Asianet Suvarna News Asianet Suvarna News

ಕಾಂಗ್ರೆಸ್‌ನಲ್ಲಿ ಲೋಕಸಭೆ ಸ್ಪರ್ಧೆಗೆ ಹೆಚ್ಚಿದ ಪೈಪೋಟಿ..!

ಲೋಕಸಭೆಯ ಚುನಾವಣೆಗೆ ಜಾತಿ, ಹಣದ ಜೊತೆಗೆ ರಾಜ್ಯ ಹಾಗೂ ಕೇಂದ್ರದ ನಾಯಕರು ಒಲವು ಸಹ ಮುಖ್ಯವಾಗುತ್ತದೆ. ಹೀಗಾಗಿ ಸದ್ಯದ ಸಂದರ್ಭದಲ್ಲಿ ಪಕ್ಷದ ನಾಯಕರು ಯಾವ ಮಾನದಂಡವನ್ನು ಇಟ್ಟುಕೊಂಡು ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ.

Competition in Congress Ticket for the Lok Sabha Elections 2024 in Bagalkot grg
Author
First Published Sep 7, 2023, 10:00 PM IST

ಈಶ್ವರ ಶೆಟ್ಟರ್‌

ಬಾಗಲಕೋಟೆ(ಸೆ.07): ಲೋಕಸಭೆಯ ಚುನಾವಣೆಗೆ ಇನ್ನು 8 ತಿಂಗಳು ಇದೆ. ಆದರೆ, ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವವರ ಪಟ್ಟಿ ಈಗಿನಿಂದಲೇ ದೊಡ್ಡದಾಗುತ್ತಿದೆ. ಅದರಲ್ಲೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆ ಮಾಡಲು ಇನ್ನಿಲ್ಲದ ಪೈಪೋಟಿ ಆರಂಭವಾಗಿದೆ.

ಒಂದು ಕಾಲದಲ್ಲಿ ಬಾಗಲಕೋಟೆ ಲೋಕಸಭಾ ಕ್ಷೇತ್ರವು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ಸ್ವಾತಂತ್ರ್ಯಾ ನಂತರದಲ್ಲಿ ನಡೆದ ಬಹುತೇಕ ಚುನಾವಣೆಯಲ್ಲಿ ಸರಳವಾಗಿ ಗೆದ್ದು ಬೀಗಿದ್ದ ಪಕ್ಷಕ್ಕೆ 90ರ ದಶಕದಲ್ಲಿನ ಎರಡು ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡ ಕಾಂಗ್ರೆಸ್ ಪಕ್ಷಕ್ಕೆ 1999ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಗೆದ್ದಿತಾದರೂ ಮತ್ತೆ 2004ರ ನಂತರದ ನಾಲ್ಕೂ ಚುನಾವಣೆಯಲ್ಲಿಯು ಸಹ ಬಿಜೆಪಿ ಎದುರು ಸತತ ಸೋಲು ಕಂಡಿತು. ಇದೀಗ ಮುಂಬರುವ ಚುನಾವಣೆಯಲ್ಲಿ ಗೆಲ್ಲಲು ಈಗಿನಿಂದಲೇ ಕಾಂಗ್ರೆಸ್ ಕಾರ್ಯತಂತ್ರ ರೂಪಿಸುತ್ತಿದೆ. ಈಗಾಗಲೇ ವಿಧಾನಸಭೆಯಲ್ಲಿ ಗೆದ್ದು, ಅಧಿಕಾರ ಸ್ಥಾಪಿಸಿರುವ ಕಾಂಗ್ರೆಸ್‌ ಅದೇ ಹುಮ್ಮಸ್ಸಿನಲ್ಲಿದೆ.

ಸಂತೋಷಜಿ ನಿಮ್ಮ ಪಕ್ಷ ಸರಿ ಮಾಡಿಕೊಳ್ಳಿ, ಕಾಂಗ್ರೆಸ್‌ ಪಕ್ಷದ ಯೋಚನೆ ನಿಮಗ್ಯಾಕೆ?: ತಿಮ್ಮಾಪೂರ

ಸ್ಪರ್ಧೆಗೆ ಇನ್ನಿಲ್ಲದ ಆಕಾಂಕ್ಷಿಗಳು:

ಬಾಗಲಕೋಟೆ ಲೋಕಸಭೆಯ ಚುನಾವಣೆಯನ್ನು ಈ ಬಾರಿ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ಜಿಲ್ಲಾ ಕಾಂಗ್ರೆಸ್ ಮುಖಂಡರು ಒತ್ತಾಸೆಗೆ ಇಂಬು ಎಂಬಂತೆ ಸ್ಪರ್ಧೆ ಮಾಡಲು ಕಳೆದ ಬಾರಿಗಿಂತ ಈ ಬಾರಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರಿಗೆ ತೀವ್ರ ಸ್ಪರ್ಧೆ ಒಡ್ಡಿದ್ದ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅವರು ಈ ಬಾರಿಯೂ ಸ್ಪರ್ಧೆಗೆ ಆಸಕ್ತಿ ತೋರಿದ್ದು, ಕ್ಷೇತ್ರದ ಕೆಲವೆಡೆ ಪ್ರವಾಸವನ್ನು ಆರಂಭಿಸಿದ್ದಾರೆ. ಅಲ್ಲದೆ ಬಹಿರಂಗವಾಗಿಯೂ ಬರುವ ಚುನಾವಣೆಯಲ್ಲಿ ಪ್ರಬಲ ಆಕಾಂಕ್ಷಿಯಾಗಿದ್ದು ಪಕ್ಷ ಅವಕಾಶ ನೀಡುವ ವಿಶ್ವಾಸವಿದೆ ಎಂದು ಹೇಳಿಕೊಂಡಿದ್ದಾರೆ. ಸಹಜವಾಗಿ ಇವರ ಹೇಳಿಕೆಯಿಂದ ಇನ್ನುಳಿದ ಸ್ಪರ್ಧಾಕಾಂಕ್ಷಿಗಳಲ್ಲಿ ತಮ್ಮ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ಅನಿವಾರ್ಯತೆ ಬಂದಿದೆ.

ಇವರ ಜೊತೆಗೆ ಕಳೆದ ಬಾರಿ ದೆಹಲಿಯವರೆಗೆ ಹೆಸರು ತಲುಪಿ ಅಂತಿಮ ಹಂತದಲ್ಲಿ ಟಿಕೆಟ್ ವಂಚಿತರಾಗಿದ್ದ ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಮಹಿಳಾ ಕಾಂಗ್ರೆಸ್ಸಿನ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ, ಮಾಜಿ ಸಚಿವ ಸದ್ಯ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಅಜಯಕುಮಾರ ಸರನಾಯಕ, ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಸೇರಿದಂತೆ ಇನ್ನಿತರರು ಹೆಸರು ಕೂಡ ಪ್ರಬಲವಾಗಿ ಕೇಳಿಬರುತ್ತಿದೆ.

ಸಿದ್ದರಾಮಯ್ಯ ಕರ್ನಾಟಕದ ಪಕ್ಷಾಂತರ ಪ್ರವೀಣ: ಈಶ್ವರಪ್ಪ

ಇಷ್ಟೊಂದು ಪೈಪೋಟಿ ಏಕೆ?:

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಜತೆಗೆ ಬಾಗಲಕೋಟೆ ಕ್ಷೇತ್ರದ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಐದರಲ್ಲಿ ಕಾಂಗ್ರೆಸ್‌, ಮೂರರಲ್ಲಿ ಬಿಜೆಪಿ ಗೆದ್ದಿದೆ (ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಇದೆ). ಅಲ್ಲದೆ, ಜನಸಾಮಾನ್ಯರಿಗೆ ಬೇಕಾದ ಗ್ಯಾರಂಟಿಗಳನ್ನು ನೀಡುತ್ತಿರುವುದರಿಂದ ಸರ್ಕಾರದ ಜನಪ್ರಿಯತೆ ಹೆಚ್ಚಾಗುತ್ತಿದೆ ಎಂಬ ಭಾವನೆ ಕಾಣುತ್ತಿದೆ. ಹೀಗಾಗಿ ಜನರು ಕೂಡ ಕಾಂಗ್ರೆಸ್‌ನತ್ತ ವಾಲುತ್ತಾರೆ. ಹೀಗಾಗಿ, ಈ ಬಾರಿ ಟಿಕೆಟ್ ಪಡೆದು ಚುನಾವಣೆಗೆ ದುಮಕಿದರೆ ನಿಶ್ಚಿತವಾಗಿಯೂ ಗೆಲ್ಲುವ ಅವಕಾಶ ಹೆಚ್ಚಿದೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ಇದುವೇ ಪೈಪೋಟಿ ಹೆಚ್ಚಾಗಲು ಕಾರಣವಾಗಿದೆ.

ಜಾತಿಯೂ ಮುಖ್ಯವಾಗುತ್ತದೆ:

ಪ್ರಬಲ ಆಕಾಂಕ್ಷಿಗಳಲ್ಲಿ ವೀಣಾ ಕಾಶಪ್ಪನವರ, ಶಿವಾನಂದ ಉದಪುಡಿ, ಪ್ರಕಾಶ ತಪಶೆಟ್ಟಿ ಅವರು ಪ್ರಬಲ ಲಿಂಗಾಯತ ಸಮುದಾಯದವರು. ಜೊತೆಗೆ ಜಿಲ್ಲೆಯಲ್ಲಿ ಒಂದಿಲ್ಲ ಒಂದು ಜವಾಬ್ದಾರಿಯನ್ನು ಹೊಂದಿ ಜಿಲ್ಲೆಯ ಜನತೆಗೆ ಪರಿಚಿತರಾದವರು. ಇನ್ನು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿರುವ ರಕ್ಷಿತಾ ಈಟಿ ಅವರು ಸಹ ಹಾಲುಮತ ಸಮಾಜಕ್ಕೆ ಸೇರಿದವರು. ಕೊರೋನಾ ಸೇರಿದಂತೆ ಇತರೆ ಸಂದರ್ಭಗಳಲ್ಲಿ ಸಾಧ್ಯವಾದ ನೆರವನ್ನು ನೀಡಿ ಗುರುತಿಸಿಕೊಂಡವರು. ಮಾಜಿ ಸಚಿವ ಅಜಯಕುಮಾರ ಸರನಾಯಕ ಅವರು ರೆಡ್ಡಿ ಸಮುದಾಯಕ್ಕೆ ಸೇರಿದ್ದು ಆ ಸಮುದಾಯವು ಸಹ ಜಿಲ್ಲೆಯಲ್ಲಿ ಸಾಕಷ್ಟು ಪ್ರಭಾವ ಹೊಂದಿದೆ. ಹೀಗಾಗಿ ಆಕಾಂಕ್ಷಿಗಳಲ್ಲಿ ಬಹುತೇಕರು ಜಿಲ್ಲೆಯ ಜನತೆಗೆ ಪರಿಚಿತರೆ. ಏನೋ ನಿಜ ಆದರೆ ಲೋಕಸಭೆಯ ಚುನಾವಣೆಗೆ ಜಾತಿ, ಹಣದ ಜೊತೆಗೆ ರಾಜ್ಯ ಹಾಗೂ ಕೇಂದ್ರದ ನಾಯಕರು ಒಲವು ಸಹ ಮುಖ್ಯವಾಗುತ್ತದೆ. ಹೀಗಾಗಿ ಸದ್ಯದ ಸಂದರ್ಭದಲ್ಲಿ ಪಕ್ಷದ ನಾಯಕರು ಯಾವ ಮಾನದಂಡವನ್ನು ಇಟ್ಟುಕೊಂಡು ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ.

Follow Us:
Download App:
  • android
  • ios