ತೆಲಂಗಾಣದಲ್ಲೂ ಕೈ ‘ಗ್ಯಾರಂಟಿ’ ಘೋಷಣೆ; ಏಕರೂಪ ಸಂಹಿತೆ ಬಗ್ಗೆ ಕಾದು ನೋಡುವ ತಂತ್ರ!
ಕರ್ನಾಟಕ ಮಾದರಿಯಲ್ಲಿ ತೆಲಂಗಾಣದಲ್ಲೂ ಮೊದಲ ಭರವಸೆಯನ್ನು ಘೋಷಿಸಿರುವ ರಾಹುಲ್ ಗಾಂಧಿ, ವಿಧವೆಯರು, ವೃದ್ಧರಿಗೆ ಮಾಸಿಕ 4,000 ರೂ. ಮಾಸಾಶನ ನೀಡುವುದಾಗಿ ಘೋಷಿಸಿದರು. ಜೊತೆಗೆ ಕರ್ನಾಟಕ ಮಾದರಿ ಇಲ್ಲೂ ಜಯದ ವಿಶ್ವಾಸ ವ್ಯಕ್ತಪಡಿಸಿದರು.
ಖಮ್ಮಂ (ತೆಲಂಗಾಣ) / ನವದೆಹಲಿ (ಜುಲೈ 3, 2023): ತೆಲಂಗಾಣ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಪಕ್ಷದ ಪರವಾಗಿ ರಣಕಹಳೆ ಮೊಳಗಿಸಿದ್ದು, ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿತ ವಾಗ್ದಾಳಿ ನಡೆಸಿದ್ದಾರೆ. ಹಾಗೂ, ಕರ್ನಾಟಕ ರೀತಿ ಹಲವು ‘ಗ್ಯಾರಂಟಿ’ಗಳ ಭರವಸೆ ಘೋಷಿಸಿದ್ದಾರೆ.
ಭಾನುವಾರ ಖಮ್ಮಂನಲ್ಲಿ ಕಾಂಗ್ರೆಸ್ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಚಂದ್ರಶೇಖರ ರಾವ್ ಅವರ ರಿಮೋಟ್ ಮೋದಿ ಬಳಿ ಇದೆ. ಬಿಆರ್‌ಎಸ್ ಪಕ್ಷ ಬಿಜೆಪಿಯ ಬಿ-ಟೀಂ ಆಗಿದೆ’ ಎಂದು ಟೀಕಿಸಿದರು. ‘ಕೆಸಿಆರ್ ತಮ್ಮನ್ನು ತಾವು ರಾಜ ಹಾಗೂ ತೆಲಂಗಾಣ ತಮ್ಮ ಸಾಮ್ರಾಜ್ಯ ಎಂದುಕೊಂಡಿದ್ದಾರೆ. ಇವರ ಪಕ್ಷ ಬಿಆರ್‌ಎಸ್ ಎಂದರೆ ‘ಬಿಜೆಪಿ ರಿಷ್ತೆದಾರ್ ಪಕ್ಷ (ಬಿಜೆಪಿ ಸಂಬಂಧಿ ಪಕ್ಷ)’. ನಾವು ಅಂದೇ ಹೇಳಿದ್ದೇವೆ. ಬಿಆರ್‌ಎಸ್ ಯಾವ ಮೈತ್ರಿಕೂಟದಲ್ಲಿರುವುದೋ ನಾವು ಅದರಲ್ಲಿ ಇರುವುದಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಬಬ್ಬರ್ ಶೇರ್ (ಸಿಂಹ) ಇದ್ದಂತೆ’ ಎಂದು ಪ್ರಹಾರ ನಡೆಸಿದರು.
ಇದನ್ನು ಓದಿ: ಪ್ರತಿ ವರ್ಷ ಪ್ರತಿ ರೈತನಿಗೆ 50 ಸಾವಿರ, ಇದುವೇ ಮೋದಿ ಗ್ಯಾರಂಟಿ: ಕಾಂಗ್ರೆಸ್ ಗ್ಯಾರಂಟಿಗೆ ಪ್ರಧಾನಿ ಮೋದಿ ಟಾಂಗ್
ಇದೇ ವೇಳೆ ಕರ್ನಾಟಕ ಮಾದರಿಯಲ್ಲಿ ತೆಲಂಗಾಣದಲ್ಲೂ ಮೊದಲ ಭರವಸೆಯನ್ನು ಘೋಷಿಸಿರುವ ರಾಹುಲ್ ಗಾಂಧಿ, ವಿಧವೆಯರು, ವೃದ್ಧರಿಗೆ ಮಾಸಿಕ 4,000 ರೂ. ಮಾಸಾಶನ ನೀಡುವುದಾಗಿ ಘೋಷಿಸಿದರು. ಜೊತೆಗೆ ಕರ್ನಾಟಕ ಮಾದರಿ ಇಲ್ಲೂ ಜಯದ ವಿಶ್ವಾಸ ವ್ಯಕ್ತಪಡಿಸಿದರು.
ಏಕರೂಪ ಸಂಹಿತೆ: ಕಾದು ನೋಡಲು ಕಾಂಗ್ರೆಸ್ ನಿರ್ಧಾರ
ನವದೆಹಲಿ: ಏಕರೂಪ ನಾಗರಿಕ ಸಂಹಿತೆ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ. ಮೊದಲು ಕಾನೂನು ಆಯೋಗವು ಸಂಹಿತೆಯ ಕರಡು ಸಿದ್ಧಪಡಿಸಲಿ. ಆಮೇಲೆ ಅದರಲ್ಲಿನ ಅಂಶಗಳನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡೋಣ ಎಂದು ನಿರ್ಧರಿಸಿದೆ.
ಇದನ್ನೂ ಓದಿ: ಏಕರೂಪದ ಸಂಹಿತೆ ಪ್ರಸ್ತಾಪಕ್ಕೆ ಪ್ರತಿಪಕ್ಷಗಳು ಕೆಂಡಾಮಂಡಲ: ಮುಸ್ಲಿಂ ಮಂಡಳಿ ಆಕ್ಷೇಪ
ಸಂಹಿತೆ ವಿಚಾರವಾಗಿ ಶನಿವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ವೇಳೆ, ‘ಆತುರದ ಪ್ರತಿಕ್ರಿಯೆ ತೋರುವುದು ಬೇಡ. ಹಾಗೆ ಮಾಡಿದರೆ ಬಿಜೆಪಿ ಹಾಕಿದ ಖೆಡ್ಡಾಗೆ ಬೀಳಬಹುದು. ಕಾನೂನು ಆಯೋಗ ಮೊದಲು ಕರಡು ಸಿದ್ಧಪಡಿಸಲಿ. ಕರಡಿನಲ್ಲಿ ಯಾವ ಅಂಶಗಳನ್ನು ತರಲಾಗುತ್ತದೆ ನೋಡೋಣ. ನಂತರ ಆ ಬಗ್ಗೆ ಮಾತನಾಡೋಣ ಎಂದು ನಿರ್ಧರಿಸಲಾಗಿದೆ’ ಎಂದು ಮುಖಂಡ ಜೈರಾಂ ರಮೇಶ್ ಹೇಳಿದ್ದಾರೆ.
ಇದರ ಬದಲು ಈಗ ಮೂಲ ವಿಷಯಗಳಾದ, ಮಣಿಪುರ ಪರಿಸ್ಥಿತಿ, ರಾಜ್ಯಪಾಲರಿಂದ ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿ, ರೈಲು ದುರಂತ, ಕುಸ್ತಿಪಟುಗಳ ಪ್ರತಿಭಟನೆ, ಬೆಲೆ ಏರಿಕೆ- ಇತ್ಯಾದಿ ವಿಷಯಗಳನ್ನು ಪ್ರಸ್ತಾಪಿಸೋಣ ಎಂದು ತೀರ್ಮಾನಿಸಲಾಯಿತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: 2 ಕಾಯ್ದೆ ಇಟ್ಕೊಂಡು ದೇಶ ನಡೆಸಲು ಹೇಗೆ ಸಾಧ್ಯ? ಏಕರೂಪ ನಾಗರಿಕ ಸಂಹಿತೆ ಪರ ಪ್ರಧಾನಿ ಮೋದಿ ಬ್ಯಾಟಿಂಗ್
ಇಂದು ಸಭೆ:
ಇದೇ ವೇಳೆ, ಕಾನೂನು ಸಚಿವಾಲಯದ ಸಂಸದೀಯ ಸಮಿತಿ ಸೋಮವಾರ ಸಭೆ ನಡೆಸಲಿದ್ದು, ಏಕರೂಪ ನಾಗರಿಕ ಸಂಹಿತೆ ಬಗ್ಗೆ ಚರ್ಚಿಸಲಿದೆ. ಈ ಸಂಬಂಧ ಕಾನೂನು ಸಚಿವಾಲಯ, ಸಂಸದೀಯ ಸಚಿವಾಲಯ ಹಾಗೂ ಕಾನೂನು ಆಯೋಗದ ಅಧಿಕಾರಿಗಳಿಗೆ ಅದು ಬುಲಾವ್ ನೀಡಿದ್ದು, ‘ವೈಯಕ್ತಿಕ ಕಾನೂನುಗಳ ಮರುಪರಾಮರ್ಶೆ’ ನಡೆಸಲಿದೆ.
ನಾನು ಸಂಹಿತೆ ವಿರೋಧಿಯಲ್ಲ, ಜಾರಿ ವಿಧಾನಕ್ಕೆ ಸಮ್ಮತಿಯಿಲ್ಲ: ಮಾಯಾವತಿ
ಲಖನೌ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ನಮ್ಮ ವಿರೋಧವಿಲ್ಲ, ಆದರೆ ಬಿಜೆಪಿ ಸರ್ಕಾರ ಅದನ್ನು ಜಾರಿಗೊಳಿಸುವ ವಿಧಾನಕ್ಕೆ ನಮ್ಮ ಸಮ್ಮತಿಯಿಲ್ಲ ಎಂದು ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಹೇಳಿದ್ದಾರೆ.
ಇದನ್ನೂ ಓದಿ: ಬಾಲ್ಯವಿವಾಹಕ್ಕೆ ಬ್ರೇಕ್ ಬೆನ್ನಲ್ಲೇ ಬಹುಪತ್ನಿತ್ವ ಬ್ಯಾನ್ ಮಾಡಲು ಮುಂದಾದ ಅಸ್ಸಾಂ ಸಿಎಂ
ಭಾನುವಾರ ಮಾತನಾಡಿದ ಅವರು,‘ಭಾರತದಲ್ಲಿ ಸರ್ವತೋಮುಖ ಏಳಿಗೆಯಾಗಬೇಕೆಂದರೆ ಅದಕ್ಕೆ ಏಕರೂಪ ನಾಗರಿಕ ಸಂಹಿತೆ ಅಗತ್ಯ. ಇದರ ಬಗ್ಗೆ ಜನರಿಗೆ ಅರಿವು ಹಾಗೂ ಜಾಗೃತಿ ಮೂಡಿಸಿ ಜಾರಿ ಮಾಡಬೇಕು. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಅದನ್ನು ಬಿಟ್ಟು ಹೇರಿಕೆ ಮಾಡುತ್ತಿದೆ. ಇದನ್ನು ನಾವು ವಿರೋಧಿಸುತ್ತೇವೆ. ಸಂವಿಧಾನದ 44ನೇ ಪರಿಚ್ಛೇದವು ಸಂಹಿತೆಯನ್ನು ಜನರಿಗೆ ಒಪ್ಪಿಸಿ ಜಾರಿ ಮಾಡು ಎಂದು ಹೇಳುತ್ತದೆಯೆ ಹೊರತು ಬಲವಂತವಾಗಿ ಜಾರಿ ಮಾಡಲು ಹೇಳುವುದಿಲ್ಲ. ಬಿಜೆಪಿ ಸರ್ಕಾರ ಸಂಹಿತೆಯನ್ನು ನಿಷ್ಪಕ್ಷಪಾತದಿಂದ ಜಾರಿ ಮಾಡಿದರೆ ನಾವು ಅದನ್ನು ಗುಣಾತ್ಮಕವಾಗಿ ಒಪ್ಪುತ್ತೇವೆ. ಒಂದು ವೇಳೆ ಅದರಲ್ಲಿ ಪಕ್ಷಪಾತ ಇದ್ದರೆ ನಾವು ವಿರೋಧಿಸುತ್ತೇವೆ’ ಎಂದರು.
ಇದನ್ನೂ ಓದಿ: ಏಕರೂಪದ ಸಂಹಿತೆ ರೂಪಿಸಲು ರಾಜ್ಯಗಳಿಗೆ ಅಧಿಕಾರ: ಸುಪ್ರೀಂಕೋರ್ಟ್