Asianet Suvarna News Asianet Suvarna News

Uttara Kannada: ಅರಣ್ಯ ನಿವಾಸಿಗಳ ಬೃಹತ್ ಹೋರಾಟ: ಸರ್ಕಾರಕ್ಕೆ ಎಚ್ಚರಿಕೆ

ಅವರೆಲ್ಲಾ ಅರಣ್ಯ ಭೂಮಿಯನ್ನೇ‌ ನಂಬಿ, ಅರಣ್ಯದ ನಡುವೆಯೇ ಅನಾದಿ ಕಾಲದಿಂದ ವಾಸಿಸುತ್ತಾ ಬಂದಿರುವವರು. ತಾವಿದ್ದ ನೆಲೆಯ ಹಕ್ಕಿಗಾಗಿ ಕಳೆದ ಮೂರು ದಶಕಗಳಿಂದ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ.

Massive Protest by forest dwellers in Sirsi at Uttara Kannada gvd
Author
First Published Dec 17, 2022, 11:59 PM IST

ಭರತ್‌ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಶಿರಸಿ (ಡಿ.17): ಅವರೆಲ್ಲಾ ಅರಣ್ಯ ಭೂಮಿಯನ್ನೇ‌ ನಂಬಿ, ಅರಣ್ಯದ ನಡುವೆಯೇ ಅನಾದಿ ಕಾಲದಿಂದ ವಾಸಿಸುತ್ತಾ ಬಂದಿರುವವರು. ತಾವಿದ್ದ ನೆಲೆಯ ಹಕ್ಕಿಗಾಗಿ ಕಳೆದ ಮೂರು ದಶಕಗಳಿಂದ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದಾರೆ. ಆದ್ರೆ, ಸರ್ಕಾರ ಮಾತ್ರ ಅವರ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಇದರಿಂದ ರೊಚ್ಚಿಗೆದ್ದ ಅರಣ್ಯ ನಿವಾಸಿಗಳು ಬೃಹತ್ ಸಮಾವೇಶ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ. ನೂರಾರು ವರ್ಷಗಳಿಂದ‌ ತಾವು ನೆಲೆಸಿದ್ದ  ಭೂಮಿಯನ್ನು ಉಳಿಸಿಕೊಳ್ಳುವುದಕ್ಕೆ ಅರಣ್ಯ ನಿವಾಸಿಗಳು ಇದೀಗ ಸಂಘಟಿತ ಹೋರಾಟಕ್ಕೆ ಮುಂದಾಗಿದ್ದಾರೆ. 

ಸರ್ವೋಚ್ಚ ನ್ಯಾಯಾಲಯ ಬೇರೆಬೇರೆ ರಾಜ್ಯಗಳಲ್ಲಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಲು ಆದೇಶ ನೀಡಿದ್ದರಿಂದ ರಾಜ್ಯದ  ಅರಣ್ಯವಾಸಿಗಳು ಅಘಾತಕ್ಕೊಳಗಾಗಿದ್ದಾರೆ. ಹೀಗಾಗಿ ಜಿಲ್ಲೆಯ ಶಿರಸಿಯಲ್ಲಿ ಅರಣ್ಯ ಭೂಮಿ ಹಕ್ಕೊತ್ತಾಯ ಬೃಹತ್ ಸಮಾವೇಶ ಮಾಡುವ ಮೂಲಕ ತಿಂಗಳ ಒಳಗೆ ರಾಜ್ಯದ ಅರಣ್ಯ ಅತಿಕ್ರಮಣದಾರರಿಗೆ ಹಕ್ಕು ಪತ್ರಗಳನ್ನು ಸರ್ಕಾರ ನೀಡಲೇ ಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಮಾವೇಶದಲ್ಲಿ ಸುಮಾರು 5000ಕ್ಕೂ ಅಧಿಕ ಅರಣ್ಯ ಮಕ್ಕಳು ಭಾಗಿಯಾಗಿದ್ದು, ತಮ್ಮ ಭೂ ಹಕ್ಕಿಗಾಗಿ ಹೋರಾಟ ನಡೆಸಿದ್ದಾರೆ. 

ಸರ್ಕಾರ ಅಭಿವೃದ್ಧಿ ಪರವಾಗಿದ್ದರೆ ಹೆಚ್ಚು ಅನುದಾನ: ವಿಧಾನಸಭಾಧ್ಯಕ್ಷ ಕಾಗೇರಿ

ಈ ಕುರಿತು ಅರಣ್ಯ ಭೂಮಿ ಹಕ್ಕೊತ್ತಾಯ ಸಂಘಟನೆಯ ಅಧ್ಯಕ್ಷ ರವೀಂದ್ರನಾಥ ಮಾತನಾಡಿ, ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲೂ ಪ್ರತಿಭಟನೆ ಮಾಡುವ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವುದು. ಸರಕಾರ ಬಡವರ ಭೂಮಿಯ ಹಕ್ಕನ್ನು ನೀಡದಿದ್ದಲ್ಲಿ ಬಂದ್‌ಗೆ ಕರೆ ಕೊಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್, ಕಾಂಗ್ರೆಸ್ ಸರಕಾರ ಉಳುವವನೇ ಹೊಲದೊಡೆಯ ಯೋಜನೆ ಜಾರಿಗೆ ತಂದಿತ್ತು. 

ಬಿಜೆಪಿ ಮಾತ್ರ ಬಡವರಿಗೆ ಬಿಟ್ಟು ಬಾಬಾ ರಾಮದೇವ್, ಅದಾನಿಯವರಿಗೆ ಜಾಗ ನೀಡುತ್ತಿದೆ‌‌.‌ ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದು‌ ಹೇಳಿದರು. ಇನ್ನು ದೇಶದಲ್ಲಿ ರಾಷ್ಟ್ರೀಯ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದು ಒಂದೂವರೆ ದಶಕವಾದ್ರೂ ಕರ್ನಾಟಕದಲ್ಲಿ ವಿಫಲವಾಗಿದೆ.  ಹೀಗಾಗಿ ತಾತ್ವಿಕ ಅಂತಿಮ ಹೋರಾಟ ನಡೆಸಿ ಕೇಂದ್ರ ಮತ್ತು ರಾಜ್ಯದ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಉದ್ದೇಶ ಈ ಸಮಾವೇಶದ್ದಾಗಿದೆ. ರಾಜ್ಯದಲ್ಲಿ ಸುಮಾರು14 ಲಕ್ಷ ಅರಣ್ಯವಾಸಿ ಕುಟುಂಬಗಳಿವೆ. ಅಕ್ರಮ ಸಕ್ರಮ ಕಾಯ್ದೆಯಡಿ ಒಟ್ಟು  2ಲಕ್ಷ 94 ಸಾವಿರ ಅರ್ಜಿಗಳು ಬಂದಿವೆ.  

ಇದರಲ್ಲಿ 2 ಲಕ್ಷ 43 ಸಾವಿರ ಅರ್ಜಿ ತಿರಸ್ಕಾರಗೊಂಡಿವೆ.  ಕೇವಲ 15006 ಕುಟುಂಬಗಳಿಗೆ ಹಕ್ಕು ಪತ್ರ  ಲಭಿಸಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇಕಡಾ 80 ರಷ್ಟು ಅರಣ್ಯ ಪ್ರದೇಶಗಳಿದ್ದು, ಸುಮಾರು ಲಕ್ಷಕ್ಕೂ ಹೆಚ್ಚು ಅತಿಕ್ರಮಣ ಕುಟುಂಬಗಳಿವೆ.  ಹೀಗಾಗಿ ಸರ್ಕಾರ ಹಕ್ಕು ಸಮಿತಿಯಲ್ಲಿ ನೀಡಿದ ಅರ್ಜಿ ಪರಿಶೀಲಿಸಿ ತ್ವರಿತಗತಿಯಲ್ಲಿ ಮಂಜೂರಿ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಈ ಸಂಬಂಧ ಈಗಾಗಲೇ ಸ್ಪಂದನೆ ನೀಡಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಜಿಪಿಎಸ್ ಆಗಿರುವ ಜಾಗದ ತಂಟೆಗೆ ಯಾವುದೇ ಕಾರಣಕ್ಕೂ ಹೋಗಬಾರದೆಂದು ಅರಣ್ಯಾಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.‌ 

ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾನುವಾರುಗಳನ್ನು ಬಲಿಪಡೆಯುತ್ತಿದೆ ಚರ್ಮಗಂಟು ರೋಗ

ಜನರ ಪರವಾಗಿ ಸರಕಾರವಿದೆ, ಸೂಕ್ತ ದಾಖಲೆಗಳನ್ನು ಹೊಂದಿದವರಿಗೆ ಅವರ ಹಕ್ಕು ಸರಕಾರದಿಂದ ದೊರೆಯಲಿದೆ ಎಂದು ಹೇಳಿಕೆ ನೀಡಿದ್ದಾರೆ ಸಚಿವರು. ಒಟ್ಟಿನಲ್ಲಿ ಅನಾದಿ ಕಾಲದಿಂದ ಬದುಕು ಕಟ್ಟಿಕೊಂಡು ಬಂದಿರುವ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಆತಂಕ ಇದೀಗ ಎದುರಾಗಿದೆ. ಕಳೆದ 3 ದಶಕಗಳಿಂದಲೂ ಹಕ್ಕಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗದ ಕಾರಣ, ಅರಣ್ಯವಾಸಿಗಳು ಬೃಹತ್ ಹೋರಾಟಕ್ಕೆ ನಿರ್ಧರಿಸಿದ್ದಾರೆ. ಅಲ್ಲದೇ, ರಾಜ್ಯದ ವಿವಿಧ ಹಳ್ಳಿಗಳ ಅರಣ್ಯವಾಸಿಗಳನ್ನು ಜಾಗೃತಿಗೊಳಿಸಲು ಹೋರಾಟ ಆರಂಭವಾಗಿದೆ. ಆದರೆ, ಅರಣ್ಯವಾಸಿಗಳ ಹೋರಾಟಕ್ಕೆ ಜಯ ಸಲ್ಲುತ್ತೋ‌ ಇಲ್ಲವೋ ಎಂದು ಕಾದು ನೋಡಬೇಕಷ್ಟೇ.

Follow Us:
Download App:
  • android
  • ios