ನನ್ನ ಹೆಸರನ್ನು ಕೇಳಿದರೆ ಮೋದಿಗೆ ಭಯ: ತೆಲಂಗಾಣದಲ್ಲಿ ಸಿದ್ದು ಕನ್ನಡದಲ್ಲೇ ಭಾಷಣ!
‘ಪ್ರಧಾನಿ ನರೇಂದ್ರ ಮೋದಿಗೆ ನನ್ನ ಕಂಡರೆ ಭಯ. ನನ್ನ ಹೆಸರು ಕೇಳಿದರೆ ಅವರಿಗೆ ನಡುಕ ಹುಟ್ಟುತ್ತದೆ. ಹೀಗಾಗಿ ಎಲ್ಲೆಡೆ ನನ್ನ ವಿರುದ್ಧ ಮಾತನಾಡುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಹೈದರಾಬಾದ್ (ನ.11): ‘ಪ್ರಧಾನಿ ನರೇಂದ್ರ ಮೋದಿಗೆ ನನ್ನ ಕಂಡರೆ ಭಯ. ನನ್ನ ಹೆಸರು ಕೇಳಿದರೆ ಅವರಿಗೆ ನಡುಕ ಹುಟ್ಟುತ್ತದೆ. ಹೀಗಾಗಿ ಎಲ್ಲೆಡೆ ನನ್ನ ವಿರುದ್ಧ ಮಾತನಾಡುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ನರೇಂದ್ರ ಮೋದಿ ಓರ್ವ ಸುಳ್ಳುಗಾರ. ಅವರು ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ 48 ಬಾರಿ ಭೇಟಿ ನೀಡಿ ಪ್ರಚಾರ ಮಾಡಿದ್ದರು. ಆದರೆ ಅವರು ಪ್ರಚಾರ ಮಾಡಿದಲ್ಲೆಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದು ತೆಲಂಗಾಣದಲ್ಲೂ ಪುನರಾವರ್ತನೆಯಾಗಲಿದೆ. ಮೋದಿ 100 ಬಾರಿ ತೆಲಂಗಾಣಕ್ಕೆ ಭೇಟಿ ನೀಡಿದರೂ ಬಿಜೆಪಿ ಇಲ್ಲಿ ಅಧಿಕಾರಕ್ಕೆ ಬರಲಾಗದು.
ಈ ಬಾರಿ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತೆಲಂಗಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಬಿಆರ್‌ಸಿ ಎರಡೂ ಒಂದೇ. ಬಿಆರ್‌ಸಿ ತೆಲಂಗಾಣದಲ್ಲಿ ಬಿಜೆಪಿಯ ಬಿ ಟೀಮ್ ಆಗಿ ಕೆಲಸ ಮಾಡುತ್ತಿದೆ. ತೆಲಂಗಾಣದ ಜನತೆ ಕೆಸಿಆರ್ ಮತ್ತು ಮೋದಿಯವರ ಮಕ್ಮಲ್ ಟೋಪಿಗೆ ಈ ಬಾರಿ ತಲೆ ಕೊಡುವುದಿಲ್ಲ ಎಂದರು. ವಿಶೇಷ ಎಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಇಡೀ ಭಾಷಣವನ್ನು ಕನ್ನಡದಲ್ಲೇ ಮಾಡಿದರು. ಅದನ್ನು ರಾಜ್ಯದ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ತೆಲುಗು ಭಾಷೆಗೆ ಅನುವಾದ ಮಾಡಿದರು.
ಲೋಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವುದೇ ಬಿಜೆಪಿ-ಜೆಡಿಎಸ್ ಮೈತ್ರಿ ಆದ್ಯತೆ: ಎಚ್‌ಡಿಕೆ
‘ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ತನ್ನ 5 ಭರವಸೆ ಈಡೇರಿಸಲು ಸಾಧ್ಯವಿಲ್ಲ. ಭರವಸೆ ಈಡೇರಿಸಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. ಆದರೆ ಅವರ ವಾದ ತಪ್ಪು ಎಂಬುದನ್ನು ನಾವು ಸಾಧಿಸಿ ತೋರಿಸಿದ್ದೇವೆ. ಅಧಿಕಾರಕ್ಕೆ ಬರುತ್ತಲೇ ನಾವು ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಜಾರಿಗೆ ತಂದಿದ್ದೇವೆ. ಹೀಗಾಗಿಯೇ ಮೋದಿಗೆ ನನ್ನ ಹೆಸರು ಕೇಳಿದಾಕ್ಷಣ ನಡುಕ ಉಂಟಾಗುತ್ತದೆ. ಇದೇ ಕಾರಣಕ್ಕೆ ಇತ್ತೀಚಿನ ಮಧ್ಯಪ್ರದೇಶ ಚುನಾವಣಾ ಪ್ರಚಾರದ ವೇಳೆಯೂ ನನ್ನ ಹೆಸರು ಪ್ರಸ್ತಾಪಿಸಿದ್ದರು’ ಎಂದು ವ್ಯಂಗ್ಯವಾಡಿದರು.
ಡೆಪಾಸಿಟ್ ಸಿಗಲ್ಲ: ಬಿಜೆಪಿಯವರು ಪ್ರಧಾನಿ ಮೋದಿ ಬಂದು ಪ್ರಚಾರ ಮಾಡಿದರೆ ಗೆದ್ದು ಬಿಡುತ್ತೇವೆ ಎಂದುಕೊಂಡಿದ್ದಾರೆ. ಆದರೆ ಒಮ್ಮೆಯಲ್ಲ 100 ಬಾರಿ ಮೋದಿ ಬಂದು ಪ್ರಚಾರ ಮಾಡಿದರೂ ಬಿಜೆಪಿ ಗೆಲ್ಲುವುದಿಲ್ಲ. ಅಭ್ಯರ್ಥಿಗಳು ಮಾತ್ರ ತಮ್ಮ ಡೆಪಾಸಿಟ್ ಕಳೆದುಕೊಳ್ಳುತ್ತಾರೆ. ಇದಕ್ಕೆ ಉದಾಹರಣೆ ಎಂದರೆ ಕರ್ನಾಟಕದಲ್ಲಿ ಮೋದಿ ಪ್ರಚಾರ ಮಾಡಿದಲ್ಲೆಲ್ಲ ಬಿಜೆಪಿ ಸೋತಿದೆ. ಮೋದಿ ಕಿವಿ ಮೇಲೆ ಹೂವು ಹಾಗೂ ಮಕ್ಮಲ್ ಟೋಪಿ ಹಾಕುವುದರಲ್ಲಿ ನಿಸ್ಸೀಮರು. ನನ್ನ ಜೀವನದಲ್ಲಿ ಪ್ರಧಾನಿಯಷ್ಟು ಸುಳ್ಳು ಹೇಳುವವರನ್ನು ನಾನು ನೋಡಿಲ್ಲ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಆರ್‌ಎಸ್‌ಎಸ್‌ನವರು ಮತ್ತು ಮೇಲ್ವರ್ಗದ ಜನರು ಏನು ಹೇಳುತ್ತಾರೋ ಅದನ್ನೇ ಮೋದಿ ಮಾತನಾಡುತ್ತಾರೆ. ಇವರಿಗೆ ದಲಿತರು ಹಾಗೂ ಹಿಂದುಳಿದ ವರ್ಗಗಳ ಜನರನ್ನು ನಾಯಕರನ್ನಾಗಿ ಮಾಡುವುದಕ್ಕೆ ಇಷ್ಟವಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದರು. ಕರ್ನಾಟಕ ರಾಜ್ಯದಲ್ಲಿ ನಾವು ಐದು ಗ್ಯಾರಂಟಿಗಳನ್ನು 100 ದಿನಗಳಲ್ಲಿ ಜಾರಿ ಮಾಡಿದ್ದೇವೆ. ತೆಲಂಗಾಣದಲ್ಲೂ ಒಂದು ಬೋನಸ್ ಸೇರಿ ಆರು ಗ್ಯಾರಂಟಿಗಳು 100 ದಿನಗಳಲ್ಲಿ ಜಾರಿ ಆಗುತ್ತವೆ ಎಂದು ಸಿದ್ದರಾಮಯ್ಯ ನುಡಿದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 2 ಲಕ್ಷ ಸರ್ಕಾರಿ ಉದ್ಯೋಗ ಭರ್ತಿ: ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ತಕ್ಷಣ 2 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಭರ್ತಿ ಮಾಡುತ್ತದೆ. ತನ್ಮೂಲಕ ಎಲ್ಲರಿಗೂ ಉದ್ಯೋಗ ಎಂಬ ಯುವಕರ ಕನಸುಗಳಿಗೆ ದಾರಿಯಾಗುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ತೆಲಂಗಾಣದ ಕೋದಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಅವರ ಪರ ಶುಕ್ರವಾರ ಚುನಾವಣಾ ಪ್ರಚಾರ ಭಾಷಣ ಮಾಡಿದರು. ಕೆಸಿಆರ್ ಅವರು ನೀಡಿದ ಎಲ್ಲಾ ಭರವಸೆ ತಪ್ಪಿದ್ದಾರೆ.
ಸಿದ್ದು ಸುಳ್ಳು ಹೇಳಿದ್ದಾರೆ, ಯಾವ ಜಿಲ್ಲೆಗೂ ಬರ ಪರಿಹಾರ ಹೋಗಿಲ್ಲ: ಈಶ್ವರಪ್ಪ
ನಾವು ಕೊಟ್ಟಿರುವ ಭರವಸೆಯಂತೆ ಅಧಿಕಾರಕ್ಕೆ ಬಂದ ತಕ್ಷಣ ಅಗತ್ಯವಿರುವ ಹುದ್ದೆಗಳನ್ನು ಪಾರದರ್ಶಕವಾಗಿ ಭರ್ತಿ ಮಾಡಲಾಗುವುದು ಎಂದು ಹೇಳಿದರು. ನಮ್ಮ ರಾಜ್ಯದ ಜನ ಬಿಜೆಪಿಯನ್ನು ಮನೆಗೆ ಓಡಿಸಿ, ಗ್ಯಾರಂಟಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದು ಹೊಸ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ಇದೇ ರೀತಿಯಲ್ಲಿ ತೆಲಂಗಾಣದಲ್ಲೂ ಡಿಸೆಂಬರ್ 9 ನೇ ತಾರೀಕು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಪ್ರಮಾಣ ವಚನ ತೆಗೆದುಕೊಳ್ಳುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.