Asianet Suvarna News Asianet Suvarna News

'ಎಲ್ಲಿದ್ದೀಯಪ್ಪಾ ನಿಖಿಲ್‌..' ಎಂದಾಗ ಓಗೊಟ್ಟಿದ್ದು ಇವರ ಮಗ ಮಾತ್ರ ಅಲ್ವಾ?.. ಎಚ್‌ಡಿಕೆಗೆ ಚಾಟಿ ಬೀಸಿದ ಸಿದ್ಧರಾಮಯ್ಯ!

ಯತೀಂದ್ರ ಅವರ ವಿಡಿಯೋ ವಿಚಾರವಾಗಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ಇದು ನಿಜ ಎನ್ನುವ ಅರ್ಥದಲ್ಲಿ ಸೋಮವಾರ ಕೆಲ ಟ್ವೀಟ್‌ಗಳನ್ನು ಮಾಡಿ ಸಿದ್ಧರಾಮಯ್ಯ ಅವರನ್ನು ಜಾಡಿಸಿದ್ದರು. ಇದಕ್ಕೆ ಸ್ವತಃ ಸಿದ್ಧರಾಮಯ್ಯ ಟ್ವೀಟ್‌ ಮೂಲಕ ಉತ್ತರ ನೀಡಿದ್ದಾರೆ.
 

Cm Siddaramaiah reaction to HD Kumaraswamy on police transfer List link to Yathindra video san
Author
First Published Nov 18, 2023, 11:34 AM IST

ಬೆಂಗಳೂರು (ನ.18): ವರ್ಗಾವಣೆ ಕುರಿತು ಸಿಎಂ ಪುತ್ರ ಯತೀಂದ್ರ ವಿಡಿಯೋ ವೈರಲ್‌ ಆಗಿರುವ ವಿಚಾರದಲ್ಲಿ ಶನಿವಾರ ದೊಡ್ಡ ಬೆಳವಣಿಗೆ ಆಗಿದೆ. ವಿಡಿಯೋದಲ್ಲಿ ಯತೀಂದ್ರ ಹೇಳಿದ್ದ ವ್ಯಕ್ತಿಯ ಹೆಸರು ವರ್ಗಾವಣೆ ಪಟ್ಟಿಯಲ್ಲಿಯೂ ಕಾಣಿಸಿಕೊಂಡಿದ್ದು, ಎಚ್‌ಡಿ ಕುಮಾರಸ್ವಾಮಿ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಯತೀಂದ್ರ ಅವರ ವಿಡಿಯೋದಲ್ಲಿ ಹೇಳಿರುವ ವಿವೇಕಾನಂದ ಎನ್ನುವ ಹೆಸರು ಮೈಸೂರಿನ ಬಿಇಒ ಹಾಗೂ ಸಿಎಸ್‌ಆರ್‌ ಫಂಡ್‌ ವಿಚಾರವಾಗಿ ಅವರು ಮಾತನಾಡಿರುವುದು ಎಂದು ಸಿಎಂ ಸ್ಪಷ್ಟನೆ ನೀಡಿದ್ದರು. ಆದರೆ, ಕುಮಾರಸ್ವಾಮಿ ಇದು ಬಿಇಒ ಅವರ ಹೆಸರಲ್ಲ, ಪೊಲೀಸ್‌ ಇನ್ಸ್‌ಪೆಕ್ಟರ್‌ ಅವರ ಹೆಸರು ಎನ್ನುವ ಅರ್ಥದಲ್ಲಿ ಟ್ವೀಟ್‌ ಮಾಡಿದ್ದರು. ಶುಕ್ರವಾರ ಪೊಲೀಸ್ ಇಲಾಖೆ 71 ಮಂದಿ ಪೊಲೀಸ್ ಇನ್ಸ್‌ಪೆಕ್ಟರ್ ವರ್ಗಾವಣೆ ಪಟ್ಟಿಯಲ್ಲಿ ವಿವೇಕಾನಂದ ಅವರ ಹೆಸರು ಕಾಣಿಸಿಕೊಂಡಿದೆ. ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಗೆ ವಿವೇಕಾನಂದ ವರ್ಗಾವಣೆ ಆಗಿದ್ದಾರೆ. ರಾಜ್ಯ ಗುಪ್ತ ವಾರ್ತೆಯಿಂದ ಮೈಸೂರಿನ ವಿವಿ ಪುರಂ ಪೊಲೀಸ್ ಸ್ಟೇಷನ್ ಗೆ ವಿವೇಕಾನಂದ ವರ್ಗಾವಣೆ ಆಗಿದ್ದಾರೆ. ಯತೀಂದ್ರ ವಿಡಿಯೋದಲ್ಲಿ ಹೇಳಿರುವ ಹೆಸರು ಇವರದೇ ಎಂದಿರುವ ಕುಮಾರಸ್ವಾಮಿ, 'ಕಾಸಿಗಾಗಿ ಹುದ್ದೆ & ಕಾಂಗ್ರೆಸ್‌ ಹುಂಡಿ' ಸಿನಿಮಾ ಮಾಡಿ ಎಂದು ತಿವಿದಿದ್ದರು.

ಈ ಬಗ್ಗೆ ಟ್ವೀಟ್‌ ಮೂಲಕ ಉತ್ತರ ನೀಡಿರುವ ಸಿಎಂ ಸಿದ್ಧರಾಮಯ್ಯ, 'ಜೀವಮಾನದಲ್ಲಿಯೇ ಮತ್ತೆ ಅಧಿಕಾರ ಕೈಗೆ ಬಾರದು ಎಂಬ ರಾಜಕೀಯ ವಾಸ್ತವ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರನಿದ್ದೆಗೆಡಿಸಿ ಮಾನಸಿಕ ಸ್ವಾಸ್ತ್ಯವನ್ನು ಕಲಕಿದ ಹಾಗೆ ಕಾಣುತ್ತಿದೆ. ಸುಳ್ಳುಕೋರನೆಂಬ ಅಪಖ್ಯಾತಿಯನ್ನು ಸ್ವಯಂ ತಾನೇ ಸಾಬೀತುಪಡಿಸುವ ಪೋಟಿಗೆ ಬಿದ್ದಿರುವ ಈ ಮಾಜಿ ಮುಖ್ಯಮಂತ್ರಿ ಇಂದು ಬೆಳ್ಳಂಬೆಳಗೆ ಎದ್ದು ಮತ್ತೊಂದಷ್ಟು ಸುಳ್ಳುಗಳನ್ನು ಉದುರಿಸಿದ್ದು ನೋಡಿದರೆ ರಾತ್ರಿಯಿಡೀ ನಿದ್ದೆಯಿಲ್ಲದೆ ಹೊರಳಾಡಿದ್ದು ಸ್ಪಷ್ಟವಾಗಿದೆ. ಯಾರಾದರೂ ಹಿತೈಷಿಗಳು ಇವರಿಗೆ ಸರಿಯಾದ  ಚಿಕಿತ್ಸೆಗೆ ವ್ಯವಸ್ಥೆ ಮಾಡಬಾರದೇ? ಮಾಜಿ ಶಾಸಕ ಡಾ.ಯತೀಂದ್ರ ಅವರ ಜೊತೆಗಿನ ನನ್ನ ಸಂಭಾಷಣೆ ವರುಣ ಕ್ಷೇತ್ರದ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಂಬಂಧಪಟ್ಟಿದ್ದು ಎನ್ನುವುದನ್ನು ದಾಖಲೆ ಸಮೇತ ಸಾಬೀತುಪಡಿಸಿದ್ದರೂ ಹೆಚ್.ಡಿ.ಕುಮಾರಸ್ವಾಮಿ ಇಂದು ಮತ್ತೊಂದು ಸುಳ್ಳನ್ನು ಸೃಷ್ಟಿಸಿ ಜನತೆಯ ದಾರಿ ತಪ್ಪಿಸಲು ಹೆಣಗಾಡಿದ್ದಾರೆ. ನಮ್ಮ ಸಂಭಾಷಣೆಯಲ್ಲಿ ಪ್ರಸ್ತಾಪವಾಗಿರುವ ವಿವೇಕಾನಂದ ಅವರು ಮೈಸೂರು ತಾಲೂಕಿನ ಬಿಇಒ ಎನ್ನುವುದು ಸ್ಪಷ್ಟವಾಗಿದ್ದರೂ ಯಾವುದೋ ವರ್ಗಾವಣೆಯ ಪಟ್ಟಿಯಲ್ಲಿನ ವಿವೇಕಾನಂದ ಎಂಬ ಅಧಿಕಾರಿಯ ಹೆಸರು ಹುಡುಕಿ ತನ್ನ ಸುಳ್ಳಿಗೆ ಸಾಕ್ಷಿ ನೀಡುವ ಹತಾಶ ಪ್ರಯತ್ನ ಮಾಡಿದ್ದಾರೆ. ಇದನ್ನು ಮಾನಸಿಕ ಅಸ್ವಸ್ಥತೆ ಎನ್ನದೆ ಬೇರೆ ಏನು ಹೇಳಲು ಸಾಧ್ಯ? ಎಂದು ತಮ್ಮ ದೀರ್ಘ ಟ್ವೀಟ್‌ ಉತ್ತರದಲ್ಲಿ ತಿಳಿಸಿದ್ದಾರೆ.

ಎಲ್ಲಿದ್ದೀಯಪ್ಪಾ ನಿಖಿಲ್‌ ಎಂದಾಗ ಬಂದಿದ್ದು ಅವರ ಮಗ ಮಾತ್ರ ಅಲ್ಲವೇ: ರಾಜ್ಯದಲ್ಲಿ ಕುಮಾರಸ್ವಾಮಿ ಎಂಬ ಹೆಸರಿನವರು ಸಾವಿರಾರು ಮಂದಿ ಇದ್ದಾರೆ. ಅವರಲ್ಲಿಯೂ ಒಂದಷ್ಟು ಪಕ್ಕಾ ಕ್ರಿಮಿನಲ್ ಗಳೂ ಇದ್ದಾರೆ. ಹೆಸರಿನ ಕಾರಣಕ್ಕಾಗಿ ಅವರೆಲ್ಲರ ಪಾಪಕರ್ಮಗಳ ಹೊರೆಯನ್ನು ಹೆಚ್.ಡಿ.ಕುಮಾರಸ್ವಾಮಿಯವರ ತಲೆ ಮೇಲೆ ಹೊರಿಸಲಿಕ್ಕೆ ಆಗುತ್ತಾ? ‘ಎಲ್ಲಿದಿಯಪ್ಪಾ ನಿಖಿಲ್’ ಎಂದು ಸಾರ್ವಜನಿಕ ಸಭೆಯಲ್ಲಿ ಕುಮಾರಸ್ವಾಮಿ ಕೂಗಿದಾಗ ಅಲ್ಲಿ ಎಷ್ಟು ಮಂದಿ ಆ ಹೆಸರಿನವರಿದ್ದರೋ ಏನೋ? ಓಗೊಟ್ಟಿದ್ದು ಇವರ ಮಗ ಮಾತ್ರ ಅಲ್ವಾ? ಉಳಿದವರು ಓಗೊಟ್ಟಿದ್ದರೂ ಅವರನ್ನು ಮಕ್ಕಳು ಎಂದು ಇವರು ಒಪ್ಪಿಕೊಳ್ಳುತ್ತಿದ್ರಾ?  ಒಬ್ಬ ಜವಾಬ್ದಾರಿಯುತ ರಾಜಕೀಯ ನಾಯಕನಾಗಿ ಕುಮಾರಸ್ವಾಮಿಯವರು ವಿಶ್ವಾಸಾರ್ಹ ದಾಖಲೆಗಳನ್ನು ಇಟ್ಟುಕೊಂಡು ಮಾತನಾಡಬೇಕೇ ಹೊರತು ತಾವೇ ಸೃಷ್ಟಿಸಿರುವ ಸುಳ್ಳಿನ ಕಂತೆಗಳನ್ನಲ್ಲ.  ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜೊತೆಗೆ ರಾಜಕೀಯವಾಗಿ ನನಗೆ ಭಿನ್ನಾಭಿಪ್ರಾಯಗಳಿವೆ. ಆದರೆ ಅವರೆಂದೂ ಈ ರೀತಿಯ ಸಡಿಲ ಮಾತುಗಳನ್ನು ಆಡಿಲ್ಲ. ಕುಮಾರಸ್ವಾಮಿಯವರು ಕನಿಷ್ಠ ಅವರ ಅಣ್ಣ ಹೆಚ್.ಡಿ.ರೇವಣ್ಣ ಅವರಿಂದಾದರೂ ಒಂದಿಷ್ಟು ರಾಜಕೀಯ ನಡವಳಿಕೆಯನ್ನು ಕಲಿಯಬಾರದಾ? ಎಂದು ಸಿದ್ಧರಾಮಯ್ಯ ಬರೆದಿದ್ದಾರೆ.

'ಕಾಸಿಗಾಗಿ ಹುದ್ದೆ & ಕಾಂಗ್ರೆಸ್‌ ಹುಂಡಿ' ಸಿನಿಮಾ ಮಾಡಿ, 'ಅತೀಂದ್ರೀಯ' ಮೇಲೆ ಮುಗಿಬಿದ್ದ ಎಚ್‌ಡಿಕೆ!

ಡಾ.ಯತೀಂದ್ರ ವಿರುದ್ದ ತಾನು ಮಾಡಿರುವ ಆರೋಪ ಸುಳ್ಳು ಎನ್ನುವುದು ಹೆಚ್.ಡಿ.ಕುಮಾರಸ್ವಾಮಿವಯರಿಗೆ ಖಂಡಿತ ಮನವರಿಕೆ ಆಗಿದೆ. ಈಗಲೂ ಕಾಲ ಮಿಂಚಿಲ್ಲ. ತಪ್ಪನ್ನು ಒಪ್ಪಿಕೊಂಡರೆ ಯಾರೂ ಸಣ್ಣವರಾಗುವುದಿಲ್ಲ. ಒಂದು ಸುಳ್ಳನ್ನು ಸಮರ್ಥಿಸಲು ನೂರು ಸುಳ್ಳುಗಳನ್ನು ಹೇಳುವುದರ ಬದಲಿಗೆ ಮಾಡಿದ ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆ ಕೇಳುವುದು ಉತ್ತಮ ನಡೆ. ಆ ಸದ್ಬುದ್ದಿ ಅವರಿಗೆ ಬರಲಿ ಎಂದು ಹಾರೈಸುತ್ತೇನೆ ಎಂದು ಕೊನೆಯಲ್ಲಿ ಸುಳ್ಳು ಸುದ್ದಿ ವೀರರು ಎನ್ನುವ ಹ್ಯಾಶ್‌ಟ್ಯಾಗ್‌ನಲ್ಲಿ ಸಿದ್ಧರಾಮಯ್ಯ ಬರೆದುಕೊಂಡಿದ್ದಾರೆ.

ಡಿಕೆಶಿ ಸಲಹೆಯಂತೆ ಯತೀಂದ್ರ ವಿಡಿಯೋಗೆ ಸಿಎಸ್‌ಆರ್‌ ಸ್ವರೂಪ: ಎಚ್‌ಡಿಕೆ

Follow Us:
Download App:
  • android
  • ios