ಬೆಂಗಳೂರು, (ಜೂನ್. 17): ಕರ್ನಾಟಕ ವಿಧಾನಪರಿಷತ್ (ಮೇಲ್ಮನೆ) ಚುನಾವಣೆಗೆ ಕಾಂಗ್ರೆಸ್  ಅಭ್ಯರ್ಥಿಗಳನ್ನು ಪ್ರಕಟಿಸಿದೆ.

ಬಿ ಕೆ ಹರಿಪ್ರಸಾದ್ ಮತ್ತು ನಾಸೀರ್ ಅಹಮದ್‌ಗೆ ಟಿಕೆಟ್ ಫೈನಲ್ ಮಾಡಿ ಇಂದು (ಬುಧವಾರ) ಎಐಸಿಸಿ ಪಟ್ಟಿ ಪ್ರಕಟಿಸಿದೆ.

ವಿಧಾನಪರಿಷತ್‌ ಚುನಾವಣೆಗೆ ಎರಡು ಸ್ಥಾನಗಳಿಗೆ 4 ಹೆಸರುಗಳನ್ನು ಅಂತಿಮಗೊಳಿಸಿದ್ದ ಪಟ್ಟಿಯನ್ನು ರಾಜ್ಯ ಕಾಂಗ್ರೆಸ್ ಹೈಕಮಾಂಡ್‌ಗೆ ರವಾನಿಸಿತ್ತು.

MLC ಎಲೆಕ್ಷನ್‌: 2 ಸ್ಥಾನಕ್ಕೆ ನಾಲ್ವರ ಹೆಸರು ಫೈನಲ್ ಮಾಡಿದ ಕಾಂಗ್ರೆಸ್

ಆದ್ರೆ, ಹೈಕಮಾಂಡ್ ಅಳೆದು ತೂಗಿ ಕೆಲ ರಾಜ್ಯ ಹಿರಿಯ ನಾಯಕರ ಅಭಿಪ್ರಾಯ ಕೇಳಿ ಕೊನೆಗೂ ಬಿ ಕೆ ಹರಿಪ್ರಸಾದ್ ಹಾಗೂ ಮತ್ತೊಂದು ಬಾರಿಗೆ ನಾಸೀರ್ ಅಹಮದ್‌ ಅವರಿಗೆ ಮಣೆ ಹಾಕಿದೆ.

ಹೈಕಮಾಂಡ್‌ಗೆ ಕಳುಹಿಸಲಾಗಿದ್ದ ನಾಲ್ವರ ಹೆಸರಲ್ಲಿ ಅಲ್ಪಸಂಖ್ಯಾತ ಕೋಟದಲ್ಲಿ ನಾಸೀರ್ ಅಹ್ಮದ್ ಹೆಸರು ಮುಂಚೂಣಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ಸಿಗಬಹುದು ಎನ್ನುವ ನಿರೀಕ್ಷೆ ಇತ್ತು. ಆದ್ರೆ, ಬಿ.ಕೆ.ಹರಿಪ್ರಸಾದ್ ಹೆಸರು ರಾಜ್ಯ ಕಾಂಗ್ರೆಸ್​ ನಾಯಕರಿಗೆ ಅಚ್ಚರಿ ತಂದಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ತೇಜಸ್ವಿ ಸೂರ್ಯ ವಿರುದ್ಧ ಬಿ.ಕೆ. ಹರಿಪ್ರಸಾದ್ ಸೋಲುಕಂಡಿದ್ದರು. ಅಲ್ಲದೇ ಹರಿಪ್ರಸಾದ್ ಈ ಹಿಂದೆ ರಾಜ್ಯಸಭಾ ಸದಸ್ಯರಾಗಿದ್ದರು.

ಗುರುವಾರ (ಜೂನ್ 18) ನಾಮಪತ್ರ ಸಲ್ಲಿಸಲು ಕೊನೆ ದಿನಾವಾಗಿದ್ದು, ಜೂನ್ 29 ರಂದು ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಆಯ್ಕೆಯಾಗುವ ಏಳು ಸ್ಥಾನಗಳಿಗಾಗಿ ಚುನಾವಣೆ ನಡೆಯಲಿದೆ. 

ಅಭ್ಯರ್ಥಿ ಆಯ್ಕೆ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್‌ನಲ್ಲೂ ಇನ್ನೂ ಭಾರೀ ಪೈಪೋಟಿ ನಡೆಯುತ್ತಿದೆ. ವಿಧಾನಸಭಾ ಸಂಖ್ಯಾಬಲದ ಮೇಲೆ  ಕಾಂಗ್ರೆಸ್‌ಗೆ 2, ಬಿಜೆಪಿ 4 ಮತ್ತು ಜೆಡಿಎಸ್ 1 ಸ್ಥಾನದಲ್ಲಿ ಗೆಲ್ಲಬಹುದಾಗಿದೆ.