ಭಕ್ತರ ಹಣದಿಂದ ರಾಮಮಂದಿರ ಆಗಿದೆ, ಬಿಜೆಪಿ ಸರ್ಕಾರ ಕಟ್ಟಿದ್ದಲ್ಲ: ಆಯನೂರು ಮಂಜುನಾಥ್
ಬಿಜೆಪಿ ಅವರು ಶ್ರೀರಾಮನಿಗಾಗಿ ಆಯೋಧ್ಯೆಯಲ್ಲಿ ಮಂದಿರ ಕಟ್ಟಿದ್ದೇವೆ ಎನ್ನುತ್ತಾರೆ. ಆದರೆ ಆ ಮಂದಿರ ಕಟ್ಟಲು ದೇಶದ ಕೋಟ್ಯಾಂತರ ಜನರು ಹಣ ಕೊಟ್ಟಿದ್ದಾರೆ. ಅದು ಬಿಜೆಪಿಯವರು ಕಟ್ಟಿದ್ದಲ್ಲ. ಭಕ್ತರು ಕೊಟ್ಟ ಹಣ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ಶಿವಮೊಗ್ಗ (ಏ.14): ಬಿಜೆಪಿ ಅವರು ಶ್ರೀರಾಮನಿಗಾಗಿ ಆಯೋಧ್ಯೆಯಲ್ಲಿ ಮಂದಿರ ಕಟ್ಟಿದ್ದೇವೆ ಎನ್ನುತ್ತಾರೆ. ಆದರೆ ಆ ಮಂದಿರ ಕಟ್ಟಲು ದೇಶದ ಕೋಟ್ಯಾಂತರ ಜನರು ಹಣ ಕೊಟ್ಟಿದ್ದಾರೆ. ಅದು ಬಿಜೆಪಿಯವರು ಕಟ್ಟಿದ್ದಲ್ಲ. ಭಕ್ತರು ಕೊಟ್ಟ ಹಣ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಯೋಧ್ಯೆಯ ಶ್ರೀರಾಮ ಮಂದಿರಕ್ಕಾಗಿ ಇಡೀ ದೇಶದ ಜನ ಇಟ್ಟಿಗೆ ಕಬ್ಬಿಣ ಕೊಟ್ಟಿದ್ದರು. ಈಗ ದೇವಾಲಯ ಕಾಂಕ್ರಿಟ್ ಕಲ್ಲಿನಿಂದ ಆಗಿದೆ. ಇಡೀ ದೇಶದಿಂದ ತೆಗೆದುಕೊಂಡು ಹೋಗಿದ್ದ ಇಟ್ಟಿಗೆ, ಕಬ್ಬಿಣ ಎಲ್ಲಿ ಹೋಯಿತು ಎಂದು ಪ್ರಶ್ನೆ ಮಾಡಿದರು.
ಶ್ರೀರಾಮನ ಭಕ್ತರು ಎಲ್ಲ ಹಿಂದುಗಳು ಆಗಿದ್ದಾರೆ. ಆತನನ್ನು ಬೀದಿಗೆ ತಂದು ಚುನಾವಣೆಗೆ ಬಳಸಿಕೊಳ್ಳುವ ಅಗತ್ಯವೇ ಇಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ. ರಾಜಕೀಯ ದ್ವೇಷವನ್ನೇ ಸಾಧಿಸುತ್ತಿದೆ. ಬರಗಾಲದ ಇಂತಹ ಸಂದರ್ಭದಲ್ಲಿ ಬಿ.ವೈ.ರಾಘವೇಂದ್ರ ಸೇರಿದಂತೆ ಯಾವ ಸಂಸದರು ಕೇಂದ್ರದಿಂದ ಅನುದಾನವನ್ನು ತರುವ ಮಾತನಾಡಲಿಲ್ಲ. ಒಂದು ರೀತಿಯಲ್ಲಿ ರಾಜ್ಯದ ಮೇಲೆ ಕೇಂದ್ರದ ದಬ್ಬಾಳಿಕೆ ನಡೆಸುತ್ತಿದೆ ಎಂದರು.
ಕಷ್ಟ ಕಾಲದಲ್ಲಿಯೂ ನೆರವಾಗದ ಪ್ರಧಾನಿ ಮೋದಿ, ಸಚಿವ ಅಮಿತ್ ಶಾ ಮುಂತಾದವರು ರಾಜ್ಯಕ್ಕೆ ಯಾವ ಮುಖ ಇಟ್ಟುಕೊಂಡು ಮತ ಕೇಳಲು ಬರುತ್ತಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯವೊಂದು ನ್ಯಾಯಾಲಯದ ಮೆಟ್ಟಿಲೆರಿರುವುದು ಇದೇ ಪ್ರಥಮವಾಗಿದೆ. ಇದೊಂದು ಪ್ರಜಾಪ್ರಭುತ್ವ ವಿರೋಧಿ ಎಂದು ದೂರಿದರು. ರಾಘವೇಂದ್ರ ಅವರು ಅಭಿವೃದ್ಧಿಯ ಹರಿಕಾರ ಎಂಬುವುದು ತಮ್ಮನ್ನು ತಾವು ಘೋಷಣೆ ಮಾಡಿಕೊಂಡಿದ್ದಾರೆ. ತಮ್ಮ ಅವಧಿಯಲ್ಲಿ ರೈತರಿಗಾಗಿ ಏನು ಅನುಕೂಲ ಮಾಡಿಕೊಟ್ಟಿದ್ದಾರೆ.
ಕರ್ನಾಟಕದ ಮೇಲೆ ಕೇಂದ್ರ ಸರ್ಕಾರ ಕೆಂಗಣ್ಣು: ಸಚಿವ ಕೃಷ್ಣ ಭೈರೇಗೌಡ ಆರೋಪ
ಎಷ್ಟು ಕೈಗಾರಿಕೆಗಳನ್ನು ಸ್ಥಾಪಿಸಿದ್ದಾರೆ. ಮುಚ್ಚಿದ ಎಷ್ಟು ಕಾರ್ಖಾನೆಗಳನ್ನು ಮರು ಸ್ಥಾಪಿಸಿದ್ದಾರೆ. ಉದ್ಯೋಗ ಸೃಷ್ಟಿಗಾಗಿ ಏನು ಮಾಡಿದ್ದಾರೆ. ಜಿಲ್ಲೆಯಲ್ಲಿ ಉದ್ಯೋಗವನ್ನು ಸೃಷ್ಟಿ ಮಾಡಲಿಲ್ಲ. ಉದ್ವೇಗವನ್ನು ಸೃಷ್ಟಿ ಮಾಡಿದರು ಅಷ್ಟೇ ಎಂದು ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವೈ.ಎಚ್.ನಾಗರಾಜ್, ಧೀರರಾಜ್, ರವಿಕುಮಾರ್, ಸೈಯ್ಯದ್ ಅಡ್ಡು, ಮುಖ್ತಿಯಾರ್ ಅಹ್ಮದ್, ಹಿರಣ್ಣಯ್ಯ, ಜಿ.ಪದ್ಮನಾಬ್, ಶಿ.ಜು.ಪಾಶ, ಆಯನೂರು ಸಂತೋಷ್ ಮುಂತಾದವರು ಇದ್ದರು.