Asianet Suvarna News Asianet Suvarna News

ಕಾಂಗ್ರೆಸ್‌ ಮೊದಲ ಪಟ್ಟಿ ರೆಡಿ: 130 ಕ್ಷೇತ್ರದ ಅಭ್ಯರ್ಥಿಗಳಿಗೆ ಖರ್ಗೆ, ರಾಹುಲ್‌ ಒಪ್ಪಿಗೆ

ಹಾಲಿ ಶಾಸಕರಲ್ಲಿ 60 ಮಂದಿಗೆ ಟಿಕೆಟ್‌, 7 ಜನರಿಗೆ ತಡೆ, ಇಬ್ಬರು ಮೇಲ್ಮನೆ ಸದಸ್ಯರನ್ನು ವಿಧಾನಸಭೆಗೆ ಕಣಕ್ಕಿಳಿಸಲು ನಿರ್ಧಾರ, ರಾಹುಲ್‌ ಗಾಂಧಿ ಮಾ.20ರ ಕರ್ನಾಟಕ ಪ್ರವಾಸದ ನಂತರ ಪ್ರಕಟ ಸಾಧ್ಯತೆ. 

Congress Candidates List Likely Announce on After March 20th in Karnataka grg
Author
First Published Mar 18, 2023, 6:22 AM IST

ಬೆಂಗಳೂರು(ಮಾ.18):  ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ ಮೊದಲ ಪಟ್ಟಿಕಡೆಗೂ ಅಖೈರುಗೊಂಡಿದೆ. ರಾಜ್ಯ ನಾಯಕತ್ವ ಶಿಫಾರಸು ಮಾಡಿದ್ದ ಒಂಟಿ ಹೆಸರುಗಳ ಪಟ್ಟಿಯಲ್ಲಿ ಏಳು ಕ್ಷೇತ್ರಗಳಿಗೆ ಹೆಸರು ತಡೆಹಿಡಿದಿರುವ ಕೇಂದ್ರ ಚುನಾವಣಾ ಸಮಿತಿಯು ಉಳಿದ ಕ್ಷೇತ್ರ (124 ರಿಂದ 130 ಸಂಖ್ಯೆಯೊಳಗೆ)ಗಳ ಅಭ್ಯರ್ಥಿಗಳ ಪಟ್ಟಿಗೆ ತನ್ನ ಒಪ್ಪಿಗೆಯನ್ನು ಸೂಚಿಸಿದೆ. ಆದರೆ, ಈ ಪಟ್ಟಿ ತಕ್ಷಣ ಪ್ರಕಟವಾಗುವುದಿಲ್ಲ. ಬದಲಾಗಿ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರ ಮಾ.20ರ ರಾಜ್ಯ ಪ್ರವಾಸದ ನಂತರವೇ ಈ ಪಟ್ಟಿ ಪ್ರಕಟವಾಗಲಿದೆ.

ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವರಿಷ್ಠ ರಾಹುಲ್‌ ಗಾಂಧಿ ನೇತೃತ್ವದ ಮಹತ್ವದ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆಯಲ್ಲಿ ಶುಕ್ರವಾರ ಈ ತೀರ್ಮಾನ ಕೈಗೊಳ್ಳಲಾಗಿದೆ. ಸುಮಾರು ನಾಲ್ಕು ತಾಸುಗಳ ಚರ್ಚೆಯ ನಂತರ ಮೊದಲ ಪಟ್ಟಿಗೆ ಸಮಿತಿ ತನ್ನ ಒಪ್ಪಿಗೆ ಸೂಚಿಸಿದೆ.

Karnataka Assembly Elections 2023: ಮೂರು ಹಂತದಲ್ಲಿ ಬಿಜೆಪಿ ಟಿಕೆಟ್‌ ಪಟ್ಟಿ?

ಈ ಸಭೆಯಲ್ಲಿ ರಾಜ್ಯ ನಾಯಕತ್ವ ಹಾಗೂ ಸ್ಕ್ರೀನಿಂಗ್‌ ಕಮಿಟಿಯು ಶಿಫಾರಸು ಮಾಡಿದ್ದ ಒಂಟಿ ಹೆಸರುಗಳ ಪಟ್ಟಿಯ ಬಗ್ಗೆ ಮಾತ್ರ ಚರ್ಚೆ ನಡೆದಿದೆ. ಗೊಂದಲವಿರುವ ಹಾಗೂ ಎರಡು ಹೆಸರಿನ ಪ್ಯಾನೆಲ್‌ ಇರುವ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಯಲಿಲ್ಲ.

ಅಲ್ಲದೆ, ಸಭೆಯಲ್ಲಿ ಕಾಂಗ್ರೆಸ್‌ನ ಹಾಲಿ 67 ಶಾಸಕರ ಪೈಕಿ ಸುಮಾರು 60 ಶಾಸಕರಿಗೆ ಟಿಕೆಟ್‌ ಅಖೈರುಗೊಳಿಸಲಾಗಿದೆ. ಏಳು ಮಂದಿ ಹಾಲಿ ಶಾಸಕರ ಕ್ಷೇತ್ರಗಳಿಗೆ ಹೆಸರನ್ನು ತಡೆಹಿಡಿಯಲಾಗಿದೆ. ಅವು- ಲಿಂಗಸುಗೂರು (ಡಿ.ಎಸ್‌. ಹುಲಗೇರಿ), ಕುಂದಗೋಳ (ಕುಸುಮಾ ಶಿವಳ್ಳಿ), ಪಾವಗಡ (ವೆಂಕಟರಮಣಪ್ಪ), ಹರಿಹರ (ರಾಮಪ್ಪ), ಶಿಡ್ಲಘಟ್ಟ(ವಿ.ಮುನಿಯಪ್ಪ), ಅಫ್ಜಲ್‌ಪುರ (ಎಂ.ವೈ. ಪಾಟೀಲ), ಕಲಬುರಗಿ ಉತ್ತರ (ಕೆ. ಫಾತೀಮಾ ಖಮರುಲ್‌ ಇಸ್ಲಾಂ).
ಈ ಕ್ಷೇತ್ರಗಳ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿ ನಂತರ ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ. ಇನ್ನು ವಿಧಾನಪರಿಷತ್‌ ಸದಸ್ಯರ ಪೈಕಿ ಯು.ಬಿ. ವೆಂಕಟೇಶ್‌ (ಬಸವನಗುಡಿ) ಹಾಗೂ ಬಿಜೆಪಿಗೆ ಇತ್ತೀಚೆಗಷ್ಟೇ ರಾಜೀನಾಮೆ ನೀಡಿ ಪಕ್ಷ ಸೇರ್ಪಡೆಗೆ ಮುಂದಾಗಿರುವ ಪುಟ್ಟಣ್ಣ (ರಾಜಾಜಿನಗರ)ಗೆ ಟಿಕೆಟ್‌ ಅಖೈರುಗೊಂಡಿದೆ.

ಕುತೂಹಲಕಾರಿ ಸಂಗತಿಯೆಂದರೆ, ರಾಜ್ಯ ನಾಯಕತ್ವ ಒಂಟಿ ಹೆಸರು ಕಳುಹಿಸಿದ್ದ ಹಿರಿಯೂರು (ಡಿ.ಸುಧಾಕರ್‌) ಹಾಗೂ ಮೂಡಿಗೆರೆ ಕ್ಷೇತ್ರಗಳನ್ನು ಸಹ ಪೆಂಡಿಂಗ್‌ ಇಡಲಾಗಿದೆ. ಮೂಲಗಳ ಪ್ರಕಾರ, ಬಿಜೆಪಿಯಿಂದ ಹಾಲಿ ಶಾಸಕರು ಪಕ್ಷ ಸೇರುವ ಸಾಧ್ಯತೆಯಿರುವುದರಿಂದ (ಎಂ.ಪಿ.ಕುಮಾರಸ್ವಾಮಿ ಹಾಗೂ ಪೂರ್ಣಿಮಾ ಶ್ರೀನಿವಾಸ್‌?) ಈ ಕ್ಷೇತ್ರಗಳನ್ನು ಪೆಂಡಿಂಗ್‌ ಇಡಲಾಗಿದೆ ಎನ್ನಲಾಗಿದೆ.

ದೆಹಲಿಯಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಈ ಸಭೆ ಸುಮಾರು ನಾಲ್ಕು ತಾಸುಗಳ ಕಾಲ ನಡೆಯಿತು. ರಾಜ್ಯ ನಾಯಕತ್ವ ಶಿಫಾರಸು ಮಾಡಿದ್ದ ಒಂಟಿ ಹೆಸರಿದ್ದ ಪ್ರತಿಯೊಂದು ಕ್ಷೇತ್ರದ ಬಗ್ಗೆಯೂ ವಿಸ್ತೃತ ಚರ್ಚೆ ನಡೆಸಿ ಅನಂತರ ಪಟ್ಟಿ ಅಖೈರುಗೊಳಿಸಲಾಗಿದೆ.

ಖರ್ಗೆ ಮನೆಯಲ್ಲಿ ತಡರಾತ್ರಿಯವರೆಗೂ ಸಭೆ:

ಒಂಟಿ ಹೆಸರಿನ ಪಟ್ಟಿಯನ್ನು ಅಖೈರುಗೊಳಿಸಿದ ನಂತರ ರಾಹುಲ್‌ ಗಾಂಧಿ ಅವರು ಸಭೆಯಿಂದ ತೆರಳಿದ್ದು, ಅನಂತರ ಉಳಿದ ಎಲ್ಲ ನಾಯಕರು ಮಲ್ಲಿಕಾರ್ಜುನ ಖರ್ಗೆಯವರ ಮನೆಯಲ್ಲಿ ಮತ್ತೊಂದು ಸುತ್ತಿನ ಸಭೆ ಸೇರಿದರು. ಈ ಸಭೆಯಲ್ಲಿ ಖರ್ಗೆ ಅವರ ಸೂಚನೆಯಂತೆ ಗೊಂದಲವಿರುವ ಕ್ಷೇತ್ರಗಳು ಹಾಗೂ ಎರಡು ಹೆಸರಿರುವ ಪ್ಯಾನೆಲ್‌ ಬಗ್ಗೆ ಚರ್ಚೆ ನಡೆಯಿತು. ಮೂಲಗಳ ಪ್ರಕಾರ, ತಡರಾತ್ರಿಯವರೆಗೆ ಒಟ್ಟು 184 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆದಿತ್ತು. ಈ ಪೈಕಿ ಬೆಂಗಳೂರಿನ ಹಾಲಿ ಶಾಸಕರು ಹೊರತುಪಡಿಸಿದ 10 ಕ್ಷೇತ್ರಗಳ ಬಗ್ಗೆ ಚರ್ಚೆಯನ್ನು ಪೆಂಡಿಂಗ್‌ ಇಡಲಾಗಿತ್ತು.

ದೆಹಲಿಯಲ್ಲಿ ಮಂಡ್ಯ ಕಾಂಗ್ರೆಸ್‌ ಟಿಕೆಟ್‌ ಸರ್ಕಸ್‌: ಖರ್ಗೆ ಬೆಂಬಿಡದ ಮೂಲ ಕಾಂಗ್ರೆಸ್ಸಿಗರು

ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ, ಕಾಂಗ್ರೆಸ್‌ ಶಾಸಕಾಂಗಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಡಾ. ಜಿ. ಪರಮೇಶ್ವರ್‌ ಮೊದಲಾದವರು ಪಾಲ್ಗೊಂಡಿದ್ದರು.

ಕೆ.ಎಚ್‌.ಮುನಿಯಪ್ಪಗೆ ದೇವನಹಳ್ಳಿ ಟಿಕೆಟ್‌?

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ನಾಯಕತ್ವ ಹಾಗೂ ಸ್ಕ್ರೀನಿಂಗ್‌ ಕಮಿಟಿಯು ಶಿಫಾರಸು ಮಾಡದಿದ್ದರೂ ದೇವನಹಳ್ಳಿ ಕ್ಷೇತ್ರದ ಟಿಕೆಟ್‌ ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪಗೆ ದೊರೆಯುವ ಸಾಧ್ಯತೆಯಿದೆ. ರಾಜ್ಯ ನಾಯಕತ್ವವು ಕಾಂಗ್ರೆಸ್‌ ಚುನಾವಣಾ ಸಮಿತಿ (ಸಿಇಸಿ)ಗೆ ದೇವನಹಳ್ಳಿ ಕ್ಷೇತ್ರಕ್ಕೆ ಎ.ಸಿ.ಶ್ರೀನಿವಾಸ್‌ ಅವರ ಒಂಟಿ ಹೆಸರನ್ನು ಶಿಫಾರಸು ಮಾಡಿತ್ತು. ಆದರೆ, ಸಿಇಸಿ ಸಭೆಯಲ್ಲಿ ಚರ್ಚೆಯ ವೇಳೆ ಹೈಕಮಾಂಡ್‌ನಿಂದಲೇ ಈ ಕ್ಷೇತ್ರಕ್ಕೆ ಮುನಿಯಪ್ಪ ಅವರ ಹೆಸರು ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದು, ಬಹುತೇಕ ಮೊದಲ ಪಟ್ಟಿಯಲ್ಲೇ ಮುನಿಯಪ್ಪ ಸ್ಥಾನ ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

Follow Us:
Download App:
  • android
  • ios