ಜೋಡೋ ಯಾತ್ರೆ ಕಾಶ್ಮೀರ ಪ್ರವೇಶಕ್ಕೂ ಮೊದಲೇ ಶಾಕ್, J&K ಪ್ರಮುಖ ನಾಯಕಿ ರಾಜೀನಾಮೆ!
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಶುಕ್ರವಾರ ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸುತ್ತಿದೆ. ಇದಕ್ಕೂ ಮೊದಲೇ ಕಾಂಗ್ರೆಸ್‌ಗೆ ಮತ್ತೊಂದು ಆಘಾತ ಎದುರಾಗಿದೆ. ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್ ವಕ್ತಾರೆ ದೀಪಿಕಾ ಪುಷ್ಕರ್ ನಾಥ್ ರಾಜೀನಾಮೆ ನೀಡಿದ್ದಾರೆ.
ನವದೆಹಲಿ(ಜ.18): ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಅಂತಿಮ ಹಂತ ತಲುಪಿದೆ. ಕನ್ಯಾಕುಮಾರಿಯಿಂದ ಆರಂಭಗೊಂಡ ಯಾತ್ರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ. ಸದ್ಯ ಹಿಮಾಚಲ ಪ್ರದೇಶದಲ್ಲಿ ಸಂಚರಿಸುತ್ತಿರುವ ಯಾತ್ರೆ ಶುಕ್ರವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಎಂಟ್ರಿಕೊಡಲಿದೆ. ಜಮ್ಮು ಪ್ರವೇಶಕ್ಕೆ ಎರಡು ದಿನ ಬಾಕಿ ಇರುವಾಗಲೇ ಕಣಿವೆ ರಾಜ್ಯದ ಕಾಂಗ್ರೆಸ್‍ನಲ್ಲಿ ತಳಮಳ ಶುರುವಾಗಿದೆ. ಜಮ್ಮು ಮತ್ತು ಕಾಶ್ಮೀರ ನಾಯಕಿ, ಕಾಂಗ್ರೆಸ್ ವಕ್ತಾರೆ ದೀಪಿಕಾ ಪುಷ್ಕರ್ ನಾಥ್ ರಾಜೀನಾಮೆ ನೀಡಿದ್ದಾರೆ. ರಾಹುಲ್ ಗಾಂಧಿ ಹಾಗೂ ಭಾರತ್ ಜೋಡೋ ಯಾತ್ರೆ ವಿರುದ್ಧ ಸಿಡಿದೆದ್ದ ದೀಪಿಕಾ ಪುಷ್ಕರ್ ನಾಥ್ ಪಕ್ಷದಿಂದ ಹೊರನಡೆದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತಿಮ ಹಂತದ ಯಾತ್ರೆ ನಡೆಯಲಿದೆ. ಇದಕ್ಕಾಗಿ ಕಾಂಗ್ರೆಸ್ ಹಲವರಿಗೆ ಆಹ್ವಾನ ನೀಡಿದೆ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ವರಿಷ್ಠ, ಮಾಜಿ ಮುಖ್ಯಮಂತ್ರಿ ಫಾರುಖ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಸಿಪಿಎಂ ತಾರಾಗಮಿ ಸೇರಿದಂತೆ ಹಲವರಿಗೆ ಆಹ್ವಾನ ನೀಡಲಾಗಿದೆ. ಇವರೆಲ್ಲರೂ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಯಾತ್ರೆಯಲ್ಲಿ ಜಮ್ಮ ಮತ್ತು ಕಾಶ್ಮೀರದ ಮಾಜಿ ಸಚಿವ ಚೌಧರಿ ಲಾಲ್ ಸಿಂಗ್ ಕೂಡ ಪಾಲ್ಗೊಳ್ಳುತ್ತಿದ್ದಾರೆ. ಚೌಧರಿ ಲಾಲ್ ಸಿಂಗ್ ಪಾಲ್ಗೊಳ್ಳುತ್ತಿರುವುದನ್ನು ವಿರೋಧಿಸಿ, ದೀಪಿಕಾ ಪುಷ್ಕರ್ ನಾಥ್ ರಾಜೀನಾಮೆ ನೀಡಿದ್ದಾರೆ.
ರಾಹುಲ್ ಗಾಂಧಿ ಯಾತ್ರೆ ನಡುವೆ ಕಾಂಗ್ರೆಸ್‌ಗೆ ಶಾಕ್, ಮಾಜಿ ವಿತ್ತ ಸಚಿವ ರಾಜೀನಾಮೆ, ಬಿಜೆಪಿ ಸೇರ್ಪಡೆ!
ಚೌಧರಿ ಲಾಲ್ ಸಿಂಗ್ ಬಿಜೆಪಿ ಪಿಡಿಪಿ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರು. 2018ರಲ್ಲಿ ಕತುವಾ ಅತ್ಯಾಚಾರ ಪ್ರಕರಣ ಕುರಿತ ನೀಡಿದ ಹೇಳಿಕೆ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. 8 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಅತ್ಯಾಚಾರಿಗಳ ಪರವಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಸಂಪುಟದಿಂದ ವಜಾಗೊಳಿಸಲಾಗಿತ್ತು. ಬಳಿಕ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದರು. ಇದೀಗ ಲಾಲ್ ಸಿಂಗ್ ಚೌಧರಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಲಾಲ್ ಸಿಂಗ್ ಚೌಧರಿ ಮನಸ್ಥಿತಿವರು ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ನನ್ನ ಬಲವಾದ ವಿರೋಧವಿದೆ. ಅತ್ಯಾಚಾರಿಗಳ ಪರವಾಗಿ ಹೇಳಿಕೆ ನೀಡುವವರ ಜೊತೆ ನಿಲ್ಲಲಲು ನಾನು ಸಿದ್ಧನಿಲ್ಲ. ನಾನು ಸೈದ್ಧಾಂತಿಕ ವಿರೋಧದಿಂದ ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದಾರೆ.
ನಮಗೆ ಒಂದು ಕ್ಷೇತ್ರಕ್ಕಾದರೂ ಟಿಕೆಟ್ ಕೊಡಿ; ಕಾಂಗ್ರೆಸ್ ಹೈಕಮಾಂಡ್‌ಗೆ ಮುಸ್ಲಿಂ ಸಮುದಾಯ ಎಚ್ಚರಿಕೆ
ಭಾರತ್ ಜೋಡೋ ಯಾತ್ರೆ ನಡುವೆ ಹಲವರು ಪಾಲ್ಗೊಳ್ಳುವಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ಸಿಖ್ ಗಲಭೆಯ ಆರೋಪಿ ಜಗದೀಶ್ ಟೈಟ್ಲರ್ ಭಾಗಿಯಾಗಿರುವುದನ್ನು ಬಿಜೆಪಿ ಕಟುವಾಗಿ ಟೀಕಿಸಿತ್ತು. ಅಲ್ಲದೆ ಇದೇ ಕಾಂಗ್ರೆಸ್‌ನ ಅಸಲಿ ಮುಖ ಎಂದು ಕಿಡಿಕಾರಿತ್ತು. ‘ಇದು ಭಾರತವನ್ನು ಜೋಡಿಸುವುದಕ್ಕಾಗಿ ಕಾಂಗ್ರೆಸ್ ನಡೆಸುತ್ತಿರುವ ಯಾತ್ರೆಯಲ್ಲ. ಬದಲಾಗಿ ದ್ವೇಷವನ್ನು ಹರಡಲು ನಡೆಸುತ್ತಿರುವ ಯಾತ್ರೆಯಾಗಿದೆ. 1984ರ ಸಿಖ್ ಗಲಭೆಯಲ್ಲಿ ಭಾಗಿಯಾಗಿದ್ದ ಎನ್ನಲಾದ ವ್ಯಕ್ತಿಯ ಜೊತೆ ಕಾಂಗ್ರೆಸ್ ಕೈಜೋಡಿಸಿದೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲ ಹೇಳಿದ್ದರು. ಟೈಟ್ಲರ್ ಕಾಂಗ್ರೆಸ್‌ನ ಮಾಜಿ ನಾಯಕರಾಗಿದ್ದು, ಕೇಂದ್ರ ಸಚಿವರಾಗಿಯೂ ಕಾರ‍್ಯನಿರ್ವಹಿಸಿದ್ದಾರೆ. ಸಿಖ್ ಗಲಭೆಯಲ್ಲಿ ಇವರ ಪಾತ್ರವಿದೆ ಎಂದು ತನಿಖೆ ನಡೆಸುತ್ತಿದ್ದ ನಾನಾವತಿ ಸಮಿತಿ ಹೇಳಿದ ಬಳಿಕ ತಮ್ಮ ಪದವಿಯಿಂದ ಕೆಳಗಿಳಿದಿದ್ದರು.