ಬೆಂಗಳೂರು(ಅ.27): ರಾಜರಾಜೇಶ್ವರಿನಗರ ವಿಧಾನಸಭೆ ಉಪಚುನಾವಣೆ ಬಿಜೆಪಿ ಅಭ್ಯರ್ಥಿಯಾಗಿರುವ ಮುನಿರತ್ನ ಅವರು ಮತದಾರರಿಗೆ ಸೆಟ್‌ಟಾಪ್‌ ಬಾಕ್ಸ್‌ ಹಂಚುವ ಮೂಲಕ ಚುನಾವಣಾ ಅಕ್ರಮ ನಡೆಸಿದ್ದಾರೆ. ಸೆಟ್‌ ಟಾಪ್‌ ಬಾಕ್ಸ್‌ ಹಂಚಿಕೆಯನ್ನು ಅವರೇ ಒಪ್ಪಿಕೊಂಡಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ನಿಯೋಗವು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ನೇತೃತ್ವದಲ್ಲಿ ರಾಜ್ಯ ಚುನಾವಣಾ ಆಯೋಗದ ಕಚೇರಿಗೆ ತೆರಳಿದ ಕಾಂಗ್ರೆಸ್‌ ನಿಯೋಗವು ಚುನಾವಣಾಧಿಕಾರಿಗಳಿಗೆ ಆಡಿಯೋವುಳ್ಳ ಪೆನ್‌ಡ್ರೈವ್‌ ಸಹಿತ ದೂರು ಸಲ್ಲಿಸಿತು.

ದೂರಿನಲ್ಲಿ ಬಿಜೆಪಿ ಅಭ್ಯರ್ಥಿ ಮತದಾರರಿಗೆ ಆಮಿಷ ಒಡ್ಡುತ್ತಿದ್ದಾರೆ. ತಮ್ಮದೇ ಹೆಸರಿನಲ್ಲಿ ಸೆಟ್‌ಟಾಪ್‌ ಬಾಕ್ಸ್‌ ವಿತರಣೆ ಮಾಡಿದ್ದಾರೆ. ಈ ಮೂಲಕ ಮತದಾರರನ್ನು ಸೆಳೆಯಲು ಯತ್ನಿಸಿದ್ದು ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ದೂರಿದರು.

ನನ್ನ ವಿರುದ್ಧ ಆಯೋಗಕ್ಕೆ ಡಿಕೆಶಿ ದೂರು ನೀಡಿದರೆ ನಾನು ನೀಡುತ್ತೇನೆ: ಮುನಿರತ್ನ

ಬಳಿಕ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಮುನಿರತ್ನ ಚುನಾವಣಾ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ, ಅವರ ವಿರುದ್ಧ ಎರಡು ದೂರು ದಾಖಲು ಮಾಡಿದ್ದೇವೆ. ಮತದಾರರಿಗೆ 50 ಸಾವಿರ ಸೆಟ್‌ ಟಾಪ್‌ ಬಾಕ್ಸ್‌ ಹಂಚಿದ್ದಾರೆ. 1 ಸಾವಿರ ರು. ಬೆಲೆಯಂತೆ ಬರೋಬ್ಬರಿ 5 ಕೋಟಿ ರು. ವೆಚ್ಚ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವ ಕಾಯಿದೆಯ ಸ್ಪಷ್ಟಉಲ್ಲಂಘನೆ ಎಂದು ಆರೋಪಿಸಿದರು.

ಇಬ್ಬರು ಎಸಿಪಿ ಅಧಿಕಾರಿಗಳ ವರ್ಗಾವಣೆಗೆ ಪಟ್ಟು:

ಜೊತೆಗೆ ರಾಜರಾಜೇಶ್ವರಿನಗರ ಕ್ಷೇತ್ರ ವ್ಯಾಪ್ತಿಗೆ ಬರುವ ಇಬ್ಬರು ಎಸಿಪಿಗಳು ಮುನಿರತ್ನ ಪರ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇಬ್ಬರು ಎಸಿಪಿಗಳನ್ನೂ ವರ್ಗಾವಣೆ ಮಾಡಬೇಕು. ಮಲ್ಲೇಶ್ವರಂ ಎಸಿಪಿ ವೆಂಕಟೇಶ್‌ ನಾಯ್ಡು, ಯಶವಂತಪುರ ಎಸಿಪಿ ಶ್ರೀನಿವಾಸರೆಡ್ಡಿ ವಿರುದ್ಧ ದೂರು ನೀಡಿದ್ದೇವೆ. ಇಬ್ಬರೂ ನಮ್ಮ ಕಾರ್ಯಕರ್ತರನ್ನು ಬೆದರಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ವರ್ಗಾವಣೆಗೆ ಮನವಿ ಮಾಡಿದ್ದು ಆಯೋಗವೂ ಸೂಕ್ತ ಕ್ರಮದ ಭರವಸೆ ನೀಡಿದೆ ಎಂದು ಸಲೀಂ ಅಹಮದ್‌ ಹೇಳಿದರು.