Asianet Suvarna News Asianet Suvarna News

ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ಸರ್ಕಾರದ ಆದ್ಯತೆ: ಸಿದ್ದರಾಮಯ್ಯ ಹೇಳಿದ್ದೇನು?

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಇಡೀ ರಾಜ್ಯದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳ ಆಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. 
 

Completion of irrigation projects is govt priority Says CM Siddaramaiah gvd
Author
First Published Jan 25, 2024, 12:30 AM IST

ಪಿರಿಯಾಪಟ್ಟಣ (ಜ.25): ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಇಡೀ ರಾಜ್ಯದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳ ಆಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಪಿರಿಯಾಪಟ್ಟಣ ತಾಲೂಕು ಕೊಪ್ಪ ಗ್ರಾಮದಲ್ಲಿ ಮುತ್ತಿನ ಮುಳುಸೋಗೆ ಬಳಿಯಿಂದ ಕಾವೇರಿ ನದಿಯಿಂದ ನೀರೆತ್ತಿ 79 ಗ್ರಾಮಗಳಲ್ಲಿ ಬರುವ 150 ಕೆರೆಗಳು ಹಾಗೂ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.

2017 ರಲ್ಲಿ ನಾನು ಈ ಯೋಜನೆಗೆ ಮಂಜೂರು ಮಾಡಿ ಚಾಲನೆ ನೀಡಿದ್ದೆ. ಪಿರಿಯಾಪಟ್ಟಣ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಇದೆ, ಈ ಯೋಜನೆಯಿಂದ 150 ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಹೆಚ್ಚಳ ಆಗಿ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯುತ್ತದೆ. ಇದರಿಂದ 79 ಗ್ರಾಮಗಳ 93 ಸಾವಿರ ಜನರಿಗೆ ಅನುಕೂಲ ಆಗುತ್ತದೆ ಎಂದರು. ನಮ್ಮ ಸರ್ಕಾರ ನುಡಿದಂತೆ ನಡೆದ ಸರ್ಕಾರ. ನಾವು ನೀರಾವರಿ ಯೋಜನೆಗೆ ಪ್ರತಿ ವರ್ಷ 10 ಸಾವಿರ ಕೋಟಿ ಖರ್ಚು ಮಾಡುವುದಾಗಿ ವಾಗ್ದಾನ ಮಾಡಿದ್ದೆವು, ಅದರಂತೆ 5 ವರ್ಷಗಳಲ್ಲಿ 56 ಸಾವಿರ ಕೋಟಿ ಖರ್ಚು ಮಾಡಿದೆವು. ರಾಜ್ಯದ 223 ತಾಲೂಕುಗಳಲ್ಲಿ ಬರಗಾಲ ಇದೆ. 

ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಅಂದ ಪ್ರಧಾನಿ ಮೋದಿ ವಿಫಲ: ಸಿದ್ದರಾಮಯ್ಯ ಲೇವಡಿ

ಆದರೂ ಜನರಿಗೆ ನೀರಿನ ಸಮಸ್ಯೆ ಆಗದಂತೆ ಕಾರ್ಯ ನಿರ್ವಹಿಸಿದ್ದೇವೆ. ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ ಆದರೆ ಇನ್ನೂ ಬರ ಪರಿಹಾರ ಬಿಡುಗಡೆ ಆಗಿಲ್ಲ ಎಂದು ಅವರು ತಿಳಿಸಿದರು. ಎಲ್ಲಾ ಧರ್ಮದ, ಎಲ್ಲಾ ಜಾತಿಯ ಜನರು ಒಂದು ಕುಟುಂಬದಂತೆ ಇರಬೇಕು. ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದ 5 ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಈ 5 ಗ್ಯಾರಂಟಿ ಗಳಿಗೆ 38 ಸಾವಿರ ಕೋಟಿ ಹಾಗೂ ಮುಂದಿನ ವರ್ಷದಲ್ಲಿ 58 ಸಾವಿರ ಕೋಟಿ ಖರ್ಚು ಮಾಡುತ್ತೇವೆ. 4.5 ಕೋಟಿ ಜನರಿಗೆ ಪ್ರತಿ ತಿಂಗಳು 4 ರಿಂದ 5 ಸಾವಿರ ಮೌಲ್ಯದ ಸೌಲಭ್ಯ ಸಿಗುತ್ತಿವೆ ಎಂದು ಅವರು ತಿಳಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಇಡೀ ದೇಶಕ್ಕೆ ಮಾದರಿಯಾದ ಸರ್ಕಾರವನ್ನು ರೂಪಿಸಿದ್ದೇವೆ. ಕೆರೆಗಳಿಗೆ ನೀರನ್ನು ತುಂಬಿಸಿ ಅಂತರ್ ಜಲ ಹೆಚ್ಚಿಸುವ ಕೆಲಸ ಮಾಡುತ್ತಿದ್ದೇವೆ. ರೈತರಿಗೆ ಯಾವುದೇ ಸಂಬಳ, ರಜೆ, ಪ್ರಮೋಷನ್, ಪಿಂಜಣಿ ಇಲ್ಲ. ಆದ್ದರಿಂದ ಅವರು ಬೆಳೆ ಬೆಳೆಯಲು ನೀರನ್ನು ನೀಡಿದರೆ ಉತ್ತಮ ಬೆಳೆಗಳನ್ನು ಬೆಳೆದು ಉತ್ತಮ ಜೀವನ ನಡೆಸಲು ಸಹಕಾರಿಯಾಗುತ್ತದೆ. ನಮ್ಮ ಸರ್ಕಾರ ರೈತ ಪರವಾದ ಸರ್ಕಾರ. ನಾವು ಚುನಾವಣೆಗೂ ಮುಂಚೆ ನೀಡಿದ್ದ 5 ಗ್ಯಾರೆಂಟಿಗಳನ್ನು ಜಾರಿಗೆ ತಂದು ನುಡಿದಂತೆ ನಡೆಸಿದ್ದೇವೆ ಎಂದು ಹೇಳಿದರು.

ಇಂದು ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಪ್ರತಿ ಮನೆಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. 1.6 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ ನೀಡಲಾಗುತ್ತಿದೆ. ಪ್ರತಿ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ 5 ಕೆ ಜಿ ಅಕ್ಕಿ ಹಾಗೂ 5 ಕೆ ಜಿ ಅಕ್ಕಿಗೆ ಹಣವನ್ನು ನೀಡಲಾಗುತ್ತಿದೆ. ಪದವಿ ಓದಿರುವ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3000 ರೂ ಹಾಗೂ ಡಿಪ್ಲೋಮಾ ಮಾಡಿರುವವರಿಗೆ ಮಾಸಿಕ 1500 ರೂಗಳನ್ನು ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ನಮ್ಮ ಸರ್ಕಾರ ಕನ್ನಡಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಕನ್ನಡದಲ್ಲಿ ನಾಮಫಲಕ ಹಾಕುವಂತೆ ಆದೇಶಿಸಲಾಗಿದೆ. ಮೇಕೆದಾಟು ಯೋಜನೆಯನ್ನು ಜಾರಿಗೆ ತರಲು ಪಾದಯಾತ್ರೆ ಮಾಡಿದೆವು. ಈ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಇದೆ. ನಮ್ಮ ನೀರು ನಮ್ಮ ಹಕ್ಕು. ಈ ಬಗ್ಗೆ ಹೋರಾಟ ಮಾಡುತ್ತೇವೆ ಎಂದರು. ಅಧ್ಯಕ್ಷತೆ ವಹಿಸಿದ್ದ ರೇಷ್ಮೆ ಹಾಗೂ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಮಾತನಾಡಿ, ಇಂದು ಉದ್ಘಾಟನೆಗೊಂಡ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮ ಈ ತಾಲೂಕಿಗೆ ಹೆಚ್ಚು ಉಪಯೋಗವಾಗುತ್ತದೆ. ಈ ಯೋಜನೆಯನ್ನು 201 ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿ ಶಂಕುಸ್ಥಾಪನೆ ಮಾಡಿದ್ದರು. 

ಇಂದು ಈ ಯೋಜನೆಯನ್ನು ಅವರೇ ಉದ್ಘಾಟಿಸಿದ್ದಾರೆ. 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ತಾಲೂಕಿನ ಬರ ಕಡಿಮೆ ಆಗುತ್ತದೆ. ಈ 150 ಕೆರೆಗಳಲ್ಲಿ ಹೂಳು ತುಂಬಿದ್ದು, ಹೂಳೆತ್ತಿ ಬಂಡು ನಿರ್ಮಿಸಬೇಕು. ಜನರ ಮನಸ್ಸನ್ನು ಅರ್ಥ ಮಾಡಿಕೊಂಡ ರಾಜಕಾರಣಿಗಳು ಮಾತ್ರ ಜನಪರ ಕಾರ್ಯಗಳನ್ನು ಮಾಡಲು ಸಾಧ್ಯ. ನನ್ನ ಅವಧಿಯಲ್ಲಿ ತಾಲೂಕಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳನ್ನು ತರಲು ಸಹಕಾರ ಮಾಡಿದ್ದ ಮುಖ್ಯಮಂತ್ರಿ ಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪರ ಯೋಜನೆಗಳನ್ನು ಜನರಿಗೆ ನೀಡಿದ್ದಾರೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ 5 ಗ್ಯಾರೆಂಟಿ ಜಾರಿಗೆ ತಂದು ಬಡವರಿಗೆ ಸಹಕಾರ ಮಾಡಿದ್ದೇವೆ. 

ಶಾಸಕ ಹರೀಶ್ ನೀತಿಪಾಠದ ಅಗತ್ಯ ನನಗಿಲ್ಲ: ಎಂ.ಪಿ.ರೇಣುಕಾಚಾರ್ಯ ಟಾಂಗ್

5 ಗ್ಯಾರೆಂಟಿಗಳು ಎಲ್ಲಾ ಪಕ್ಷದ ಎಲ್ಲಾ ಧರ್ಮದ ಜನರಿಗೆ ಅನುಕೂಲವಾಗಿದೆ. ನಮ್ಮ ಸರ್ಕಾರ ಹಿಂದುಳಿದವರ ಪರ, ಅಲ್ಪ ಸಂಖ್ಯಾತರ ಪರ, ಬಡವರ ಪರವಾದ ಕೆಲಸ ಮಾಡಿದೆ ಎಂದರು. ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಸರ್ಕಾರದ ಹಲವು ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು. ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಸಣ್ಣ ನೀರಾವರಿ ಸಚಿವ ಬೋಸರಾಜು, ಶಾಸಕರಾದ ಕೆ. ಹರೀಶ್ ಗೌಡ, ಡಿ. ರವಿಶಂಕರ್, ಮಡಿಕೇರಿ ಶಾಸಕರಾದ ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಿ. ತಿಮ್ಮಯ್ಯ, ಮರಿತಿಬ್ಬೇಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಜಿಪಂ ಸಿಇಒ ಕೆ.ಎಂ. ಗಾಯತ್ರಿ ಮೊದಲಾದವರು ಇದ್ದರು.

Follow Us:
Download App:
  • android
  • ios