ಡಬಲ್ ಎಂಜಿನ್ ಸರ್ಕಾರ ಕೆಟ್ಟಿದೆ: ಬಿಜೆಪಿ ವಿರುದ್ಧ ಹರಿಹಾಯ್ದ ರಮಾನಾಥ ರೈ
* ಕೇಂದ್ರದಿಂದ ಇಡಿ ದುರ್ಬಳಕೆ, ಕಾಂಗ್ರೆಸ್ ಅಧಿನಾಯಕರಿಗೆ ಕಿರುಕುಳ
* ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ
* ಸಂವಿಧಾನಿಕ ಸಂಸ್ಥೆಗಳನ್ನು ಜನರು ನಂಬಲಾರದ ಸ್ಥಿತಿ ಬಂದಿದೆ
ಚಿಕ್ಕಮಗಳೂರು(ಜೂ.19): ಡಬಲ್ ಎಂಜಿನ್ ಸರ್ಕಾರ ಕೆಟ್ಟು ನಿಂತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಆರೋಪಿಸಿದರು. ಕಾಂಗ್ರೆಸ್ ಪಕ್ಷದ ನಾಯಕರನ್ನು ಜಾರಿ ನಿರ್ದೇಶನಾಲಯ ತನಿಖೆಗೆ ಒಳಪಡಿಸಿರುವುದನ್ನು ಖಂಡಿಸಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೊದಲು ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ ಅವರು ಪ್ರಾಣ ತ್ಯಾಗ ಮಾಡುವ ಮೂಲಕ ಈ ದೇಶಕ್ಕೆ ಕೊಡುಗೆ ನೀಡಿದ್ದಾರೆ. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬೇರೆ ಪಕ್ಷದವರನ್ನು ರಾಜಕೀಯವಾಗಿ ಮಣಿಸಲು ಐ.ಟಿ. ದಾಳಿ ನಡೆಸುತ್ತಿದ್ದಾರೆ. ಇದರಿಂದಾಗಿ ಸಂವಿಧಾನಿಕ ಸಂಸ್ಥೆಗಳನ್ನು ಜನರು ನಂಬಲಾರದ ಸ್ಥಿತಿ ಬಂದಿದೆ ಎಂದರು.
ಸೂಲಿಬೆಲೆ ವಿರುದ್ಧ ಅವಹೇಳನಕಾರಿ ಹೇಳಿಕೆ: ಮಾಜಿ ಸಚಿವ ರೈ ವಿರುದ್ಧ ದೂರು ದಾಖಲು
ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಮಾಡಲಾಗುವುದೆಂದು ಹೇಳಿದ್ದ ಪ್ರಧಾನಿ ಅವರು ಇದೀಗ ಅಗ್ನಿಪಥ ಯೋಜನೆ ಹೆಸರಿನಲ್ಲಿ ಉದ್ಯೋಗ ಕಡಿತಗೊಳಿಸಲು ಹೊರಟಿದ್ದಾರೆ. ಸೈನಿಕ ಹುದ್ದೆಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಂಡು 4 ವರ್ಷಗಳ ಸೇವೆ ನಂತರ ಅವರನ್ನು ಕೆಲಸದಿಂದ ತೆಗೆದು ಹಾಕುವ ನಿರ್ಧಾರ ತೆಗೆದುಕೊಂಡಿದ್ದಾರೆ. 5 ವರ್ಷಗಳ ಸೇವೆ ಸಲ್ಲಿಸಿದರೆ ಗ್ರಾಚ್ಯುಟಿ, ಪೆನ್ಷನ್ ನೀಡಬೇಕಾಗುತ್ತದೆ. ಇದನ್ನು ತಪ್ಪಿಸಲು ‘ಅಗ್ನಿಪಥ’ ಜಾರಿಗೆ ತರಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ನಾಯಕರ ಬಗ್ಗೆ ಸಿ.ಟಿ.ರವಿ ಅವರು ಮಾತನಾಡುತ್ತಿದ್ದಾರೆ. ಯೋಗ್ಯತೆ ಅನುಸಾರವಾಗಿ ಅವರು ಮಾತನಾಡಬೇಕು. ಈ ಜಿಲ್ಲೆಗೆ ಉಸ್ತುವಾರಿ ಸಚಿವರಿಲ್ಲ, ತಾನು ಮೇಧಾವಿ, ವಿದ್ವಾಂಸ ಎಂದುಕೊಂಡಿದ್ದಾರೆ ಆರೋಪಿಸಿದರು.
ಡೀಮ್ಡ್ ಫಾರೆಸ್ಟ್‌ಗೆ ಗುರುತು ಮಾಡಿದ್ದ ರಾಜ್ಯದ 10 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ 6 ಲಕ್ಷ ಹೆಕ್ಟೇರ್ ಕೈಬಿಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಈ ಸಂಬಂಧ ಸುಪ್ರೀಂ ಕೋರ್ಚ್‌ನಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು. ನ್ಯಾಯಾಲಯ ಒಪ್ಪಿ ತೀರ್ಪು ನೀಡಿದರೆ ಮಾತ್ರ, ಈ ಕೆಲಸ ನಿಯಮಬದ್ಧ ಎಂದರು.
ಆಜಾದ್ ಪಾರ್ಕ್‌ನಲ್ಲಿ ಪ್ರತಿಭಟನೆ:
ಬಳಿಕ ಕೇಂದ್ರದ ತನಿಖಾ ಸಂಸ್ಥೆಗಳ ದುರ್ಬಳಕೆ ಖಂಡಿಸಿ, ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿನ ಜನಸಾಮಾನ್ಯರ ಕಷ್ಟನಿವಾರಣೆ ಆಗಬೇಕಾದರೆ ಭ್ರಷ್ಟಬಿಜೆಪಿಯನ್ನು ತೊಲಗಿಸಬೇಕು. ಜೂ.20 ಮತ್ತು 21 ರಂದು ಜಿಲ್ಲೆಯ ಎಲ್ಲ ಕಾಂಗ್ರೆಸ್ ಬ್ಲಾಕ್‌ಗಳಲ್ಲಿ ಕೇಂದ್ರದ ದಮನಕಾರಿ ನೀತಿ ಖಂಡಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
‘ರಮಾನಾಥ್ ರೈ ಒಬ್ಬ ಅರೆಹುಚ್ಚ’, ‘ಸಿದ್ದರಾಮಯ್ಯ ಅಹಂಕಾರಿ’: ತುಂಬಿದ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷನ ಅಸಭ್ಯಮಾತು
ಕೆಪಿಸಿಸಿ ರಾಜ್ಯ ವಕ್ತಾರ ಎಚ್.ಎಚ್. ದೇವರಾಜ್ ಮಾತನಾಡಿ, ಕೇಂದ್ರ ಸರ್ಕಾರ ತನ್ನ ದಮನಕಾರಿ ನೀತಿಯನ್ನು ಅನುಸರಿಸಿ ಇಡಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿ ಟೀಕಿಸುವವರು ಹಾಗೂ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ತನಿಖೆ ನಡೆಸುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ಡಿ.ಎಲ್. ವಿಜಯಕುಮಾರ್, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ ಮಾತನಾಡಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಜಿ.ಎಚ್. ಶ್ರೀನಿವಾಸ್. ಜಿಲ್ಲಾ ಉಪಾಧ್ಯಕ್ಷ ವಿನಾಯಕ್, ಮಾಧ್ಯಮ ವಿಶ್ಲೇಷಕ ರವೀಶ್ ಬಸಪ್ಪ, ಕಾಂಗ್ರೆಸ್ ಮುಖಂಡ ಎ.ಎನ್. ಮಹೇಶ್, ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದಸ್ವಾಮಿ, ವಕ್ತಾರರಾದ ಹಿರೇಮಗಳೂರು ಪುಟ್ಟಸ್ವಾಮಿ ಹಾಗೂ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.