ಕೆರೆ ನೀರಿಗಾಗಿ ಕಾಲ್ನಡಿಗೆ ಜಾಥಾಗೆ ತಾಲೂಕಿನ ಶಿವಪುರ ಕಲ್ಕಟ್ಟೆ ಜಲಾಶಯದ ಬಳಿ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಚಾಲನೆ ನೀಡಿದರು.
ಗುಂಡ್ಲುಪೇಟೆ (ನ.06): ಕೆರೆ ನೀರಿಗಾಗಿ ಕಾಲ್ನಡಿಗೆ ಜಾಥಾಗೆ ತಾಲೂಕಿನ ಶಿವಪುರ ಕಲ್ಕಟ್ಟೆ ಜಲಾಶಯದ ಬಳಿ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಚಾಲನೆ ನೀಡಿದರು. ಬಳಿಕ ಸಂಸದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಕೆರೆ ನೀರಿಗಾಗಿ ಕಾಲ್ನಡಿಗೆ ಜಾಥಾ ಗಂಭೀರ ವಿಷಯವಾಗಿದೆ. ನೀರು ತುಂಬಿಸುವಂತೆ ಹೋರಾಟ ನಡೆಸುತ್ತಿದ್ದಾರೆಂದರೆ ರಾಜ್ಯ ಸರ್ಕಾರಕ್ಕೆ ಜವಾಬ್ದಾರಿ ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.
ಪಟ್ಟಣದಲ್ಲಿ ರೈತರು ಕಳೆದ 22 ದಿನಗಳಿಂದ ಅಹೋ ರಾತ್ರಿ ಧರಣಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಬಿಜೆಪಿ ಕೂಡ ಕಾಲ್ನಡಿಗೆ ಜಾಥಾ ಆರಂಭಿಸಿದೆ ಎಂದರೆ ರಾಜ್ಯ ಸರ್ಕಾರ ನೀರು ತುಂಬಿಸದೆ ಯಾವ ಮಟ್ಟಕ್ಕೆ ಇಳಿದಿದೆ ನೋಡಿ. ಕೆರೆಗೆ ನೀರು ತುಂಬಿಸುವ ಯೋಜನೆ ಬಿಜೆಪಿ ಸರ್ಕಾರ ಘೋಷಣೆ ಮಾಡಿದಾಗ ಜಿಲ್ಲೆಯಲ್ಲಿ ಒಬ್ಬ ಶಾಸಕರು ಇರಲಿಲ್ಲ. ಆದರೂ ಬಿ.ಎಸ್.ಯಡಿಯೂರಪ್ಪ ರೈತರ ಸಂಕಷ್ಟ ಅರಿತು ಯೋಜನೆ ಜಾರಿಗೆ ತಂದರು. ಆದರೆ ರಾಜ್ಯ ಸರ್ಕಾರ ಬಿಜೆಪಿ ಆರಂಭಿಸಿದ ಯೋಜನೆಯಡಿ ಕೆರೆಗೆ ಸಮರ್ಪಕವಾಗಿ ನೀರು ತುಂಬಿಸಿಲ್ಲ, ಇನ್ನಾದರೂ ನೀರು ತುಂಬಿಸಲಿ ಎಂದು ಆಗ್ರಹಿಸಿದರು.
ವನ್ಯಜೀವಿ ಹಾಗೂ ಮಾನವ ಸಂಘರ್ಷ ಕಡಿಮೆ ಆಗಬೇಕಿದೆ. ವನ್ಯಜೀವಿ ಹಾಗೂ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ರಾಜ್ಯ ಸರ್ಕಾರ ಕಂಡು ಹಿಡಿಯುವ ಮೂಲಕ ಮಾನವ ಹಾಗೂ ವನ್ಯಜೀವಿ ಸಂಘರ್ಷಕ್ಕೆ ತೆರೆ ಎಳೆಯಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ, ನಾನು ಶಾಸಕನಾಗಿದ್ದಾಗ ಪ್ರತಿ ವರ್ಷ ಕೆರೆಗಳಿಗೆ ನೀರು ತುಂಬುತ್ತಿತ್ತು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಂದ ಬಳಿಕ ಕೆರೆಗಳಿಗೆ ನೀರು ತುಂಬಿಸಲು ಆಗಿಲ್ಲ. ಕೆರೆಗಳಿಗೆ ನೀರು ತುಂಬಿಸಲು ತಾಂತ್ರಿಕ ದೋಷ ಎಂದು ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಹೇಳುತ್ತಿದ್ದಾರೆ. ಯಂತ್ರಗಳು ಹಾಗೂ ಕಾಲುವೆ ನಿರ್ವಹಣೆ ಸಮಯದಲ್ಲೇಕೆ ಯಂತ್ರಗಳ ಬಗ್ಗೆ ಪರಿಶೀಲನೆ ನಡೆಸಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಹಾಗೂ ಸ್ಥಳೀಯ ಶಾಸಕರು ಕೆರೆಗೆ ನೀರು ತುಂಬಿಸಬೇಕು ಎಂಬುದನ್ನೇ ಮರೆತು ಬಿಟ್ಟಿದ್ದಾರೆ. ಶಾಸಕರಿಗೆ ಅಧಿಕಾರಿಗಳ ಮೇಲೆ ಹಿಡಿತ ಇಲ್ಲ. ಜೊತೆಗೆ ಆಸಕ್ತಿ ಇಲ್ಲ, ರೈತರ ಬಗ್ಗೆಯೂ ಕಾಳಜಿ ಇಲ್ಲ ಎಂದು ಟೀಕಿಸಿದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ತಾಲೂಕಿನ ಕೆರೆಗಳಿಗೆ ನೀರು ತುಂಬಿಸಿ ಎಂದು ರೈತರು ಹೋರಾಟ ಮಾಡೋಕು ಮುನ್ನ ಜಿಲ್ಲಾಡಳಿತಕ್ಕೆ ಮಾನ, ಮಾರ್ಯಾದೆ ಇದ್ದಿದ್ರೆ ನೀರು ತುಂಬಿಸಬೇಕಿತ್ತು. ಮಳೆಗಾಲದಲ್ಲಿಯೇ ನೀರು ಬಿಡಲಿಲ್ಲ. ಇನ್ನೂ ಬೇಸಿಗೆಯಲ್ಲಿ ಬಿಡ್ರೀರಾ? ಎಂದು ಜಿಲ್ಲಾಡಳಿತವನ್ನು ಪ್ರಶ್ನಿಸಿದರು.
ರೈತರೊಂದಿಗೆ ಬಿಜೆಪಿ ಹೆಜ್ಜೆ
ರೈತರು ಕೆರೆಗೆ ನೀರು ತುಂಬಿಸಿ ಎಂದು ಬೀದಿಗೀಳಿದಿದ್ದಾರೆ. ಬಿಜೆಪಿ ಕೂಡ ರೈತರ ಹೋರಾಟಕ್ಕೆ ಬೆಂಬಲ ನೀಡಿದೆ. ರೈತರ ಹೋರಾಟದಲ್ಲಿ ರೈತರೊಂದಿಗೆ ಬಿಜೆಪಿ ಹೆಜ್ಜೆಗೆ ಹೆಜ್ಜೆ ಹಾಕಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹುಟ್ಟಿದ ಹಬ್ಬದಂದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ ಎಂದರು. ಜಾಥಾದಲ್ಲಿ ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕರಾದ ಎಸ್.ಬಾಲರಾಜ್,ನಾಗೇಂದ್ರ, ಹರ್ಷವರ್ಧನ್ ,ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ನಗರ ಸಭೆ ಅಧ್ಯಕ್ಷ ಸುರೇಶ್ ನಾಯಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೃಷಬೇಂದ್ರಪ್ಪ, ಹಾಪ್ ಕಾಮ್ಸ್ ಜಿಲ್ಲಾಧ್ಯಕ್ಷ ಕೆ.ಆರ್.ಲೋಕೇಶ್, ಮಂಡಲ ಅಧ್ಯಕ್ಷ ಮಹದೇವಪ್ರಸಾದ್, ಬಿಜೆಪಿ ಮುಖಂಡರಾದ ಡಾ.ನವೀನ್ ಮೌರ್ಯ, ಕೊಳ್ಳೇಗಾಲ ನಟರಾಜೇಗೌಡ ,ಹೊನ್ನೂರು ಮಹದೇವಸ್ವಾಮಿ, ನಾರಾಯಣಪ್ರಸಾದ್, ಕಲ್ಲಹಳ್ಳಿ ಮಹೇಶ್, ಪ್ರಣಯ್, ಎಲ್‌ಐಸಿ ಗುರು, ಎಚ್.ಎಂ.ಮಹೇಶ್, ಗರಗನಹಳ್ಳಿ ಮಹೇಂದ್ರ, ಹುಂಡೀಪುರ ಮಂಜು ಇದ್ದರು.
