ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಧಾರರಹಿತ, ಮಾನನಷ್ಟ ಹೇಳಿಕೆಗಳ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಮನವಿ ಮಾಡಿದ ಕಾಂಗ್ರೆಸ್‌

ಬೆಂಗಳೂರು(ಮೇ.07):  ಕಾಂಗ್ರೆಸ್‌ ಪಕ್ಷ ಭಯೋತ್ಪಾದಕರನ್ನು ಪೋಷಿಸುತ್ತಿದೆ ಎಂಬ ಆರೋಪ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್‌ ಪಕ್ಷವು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದೆ. ಶನಿವಾರ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಎಐಸಿಸಿ ವಕ್ತಾರ ಪವನ್‌ ಖೇರಾ ನೇತೃತ್ವದ ಕಾಂಗ್ರೆಸ್‌ ನಿಯೋಗವು ದೂರು ದಾಖಲಿಸಿದ್ದು, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಧಾರರಹಿತ, ಮಾನನಷ್ಟ ಹೇಳಿಕೆಗಳ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಮನವಿ ಮಾಡಿದೆ.

‘ಬಳ್ಳಾರಿಯಲ್ಲಿ ಚುನಾವಣಾ ಭಾಷಣ ಮಾಡಿದ್ದ ನರೇಂದ್ರ ಮೋದಿ ಅವರು, ‘ವೋಟ್‌ ಬ್ಯಾಂಕ್‌ಗಾಗಿ ಕಾಂಗ್ರೆಸ್‌ ಭಯೋತ್ಪಾದಕರನ್ನು ಪೋಷಿಸಿದೆ. ಭಯೋತ್ಪಾದಕರ ಜತೆಗೆ ನಂಟಿರುವವರ ಜತೆಗೆ ಕಾಂಗ್ರೆಸ್‌ ಹಿಂಬಾಗಿಲ ರಾಜಕೀಯ ಮಾಡುತ್ತಿದೆ. ಜತೆಗೆ ಭಯೋತ್ಪಾದಕರನ್ನು ಹತ್ತಿಕ್ಕುವುದನ್ನು ಕಾಂಗ್ರೆಸ್‌ ಸಹಿಸಿಲ್ಲ’ ಎಂದು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಇದಕ್ಕೆ ಮೋದಿ ಅವರು ಪುರಾವೆಗಳನ್ನು ನೀಡಬೇಕು. ಇಲ್ಲದಿದ್ದರೆ ಕೋಮು ದ್ವೇಷ ಉಂಟಾಗುವ ರೀತಿಯಲ್ಲಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಿಯಾಂಕ್‌ ಹೇಳಿಕೆ, ಕಾಂಗ್ರೆಸ್‌ ಪ್ರಣಾಳಿಕೆ ವಿರುದ್ಧ ಬಿಜೆಪಿ ದೂರು

‘ಇಂತಹ ಕೀಳು ಮಟ್ಟದ ಆರೋಪವನ್ನು ಯಾವ ಪ್ರಧಾನಿಯೂ ಈವರೆಗೆ ಮಾಡಿರಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಡಿರುವ ಮಾತುಗಳು ಐಪಿಸಿ ಸೆಕ್ಷನ್‌ 1860 ಹಾಗೂ ಜನಪ್ರತಿನಿಧಿಗಳ ಕಾಯ್ದೆ 1951ರ ಸ್ಪಷ್ಟಉಲ್ಲಂಘನೆ. ಹೀಗಾಗಿ ಕೂಡಲೇ ಮೋದಿ ವಿರುದ್ಧ ಎಫ್‌ಐಆರ್‌ ದಾಖಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಭಾಷಣದ ವಿಡಿಯೋ ಹೊಂದಿರುವ ಪೆನ್‌ಡ್ರೈವ್‌ ಸಹ ನೀಡಲಾಗಿದೆ.

ದಿನೇಶ್‌ ಕಿಡಿ:

ದೂರು ನೀಡಿದ ಬಳಿಕ ಬಳಿಕ ಮಾತನಾಡಿದ ದಿನೇಶ್‌ ಗುಂಡೂರಾವ್‌, ‘ನಮ್ಮ ದೇಶದ ಪ್ರಧಾನಿ ಹುದ್ದೆಯಲ್ಲಿರುವವರು ಇತಿಹಾಸದಲ್ಲಿ ಹಿಂದೆಂದೂ ಮಾಡಿರದಂತಹ ದ್ವೇಷ ಭಾಷಣವನ್ನು ನರೇಂದ್ರ ಮೋದಿ ಮಾಡುತ್ತಿದ್ದಾರೆ. ಮಾನ ಹಾನಿಯಾಗುವ ರೀತಿಯಲ್ಲಿ ಭಾಷಣ ಮಾಡುತ್ತಿದ್ದಾರೆ. ಅಲ್ಲದೆ, ಕೋಮು ದ್ವೇಷ ಉಂಟಾಗುವ ರೀತಿಯಲ್ಲಿ ಮಾತನಾಡುವ ಮೂಲಕ ಕೀಳು ಮಟ್ಟಕ್ಕೆ ಇಳಿದಿದ್ದಾರೆ’ ಎಂದು ಕಿಡಿಕಾರಿದರು.

‘ಅವರ ಹೇಳಿಕೆಗಳು ಕಾನೂನಿನ ಸ್ಪಷ್ಟನೆ ಉಲ್ಲಂಘೆಯಾಗಿರುವುದರಿಂದ ಪೊಲೀಸರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದೇವೆ. ಚುನಾವಣಾ ಆಯೋಗವೂ ಕ್ರಮ ತೆಗೆದುಕೊಳ್ಳಬೇಕು. ಪೊಲೀಸರು ಕೂಡಲೇ ಈ ಬಗ್ಗೆ ಎಫ್‌ಐಆರ್‌ ದಾಖಲಿಸಬೇಕು’ ಎಂದು ಆಗ್ರಹಿಸಿದರು. ಈ ವೇಳೆ ಎಐಸಿಸಿ ವಕ್ತಾರ ಗೌರವ್‌ ವಲ್ಲಭ್‌, ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಸೇರಿ ಹಲವರು ಹಾಜರಿದ್ದರು.