ಅನ್ನ ನೀಡುವ ಭೂಮಿತಾಯಿ ಪೂಜೆಗೆ ಸೊರಬ ಕೃಷಿಕರು ಸಜ್ಜು
ಭೂದೇವಿಯ ಒಡಲು ಬಗೆದು ಉತ್ತಿ, ಬಿತ್ತಿ ಬೆಳೆ ತೆಗೆಯುವ ರೈತ ಸಮೂಹ ಜಗತ್ತಿಗೆ ಅನ್ನ ನೀಡುವ ಮೈದುಂಬಿದ ಭೂಮಿ ತಾಯಿಯನ್ನು ಸ್ಮರಿಸಿ, ಒಡಲು ತುಂಬುವ ಭೂಮಿ ಹುಣ್ಣಿಮೆ ಆಚರಣೆಗೆ ಸೊರಬ ತಾಲೂಕಿನ ಕೃಷಿಕರು ಸಜ್ಜುಗೊಂಡಿದ್ದಾರೆ.
ಎಚ್.ಕೆ.ಬಿ. ಸ್ವಾಮಿ
ಸೊರಬ (ಅ.9) : ಭೂದೇವಿಯ ಒಡಲು ಬಗೆದು ಉತ್ತಿ, ಬಿತ್ತಿ ಬೆಳೆ ತೆಗೆಯುವ ರೈತ ಸಮೂಹ ಜಗತ್ತಿಗೆ ಅನ್ನ ನೀಡುವ ಮೈದುಂಬಿದ ಭೂಮಿ ತಾಯಿಯನ್ನು ಸ್ಮರಿಸಿ, ಒಡಲು ತುಂಬುವ ಭೂಮಿ ಹುಣ್ಣಿಮೆ ಆಚರಣೆಗೆ ಸೊರಬ ತಾಲೂಕಿನ ಕೃಷಿಕರು ಸಜ್ಜುಗೊಂಡಿದ್ದಾರೆ. ರಾಜ-ಮಹಾರಾಜರ ಕಾಲದಿಂದಲೂ ನಡೆದುಕೊಂಡು ಬಂದಿರುವ ಭೂಮಿಪೂಜೆಯ ಭೂಮುಣ್ಣಿಮೆ, ಸೀಗೆಹುಣ್ಣಿಮೆ ಅಥವಾ ಭೂಮಿ ಹುಣ್ಣಿಮೆ ಎಂದು ಕರೆಸಿಕೊಳ್ಳುವ ನಿಸರ್ಗದ ಪೂಜೆಯನ್ನು ಮಲೆನಾಡು ಭಾಗ ಮತ್ತು ಬಯಲುಸೀಮೆ, ಅರೆಮಲೆನಾಡು ಭಾಗಗಳಲ್ಲಿ ರೈತ ಸಮೂಹ ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ.
ಭೂಮಿಯನ್ನು ತಾಯಿ ಎಂದೇ ಭಾವಿಸಿ, ತಾಯಿಗೆ ಅಥವಾ ಹೆಣ್ಣಿಗೆ ಸಲ್ಲುವ ಎಲ್ಲ ವಿಧದ ಸಂಸ್ಕಾರಗಳನ್ನು ನೀಡುತ್ತಾ ಬಂದಿರುವ ನಾವು ನಮಗೆ ಅನ್ನ, ನೀರು ನೀಡುವ ಭೂಮಿತಾಯಿಯನ್ನು ವಿಧವಿಧವಾಗಿ ಸ್ತುತಿಸಿದರೂ ತೃಪ್ತಿ ಇರುವುದಿಲ್ಲ. ವಿಶೇಷವಾಗಿ ಕೃಷಿಯೇ ಪ್ರಧಾನವಾಗಿರುವ ನಮ್ಮಲ್ಲಿನ ಬಹುತೇಕ ಆಚರಣೆಗಳು ಭೂಮಿ ತಾಯಿಗೆ ಸಂಬಂಧಿಸಿರುತ್ತವೆ. ಹಾಗಾಗಿ ಭೂಮಿ ಹುಣ್ಣಿಮೆ ಚೊಚ್ಚಲ ಗರ್ಭಿಣಿಗೆ ಬಯಕೆ ತೀರಿಸುವ ಸಾಂಕೇತಿಕ ಆಚರಣೆಯಾಗಿದೆ. ಕೃಷಿ ಕುಟುಂಬಗಳು ಇಂದಿಗೂ ಇಂತಹ ಬಯಕೆ ತೀರಿಸುವ ಆಚರಣೆಯಿಂದ ದೂರ ಸರಿದಿಲ್ಲ.
ಚರಗ ಬೀರಲು ಕಲಾತ್ಮಕ ಭೂಮಣ್ಣಿ ಬುಟ್ಟಿ:
ವರ್ಷದ ಆಶ್ವೀಜ ಮಾಸದ ಹುಣ್ಣಿಮೆಯಂದು ನಡೆಯುವ ಸೀಗೆಹುಣ್ಣಿಮೆಗೆ ಕೃಷಿ ಕುಟುಂಬಗಳು ಭೂಮಿತಾಯಿಗೆ ಚರಗ ಬೀರಲು ಕಲಾತ್ಮಕ ಜನಪದ ಹಿನ್ನೆಲೆಯುಳ್ಳ ಭೂಮಣ್ಣಿ ಬುಟ್ಟಿಯನ್ನು ವಾರದ ಮೊದಲೇ ತಯಾರಿಸುತ್ತಾರೆ. ಸುಂದರವಾದ ಬಿದಿರು ಬುಟ್ಟಿಗಳನ್ನು ಖರೀದಿಸಿ ಅದಕ್ಕೆ ಜೇಡಿ, ಕೆಮ್ಮಣ್ಣು ಬಳಿದು ಒಣಗಿಸಿಟ್ಟುಕೊಳ್ಳುತ್ತಾರೆ. ಅನಂತರ ಬುಟ್ಟಿಯ ಮೇಲೆ ಸುಣ್ಣದಿಂದ ಅಥವಾ ಅಕ್ಕಿ ನೆನೆಸಿಟ್ಟು ರುಬ್ಬಿದ ಕಣಕನ್ನು ಬಳಸಿ ಚಿತ್ತಾರ ಮೂಡಿಸುವುದು. ಈ ರೀತಿ ಕಲಾತ್ಮಕ ಬುಟ್ಟಿಯನ್ನು ಕುಟುಂಬದ ಮಹಿಳೆಯರೇ ಚಿತ್ರಿಸುವುದು ಪ್ರತೀತಿ. ಇದರಲ್ಲಿ ಪರಿಸರ ಮತ್ತು ಮನುಷ್ಯ ಪ್ರತಿನಿತ್ಯ ಬಳಸುವ ನಿಸರ್ಗದ ಮನೆ, ಗಿಡ, ಮರ, ಹಕ್ಕಿ, ಮೀನು, ಪ್ರಾಣಿ, ಏಣಿ, ತೇರು ಮೊದಲಾದ ನವಿರು ಎಳೆಗಳನ್ನು ಬಿಡಿಸುತ್ತಾರೆ.
ವಿವಿಧ ಜಾತಿಯ ಸೊಪ್ಪು:
ಗ್ರಾಮೀಣ ಭಾಗದ ರೈತರು ತಮ್ಮ ಹೊಲ, ಗದ್ದೆ, ತೋಟಗಳಿಗೆ ಚರಗ ಬೀರಲು ನಸುಕಿನಿಂದಲೇ ತಯಾರಿ ನಡೆಸುತ್ತಾರೆ. ವಿವಿಧ ಜಾತಿಯ ಸೊಪ್ಪನ್ನು ಬೆಟ್ಟದಿಂದ ಕೊಯ್ದು ತರುವ ರೈತರು ಅದನ್ನು ಬೇಯಿಸಿ, ಅನ್ನಕ್ಕೆ ಮಿಶ್ರಣ ಮಾಡಿ ಬೆಳಗಿನ ಜಾವ ತಮ್ಮ ಗದ್ದೆಯ ಗಡಿ ಭಾಗದ ಸುತ್ತಲೂ ಬೀರುವ ಮೂಲಕ ಒಳ್ಳೆಯ ಬೆಳೆ ಬರಲಿ ಎಂದು ಪ್ರಾರ್ಥಿಸುತ್ತಾರೆ.
ಬಗೆ ಬಗೆಯ ಖಾದ್ಯಗಳು:
ಮೈದುಂಬಿ ಫಲ ನೀಡಲು ಸಿದ್ಧವಾಗಿರುವ ಭೂಮಿ ತಾಯಿಗೆ ಉಣಬಡಿಸಲು ವಿವಿಧ ಜಾತಿಯ ತರಕಾರಿ ಮತ್ತು ಸೊಪ್ಪಿನಿಂದ ಮಾಡಿದ 101 ಹೆರಕಿ ಪಲ್ಯ ಮಾಡಲಾಗುತ್ತದೆ. ಇದರ ಜೊತೆಗೆ ವಿಶೇಷವಾಗಿ ಕಾಯಿ ಕಡುಬು, ಚಿನ್ನಿಕಾಯಿ ಕಡುಬು, ರೊಟ್ಟಿ, ಅಮಟೆಗೊಜ್ಜು, ಬುತ್ತಿ ಸೇರಿದಂತೆ ಹಲವು ಬಗೆಯ ಖಾದ್ಯಗಳನ್ನು ಮಾಡಿ ಸಿಂಗರಿಸಿದ ಫಸಲಿಗೆ ತಾಳಿ ಸರ ಹಾಕಿ ಎಡೆಇಟ್ಟು ನೈವೇದ್ಯ ಮಾಡಿ ಪೂಜಿಸಿದ ನಂತರ ಕುಟುಂಬದವರು ಹಾಗು ಸ್ನೇಹಿತರು ಒಟ್ಟುಗೂಡಿ ಗದ್ದೆಯಲ್ಲಿಯೇ ಊಟ ಮಾಡಿ ಸಂಭ್ರಮಿಸುವ ಮೂಲಕ ಮಲೆನಾಡಿನ ಸಂಸ್ಕೃತಿ, ಸಂಪ್ರದಾಯ ಜೀವಂತವಾಗಿ ಮುಂದಿನ ಪೀಳಿಗೆಗೂ ರವಾನೆಯಾಗಿ ಸಂಬಂಧಗಳು ಬೆಸೆಯುತ್ತವೆ.