ಪರೇಶ್‌ ಮೇಸ್ತಾ ಕೊಲೆ ಆದಾಗ ಅನ್ಯಕೋಮಿಗಳು ಮಾಡಿದ ಕೊಲೆ ಎಂದು ಬೊಬ್ಬೆ ಹಾಕಿದ್ದ ಬಿಜೆಪಿ ನಾಯಕರು ಈಗ ಸಾಮೂಹಿಕ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಹರಿಹಾಯ್ದರು. 

ಶಿವಮೊಗ್ಗ (ಅ.10): ಪರೇಶ್‌ ಮೇಸ್ತಾ ಕೊಲೆ ಆದಾಗ ಅನ್ಯಕೋಮಿಗಳು ಮಾಡಿದ ಕೊಲೆ ಎಂದು ಬೊಬ್ಬೆ ಹಾಕಿದ್ದ ಬಿಜೆಪಿ ನಾಯಕರು ಈಗ ಸಾಮೂಹಿಕ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಹರಿಹಾಯ್ದರು. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೇಶ್‌ ಮೇಸ್ತಾ ಕೊಲೆಯಾದಾಗ ಬಿಜೆಪಿ ನಾಯಕರಾದ ಕೆ.ಎಸ್‌.ಈಶ್ವರಪ್ಪ, ಶೋಭಾ ಕರಂದ್ಲಾಜೆ, ಅನಂತಕುಮಾರ್‌ ಹೆಗ್ಡೆ ಬೊಬ್ಬೆ ಹೊಡೆದು, ಇದು ಅನ್ಯಕೋಮಿನವರು ಮಾಡಿದ ಕೊಲೆ ಎಂದು ಆರೋಪಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಂದ್‌ಗೆ ಕರೆ ನೀಡಿ, ಕೋಮು ಗಲಭೆ ಸೃಷ್ಟಿಸಿ ಹಿಂಸಾಚಾರಕ್ಕೆ ಕಾರಣರಾಗಿದ್ದರು. ಶೋಭಾ ಮೇಡಂ ಬಾಯಿಗೆ ಬಂದಂತೆ ಮಾತನಾಡಿ ಕೋಮು ಸಂಘರ್ಷಕ್ಕೆ ಕಾರಣರಾಗಿದ್ದರು. ಈಗ ಪರೇಶ್‌ ಮೇಸ್ತಾ ಹತ್ಯೆ ನಡೆದಿಲ್ಲ. ಆತನದ್ದು ಆಕಸ್ಮಿಕ ಸಾವು ಎಂದು ಸಿಬಿಐ ತನಿಖೆ ನಡೆಸಿ ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯವರು ಸಾಮೂಹಿಕ ರಾಜೀನಾಮೆ ನೀಡಬೇಕು ಎಂದು ಬೇಳೂರು ಆಗ್ರಹಿಸಿದರು.

ಶಾಸಕ ಹರತಾಳು ಹಾಲಪ್ಪ ಕುಟುಂಬದಿಂದ ಸಂಭ್ರಮದ 'ಭೂಮಿ ಹುಣ್ಣಿಮೆ' ಹಬ್ಬ

ಹರ್ಷನ ಕುಟುಂಬದವರಿಗೆ ಯಾಕೆ ಕೆಲಸ ಕೊಡಲಿಲ್ಲ?: ಇದೇ ರೀತಿ ಪ್ರವೀಣ್‌ ನೆಟ್ಟಾರು ಹಾಗೂ ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ಬಗ್ಗೆಯೂ ಗಲಾಟೆಗಳು ನಡೆದಿದ್ದವು. ರಾಜ್ಯ ಸರ್ಕಾರ ಪ್ರವೀಣ್‌ ಹತ್ಯೆಗೆ ಸಂಬಂಧಿಸಿದಂತೆ ಆತನ ಪತ್ನಿಗೆ ಸರ್ಕಾರಿ ಕೆಲಸ ನೀಡಿದೆ. ಆದರೆ, ಹರ್ಷನ ಕುಟುಂಬಕ್ಕೆ ಕೆಲಸ ನೀಡಿಲ್ಲ. ಏಕೆಂದರೆ ದಕ್ಷಿಣ ಕನ್ನಡದಲ್ಲಿ ಪೂಜಾರಿ ಸಮುದಾಯದ ಮತಗಳು ಹೆಚ್ಚಿವೆ. ಈಶ್ವರಪ್ಪ ಅವರು ಹರ್ಷನ ಕೊಲೆ ಪ್ರಕರಣವನ್ನು ಅತಿ ದೊಡ್ಡದಾಗಿ ಬಿಂಬಿಸಿದ್ದರು. ಆತ ಕೂಡ ಹಿಂದೂ ಅಲ್ಲವೇ? ಅವರ ಕುಟುಂಬಕ್ಕೆ ಏಕೆ ಕೆಲಸ ಕೊಡಲಿಲ್ಲ? ಈ ತಾರತಮ್ಯ ಏಕೆ ಎಂದು ಪ್ರಶ್ನಿಸಿದರು.

ಅಧಿಕಾರಿಗಳು ಒಳ್ಳೆ ಕೆಲಸ ಮಾಡಿದರೆ ವರ್ಗಾವಣೆ: ಹಿಂದಿನ ಎಸ್ಪಿ ಲಕ್ಷ್ಮೇ ಪ್ರಸಾದ್‌ ಅವರು ಜಿಲ್ಲೆಯಲ್ಲಿ ಶಾಂತಿ ಕಾಪಾಡುವಲ್ಲಿ ಯಶಸ್ವಿಯಾಗಿದ್ದರು. ಕೋಮು ಗಲಭೆಯನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದರು. ಇಂತಹ ದಕ್ಷ ಅಧಿಕಾರಿಯನ್ನು ವರ್ಗಾವಣೆ ಮಾಡಿದ ಹಿಂದೆ ರಾಜಕೀಯ ದುರುದ್ದೇಶವಿದೆ. ಈಗ ಬಂದಿರುವ ಎಸ್ಪಿಯವರು ಶಾಂತಿ ಕಾಪಾಡಬಹುದು. ಆದರೆ, ಅವರಿಗೆ ಸಮಯ ಬೇಕಾಗುತ್ತದೆ. ಬಿಜೆಪಿಯರಿಗೆ ಸಮಾಜ ಶಾಂತಿಯಿಂದ ಇರುವುದು ಆಗಲ್ಲ ಅದಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಕುಟುಕಿದರು.

ಮಲೆನಾಡಿಲ್ಲಿ ಅಡಿಕೆ ಬೆಳೆಗಾರರ ಸಂಕಷ್ಟ ಹೆಚ್ಚುತ್ತಿದೆ. ಕೇಂದ್ರ ಸರ್ಕಾರ ಭೂತಾನ್‌ ದೇಶದಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿದೆ. ಜೊತೆಗೆ ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗದಿಂದ ಬೆಳೆಗಾರರಿಗೆ ಸಂಕಷ್ಟಎದುರಾಗಿದೆ. ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಅಡಿಕೆ ಬೆಳೆಗಾರರ ಸಹಾಯಕ್ಕೆ ಬರುತ್ತಿಲ್ಲ. ಕೊನೆ ಪಕ್ಷ ರೈತರಿಗೆ ಔಷಧಿಯನ್ನೂ ಕೂಡ ನೀಡುತ್ತಿಲ್ಲ ಎಂದು ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ವಕ್ತಾರರಾದ ರಮೇಶ್‌ ಶಂಕರಘಟ್ಟ, ವೈ.ಬಿ. ಚಂದ್ರಕಾಂತ್‌, ಕೆಪಿಸಿಸಿ ಸದಸ್ಯ ವೈ.ಹೆಚ್‌. ನಾಗರಾಜ್‌, ಪ್ರಮುಖರಾದ ಚಂದ್ರಭೂಪಾಲ್‌, ಜಿ.ಡಿ. ಮಂಜುನಾಥ್‌, ಚಂದ್ರಶೇಖರ್‌ ಮತ್ತಿತರರು ಇದ್ದರು.

ಮೊದಲು ನಿಮ್ಮ ಹುಳುಕು ಮುಚ್ಚಿಕೊಳ್ಳಿ: ಭಾರತದ ಆರ್ಥಿಕ ಪರಿಸ್ಥಿತಿಯೇ ದಿವಾಳಿಯಾಗಿದೆ. ಆರ್‌ಎಸ್‌ಎಸ್‌ ಪ್ರಮುಖರೇ ಈ ದೇಶ ಬಡತನದಲ್ಲಿದೆ. ನಿರುದ್ಯೋಗ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಇಷ್ಟಾದರೂ ಬಿಜೆಪಿ ನಾಯಕರು ದೇಶ ಆರ್ಥಿಕವಾಗಿ ಸುಭದ್ರವಾಗಿದೆ ಎಂಬ ಹೇಳಿಕೆ ನೀಡುತ್ತೊರುವುದು ಹಾಸ್ಯಸ್ಪದವಾಗಿದೆ. ಬಿಜೆಪಿ ಕೆಲವು ಮುಖಂಡರು ಕಾಂಗ್ರೆಸ್‌ ಕುರಿತಂತೆ ಟೀಕೆ ಮಾಡುತ್ತಿದ್ದಾರೆ. ಆದರೆ, ಅವರ ಪಕ್ಷದಲ್ಲೇ ಹುಳುಕುಗಳು ಬೇಕಾದಷ್ಟಿವೆ. ಬಿಜೆಪಿ ಮುಖಂಡ ಯತ್ನಾಳ್‌ ಅವರೇ ಪಿಎಸ್‌ಐ ಹಗರಣದಲ್ಲಿ ಬಿಜೆಪಿ ನಾಯಕರ ಮಕ್ಕಳ ಪಾತ್ರವೇ ಇದೆ ಎನ್ನುತ್ತಾರೆ. 

ಅನ್ನ ನೀಡುವ ಭೂಮಿತಾಯಿ ಪೂಜೆಗೆ ಸೊರಬ ಕೃಷಿಕರು ಸಜ್ಜು

ಮತ್ತೊಂದು ಕಡೆ ಶಿವಮೊಗ್ಗದ ಗ್ರಾಮಾಂತರ ಶಾಸಕರು ಅಧಿಕಾರಿಗಳು ನನ್ನ ಮಾತೇ ಕೇಳುವುದಿಲ್ಲ ಎಂದು ಅಸಹಾಯಕತೆ ತೋರಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ನನಗೆ ಕೆಲಸ ಮಾಡಲು ಆಗುತ್ತಿಲ್ಲ ಎನ್ನುತ್ತಿದ್ದಾರೆ. ಹೀಗೆ ಬಿಜೆಪಿಯಲ್ಲಿಯೇ ಮುಸುಕಿನ ಗುದ್ದಾಟಗಳು ಇರುವಾಗ ಕಾಂಗ್ರೆಸ್‌ ಮುಖಂಡರನ್ನು ಟೀಕಿಸುವ ಯಾವ ನೈತಿಕತೆಯೂ ಬಿಜೆಪಿ ಮುಖಂಡರಿಗಿಲ್ಲ ಎಂದು ಬೇಳೂರು ಗೋಪಾಲ ಕೃಷ್ಣ ಹರಿಹಾಯ್ದರು.