ಸಿನಿಮಾ ಬಜೆಟ್‌ ಅಜಮಾಸು 30 ಕೋಟಿ ರು.ಗಳಷ್ಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಿನಿಮಾ ಪ್ರಸ್ತಾವನೆ ಕೈ ಬಿಡಲಾಗಿದೆ. ಪ್ರಸ್ತುತ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಮುಂದಾದ ಕಾಂಗ್ರೆಸ್‌. 

ಬೆಂಗಳೂರು(ಫೆ.19): ಕೊರೋನಾ ಕಾಲದ ದುರಂತಗಳನ್ನು ‘ಕೋವಿಡ್‌ ಫೈಲ್ಸ್‌’ ಹೆಸರಿನ ಸಿನಿಮಾ ಮೂಲಕ ಮತ್ತೆ ಜನರ ಮುಂದಿಡಲು ನಿರ್ಧರಿಸಿದ್ದ ರಾಜ್ಯ ಕಾಂಗ್ರೆಸ್‌, ಬಜೆಟ್‌ ಕಾರಣಗಳಿಂದ ಯೋಜನೆ ಮುಂದೂಡಿದ್ದು, ತಕ್ಷಣಕ್ಕೆ ರಾಜ್ಯ ಸರ್ಕಾರದ ಕೊರೋನಾ ವೈಫಲ್ಯಗಳ ಬಗ್ಗೆ ಸಾಕ್ಷ್ಯಚಿತ್ರ ಮಾಡಲು ಮುಂದಾಗಿದೆ.

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಸಿನಿಮಾ ಮಾಧ್ಯಮದ ಮೂಲಕವೂ ಟೀಕಾಪ್ರಹಾರ ನಡೆಸಲು ಕಾಂಗ್ರೆಸ್‌ ಪಕ್ಷ ನಿರ್ಧರಿಸಿತ್ತು. ಈ ಬಗ್ಗೆ ಕಥಾವಸ್ತುವಿನ ಎಳೆಯನ್ನೂ ಸಿದ್ಧಪಡಿಸಿ ಖ್ಯಾತ ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಚರ್ಚೆ ಕೂಡಾ ನಡೆಸಿದ್ದರು. ಆದರೆ, ಸಿನಿಮಾ ಬಜೆಟ್‌ ಅಜಮಾಸು 30 ಕೋಟಿ ರು.ಗಳಷ್ಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಿನಿಮಾ ಪ್ರಸ್ತಾವನೆ ಕೈ ಬಿಡಲಾಗಿದೆ. ಪ್ರಸ್ತುತ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಪಕ್ಷ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಮಣಿಸಲು ಮಾಸ್ಟರ್ ಪ್ಲಾನ್, ಕಾಂಗ್ರೆಸ್‌ನಿಂದ ಕೋವಿಡ್ ಫೈಲ್ಸ್ ಸಾಕ್ಷ್ಯ ಚಿತ್ರ ತಯಾರಿ!

ಸಾಕ್ಷ್ಯ ಚಿತ್ರದ ಮೂಲಕ ರಾಜ್ಯ ಸರ್ಕಾರ ಕೊರೋನಾ ನಿರ್ವಹಣೆಯಲ್ಲಿ ವಿಫಲವಾಗಿರುವುದನ್ನು ಜನರಿಗೆ ನೆನಪು ಮಾಡಲು ಪಕ್ಷ ಮುಂದಾಗಿದೆ. ಹಾದಿ-ಬೀದಿಯಲ್ಲಿ ಜನರು ನರಳಾಡಿ ಮೃತಪಟ್ಟಿದ್ದು, ಚಾಮರಾಜನಗರದಲ್ಲಿ ಆಕ್ಸಿಜನ್‌ ಇಲ್ಲದೆ 33 ಮಂದಿ ಅಮಾಯಕರ ಪ್ರಾಣಪಕ್ಷಿ ಆಸ್ಪತ್ರೆಯಲ್ಲೇ ಹಾರಿ ಹೋಗಿದ್ದು, ಹತ್ತಾರು ಮಕ್ಕಳು ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದ ಘಟನೆಗಳು. ಹೀಗೆ ಕೊರೋನಾ ಕಾಲದ ಎಲ್ಲಾ ದುರಂತಗಳನ್ನೂ ಸಾಕ್ಷ್ಯಚಿತ್ರದ ಮೂಲಕ ತೆರೆದಿಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಸಿನಿಮಾ ಹೆಸರು ನೋಂದಾಯಿಸಿದ ಕಾಂಗ್ರೆಸ್‌:

ಕಾಂಗ್ರೆಸ್‌ ಪಕ್ಷವು ಕೊರೋನಾ ಕುರಿತ ವೈಫಲ್ಯಗಳ ಬಗ್ಗೆ ಸಿನಿಮಾ ಮಾಡಲು ‘ಕೋವಿಡ್‌ ಫೈಲ್ಸ್‌’ ಎಂಬ ಹೆಸರನ್ನು ವಾಣಿಜ್ಯ ಚಲನಚಿತ್ರ ಮಂಡಳಿಯಲ್ಲಿ ನೋಂದಣಿ ಮಾಡಿಸಿದೆ. ಸದ್ಯಕ್ಕೆ ಸಿನಿಮಾ ಮಾಡಲು ಆಗದಿದ್ದರೂ ಮುಂದೊಂದು ದಿನ ಈ ಬಗ್ಗೆ ಸಿನಿಮಾ ಮಾಡುವ ಉದ್ದೇಶ ಹೊಂದಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ.