ಸಿದ್ದರಾಮಯ್ಯ ಅವರಿಗೆ ಕೋಲಾರ ಟಿಕೆಟ್‌ ನೀಡುವುದಕ್ಕೆ ನಿರಾಕರಿಸಿರುವ ಕಾಂಗ್ರೆಸ್‌ ಹೈಕಮಾಂಡ್‌ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಒಳ್ಳೆಯದು ಎಂಬ ಅಭಿಪ್ರಾಯವನ್ನು ತಿಳಿಸಿದೆ.

ನವದೆಹಲಿ (ಏ.10): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋಲಾರ ಟಿಕೆಟ್‌ ನೀಡುವುದಕ್ಕೆ ನಿರಾಕರಿಸಿರುವ ಕಾಂಗ್ರೆಸ್‌ ಹೈಕಮಾಂಡ್‌ ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಒಳ್ಳೆಯದು ಎಂಬ ಅಭಿಪ್ರಾಯವನ್ನು ತಿಳಿಸಿದೆ ಎಂದು ತಿಳಿದುಬಂದಿದೆ.

ಇನ್ನು ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾದಾಗಿನಿಂದಲೂ ಈವರೆಗೆ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಭಾರಿ ಕುತೂಹಲವನ್ನು ಕೆರಳಿಸುತ್ತಿದೆ. ಈಗಾಗಲೇ 166 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಿದ ಕಾಂಗ್ರೆಸ್‌ 58 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದೆ. ಈಗಾಗಲೇ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್‌ ಹಂಚಿಕೆ ಮಾಡಿದ್ದರೂ, ಕೋಲಾರದಿಂದಲೂ ಸ್ಪರ್ಧೆಗೆ ಅವಕಾಶ ಕೇಳಿದ್ದರು. ಆದರೆ, ಈಗ ಕಾಂಗ್ರೆಸ್‌ ಸಿದ್ದರಾಮಯ್ಯ ಮನವಿಯನ್ನು ತಿರಸ್ಕರಿಸಲಾಗಿದೆ.

Party Rounds: ಇಂದು ರಾತ್ರಿಯೊಳಗೆ ಕಾಂಗ್ರೆಸ್‌ 3ನೇ ಪಟ್ಟಿ ಸಿದ್ಧ: ದಿಢೀರ್‌ ಗುಪ್ತ ಸಭೆ

ಕೋಲಾರದ ಬಗ್ಗೆ ಗಂಭೀರ ಚರ್ಚೆ: ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ 124 ಹಾಗೂ ಎರಡನೇ ಪಟ್ಟಿಯಲ್ಲಿ 42 ಸೇರಿದಂತೆ ಒಟ್ಟು 166 ಕ್ಷೇತ್ರಗಳ ಟಿಕೆಟ್‌ ಹಂಚಿಕೆ ಪೂರ್ಣಗೊಂಡಿದ್ದು, ಬಾಕಿ 58 ಕ್ಷೇತ್ರಗಳ ಅಭ್ಯರ್ಥಿಗಳನ್ನು ಬಿಜೆಪಿ ಪಟ್ಟಿ ನಂತರವೇ ಬಿಡುಗಡೆ ಮಾಡಲಾಗುತ್ತದೆ. ಆದರೆ, ಬಾಕಿ ಅಭ್ಯರ್ಥಿಗಳನ್ನು ಕೂಡ ನಾಮಪತ್ರ ಸಲ್ಲಿಕೆ ದಿನಾಂಕದ ಮೊದಲೇ ಅಂತಿಮಗೊಳಿಸಲು ಇಂದು ರಾಜ್ಯದ ನಾಲ್ಕು ಪ್ರಮುಖ ನಾಯಕರನ್ನು ಮಾತ್ರ ದೆಹಲಿಗೆ ಕರೆಸಿಕೊಳ್ಳಲಾಗಿದೆ. ಆದರೆ, ಈ ಸಭೆಯಲ್ಲಿ ಸಭೆಯಲ್ಲಿ ಕೋಲಾರ ಕ್ಷೇತ್ರ ಕುರಿತು ಗಂಭೀರ ಚರ್ಚೆ ಮಾಡಲಾಗಿದೆ. ಸಿದ್ದರಾಮಯ್ಯ ಒಂದೇ ಕಡೆ ನಿಂತರೆ ಒಳ್ಳೆಯದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ ಎಂಬ ಸುಳಿವು ಸಿಕ್ಕಿದೆ.

ಎಐಸಿಸಿ ಅಧ್ಯಕ್ಷರಿಂದ 58 ಕ್ಷೇತ್ರಗಳ ಅಂತಿಮ ತೀರ್ಮಾನ: ಇನ್ನು ಕಾಂಗ್ರೆಸ್ ಸಿಇಸಿ ಸಭೆ ಮುಗಿಸಿ ಹೊರಬಂದ ಡಿ.ಕೆ. ಶಿವಕುಮಾರ್‌ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ, 58 ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆಯನ್ನು ಮಾಡಲಾಗಿದೆ. ನಾನು ಮತ್ತು ಸಿದ್ದರಾಮಯ್ಯ ಸೇರಿ ಇಬ್ಬರ ಅಭಿಪ್ರಾಯವನ್ನೂ ಕ್ಷೇತ್ರಗಳ ಟಿಕೆಟ್‌ ಹಂಚಿಕೆ ಬಗ್ಗೆ ಪಡೆದುಕೊಂಡಿದ್ದಾರೆ. ಇನ್ನು ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಂತಿಮವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತಾರೆ. ಶೀಘ್ರ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಖರ್ಗೆ ಮನೆಯಲ್ಲಿ ಮತ್ತೊಂದು ಮೀಟಿಂಗ್: ಇಂದು ಸಂಜೆಯಿಂದಲೇ ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರು ರಾತ್ರಿ 10 ಗಂಟೆ ವೇಳೆಗೆ ಸಭೆಯಿಂದ ಹೊರಗೆ ಬಂದರು. ಇದಾದ ನಂತರ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಮತ್ತೊಂದು ಮೀಟಿಂಗ್ ಅನ್ನು ಆಯೋಜನೆ ಮಾಡಲಾಗಿದೆ. ಈ ಸಭೆಯಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆ.ಸಿ. ವೇಣುಗೋಪಾಲ, ಕಾಂಗ್ರೆಸ್‌ ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್‌ ಸುಜೇರ್ವಾಲ ಭಾಗಿಯಾಗಲಿದ್ದಾರೆ. ಇನ್ನು 58 ಕ್ಷೇತ್ರಗಳ ಟಿಕೆಟ್ ಅಂತಿಮಗೊಳಿಸಲು ಈ ಸಭೆಯನ್ನು ಮಾಡಲಾಗುತ್ತಿದೆ. 

ಚುನಾವಣಾ ಅಖಾಡಕ್ಕೆ ದೇವೇಗೌಡರ ಎಂಟ್ರಿ: ಜೆಡಿಎಸ್‌ ಅಭ್ಯರ್ಥಿಗಳಿಗೆ ಆನೆಬಲ

ರಾಹುಲ್‌ ಗಾಂಧಿ ನೇತೃತ್ವದ ಸಭೆ: ಇನ್ನು ತಡರಾತ್ರಿ ವೇಳೆ ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲಿ ನಡೆಯುತ್ತಿರುವ ಮತ್ತೊಂದು ಹೈಟೆನ್ಷನ್‌ ಸಭೆಯಲ್ಲಿ ರಾಹುಲ್‌ ಗಾಂಧಿ ಕೂಡ ಭಾಗವಹಿಸಿದ್ದಾರೆ. ಈ ಸಭೆಯಲ್ಲಿ 58 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ. ಇಂದು ರಾತ್ರಿಯೊಳಗೆ ಪಟ್ಟಿಯನ್ನು ಅಂತಿಮಗೊಳಿಸಿ ಬೆಳಗ್ಗೆ ದೆಹಲಿಯಿಂದ ರಾಜ್ಯ ನಾಯಕರು ವಾಪಸ್‌ ಬರಲಿದ್ದಾರೆ ಎಂಬ ಮಾಹಿತಿಯಿದೆ. ಒಂದು ವೇಳೆ ರಾತ್ರಿ ಅಭ್ಯರ್ಥಿಗಳ ಆಯ್ಕೆ ಅಂತಿಮ ಆಗದಿದ್ದರೆ, ನಾಳೆಯೂ ಸಭೆ ಮುಂದುವರೆಯಲಿದೆ.