Asianet Suvarna News Asianet Suvarna News

ನಮಗೆ ಒಂದು ಕ್ಷೇತ್ರಕ್ಕಾದರೂ ಟಿಕೆಟ್‌ ಕೊಡಿ; ಕಾಂಗ್ರೆಸ್ ಹೈಕಮಾಂಡ್‌ಗೆ ಮುಸ್ಲಿಂ ಸಮುದಾಯ ಎಚ್ಚರಿಕೆ

  • ನಮಗೆ ಒಂದು ಕ್ಷೇತ್ರಕ್ಕಾದರೂ ಟಿಕೆಟ್‌ ಕೊಡಿ!
  • ಇಲ್ಲದಿದ್ದಲ್ಲಿ ಬಂಡಾಯ ಏಳುವ ಬಗ್ಗೆ ಯೋಚಿಸಬೇಕಾಗುತ್ತೆ
  • ಕಾಂಗ್ರೆಸ್‌ ಹೈಕಮಾಂಡ್‌ಗೆ ಮುಸ್ಲಿಂ ಸಮುದಾಯದಿಂದ ಎಚ್ಚರಿಕೆ ಸಂದೇಶ
Give us a ticket for at least one constituency; Muslim community warns Congress high command rav
Author
First Published Jan 18, 2023, 7:04 AM IST

ಶಿವಾನಂದ ಗೊಂಬಿ

 ಹುಬ್ಬಳ್ಳಿ (ಜ.18) : ಈ ಸಲ ವಿಧಾನಸಭೆ ಚುನಾವಣೆಯಲ್ಲಿ ಧಾರವಾಡದ ಆರು ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರಕ್ಕಾದರೂ ನಮ್ಮ ಸಮಾಜಕ್ಕೆ ಟಿಕೆಟ್‌ ಕೊಡಲೇಬೇಕು. ಇಲ್ಲದಿದ್ದಲ್ಲಿ ಬಂಡಾಯ ಏಳುವ ಬಗ್ಗೆ ಯೋಚಿಸಬೇಕಾಗುತ್ತದೆ..!

ಇದು ಮುಸ್ಲಿಂ ಸಮುದಾಯ ಕಾಂಗ್ರೆಸ್‌ ವರಿಷ್ಠರಿಗೆ ನೀಡಿರುವ ಸ್ಪಷ್ಟಎಚ್ಚರಿಕೆ. ಈ ಸಂಬಂಧ ಕಳೆದ ಹತ್ತು ದಿನಗಳಿಂದ ವಿವಿಧ ಮುತುವಲ್ಲಿಗಳ ನೇತೃತ್ವದಲ್ಲಿ ಮುಸ್ಲಿಂ ಸಮಾಜ ಮುಖಂಡರು, ಯುವಕರು ಎರಡ್ಮೂರು ಸಭೆಗಳನ್ನು ನಡೆಸಿದ್ದಾರೆ. ಜತೆಗೆ ಶೀಘ್ರದಲ್ಲೇ ಕಾಂಗ್ರೆಸ್‌ ವರಿಷ್ಠರ ಬಳಿ ನಿಯೋಗ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಏಕೆ ಟಿಕೆಟ್‌ ಕೊಡಬೇಕು ಎಂಬುದನ್ನು ಮನವರಿಕೆ ಮಾಡಿಕೊಡಲು ನಿರ್ಧರಿಸಿದೆ.

ನಾ ನಾಯಕಿ ಎಂದು ಘೋಷಿಸಿಕೊಳ್ಳೋ ಸ್ಥಿತಿ ಕಾಂಗ್ರೆಸ್‌ ನಾಯಕರಿಗೆ ಬಂದಿದೆ: ಸಿಎಂ

ಏನಿವರ ಬೇಡಿಕೆ?

ಧಾರವಾಡ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳಿವೆ. ಏಳರಲ್ಲಿ ಪೂರ್ವ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರೇ ನಿರ್ಣಾಯಕರಾಗಿದ್ದಾರೆ. ಇಲ್ಲಿ 1 ಲಕ್ಷಕ್ಕೂ ಅಧಿಕ ಮತದಾರರು ಮುಸ್ಲಿಂ ಸಮುದಾಯದವರಿದ್ದಾರೆ. ಇದೇ ಕ್ಷೇತ್ರದಿಂದ ಈ ಹಿಂದೆ ಜಬ್ಬಾರಖಾನ್‌ ಹೊನ್ನಾಳಿ, ಎ.ಎಂ. ಹಿಂಡಸಗೇರಿ, ರಾಜೇಸಾಬ್‌ ಕೊಪ್ಪಳ ಸೇರಿದಂತೆ ಹಲವರು ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಆದರೆ ಇದೀಗ ಈ ಕ್ಷೇತ್ರ ಮೀಸಲು ಕ್ಷೇತ್ರವಾಗಿದೆ. ಹೀಗಾಗಿ ಇಲ್ಲಿ ನಿಲ್ಲಲು ಅವಕಾಶವಿಲ್ಲ. ಇನ್ನು ಉಳಿದ ಆರು ಕ್ಷೇತ್ರಗಳಲ್ಲಿ ಕನಿಷ್ಠವೆಂದರೂ 35ರಿಂದ 40 ಸಾವಿರ ನಮ್ಮ ಸಮುದಾಯದ ಮತದಾರರಿದ್ದಾರೆ. ಯಾವುದಾದರೂ ಒಂದು ಅಥವಾ ಎರಡು ಕ್ಷೇತ್ರಗಳಿಗೆ ನಮ್ಮವರಿಗೆ ಟಿಕೆಟ್‌ ನೀಡಬೇಕು. ದಶಕಗಳಿಂದಲೂ ಮುಸ್ಲಿಂ ಸಮುದಾಯ ಕಾಂಗ್ರೆಸ್‌ಗೆ ಮತ ಚಲಾಯಿಸುತ್ತಾ ಬಂದಿದೆ. ಹಿಂದೆ ಲೋಕಸಭೆ ಚುನಾವಣೆಯಲ್ಲೂ ಹಾವೇರಿಗೂ ನೀಡಲಿಲ್ಲ. ಇತ್ತ ಧಾರವಾಡಕ್ಕೂ ನೀಡಿರಲಿಲ್ಲ. ಆಗ ಲೋಕಸಭೆಯಲ್ಲಿ ಟಿಕೆಟ್‌ ನೀಡದ ಕಾರಣ ಎಂಎಲ್‌ಸಿ ಚುನಾವಣೆಯಲ್ಲಿ ಸಲೀಂ ಅಹ್ಮದ್‌ ಅವರಿಗೆ ಟಿಕೆಟ್‌ ನೀಡುವ ಮೂಲಕ ಸಮಾಧಾನಪಡಿಸುವ ಯತ್ನವನ್ನೂ ಮಾಡಲಾಗಿದೆ. ಇದೀಗ ವಿಧಾನಸಭೆ ಚುನಾವಣೆಯಲ್ಲಿ ಆರು ಕ್ಷೇತ್ರಗಳ ಪೈಕಿ ಒಂದು ಅಥವಾ ಎರಡು ಕ್ಷೇತ್ರಗಳಿಗೆ ಟಿಕೆಟ್‌ ನೀಡದಿದ್ದಲ್ಲಿ ನಾವು ಬಂಡಾಯ ಏಳುವ ಬಗ್ಗೆಯೂ ಯೋಚನೆ ಮಾಡಬೇಕಾಗುತ್ತದೆ. ಅದಕ್ಕೆ ಅವಕಾಶ ನೀಡದೇ ಟಿಕೆಟ್‌ ನೀಡಬೇಕು ಎಂಬ ಬೇಡಿಕೆ ಈ ಸಮುದಾಯದ್ದು.

ನಿಯೋಗ:

ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ ಬಳಿ ಈ ಸಮುದಾಯದ ನಿಯೋಗ ಕೊಂಡೊಯ್ಯಲು ಯೋಚಿಸಿದೆ. ಟಿಕೆಟ್‌ ಘೋಷಿಸುವ ಮೊದಲೇ ಈ ನಿಯೋಗ ತೆರಳಲಿದೆ. ಅಷ್ಟಾಗಿಯೋ ಟಿಕೆಟ್‌ ಸಿಗದಿದ್ದಲ್ಲಿ ಮುಂದೆ ಮತ್ತೊಂದು ಸಭೆ ನಡೆಸಿ ಬಂಡಾಯ ಏಳುವ ಕುರಿತು ಯೋಚಿಸಲಿದೆ. ಆದರೆ ಈ ಸಲ ಟಿಕೆಟ್‌ ಸಿಗದಿದ್ದಲ್ಲಿ ಖಂಡಿತವಾಗಿ ಪಾಠ ಕಲಿಸಬೇಕೆಂಬ ಒಕ್ಕೊರಲಿನ ಆಗ್ರಹ ಸಭೆಯಲ್ಲಿ ಪಾಲ್ಗೊಂಡ ಮುಖಂಡರಿಂದ ಕೇಳಿ ಬಂದಿದೆ.

ಒಟ್ಟಿನಲ್ಲಿ ಟಿಕೆಟ್‌ಗಾಗಿ ಮುಸ್ಲಿಂ ಸಮುದಾಯ ಬೇಡಿಕೆ ಇಟ್ಟಿರುವುದು ಕಾಂಗ್ರೆಸ್‌ನಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿರುವುದುಂಟು ಸತ್ಯ.

ಹುಬ್ಬಳ್ಳಿ-ಧಾರವಾಡಕ್ಕೆ ರಾಷ್ಟ್ರೀಯ ವಿಧಿ-ವಿಜ್ಞಾನ ವಿಶ್ವವಿದ್ಯಾಲಯ: ಕೇಂದ್ರ ಸಚಿವ ಜೋಶಿ

ಮೊದಲು ಪೂರ್ವ ಕ್ಷೇತ್ರ ಮೀಸಲಾಗಿರಲಿಲ್ಲ. ಹೀಗಾಗಿ ಅಲ್ಲಿ ನಮ್ಮ ಸಮುದಾಯದವರು ನಿಂತು ಗೆದ್ದು ಬರುತ್ತಿದ್ದರು. ಆದರೆ ಇದೀಗ ಅದು ಮೀಸಲಾಗಿರುವುದರಿಂದ ಅಲ್ಲಿ ನಿಲ್ಲಲು ಅವಕಾಶವಿಲ್ಲ. ಬೇರೆ ಕ್ಷೇತ್ರ ಕೊಡಿ ಎಂದು ಕೇಳುತ್ತಿದ್ದೇವೆ. ಒಂದು ವೇಳೆ ಟಿಕೆಟ್‌ ಕೊಡದಿದ್ದಲ್ಲಿ ಮತ್ತೆ ಸಭೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸುತ್ತೇವೆ.

ಅನ್ವರ ಮುಧೋಳ, ಮುಸ್ಲಿಂ ಮುಖಂಡ

ಮುಸ್ಲಿಂ ಸಮುದಾಯಕ್ಕೆ ಕನಿಷ್ಠ ಒಂದು ಕ್ಷೇತ್ರಕ್ಕೆ ಟಿಕೆಟ್‌ ಕೊಡಬೇಕೆನ್ನುವ ಬೇಡಿಕೆ ಸಮುದಾಯದ್ದಾಗಿದೆ. ಹೈಕಮಾಂಡ್‌ ಕೂಡ ನಮ್ಮ ಬೇಡಿಕೆಗೆ ಸ್ಪಂದಿಸುತ್ತದೆ. ಒಂದು ಕ್ಷೇತ್ರಕ್ಕಾದರೂ ಟಿಕೆಟ್‌ ಕೊಡುತ್ತಾರೆ ಎಂಬ ವಿಶ್ವಾಸವಿದೆ.

ಶಾಕೀರ ಸನದಿ, ಮುಸ್ಲಿಂ ಮುಖಂಡ

Follow Us:
Download App:
  • android
  • ios