ಈಗ ಬಿಆರ್‌ ಸಹೋದರ ಪುತ್ರ ಆರ್‌ಕೆ ಪಾಟೀಲ್‌, ಶಾಸಕರ ಪುತ್ರ ಸಂತೋಷ ಮಧ್ಯೆ ಜಟಾಪಟಿ, ಕೆಎಂಎಫ್‌ ಅಧ್ಯಕ್ಷ ಆರ್‌. ಕೆ. ಪಾಟೀಲ್‌ಗೆ ಆಳಂದ ಶಾಸಕರ ಪುತ್ರ ಸಂತೋಷ ಗುತ್ತೇದಾರ್‌ ಅವಾಚ್ಯವಾಗಿ ನಿಂದಿಸಿರೋ ಆಡಿಯೋ ವೈರಲ್‌. 

ಕಲಬುರಗಿ(ಏ.12): ಜಿಲ್ಲೆಯ ಆಳಂದ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ಧಮ್ಕಿ ರಾಜಕೀಯ ಹಾಗೇ ಮುಂದುವರಿದಿದೆ. 2 ವಾರದ ಹಿಂದಷ್ಟೇ ಕೋರಳ್ಳಿಯ ಗುರುಗೌಡ ಬಿಜೆಪಿಯವರನ್ನು ಬೆದರಿಸಿ ಜೀವ ಬೆದರಿಕೆ ಹಾಕಿದ್ದಾರೆಂದು ಆಳಂದ ಶಾಸಕರ ಪುತ್ರ ಹರ್ಷಾನಂದ ಗುತ್ತೇದಾರ್‌ ಆರೋಪಿಸಿ ಕೇಸ್‌ ದಾಖಲಿಸಿದ್ದರು. ಇದೀಗ ಆಳಂದ ಶಾಸಕ ಸುಭಾಸ ಗುತ್ತೇದಾರ್‌ ಪುತ್ರ ಸಂತೋಷ ಗುತ್ತೇದಾರ್‌ ಇವರು ಕಾಂಗ್ರೆಸ್‌ ಅಭ್ಯರ್ಥಿ ಬಿಆರ್‌ ಪಾಟೀಲರ ಸಹೋದರನ ಪುತ್ರ, ಕೆಎಂಎಫ್‌ ಅಧ್ಯಕ್ಷರಾಗಿರುವ ರಾಮಚಂದ್ರ ಪಾಟೀಲರಿಗೆ ಅವಾಚ್ಯವಾಗಿ ನಿಂದಿಸಿರುವ ಆಡಿಯೋ ವೈರಲ್‌ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೋ ವೈರಲ್‌ ಆಗುತ್ತಿದ್ದಂತೆಯೇ ಆಳಂದ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿರುವ ಆರ್‌ಕೆ ಪಾಟೀಲ್‌ ಸಂತೋಷನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಏ.7ರಂದೇ ದೂರು ಸಲ್ಲಿಸಿದ್ದರೂ ಇಂದಿಗೂ ಸಂತೋಷನ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಆತನ ಬಂಧನದ ಆತಂತೂ ದೂರವೇ ಉಳಿಯಿತು ಎಂಬಂತಾಗಿದೆ. ಹೀಗಾಗಿ ಆರ್‌ಕೆ ಪಾಟೀಲ್‌, ಬಿಆರ್‌ ಪಾಟೀಲ್‌ ಬೆಂಬಲಿಗರು ಆಳಂದ ಪೊಲೀಸರ ಧೋರಣೆ ಖಂಡಿಸುತ್ತಿದ್ದಾರೆ.

ಕಲಬುರಗಿ: ಮಾಲೀಕಯ್ಯ ಸಮ್ಮುಖದಲ್ಲೇ ನಿತಿನ್ ಪರ ಜಯಘೋಷ, ಅಣ್ಣನ ವಿರುದ್ಧ ತೊಡೆತಟ್ಟಿದ ತಮ್ಮ..!

ನಸುಕಿನಲ್ಲಿ ಆಡಿಯೋ ವೈರಲ್‌:

ಏ.5ರಂದು ನಸುಕಿನ ಜಾವದಲ್ಲಿ ತಮ್ಮ ವಿರುದ್ಧ ಸಲ್ಲದ ಆರೋಪ ಮಾಡುತ್ತ, ಅವಾಚ್ಯವಾಗಿ ನಿಂದಿಸಿರುವ ಆಡಿಯೋ ಕ್ಲಿಪ್‌ ಒಂದು ಸಾಮಾಜಿಕ ಜಾಲ ತಾಣದಲ್ಲಿ ಅಪ್‌ಲೋಡ್‌ ಆಗಿದೆ. ಇದನ್ನು ನಾನೂ ಕೇಳಿದ್ದೇನೆ. ಇದನ್ನು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಅಪ್‌ಲೌಡ್‌ ಮಾಡಿದವರು ಶಾಸಕರ ಪುತ್ರ ಸಂತೋಷ ಗುತ್ತೇದಾರ್‌. ಈ ಚುನಾವಣೆಯಲ್ಲಿ ಎಲ್ಲರಿಗೂ ಬೆದರಿಸುವ, ಭಯದ ವಾತಾವರಣ ಹುಟ್ಟು ಹಾಕುವುದೇ ಈ ಆಡಿಯೋ ಹಿಂದಿನ ಉದ್ದೇಶವೆಂದು ಆರ್ಕೆ ಪಾಟೀಲ್‌ ದೂರಿದ್ದಾರೆ.

ಪಾರದರ್ಶಕ, ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಜಿಲ್ಲಾಡಳಿತ ಸೇರಿದಂತೆ ಎಲ್ಲರು ಹೆಣಗುತ್ತಿರುವಾಗಲೇ ಸಂತೋಷ ಗುತ್ತೇದಾರ್‌ ಶಾಸಕರ ಮಗನೆಂಬ ದರ್ಪದಲ್ಲಿ ಈ ರೀತಿ ಭಯ, ಈಆತಂಕ ಹುಟ್ಟಿಸುವ ಆಡಿಯೋ ವೈರಲ್‌ ಮಾಡಿ ಕಾನೂನು- ಸುವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ. ಇವರ ವಿರುದ್ಧ ತಕ್ಷಣ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕುಎಂದು ಆರ್‌ಕೆ ಪಾಟೀಲ್‌ ದೂರಿನಲ್ಲಿ ವಿವರಿಸಿದ್ದಾರೆ.

ಆಳಂದ ಪೊಲೀಸರ ವಿರುದ್ಧ ಕಲಬುರಗಿ ಎಸ್ಪಿ ಕಚೇರಿ ಮುಂದೆ ಶೀಘ್ರ ಧರಣಿ

ಕಳೆದ ಏ. 5 ರಂದೇ ಆರ್‌ಕೆ ಪಾಟೀಲ್‌ ದೂರು ಸಲ್ಲಿಸಿದ್ದರೂ ಇಂದಿಗೂ ಅವಾಚ್ಯ ನಿಂದನೆ ಮಾಡಿರುವ ಶಾಸಕರ ಪುತ್ರ ಸಂತೋಷ ವಿರುದ್ಧ ಪೊಲೀಸರು ದೂರು ದಾಖಲಿಸಿಲ್ಲ , ಪೊಲೀಸರ ಈ ಕ್ರಮವನ್ನು ನಾವು ಖಂಡಿಸುತ್ತೇವೆ. ಆಳಂದ ಪೊಲೀಸರ ಪಕ್ಷಪಾತಿ ಧೋರಣೆಯನ್ನೇ ಆಕ್ಷೇಪಿಸುತ್ತೇವೆ. ಜಿಲ್ಲಾ ಎಸ್ಪಿ ಕಚೇರಿ ಮುಂದೆ ಧರಣಿ ಮಾಡುತ್ತೇವೆ ಎಂದು ಆಳಂದ ಕಾಂಗ್ರೆಸ್‌ ಯುವ ಮುಖಂಡ ಗಣೇಶ ಪಾಟೀಲ್‌ ’ಕನ್ನಡಪ್ರಭ’ ಪತ್ರಿಕೆಯೊಂದಿಗೆ ಮಾತನಾಡುತ್ತ ಮಾಹಿತಿ ನೀಡಿದ್ದಾರೆ. ಕೋರಳ್ಳಿಯ ಗುರುಗೌಡರ ಪ್ರಕರಣದಲ್ಲಿ ಶಾಸಕರ ಪುತ್ರರು ದೂರು ಸಲ್ಲಿಸಿದ ಮರುಕ್ಷಣವೇ ಎಫ್‌ಐರ್‌ ದಾಖಲಿಸುವ ಪೊಲೀಸರು ಈ ಪ್ರಕರಣದಲ್ಲಿಯೂ ಯಾಕೆ ತ್ವರಿತವಾಗಿ ಎಫ್‌ಐಆರ್‌ ಹಾಕಬಾರದು? ಶಾಸಕರ ಪುತ್ರರೆಂದರೆ ಅವರಿಗೇನು ಕಾನೂನು ಬೇರೆ ಇರುತ್ತದೆಯೆ? ಆಳಂದ ಪೊಲೀಸರ ಇಂತಹ ದ್ವಂದ್ವ ಧೋರಣೆಯ ವಿರುದ್ಧವೇ ಶೀಘ್ರ ಜಿಲ್ಲಾ ಎಸ್ಪಿ ಕಚೇರಿ ಮುಂದೆ ಧರಣಿ ನಡೆಸುತ್ತೇವೆಂದು ಗಣೇಶ ಪಾಟೀಲ್‌ ಹೇಳಿದ್ದಾರೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.