ಎನ್‌ಡಿಎ ಅಭ್ಯರ್ಥಿ ಸೋಲಿಸಲು ಕಾಂಗ್ರೆಸ್ ಕುತಂತ್ರ: ವಿಜಯೇಂದ್ರ
ಅಧಿಕಾರ ಹಾಗೂ ಹಣಬಲದಿಂದ ಕಾಂಗ್ರೆಸ್ ನವರು ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ಇದ್ದಾರೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಶಿಕ್ಷಕರಿಗೆ ಅನುಕೂಲ ಮಾಡಿಕೊಟ್ಟಿದೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ತುಮಕೂರು(ಮೇ.26): ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆಯಲ್ಲಿ ನಾಲ್ಕು ಜನ ನಾರಾಯಣಸ್ವಾಮಿ ಎಂಬ ಹೆಸರಿನವರನ್ನು ನಾಮ ಪತ್ರ ಸಲ್ಲಿಕೆಗೆ ಸೂಚಿಸುವ ಮೂಲಕ ಎನ್ ಡಿಎ. ಅಭ್ಯರ್ಥಿಯನ್ನು ಕುತಂತ್ರದಿಂದ ಸೋಲಿಸಲು ಕಾಂಗ್ರೆಸ್ ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.
ತುಮಕೂರಿನ ಸ್ನೇಹ ಸಂಗಮ ಸಭಾ ಭವನದಲ್ಲಿ ಆಗೇಯ ಶಿಕ್ಷಕರ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಶಿಕ್ಷಕರ ಧ್ವನಿಯಾಗಿ ನಿಮ್ಮೆಲ್ಲರ ಪರ ಸದನದ ಹೊರಗಡೆ ಹಾಗೂ ಒಳಗಡೆ ನಾರಾಯಣಸ್ವಾಮಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಆತಂಕಕ್ಕೆ ಕಾರಣವಾಗಿದ್ದು, ಈ ಬಾರಿ ನಮ್ಮ ಅಭ್ಯರ್ಥಿಯನ್ನು ಸೋಲಿಸಲು ಕುತಂತ್ರ ಹೂಡಿದ್ದಾರೆ ಎಂದರು.
ಪರಿಷತ್ ಚುನಾವಣೆ 2024: ಇಂದು ಬಿಜೆಪಿ-ಜೆಡಿಎಸ್ ಮೈತ್ರಿ ಸಮನ್ವಯ ಸಭೆ
ಅಧಿಕಾರ ಹಾಗೂ ಹಣಬಲದಿಂದ ಕಾಂಗ್ರೆಸ್ ನವರು ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ಇದ್ದಾರೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಶಿಕ್ಷಕರಿಗೆ ಅನುಕೂಲ ಮಾಡಿಕೊಟ್ಟಿದೆ. 18600 ಕೋಟಿಯಷ್ಟು ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗಿದೆ ಎಂದರು.
ಶಿಕ್ಷಕರಿಗೆ ನ್ಯಾಯ ಕೊಡುವ ಕೆಲಸವಾಗಿದ್ದರೆ ಅದು ಬಿಜೆಪಿ ಸರ್ಕಾರದಿಂದ ಮಾತ್ರ ಎಂದ ಅವರು, ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಕಲೂಷಿತಗೊಳಿಸುವ ಕೆಲಸ ಮಾಡಿದೆ ಎಂದರು.
ಜಿ.ಟಿ. ದೇವೇಗೌಡ ಮಾತನಾಡಿ, ನೀವೇ ಪಾಠ ಮಾಡುವವರು. ನಿಮಗೆ ಹೆಚ್ಚು ಭಾಷಣದ ಅವಶ್ಯಕತೆ ಇಲ್ಲ. ಭಾರತದ ಭವಿಷ್ಯ ಬರೆದಿದ್ದೀರಿ. ಇದು ಶಿಕ್ಷಣ ಕ್ಷೇತ್ರದ ಉಳಿವಿಗಾಗಿ ಇರುವ ಚುನಾವಣೆ, ವೈ.ಎ.ನಾರಾಯಣ ಸ್ವಾಮಿ ಚಾಣಕ್ಯ, ಚತುರ ಯಾರೇ ಸಿಎಂ ಆದರೂ ಕೆಲಸ ಮಾಡಿಸುತ್ತಾರೆ, ಬಿಜೆಪಿ- ಜೆಡಿಎಸ್ ಮೈತ್ರಿ ಮುಂದುವರೆದರೆ ಕಾಂಗ್ರೆಸ್ ನವರಿಗೆ ಅಡ್ರೆಸ್ ಇರಲ್ಲ ಎಂಬ ಆತಂಕವಿದೆ ಎಂದರು.
ಎನ್ ಡಿಎ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಸರಿ ಸುಮಾರು 20 ವರ್ಷಗಳಿಂದ ಒಂದೇ ಕುಟುಂಬದವರ ತರಹ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಪಕ್ಷೇತರ ಅಭ್ಯರ್ಥಿಯಾಗಿ ಗೆಲ್ಲಿಸಿ, ಆ ನಂತರ ಬಿಜೆಪಿ, ಮೂರನೇ ಬಾರಿ ಬಿಜೆಪಿ ಅಭ್ಯರ್ಥಿಯಾಗಿ, ನಾಲ್ಕನೇ ಬಾರಿಗೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಈ ಬಾರಿ ಗೆಲ್ಲಿಸುತ್ತೀರಿ ಎಂಬ ವಿಶ್ವಾಸವಿದೆ, 18 ವರ್ಷದಲ್ಲಿ ಒಂದೇ ಒಂದು ರು. ಸಂಬಳವನ್ನು ಮನೆಗೆ ತೆಗೆದುಕೊಂಡಿಲ್ಲ. ವಿಧಾನ ಪರಿಷತ್ ಅನುದಾನ ಕೂಡ ಶಿಕ್ಷಕರಿಗೆ ಸದ್ಬಳಕೆ ಮಾಡಿದ್ದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಜ್ಯೋತಿ ಗಣೇಶ್, ಸುರೇಶಗೌಡ, ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ ಮತ್ತಿತರರು ಇದ್ದರು.
ಆರಕ್ಕೆ ಆರೂ ಕ್ಷೇತ್ರಗಳನ್ನು ಗೆಲ್ಲಿಸಿ: ಸಿ.ಟಿ.ರವಿ
ಮಾಜಿ ಸಚಿವ ಸಿ.ಟಿ. ರವಿ ಮಾತನಾಡಿ, ಮೊದಲ ಬಾರಿಗೂ, ಈ ಬಾರಿಗೂ ಸಿದ್ದರಾಮಯ್ಯನವರ ಸರ್ಕಾರದಲ್ಲಿ ವ್ಯತ್ಯಾಸವಿದೆ. ಶಿಕ್ಷಣ ಕ್ಷೇತ್ರದಲ್ಲೂ ಅಜಗಜಾಂತರ ವ್ಯತ್ಯಾಸವಾಗಿದೆ ಎಂದ ಅವರು, ಶಿಕ್ಷಣ ಕ್ಷೇತ್ರದಲ್ಲಿ ಏನೂ ತಿಳಿಯದವರನನ್ನು ಸಚಿವರನ್ನಾಗಿ ಮಾಡಲಾಗಿದೆ ಎಂದರು. ಎಸ್ಎಸ್ಎಲ್ ಸಿ ಮಕ್ಕಳಿಗೆ 20 ಅಂಕ ಗ್ರೇಸ್ ನೀಡಲಾಗಿದ್ದು, ಊರು ಕೊಳ್ಳೆ ಹೊಡೆದ ಮೇಲೆ ಬಾಗಿಲು ಹಾಕಿದರು ಎಂಬಂತೆ ಫಲಿತಾಂಶ ಹೊರ ಬಂದ ಬಳಿಕ ಸಿದ್ದರಾಮಯ್ಯನವರು 'ಯಾವನಯ್ಯ ಗ್ರೇಸ್ ಮಾರ್ಕ್ ಕೊಡೋಕೆ ಹೇಳಿದ್ದು ಅಂದಿದ್ದಾರೆ ಎಂದು ವ್ಯಂಗ್ಯವಾಡಿದರು.
ದಿಲ್ಲೀಲೇ ಎಂಎಲ್ಸಿ ಅಭ್ಯರ್ಥಿಗಳ ಆಯ್ಕೆ ಮುಗಿಸಲು ಕಾಂಗ್ರೆಸ್ ತಂತ್ರ
ಸರಕಾರಿ ಪ್ರಾಯೋಜಿತ ಜೀತದಾಳುಗಳ ತರ ಶಿಕ್ಷಕರನ್ನು ನಡೆಸಿಕೊಳ್ಳುತ್ತಿದ್ದಾರೆ. ಅನುದಾನಿತ ಶಾಲೆಯ ಶಿಕ್ಷಕರಿಗೆ 3 ತಿಂಗಳಿಂದ ಸಂಬಳ ಇಲ್ಲ ಸರಕಾರದ ಖಜಾನೆಯಲ್ಲಿ ಹಣವಿಲ್ಲ ಎನ್ನುತ್ತಾರೆ ಎಂದು ಸಿ.ಟಿ. ರವಿ ಚುಚ್ಚಿದರು.ಶಿಕ್ಷಣ ಸಚಿವರು ಮಕ್ಕಳ ಭವಿಷ್ಯದಜತೆ ಆಡುವುದನ್ನು ಸಹಿಸುವುದಿಲ್ಲ, ವಿಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕರೆ ಕೊಟ್ಟರು. ಆದಕ್ಕೆ ಆರೂ ಪದವೀಧರ, ಶಿಕ್ಷಕರ ಕ್ಷೇತ್ರ ಗೆಲ್ಲಿಸುವ ಮೂಲಕ ಸರಕಾರದ ತಪ್ಪು ನೀತಿ ವಿರುದ್ಧ ಸಂದೇಶ ನೀಡುವಂತೆ ಮನವಿ ಮಾಡಿದರು.
ದಾವಣಗೆರೆಯಲ್ಲಿ ಯಾರೋ ಒಬ್ಬರು ಒಂದು ಮನವಿ ಕೊಟ್ಟರು. ಆ ಮನವಿಯಲ್ಲಿ ಶಿಕ್ಷಣ ಸಚಿವರನ್ನು ಬದಲಾಯಿಸಿ ಎಂದಿದ್ದರು. ಜೂನ್ 4ರಂದು ಲೋಕಸಭಾ ಫಲಿತಾಂಶ ಬರಲಿದೆ. ನೀವು ವಿಧಾನ ಪರಿಷತ್ ನಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ, ರೀಟೇಲ್ ಬೇಡ. ಹೋಲ್ ಸೇಲ್ ಆಗಿ ಸರ್ಕಾರವನ್ನೇ ಬದಲಾಯಿಸೋಣ ಎಂದರು.