ಸೂಲಿಬೆಲೆ ವಿರುದ್ಧ ಅವಹೇಳನಕಾರಿ ಹೇಳಿಕೆ: ಮಾಜಿ ಸಚಿವ ರೈ ವಿರುದ್ಧ ದೂರು ದಾಖಲು
ಚಕ್ರವರ್ತಿ ಸೂಲಿಬೆಲೆ ವಿರುದ್ದ ಅವಾಚ್ಯ ನಿಂದನೆ ಪ್ರಕರಣ| ಮಾಜಿ ಸಚಿವ ರಮಾನಾಥ್ ರೈ ವಿರುದ್ದ ಪ್ರಕರಣ ದಾಖಲು| ಐಪಿಸಿ ಸೆಕ್ಷೆನ್ 500, 504ರಡಿ ದೂರು ದಾಖಲಿಸಿ ಮಂಗಳೂರು ಎರಡನೇ ಜೆಎಂ ಎಫ್ ಸಿ ನ್ಯಾಯಾಲಯ ಆದೇಶ
ಮಂಗಳೂರು[ಜೂ.15]: ಚಕ್ರವರ್ತಿ ಸೂಲಿಬೆಲೆ ವಿರುದ್ದ ಅವಾಚ್ಯ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮಾನಾಥ್ ರೈ ವಿರುದ್ದ ಪ್ರಕರಣ ದಾಖಲಾಗಿದೆ.
ಮಾಜಿ ಸಚಿವ ರಮಾನಾಥ ರೈ ಸಚಿವರಾಗಿದ್ದ ಸಂದರ್ಭದಲ್ಲಿ, ಅಸೈಗೋಳಿ ಎಂಬಲ್ಲಿ ನಡೆದಿದ್ದ ಕಾಂಗ್ರೆಸ್ ಸಭೆಯಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅವಾಚ್ಯ ಹಾಗೂ ಹಾಗೂ ಮಾನಹಾನಿ ಪದ ಬಳಕೆ ಮಾಡಿದ್ದರು. ಈ ಕುರಿತಾಗಿ ಬಿಜೆಪಿ ರಾಜ್ಯ ಅಲ್ಪ ಸಂಖ್ಯಾತ ಮೋರ್ಚಾದ ಉಪಾದ್ಯಕ್ಷ ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ರಹೀಂ ಉಚ್ಚಿಲ್ ಎರಡನೇ ಜೆಎಂ ಎಫ್ ಸಿ ನ್ಯಾಯಾಲಯಕ್ಕೆ ದೂರು ನೀಡಿದ್ದರು.
ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ಅಂದಿನ ನ್ಯಾಯಧೀಶರು, ದೂರುದಾರರು ನೀಡಿದ ವೀಡಿಯೋ ಸಿಡಿ, ಮಾಧ್ಯಮ ವರದಿ ಹಾಗೂ ಇನ್ನಿತರ ಸಾಂಧರ್ಬಿಕ ಸಾಕ್ಷ್ಯಗಳನ್ನು ಗುರುತಿಸಿ, ಸಂಜ್ಞೆಯನ್ನು ಪಡೆದು ಬಳಿಕ ಮುಂದಿನ ಆದೇಶ ನೀಡುವ ಮೊದಲೇ ಅವರಿಗೆ ವರ್ಗಾವಣೆಯಾಗಿತ್ತು.
ಹೌ ಈಸ್ ದಿ ಜೋಷ್? ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಮಾತುಗಳನ್ನು ಕೇಳಿ
ಬಳಿಕ ಆ ಸ್ಥಾನಕ್ಕೆ ಬಂದ ಹೊಸ ನ್ಯಾಯಾಧೀಶರು ಮತ್ತೊಮ್ಮೆ ಪರಿಶೀಲಿಸಿ ವಕೀಲರ ವಾದವನ್ನು ಆಲಿಸಿ ಚಕ್ರವರ್ತಿ ಸೂಲಿಬೆಲೆ ವಿರುದ್ದ ಅವಾಚ್ಯ ಹಾಗೂ ಮಾನಹಾನಿ ಪದ ಬಳಕೆ ಮಾಡಿದ ಮಾಜಿ ಸಚಿವ ರಮಾನಾಥ ರೈ ವಿರುದ್ದ ಆದೇಶ ಹೊರಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷೆನ್ 500 ಹಾಗೂ 504ರ ಅಡಿಯಲ್ಲಿ ಮಾಜಿ ಸಚಿವರ ವಿರುದ್ಧ ಪ್ರಕರಣ ದಾಖಲಿಸಿದೆ. ಅಲ್ಲದೇ ಮುಂದಿನ ತಿಂಗಳು ನ್ಯಾಯಾಲಯಕ್ಕೆ ಹಾಜರಾಗಲು ರಮಾನಾಥ ರೈಯವರಿಗೆ ಆದೇಶಿಸಿದೆ.
ಈ ಕುರಿತಾಗಿ ಪ್ರತಿಕ್ರಿಯಿಸಿದ ರಹೀಂ ಉಚ್ಚಿಲ್ ಇದು ಸತ್ಯಕ್ಕೆ ಸಂದ ಜಯವಾಗಿದೆ.ಕಾನೂನಿನ ಮುಂದೆ ಯಾರೂ ದೊಡ್ದವರಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.