ಉತ್ತರ ಕರ್ನಾಟಕದ ಶಾಸಕರು ಭಿಕ್ಷುಕರಂತೆ ಅನುದಾನಕ್ಕೆ ಭಿಕ್ಷೆ ಬೇಡಬೇಕು. 100 ಬಾರಿ ಭಿಕ್ಷೆ ಬೇಡಿದರೆ 10 ಪೈಸೆ ಕೊಡ್ತಾರೆ. ಅನುದಾನ ಹಂಚಿಕೆ ತಾರತಮ್ಯದಿಂದಲೇ ಪ್ರತ್ಯೇಕ ರಾಜ್ಯ ಕೊಡಿ ಎಂದು ಕೇಳುತ್ತಿದ್ದೇನೆ ಶಾಸಕ ರಾಜು ಕಾಗೆ ಸದನದಲ್ಲಿ ಕಣ್ಣೀರಿಟ್ಟರು.

ಬೆಳಗಾವಿ (ಡಿ.11): ಉತ್ತರ ಕರ್ನಾಟಕದವರು ಇಲ್ಲಿಗೆ (ಬೆಂಗಳೂರಿಗೆ) ಬಂದು ಕೈಮುಗಿದು ಎಲ್ಲರ ಮುಂದೆ ನಿಲ್ಲಬೇಕು. ಭಿಕ್ಷುಕರ ತರ ಭಿಕ್ಷೆ ಬೇಡಬೇಕು. 100 ಸಲ ಭಿಕ್ಷೆ ಬೇಡಿದರೆ 10 ಪೈಸೆ, 20 ಪೈಸೆ ಹಾಕ್ತಾರೆ. ಇಂತಹ ತಾರತಮ್ಯ ಅನುಭವಿಸಿಯೇ ನಾನು ಪ್ರತ್ಯೇಕ ರಾಜ್ಯ ಮಾಡುವುದಕ್ಕೆ ಪತ್ರ ಬರೆದಿದ್ದೇನೆ. ನಮಗೆ ತಲಾ 10 ಸಾವಿರ ಕೋಟಿ ರೂ. ಅನುದಾನ ಕೊಡಿ ಇಲ್ಲವೇ, ಪ್ರತ್ಯೇಕ ರಾಜ್ಯ ಮಾಡಿ. ಇಲ್ಲವೆಂದರೆ ಯಾರು ಸಾಯ್ಲಿ ಬಿಡ್ಲಿ ನಾನು ಪ್ರತ್ಯೇಕ ರಾಜ್ಯಕ್ಕೆ ಹೋರಾಟ ಮಾಡೋನೆ ಎಂದು ಶಾಸಕ ರಾಜು ಕಾಗೆ ವಿಧಾನಮಂಡಲ ಅಧಿವೇಶನದಲ್ಲಿ ಆಗ್ರಹಿಸಿದರು.

ವಿಧಾನಮಂಡಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆ ನಡೆಯುತ್ತಿದ್ದಾಗ, ಶಾಸಕ ರಾಜು ಕಾಗೆ ಅವರು ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಮತ್ತೆ ಸದನದಲ್ಲಿ ಪ್ರಸ್ತಾಪಿಸಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. ತಮ್ಮ ಕ್ಷೇತ್ರದ ಅಭಿವೃದ್ಧಿ ಕೊರತೆ ಮತ್ತು ಅನುದಾನಕ್ಕಾಗಿ ಬೆಂಗಳೂರು ಕೇಂದ್ರಿತ ರಾಜಕಾರಣದ ಮುಂದೆ 'ಭಿಕ್ಷುಕರಂತೆ' ನಿಲ್ಲಬೇಕಾದ ತಮ್ಮ ಗೋಳನ್ನು ಸದನದಲ್ಲಿ ತೋಡಿಕೊಂಡರು. ನಾವು ಯಾಕೆ ಪ್ರತ್ಯೇಕ ರಾಜ್ಯ ಕೇಳಲು ಕಾರಣ ಏನು? ನಾವು ಪ್ರತಿಯೊಂದರಿಂದ ಹಿಂದೆ ಬಿದ್ದಿದ್ದೇವೆ' ಎಂದು ಪ್ರಶ್ನಿಸಿದ ರಾಜು ಕಾಗೆ, ಉತ್ತರ ಕರ್ನಾಟಕ ಭಾಗದ ಶಾಸಕರ ಕಷ್ಟವನ್ನು ಹೇಳಿಕೊಂಡು ಕಣ್ಣೀರಾದರು.

ಭಿಕ್ಷುಕರಂತೆ ಭಿಕ್ಷೆ ಬೇಡಬೇಕು: ಆಕ್ರೋಶ ಹೊರಹಾಕಿದ ಶಾಸಕ

ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ ರಾಜು ಕಾಗೆ ಅವರು, 'ಉತ್ತರ ಕರ್ನಾಟಕದವರು ಇಲ್ಲಿಗೆ (ಬೆಂಗಳೂರಿಗೆ) ಬಂದು ಕೈಮುಗಿದು ಎಲ್ಲರ ಮುಂದೆ ನಿಲ್ಲಬೇಕು. ಭಿಕ್ಷುಕರ ತರ ಭಿಕ್ಷೆ ಬೇಡಬೇಕು. 100 ಸಲ ಭಿಕ್ಷೆ ಬೇಡಿದರೆ 10 ಪೈಸೆ, 20 ಪೈಸೆ ಹಾಕ್ತಾರೆ. ಅನುದಾನ ಹಂಚಿಕೆಯಲ್ಲಿ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಖಾರವಾಗಿಯೇ ಪ್ರಶ್ನಿಸಿದರು. ಈ ಹಿಂದೆ ತಾವು ಪ್ರತ್ಯೇಕ ರಾಜ್ಯದ ಸಂಬಂಧ ಪತ್ರ ಬರೆದಿದ್ದನ್ನು ಸಮರ್ಥಿಸಿಕೊಂಡ, ತಮ್ಮ ಅನಿಸಿಕೆಯನ್ನು ಕೆಲವರು ವಿರೋಧ ಮಾಡಿದರು, ಕೆಲವರು ಸ್ವಾಗತ ಮಾಡಿದರು ಎಂದು ತಿಳಿಸಿದರು.

ಪ್ರತ್ಯೇಕ ರಾಜ್ಯಕ್ಕೆ ಕಾರಣಗಳು: ಅಭಿವೃದ್ಧಿ ಕೊರತೆ

ಶಾಸಕ ರಾಜು ಕಾಗೆ ಅವರು ತಮ್ಮ ಕ್ಷೇತ್ರವು ಅಭಿವೃದ್ಧಿಯಿಂದ ಎಷ್ಟು ಹಿಂದೆ ಬಿದ್ದಿದೆ ಎಂಬುದನ್ನು ವಿವರಿಸಿದರು. ತಮ್ಮ ಕ್ಷೇತ್ರದ ಎಷ್ಟೋ ಮಂದಿ ಜನರು ಬೆಂಗಳೂರು ನೋಡಿಲ್ಲ. ಆರೋಗ್ಯ ಕೇಂದ್ರಗಳ ಸಮಸ್ಯೆ, ನೀರಾವರಿ ಸಮಸ್ಯೆ ಮತ್ತು ಮೂಲಸೌಕರ್ಯಗಳ ಕೊರತೆಯನ್ನು ಎತ್ತಿ ತೋರಿಸಿದರು. 'ನಮ್ಮ ಕ್ಷೇತ್ರದಿಂದ ಬೆಂಗಳೂರು ಸುಮಾರು 800 ಕಿ.ಮೀ. ದೂರವಾಗುತ್ತದೆ. ನಾವು ಏನಾದರೂ ಕೆಲಸ ಮಾಡಿಸಬೇಕೆಂದರೆ ಅಥಣಿಗೆ ಹೋಗಬೇಕು. 'ನಮಗೂ 10 ಸಾವಿರ ಕೋಟಿ ರೂ. ಅನುದಾನ ನೀಡಿ' ಎಂದು ಸರ್ಕಾರವನ್ನು ಒತ್ತಾಯಿಸಿದರು.

ಯಾರು ಸಾಯ್ಲಿ ಬಿಡ್ಲಿ ನಾನು ಪ್ರತ್ಯೇಕ ರಾಜ್ಯಕ್ಕೆ ಹೋರಾಟ ಮಾಡೋನೆ

ರಾಜು ಕಾಗೆ ಅವರು ತಮ್ಮ ಮಾತು ಸರ್ಕಾರದ ಪರ ಅಥವಾ ವಿರುದ್ಧ ಅಲ್ಲ, ಬದಲಿಗೆ ಸತ್ಯವನ್ನು ಹೇಳುತ್ತಿದ್ದೇನೆ ಎಂದರು. 'ನಮ್ಮ ಗೋಳು ಯಾರಿಗೆ ಹೇಳಬೇಕು? ನಾನು ಏನಾದರೂ ಮಾತನಾಡಿದರೆ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದೇನೆ ಎನ್ನುತ್ತಾರೆ. ಅದಕ್ಕೆ ನಾವು ಪ್ರತ್ಯೇಕ ರಾಜ್ಯ ಕೇಳೊದು. 'ಯಾರು ಬೇಕಾದರೂ ಬರಲಿ, ಯಾರು ಬೇಕಾದರೂ ವಿರೋಧ ಮಾಡಲಿ. ನಾನು ಪ್ರತ್ಯೇಕ ರಾಜ್ಯದ ಹೋರಾಟ ಮಾಡೇ ಮಾಡ್ತೀನಿ. ಸಾಯಲಿ ಬಿಡ್ಲಿ.... ನಾನು ಹೋರಾಟ ಮಾಡೋನೆ' ಎಂದು ಸದನದಲ್ಲಿ ನಿಂತು ಮತ್ತೊಮ್ಮೆ ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಪ್ರಖರವಾಗಿ ಮಂಡಿಸಿದರು.