ಕರ್ನಾಟಕದ ಮೇಲೆ ಕೇಂದ್ರ ಸರ್ಕಾರ ಕೆಂಗಣ್ಣು: ಸಚಿವ ಕೃಷ್ಣ ಭೈರೇಗೌಡ ಆರೋಪ
ಕೇಂದ್ರಕ್ಕೆ ತೆರಿಗೆ ಹಣ ಸಂಗ್ರಹಿಸಿಕೊಡುವಲ್ಲಿ ದೇಶದಲ್ಲೇ ಕರ್ನಾಟಕ ಮೊದಲನೇ ಸ್ಥಾನದಲ್ಲಿದ್ದು, ತೆರಿಗೆ ಪಾಲಿನ ಹಣವನ್ನು ವಾಪಸ್ ಪಡೆಯುವಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೂ ಕರ್ನಾಟಕದ ಮೇಲೆ ಕೇಂದ್ರ ಕೆಂಗಣ್ಣು ಬೀರುತ್ತಲೇ ಇದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಆರೋಪಿಸಿದರು.
ಮಂಡ್ಯ (ಏ.14): ಕೇಂದ್ರಕ್ಕೆ ತೆರಿಗೆ ಹಣ ಸಂಗ್ರಹಿಸಿಕೊಡುವಲ್ಲಿ ದೇಶದಲ್ಲೇ ಕರ್ನಾಟಕ ಮೊದಲನೇ ಸ್ಥಾನದಲ್ಲಿದ್ದು, ತೆರಿಗೆ ಪಾಲಿನ ಹಣವನ್ನು ವಾಪಸ್ ಪಡೆಯುವಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೂ ಕರ್ನಾಟಕದ ಮೇಲೆ ಕೇಂದ್ರ ಕೆಂಗಣ್ಣು ಬೀರುತ್ತಲೇ ಇದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಆರೋಪಿಸಿದರು. ನಗರದ ಸುಮರವಿ ಕಲ್ಯಾಣಮಂಟಪದಲ್ಲಿ ರಾಜ್ಯ ರೈತಸಂಘ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ ಹಾಗೂ ಜಾಗೃತ ಕರ್ನಾಟಕ ಸಂಘಟನೆಗಳ ಆಶ್ರಯದಲ್ಲಿ ‘ಕರ್ನಾಟಕಕ್ಕಾದ ತೆರಿಗೆ ಪಾಲಿನ ವಂಚನೆ-ರೈತರ ಗಾಯದ ಮೇಲೆ ಬರೆ’ ವಿಚಾರಗೋಷ್ಠಿಯಲ್ಲಿ ಪ್ರಧಾನ ಭಾಷಣ ಮಾಡಿದರು.
ಜಿಎಸ್‌ಟಿ ಪರಿಹಾರ ನಿಲ್ಲಿಸಿದ್ದರಿಂದ ವಾರ್ಷಿಕ ೩೧,೦೬೬ ಕೋಟಿ ರು., ೧೫ನೇ ಹಣಕಾಸು ಆಯೋಗ ಮಾಡಿದ ತೆರಿಗೆ ಪಾಲಿನ ಕಡಿತದಿಂದ ರಾಜ್ಯಕ್ಕೆ ೧೨,೯೬೭ ಕೋಟಿ, ಸೆಸ್ ಮತ್ತು ಸರ್‌ಚಾರ್ಜ್‌ಗಳಿಂದ ಆಗುತ್ತಿರುವ ನಷ್ಟ ೮,೦೬೦ ಕೋಟಿ ರು. ಆಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ೧.೮೫ ಲಕ್ಷ ಕೋಟಿ ರು. ವಂಚನೆಯಾಗಿದೆ ಎಂದು ವಿವರಿಸಿದರು.
ಮೋದಿ ಗ್ಯಾರಂಟಿ-ಶಾಶ್ವತ ಗ್ಯಾರಂಟಿ, ಬಡತನ ನಿರ್ಮೂಲನೆಯೇ ನಮ್ಮ ಗುರಿ: ಬೊಮ್ಮಾಯಿ
ಶಿಫಾರಸು ಹಿಂಪಡೆಯಲು ನಿರ್ದೇಶನ: ಕೇಂದ್ರ ಹಣಕಾಸು ಆಯೋಗ ೨೦೨೦-೨೧ನೇ ಸಾಲಿನಲ್ಲಿ ರಾಜ್ಯಗಳಿಗೆ ನೀಡುವ ತೆರಿಗೆ ಹಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗಬೇಕೇ ವಿನಃ ಕಡಿಮೆಯಾಗಬಾರದು. ಈ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಆದ ಕಾರಣ ಆ ವರ್ಷ ೫೪೯೫ ಕೋಟಿ ರು. ಹಣ ರಾಜ್ಯಕ್ಕೆ ನೀಡುವಂತೆ ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಹಣಕಾಸು ಆಯೋಗ ಮಾಡಿರುವ ಶಿಫಾರಸನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಆಯೋಗ ನೀಡಿರುವ ವಿಶೇಷ ಅನುದಾನದ ಶಿಫಾರಸ್ಸನ್ನು ವಾಪಸ್ ಪಡೆಯುವಂತೆ ಸಂಸತ್‌ನಲ್ಲಿ ಮಂಡಿಸಿರುವ ವರದಿಯಲ್ಲಿ ತಿಳಿಸಿದ್ದಾರೆ ಎಂದರು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಆಯೋಗದ ಶಿಫಾರಸ್ಸನ್ನು ಯಥಾವತ್ತಾಗಿ ಜಾರಿ ಮಾಡಿದ್ದೇವೆ ಎಂದು ಸುಳ್ಳು ಹೇಳುತ್ತಾರೆ. ಕರ್ನಾಟಕದ ಬಗ್ಗೆ ಕೇಂದ್ರಕ್ಕೆ ಏಕಿಷ್ಟು ದ್ವೇಷ, ರಾಜ್ಯದ ಜನರಿಗೆ ಅನ್ಯಾಯ ಏಕೆ ಮಾಡುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಗೆ ಇದು ವಿರೋಧವಲ್ಲವೇ. ರಾಜ್ಯಕ್ಕೆ ಬರಬೇಕಾದ ಹಣವನ್ನು ಕೊಡುವುದಿಲ್ಲ ಎಂದರೆ ದೊಡ್ಡ ವಂಚನೆಯಲ್ಲವೇ. ಇದರಿಂದ ೧,೮೫,೪೬೮ ಕೋಟಿ ರು. ರಾಜ್ಯಕ್ಕೆ ನಷ್ಟವಾಗುತ್ತಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ್ದೇ ಸಿಂಹಪಾಲು: ಕೇಂದ್ರ ಸರ್ಕಾರ ವಿವಿಧ ಯೋಜನೆಗಳಡಿ ಹಣ ನೀಡುತ್ತಿದೆಯಾದರೂ ಈ ಯೋಜನೆಗಳಿಗೆ ನೀಡುವ ಹಣದಲ್ಲಿ ಕೇಂದ್ರ ಸರ್ಕಾರಕ್ಕಿಂತ ರಾಜ್ಯ ಸರ್ಕಾರದ ಪಾಲೇ ದೊಡ್ಡದಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಗೆ ಕೇಂದ್ರ ೮೮೭೦ ಕೋಟಿ ರು. ನೀಡಿದರೆ ರಾಜ್ಯಸರ್ಕಾರ ೯೭೩೪ ಕೋಟಿ ರು., ಪಿಎಂ ಆವಾಸ್ (ರೂರಲ್)ಯೋಜನೆಗೆ ಕೇಂದ್ರದ ಪಾಲು ೫೨೮ ಕೋಟಿ ರು. ಇದ್ದರೆ ರಾಜ್ಯದ ಪಾಲು ೭೪೮೪ ಕೋಟಿ ರು., ಪಿಎಂ ಆವಾಸ್ (ಅರ್ಬನ್) ಯೋಜನೆಗೆ ಕೇಂದ್ರ ೨೫೩೬ ಕೋಟಿ ರು. ನೀಡಿದರೆ ರಾಜ್ಯಸರ್ಕಾರ ೪೨೭೨ ಕೋಟಿ ರು. ನೀಡುತ್ತಿದೆ. ಜಲಜೀವನ್ ಮಿಷನ್‌ಗೆ ಕೇಂದ್ರ ೧೧,೧೮೯ ಕೋಟಿ ರು. ಕೊಒಟ್ಟರೆ ರಾಜ್ಯಸರ್ಕಾರ ೧೫,೪೬೪ ಕೋಟಿ ರು., ಪಿಎಂ ಜನ ಆರೋಗ್ಯ ಯೋಜನೆಗೆ ಕೇಂದ್ರ ೨೭೮ ಕೋಟಿ ರು. ಕೊಟ್ಟರೆ ರಾಜ್ಯಸರ್ಕಾರ ೯೮೪ ಕೋಟಿ ರು. ನೀಡುತ್ತಿದೆ. ಇಲ್ಲಿ ಹೆಸರಿಗೆ ಮಾತ್ರ ಕೇಂದ್ರದ ಯೋಜನೆ. ಆದರೆ, ಆ ಯೋಜನೆಗಳಿಗೆ ಹೆಚ್ಚಿನ ಹಣಕಾಸು ಒದಗಿಸುತ್ತಿರುವುದು ರಾಜ್ಯಸರ್ಕಾರ ಎಂದು ಅಂಕಿ-ಅಂಶಗಳನ್ನು ತೆರೆದಿಟ್ಟರು.
ಒಕ್ಕೂಟ ವ್ಯವಸ್ಥೆಗೆ ಬಿಜೆಪಿ ಧಕ್ಕೆ: ಕರ್ನಾಟಕ ಚಿನ್ನದ ಮೊಟ್ಟೆ ಇಡುವ ಕೋಳಿ. ಕೇಂದ್ರಕ್ಕೂ ಹೆಚ್ಚಿನ ತೆರಿಗೆಯನ್ನು ಪಾವತಿಸುತ್ತಾ ಸ್ವಂತ ಬಲದ ಮೇಲೆ ಸರ್ಕಾರ ನಡೆಸುತ್ತಿದ್ದೇವೆ. ನಾವೇ ನಿಜವಾದ ದೇಶಪ್ರೇಮಿಗಳು. ನಾವು ದೇಶ ಒಡೆಯುವವರಲ್ಲ, ದೇಶ ಕಟ್ಟುವವರು. ನಮ್ಮ ತೆರಿಗೆ ಹಕ್ಕನ್ನು ಪ್ರತಿಪಾದಿಸಿದರೆ ಅದನ್ನು ದಮನ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ದೇಶದ್ರೋಹಿಗಳೆಂಬ ಪಟ್ಟ ಕಟ್ಟಲು ಹೊರಟಿದೆ. ಅನ್ಯಾಯವಾಗಿದ್ದರೆ ಕುಳಿತು ಮಾತುಕತೆಯ ಮೂಲಕ ಅದನ್ನು ಸರಿಪಡಿಸುವ ಸೌಜನ್ಯ ತೋರುತ್ತಿಲ್ಲ. ಒಕ್ಕೂಟ ವ್ಯವಸ್ಥೆಗೆ ಬಿಜೆಪಿ ತೀವ್ರ ಧಕ್ಕೆ ಉಂಟುಮಾಡುತ್ತಿದೆ ಎಂದು ಆರೋಪಿಸಿದರು.
ಉತ್ತರ ಭಾರತ ರಾಜ್ಯಗಳೇ ಮೇಲುಗೈ: ಕರ್ನಾಟಕ ಸರ್ಕಾರದ ಬಳಿ ಹಣವಿಲ್ಲದಿರುವುದರಿಂದ ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ, ಒಂದು ರಾಜ್ಯ ೧೦೦ ರು. ತೆರಿಗೆ ಪಾವತಿಸಿದರೆ ಕೇಂದ್ರ ವಾಪಸ್ ಎಷ್ಟು ಪಡೆಯುತ್ತಿವೆ ಎನ್ನುವುದನ್ನು ಅವಲೋಕನ ಮಾಡಿದರೆ, ರಾಜಸ್ತಾನ-೧೫೪ ರು., ಮಧ್ಯಪ್ರದೇಶ-೨೭೯ ರು. ಹರಿಯಾಣ-೧೮೦ ರು., ಉತ್ತರ ಪ್ರದೇಶ ೩೩೩ ರು., ಬಿಹಾರ-೯೨೨ ರು. ಪಡೆದರೆ ಕರ್ನಾಟಕ ಮಾತ್ರ ೧೩.೯ ರು. ಮಾತ್ರ ಪಡೆಯುತ್ತಿದೆ. ಈ ಹಣದಲ್ಲಿ ಕನಿಷ್ಠ ೩೦ ರು. ಕೊಡಿ ಎಂದರೂ ಕೊಡುತ್ತಿಲ್ಲ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
Lok Sabha Election 2024: ಚಂದ್ರಯಾನ-2 ಯಶಸ್ವಿಯಾಗಿದೆ, ಇದಕ್ಕೆ ಪ್ರಧಾನಿ ಮೋದಿ ಕಾರಣ: ಪ್ರಜ್ವಲ್ ರೇವಣ್ಣ
ಇನ್ನು ರಾಜ್ಯಸರ್ಕಾರಗಳು ಹೊಂದಿರುವ ಸ್ವಂತ ಹಣಬಲವೆಷ್ಟು, ಕೇಂದ್ರ ನೀಡುತ್ತಿರುವ ಹಣವೆಷ್ಟು ಎಂಬುದನ್ನು ನೋಡಿದರೆ ಉತ್ತರ ಪ್ರದೇಶ ಶೇ.೪೯ರಷ್ಟು ಸ್ವಂತ ಹಣ ಹೊಂದಿದ್ದರೆ ಕೇಂದ್ರ ಶೇ.೫೧ರಷ್ಟು, ರಾಜಸ್ತಾನ ಶೇ.೫೭ ಸ್ವಂತ ಹಣಬಲವಿದ್ದರೆ ಕೇಂದ್ರ ಶೇ.೪೩ರಷ್ಟು ನೆರವು, ಬಿಹಾರ ಶೇ.೨೭ರಷ್ಟು ಸ್ವಂತ ಹಣ ಹೊಂದಿದ್ದರೆ ಕೇಂದ್ರ ಶೇ.೭೩ರಷ್ಟು, ಕರ್ನಾಟಕ ಶೇ.೭೭ರಷ್ಟು ಸ್ವಂತ ಹಣಬಲ ಹೊಂದಿದ್ದರೆ ಕೇಂದ್ರ ಶೇ.೨೩ರಷ್ಟು ಮಾತ್ರ ನೆರವನ್ನು ಒದಗಿಸುತ್ತಿದೆ. ಇದು ಅನ್ಯಾಯವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.