ರಾಹುಲ್ ಗಾಂಧಿ ಯಾತ್ರೆ ನಡುವೆ ಕಾಂಗ್ರೆಸ್‌ಗೆ ಶಾಕ್, ಮಾಜಿ ವಿತ್ತ ಸಚಿವ ರಾಜೀನಾಮೆ, ಬಿಜೆಪಿ ಸೇರ್ಪಡೆ!
ಸಾಲು ಸಾಲು ವಿಧಾನಸಭಾ ಚುನಾವಣೆ, ಮುಂದಿನ ವರ್ಷ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮೂಲಕ ಪಕ್ಷ ಸಂಘಟನೆ ಜವಾಬ್ದಾರಿ ಹೊತ್ತಿದ್ದಾರೆ. ಇದರ ನಡುವೆ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ಪಕ್ಷದ ಪ್ರಮುಖ ನಾಯಕ, ಮಾಜಿ ಹಣಕಾಸು ಸಚಿವ ರಾಜೀನಾಮೆ ನೀಡಿದ ಬಿಜೆಪಿ ಸೇರಿಕೊಂಡಿದ್ದಾರೆ.
ಪಂಜಾಬ್(ಜ.18): ಕರ್ನಾಟಕ ಸೇರಿದಂತೆ ಮುಂಬರುವ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೇರಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನಿಸುತ್ತಿದೆ. ಇದಕ್ಕಾಗಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದ್ದರೆ, ರಾಜ್ಯ ರಾಜ್ಯದಲ್ಲಿ ಪ್ರದೇಶ ಕಾಂಗ್ರೆಸ್ ಹಲವು ಯಾತ್ರೆಗಳನ್ನು ಹಮ್ಮಿಕೊಂಡಿದೆ. ಇದರ ನಡುವೆ ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗಿದೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಪಂಜಾಬ್‌ನಲ್ಲಿ ಸಂಚರಿಸುವದಕ್ಕಿಂತ ಮೊದಲೇ ಪಕ್ಷದ ಪ್ರಮುಖ ನಾಯಕ, ಮಾಜಿ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ಬಾರಿ ಪಂಜಾಬ್ ಕಾಂಗ್ರೆಸ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಮಹತ್ವದ ಜವಾಬ್ದಾರಿ ವಹಿಸಿದ್ದ ಮನ್‌ಪ್ರೀತ್ ಸಿಂಗ್ ಬಾದಲ್ ಇದೀಗ ಪಕ್ಷ ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ.
ಕಾಂಗ್ರೆಸ್ ತೊರೆದ ಕಲವೇ ನಿಮಿಷಗಳಲ್ಲಿ ಮನ್‌ಪ್ರೀತ್ ಸಿಂಗ್ ಬಿಜೆಪಿ ಸೇರಿಕೊಂಡಿದ್ದಾರೆ. ದೆಹಲಿಯ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯೆಲ್, ಪಂಜಾಬ್ ನಾಯಕನನ್ನು ಪಕ್ಷಕ್ಕೆ ಬರಮಾಡಿಕೊಂಡಿದರು. ಪಂಜಾಬ್ ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಸಂಬಂಧಿಯಾಗಿರುವ ಮನ್‌ಪ್ರೀತ್ ಸಿಂಗ್ ಬಾದಲ್, 2007-11ರಲ್ಲಿ ಬಿಜೆಪಿ ಅಕಾಲಿದಳ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರು. ಇನ್ನು 2017ರಿಂದ 2022ರ ವರೆಗಿನ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು.
Mayor election Result ಚಂಡೀಘಡದಲ್ಲಿ ಆಪ್‌ಗೆ ಹಿನ್ನಡೆ, 1 ಮತದಿಂದ ಬಿಜೆಪಿಗೆ ಗೆಲುವು!
2011ರಲ್ಲಿ ಅಕಾಲಿದಳದಿಂದ ಹೊರಬಂದು ಪೀಪಲ್ ಪಾರ್ಟಿ ಸ್ಥಾಪಿಸಿದ್ದ ಮನ್‌ಪ್ರೀತ್ ಸಿಂಗ್ ಬಾದಲ್, 2014ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. 2016ರಲ್ಲಿ ಕಾಂಗ್ರೆಸ್ ಸೇರಿಕೊಂಡ ಮನ್‌ಪ್ರೀತ್ ಸಿಂಗ್, ಪಕ್ಷದ ಪ್ರಮುಖ ನಾಯಕನಾಗಿ ಬೆಳೆದಿದರು. 2022ರ ಪಂಜಾಬ್ ವಿಧಾಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮನ್‌ಪ್ರೀತ್ ಸಿಂಗ್ ಸೋಲು ಕಂಡಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಿಂದ ಪ್ರಭಾವಿತನಾಗಿ ಬಿಜೆಪಿ ಸೇರಿಕೊಡಿದ್ದಾರೆ.
ಪ್ರಧಾನಿ ಮೋದಿ ವಿಶ್ವನಾಯಕನಾಗಿ ಬೆಳೆದಿದ್ದಾರೆ. ರಷ್ಯಾ ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತ ತಳೆದ ನೀತಿ, ಕೋವಿಡ್ ಪರಿಸ್ಥಿತಿ ನಿರ್ವಹಿಸಿದ ರೀತಿ, ಭಾರತವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆತ್ತಲು ಪ್ರಧಾನಿ ಮೋದಿ ಕೈಗೊಂಡ ಯೋಜನೆಗಳು ವಿಶ್ವಕ್ಕೆ ಮಾದರಿಯಾಗಿದೆ. ಚೀನಾ ವಿರುದ್ಧ ಎದೆಯೊಡ್ಡಿ ನಿಲ್ಲುವ ಧೈರ್ಯ ಭಾರತಕ್ಕಿದೆ. ರಾಜತಾಂತ್ರಿಕತೆ, ವಿದೇಶಾಂಗ ನೀತಿ ಎಲ್ಲದರಲ್ಲೂ ಮೋದಿ ನಾಯಕತ್ವದ ವಿಶ್ವಕ್ಕೆ ಮನವರಿಕೆಯಾಗಿದೆ ಎಂದು ಮನ್‌ಪ್ರೀತ್ ಸಿಂಗ್ ಬಾದಲ್ ಹೇಳಿದ್ದಾರೆ.
ಭ್ರಷ್ಟಾಚಾರ ಸಂಕಟದಲ್ಲಿ ಆಮ್ ಆದ್ಮಿ ಪಾರ್ಟಿ, ಮಾನ್ ಸರ್ಕಾರದ ಮತ್ತೊಂದು ವಿಕೆಟ್ ಪತನ!
ಕಾಂಗ್ರೆಸ್ ಪಕ್ಷದ ವಿರುದ್ದ ಹರಿಹಾಯ್ದ ಮನ್‌ಪ್ರೀತ್ ಸಿಂಗ್, ಪಕ್ಷದೊಳಗೆ ನೂರು ಗುಂಪು, ಕಾಂಗ್ರೆಸ್ ಇದೀಗ ತನ್ನೊಳಗೆ ಹೋರಾಡುತ್ತಿದೆ. ಗುಂಪುಗಾರಿಕೆ, ಅಸಮಧಾನದಿಂದ ಪಕ್ಷ ಬಡವಾಗಿದೆ. ಸಮರ್ಥ ನಾಯಕತ್ವದ ಕೊರತೆಯೂ ಕಾಡುತ್ತಿದ ಎಂದು ಮನ್‌ಪ್ರೀತ್ ಸಿಂಗ್ ಬಾದಲ್ ಹೇಳಿದ್ದಾರೆ.ಜನವರಿ 19 ರಿಂದ ಪಂಜಾಬ್‌ನಲ್ಲಿ ಭಾರತ್ ಜೋಡೋ ಯಾತ್ರೆ ಸಂಚರಿಸಲಿದೆ. ಇದಕ್ಕೂ ಮುನ್ನ ಎರಡು ಪುಟಗಳ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಭಾರತವನ್ನು ಒಗ್ಗೂಡಿಸಲು ರಾಹುಲ್ ಗಾಂಧಿ ಯಾತ್ರೆ ಕೈಗೊಂಡಿದ್ದರೆ, ಇತ್ತ ಪಕ್ಷದ ಪ್ರಮುಖರೇ ಕಾಂಗ್ರೆಸ್ ತೊರೆಯುತ್ತಿದ್ದಾರೆ.