿ ಕುಟುಂಬವೊಂದನ್ನು ಜೀವಂತವಾಗಿ ಸುಟ್ಟವರನ್ನು ಅಡ್ವಾಣಿ ನಿರಪರಾಧಿ ಅಂದಿದ್ರು. ಹಾಗಾದ್ರೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಯಾಕಾಯ್ತು ? ಗಲ್ಲು ಶಿಕ್ಷೆಯಾದದ್ದನ್ನು ನಂತರ ಜೀವಾವಧಿ ಶಿಕ್ಷೆ ಮಾಡಿ ಕೊಲೆ ಮಾಡಿದ್ದನ್ನು ವಿಜೃಂಭಿಸ್ತಿದ್ದಾರೆ. ಇಂತಹ ಪ್ರವೃತ್ತಿ, ಸಂಸ್ಕೃತಿ ಕಾಂಗ್ರೆಸ್ ಪಕ್ಷದಲ್ಲಿಲ್ಲ. ಮಂಗಳೂರು ಪೊಲೀಸ್ ಕಮಿಷನರ್ ಒಂದು ವಾರವಾದ್ರೂ ವಿಚಾರ ಮಾಡಿಲ್ಲ ಎಂದು ಹೇಳಿದ್ದನ್ನೇ ಡಿ.ಕೆ.ಶಿವಕುಮಾರ್ ತಿಳಿಸಿದ್ರು. ಬಿಜೆಪಿಯವರು ನಾಗ್ಪುರ ಯೂನಿವರ್ಸಿಟಿಯಲ್ಲಿ ಮತ್ತು ಇವರ ಶಾಖೆಯಲ್ಲಿ ವಿಚಾರಣೆ ಮಾಡಿ ಇವರು ಉಗ್ರವಾದಿಗಳು ಎಂದು ಹೇಳಿರಬೇಕು. ಬಿಜೆಪಿಯವರ ಈ ಹೇಳಿಕೆ ವಿರುದ್ಧ ಡಿಕೆಶಿ ಪ್ರತಿಕ್ರಯಿಸಿದ್ದಾರೆ ವಿನಹಃ ಯಾವುದೇ ಉಗ್ರವಾದಿಗಳಿಗೆ ಬೆಂಬಲಿಸಿಲ್ಲ ಎಂದು ಹೇಳಿದರು.

Uttara Kannada: ಅರಣ್ಯ ನಿವಾಸಿಗಳ ಬೃಹತ್ ಹೋರಾಟ: ಸರ್ಕಾರಕ್ಕೆ ಎಚ್ಚರಿಕೆ

ಕಾಂಗ್ರೆಸನ್ನು ಬ್ಯಾನ್ ಮಾಡೋಕಾಗಲ್ಲ: ಕಾಂಗ್ರೆಸ್‌ ಅನ್ನು ಪಿಎಫ್‌ಐ ಮಾದರಿಯಲ್ಲಿ ಬ್ಯಾನ್ ಮಾಡುವಂತೆ ಈಶ್ವರಪ್ಪ ಹೇಳಿಕೆ ವಿಚಾರ ಸಂಬಂಧಿಸಿ ಪ್ರತಿಕ್ರಯಿಸಿದ ಬಿ.ಕೆ.ಹರಿಪ್ರಸಾದ್, ಇವರ ವಂಶಪೂರ್ತಿ ಇನ್ನು ಹತ್ತು ಸಲ ಹುಟ್ಟಿದ್ರೂನು ಕಾಂಗ್ರೆಸನ್ನು ಬ್ಯಾನ್ ಮಾಡೋಕಾಗಲ್ಲ. ಜನರ ಭಾವನೆ ಕೆರಳಿಸಿ, ಸುಳ್ಳು ಹೇಳಿ ಜೋರ್ ಜೋರಾಗಿ ಹೇಳಲು ಅವರ ಕಡೆಯವರೇ ಪಾಠ ಹೇಳಿಕೊಟ್ಟಿದ್ದಾರೆ. ಏನೂ ಆಗಿಲ್ಲಾಂದ್ರೆ ಸುಳ್ಳಾದ್ರೂ ಹೇಳಿ ಬನ್ನಿ ಎನ್ನುವುದು ಈಶ್ವರಪ್ಪನವರದ್ದೇ ಸ್ಲೋಗಾನ್. ನೂರು ಸುಳ್ಳುಗಳನ್ನು ಬಾರಿ ಬಾರಿ ಹೇಳಿ ಸತ್ಯ ಮಾಡಲು ಪ್ರಯತ್ನ ಮಾಡ್ತಾರೆ. ಇವರಿಂದ ಕಾಂಗ್ರೆಸ್ ಪಕ್ಷವನ್ನು ಏನೂ ಮಾಡಲಾಗುವುದಿಲ್ಲ. ಕಾಂಗ್ರೆಸ್‌ ಜನರು ಕಟ್ಟಿರುವ ಪಕ್ಷವೇ ಹೊರತು ನಾಗ್ಪುರ ಅಥವಾ ಹಾವಿನಪುರದ ಪಾರ್ಟಿಯಲ್ಲ ಎಂದು ಹೇಳಿದರು.

ಬಿಜೆಪಿಯವರು ಕಾಂಗ್ರೆಸ್ ನಾಯಕರನ್ನು ಕದ್ದಿದ್ದು: ಕಾಂಗ್ರೆಸ್‌ನಲ್ಲಿ ರಿವರ್ಸ್ ಏನೂ ಆಗಿಲ್ಲ. ಬಿಜೆಪಿ ನಾಯಕರು ಭ್ರಮನಿರಸರಾಗಿದ್ದಾರೆ. ಏನೋ ಸರಕಾರ ಕೊಡ್ತೇವೆ ಅಂತಾ ಆಕಾಶ ತೋರಿಸುತ್ತಿದ್ದರು. ಮಾಡೋ ತಪ್ಪು ಎಲ್ಲಾ ಮಾಡ್ಬಿಟ್ಟು ಆಮೇಲೆ ದೇಶ ಭಕ್ತಿ, ರಾಷ್ಟ್ರಭಕ್ತಿ ಅನ್ನೋದು. ಕಾಂಗ್ರೆಸ್ ಪಕ್ಷದ ನಾಯಕತ್ವ, ಸಿದ್ಧಾಂತ ಒಪ್ಪಿಕೊಂಡು ಬರುವವರಿಗೆ ಸ್ವಾಗತ ಮಾಡ್ತೀವಿ, ಅದು ರಿವರ್ಸ್ ಆಗೋದಿಲ್ಲ. ಬಿಜೆಪಿಯವರು ಕಾಂಗ್ರೆಸ್ ನಾಯಕರನ್ನೇ ಖರೀದಿಸಿ, ಕಳ್ಳತನ ಮಾಡಿಕೊಂಡು ಕರೆದುಕೊಂಡು ಹೋಗಿರುವಂತದ್ದು. ವಿಶ್ವನಾಥ್ ಇರಬಹುದು, ಉಳಿದ 15-16 ಜನರನ್ನು ಬಿಜೆಪಿಯವರು ಕಳ್ಳತನ ಮಾಡಿರುವಂತದ್ದು ಎಂದು ಬಿ.ಕೆ.ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ. ಇನ್ನು ಉಗ್ರವಾದಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಬಿಜೆಪಿ ಆರೋಪ ಹಿನ್ನೆಲೆ ಪ್ರತಿಕ್ರಯಿಸಿದ ಅವರು, ರಾಷ್ಟ್ರದ ಮೊಟ್ಟ ಮೊದಲನೇಯ ಟೆರರಿಸ್ಟ್, ಕೊಲೆಗಟುಕ ನಾಥುರಾಮ ಗೋಡ್ಸೆಯನ್ನು ಇವರು ಕೊಲೆಗಡುಕ, ಉಗ್ರವಾದಿ ಎಂದು ಹೇಳಲಿ. ಆಗ ನಾವು ಹೇಳ್ತೇವೆ ಯಾರು ಉಗ್ರವಾದಿ, ಯಾರು ಉಗ್ರವಾದಿಯಲ್ಲ ಅಂತಾ ಎಂದು ಟೀಕಿಸಿದರು.

ಬಿಜೆಪಿ ವಾಮ ಮಾರ್ಗದ ಮೂಲಕ ಸರಕಾರ ರಚಿಸಿದ್ದು: ಬಹಳಷ್ಟು ಉತ್ಸಾಹವಿದ್ದ ಗುಜರಾತ್‌ನಲ್ಲಿ ಬಿಜೆಪಿಯವರು ತೆಗೊಂಡಿದ್ದು ಶೇ. 3ರಷ್ಟು ಮತ ಮಾತ್ರ. ಆಮ್ ಆದ್ಮಿ ಪಕ್ಷವಿಟ್ಟುಕೊಂಡು ಮತ ವಿಭಜನೆ ಮಾಡಿದ್ರು ವಿನಹಃ ಇವರು ಮಾಡಿದ ಕೆಲಸಗಳೇನೂ ಇಲ್ಲ. ಹೇಳಿಕೊಳ್ಳುವ ಯಾವುದೇ ಕೆಲಸವನ್ನು ಬಿಜೆಪಿ ದೇಶದಲ್ಲಿ ಮಾಡಿಲ್ಲ. ಯಾವುದಾದರೂ ಒಂದೇ ಒಂದು ಸರಕಾರಿ ಶಾಲೆ, ಆಸ್ಪತ್ರೆ ತೆರೆದಿದ್ದರೆ ಹೇಳಲಿ. ಇವರು ಬಂಡವಾಳ ಶಾಹಿಗಳಿಗೆ ಮಾತ್ರ ಸಹಾಯ ಮಾಡುವಂತವರು. ಇವರಿಂದ ರಾಷ್ಟ್ರ, ರಾಜ್ಯ ಹಾಗೂ ಜನಸಾಮಾನ್ಯರಿಗೆ ಏನೂ ಆಗೋದಿಲ್ಲ. ಕಾಂಗ್ರೆಸ್ ಅದರದ್ದೇ ಆದ ಸಿದ್ಧಾಂತ, ಕಾರ್ಯಕ್ರಮದ ಮೇಲೆ ಚುನಾವಣೆ ಎದುರಿಸುತ್ತದೆ.‌ ಬಿಜೆಪಿಯವರು ಗುಜರಾತ್ ಮಾದರಿಯಲ್ಲೇ ರಾಜ್ಯದಲ್ಲೂ ಚುನಾವಣೆ ಎದುರಿಸಲಿ. 

ಅದು ನಮಗೆ ಬಹಳಷ್ಟು ಅನುಕೂಲ. ಎಷ್ಟು ಬಾರಿ ವಿಶ್ವಗುರು, ಸುಳ್ಳಿನ ಸರದಾರ ನರೇಂದ್ರ ಮೋದಿ ರಾಜ್ಯಕ್ಕೆ ಬರ್ತಾರೆ ಅಷ್ಟು ಒಳ್ಳೆಯದು. ಎಷ್ಟು ಬಾರಿ ಗಡಿಪಾರಾಗಿದ್ದ ಗೃಹಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದ್ರೆ ಅಷ್ಟೂ ರಾಜ್ಯದಲ್ಲಿ ಒಳ್ಳೆಯದೇ.‌ ರಾಜ್ಯದ ಜನರು ಇಂತವರನ್ನು ಯಾವತ್ತೂ ಸಹಿಸಿಲ್ಲ. 2007, 2012, 2018ರಲ್ಲೂ ಗುಜರಾತ್ ಗೆದ್ದಿತ್ತು.‌ ಯಾವತ್ತೂ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಆಪರೇಷನ್ ಕಮಲ, ವಾಮ ಮಾರ್ಗದ ಮೂಲಕ ಇವರು ಸರಕಾರ ಮಾಡಿದ್ದೇ ವಿನಹಃ ಅವರದ್ದೇ ಆದ ಬೆಂಬಲ ಸಿಕ್ಕಿಲ್ಲ, ಸಿಗೋದು ಇಲ್ಲ.‌ ಚೀನಾದವರು ಆಕ್ರಮಿಸಿದ ಜಾಗವನ್ನು ವಾಪಾಸ್ ತೆಗೆದುಕೊಂಡ ಬಳಿಕ ದೇಶಭಕ್ತಿ, ದೇಶಪ್ರೇಮದ ಬಗ್ಗೆ ಇವರು ಮಾತನಾಡಲಿ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.

ಸರ್ಕಾರ ಅಭಿವೃದ್ಧಿ ಪರವಾಗಿದ್ದರೆ ಹೆಚ್ಚು ಅನುದಾನ: ವಿಧಾನಸಭಾಧ್ಯಕ್ಷ ಕಾಗೇರಿ

ಸಿಎಂ ಮತಾಂತರ ಆಗಿದ್ದಾರೋ, ಪಕ್ಷಾಂತರ ಆಗಿದ್ದಾರೋ: ಬೆಳಗಾವಿ ವಿಚಾರದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಗೊಂದಲದಲ್ಲಿದ್ದಾರೆ./ಸಮಾಜವಾದ ಹಿನ್ನೆಲೆಯಿಂದ ಬಂದ ಇವರು ಮತಾಂತರ ಆಗಿದ್ದಾರೋ, ಪಕ್ಷಾಂತರ ಆಗಿದ್ದಾರೋ ಕೋಮುವಾದಕ್ಕೆ ಅಂತಾ ಗೊತ್ತಾಗ್ತಿಲ್ಲ. ಅವರು ಅತಂತ್ರದಲ್ಲಿರುವುದರಿಂದ ಸ್ವಲ್ಪ ಕಾದು ನೋಡಬೇಕಾಗಿದೆ.‌ ಬಿಜೆಪಿಯವರಿಗೆ ಬೇರೇನೂ ಕಾರ್ಯಕ್ರಮವೇ ಇಲ್ಲ. ಜನರಿಗೆ ಹಿಂಸೆ ನೀಡಿ, ಸುಳ್ಳು ಹೇಳುವುದು, ಕೋಮುವಾದ, ನೈತಿಕ ಪೊಲೀಸ್ ಗಿರಿಯನ್ನೇ ನಡಿಸ್ತಿದ್ದಾರೆ. ಹಿಂಸೆ, ಸುಳ್ಳಿನ ಅಡಿಪಾಯದಲ್ಲಿರುವವರು ಎಷ್ಟು ದಿನ ನಿಲ್ತಾರೆಂದು ನಾವೂ ನೋಡ್ತೇವೆ. ನಾವು ಬಹಳಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ, ಹಿಂದುತ್ವ ಅನ್ನೋದು ಏನೂ ಇಲ್ಲ.‌ ಸರಿಯಾದ ಸಾಮಾಜಿಕ ನ್ಯಾಯವಾದ್ರೆ ಎಲ್ಲಾ ಸರಿಯಾಗುತ್ತೆ. ಇವರು ಬೂಟಾಟಿಕೆಯ ದಾಸಯ್ಯರು ಎಂದು ಜನರಿಗೆ ಗೊತ್ತಾಗಿದೆ. ಇವರು ಬರೀ ನಾಮ, ಕಾವಿ ಬಟ್ಟೆ ಹಾಕಿಕೊಳ್ತಾರೆ ವಿನಹಃ ಅದರ ತಿರುಳು ಕೂಡಾ ಇವರಲ್ಲಿಲ್ಲ.‌ ಇದರಿಂದಾಗಿ ಜನರು ಇವರನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತಾರೆ ಎಂದು ಶಿರಸಿಯಲ್ಲಿ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿದರು.