'ಕಾಸಿಗಾಗಿ ಹುದ್ದೆ & ಕಾಂಗ್ರೆಸ್‌ ಹುಂಡಿ' ಸಿನಿಮಾ ಮಾಡಿ, 'ಅತೀಂದ್ರೀಯ' ಮೇಲೆ ಮುಗಿಬಿದ್ದ ಎಚ್‌ಡಿಕೆ!

ರಾಜ್ಯ ಸರ್ಕಾರ ಶುಕ್ರವಾರ ಪೊಲೀಸ್‌ ಟ್ರಾನ್ಸ್‌ಫರ್‌ ಲಿಸ್ಟ್‌ ಬಿಡುಗಡೆ ಮಾಡಿದೆ. ಇದರಲ್ಲಿ ಬಂದಿರುವ ವಿವೇಕಾನಂದ ಹೆಸರಿಗೂ ವೈರಲ್‌ ಆಗಿರುವ ಯತೀಂದ್ರ ಅವರ ವಿಡಿಯೋಗೂ ಲಿಕ್‌ ಇದೆ ಎಂದು ಎಚ್‌ಡಿ ಕುಮಾರಸ್ವಾಮಿ ಟ್ವೀಟ್‌ ಮೂಲಕ ವಾಗ್ದಾಳಿ ನಡೆದಿದ್ದಾರೆ.

HD Kumaraswamy slams Cm Siddaramaiah on police transfer List link to Yathindra video san

ಬೆಂಗಳೂರು (ನ.18): ವರ್ಗಾವಣೆ ಕುರಿತು ಸಿಎಂ ಪುತ್ರ ಯತೀಂದ್ರ ವಿಡಿಯೋ ವೈರಲ್‌ ಆಗಿರುವ ವಿಚಾರದಲ್ಲಿ ಈಗ ದೊಡ್ಡ ಬೆಳವಣಿಗೆಯಾಗಿದೆ. ಶುಕ್ರವಾರ ಪೊಲೀಸ್‌ ಟ್ರಾನ್ಸ್‌ಫರ್‌ ಲಿಸ್ಟ್‌ನಲ್ಲಿ ವಿವೇಕಾನಂದ ಅವರ ಹೆಸರು ಕಾಣಿಸಿಕೊಂಡಿರುವ ಬೆನ್ನಲ್ಲಿಯೇ ಎಚ್‌ಡಿ ಕುಮಾರಸ್ವಾಮಿ ಟ್ವೀಟ್‌ ಮೂಲಕ ಸರ್ಕಾರದ ಮೇಲೆ ಮುಗಿ ಬಿದ್ದಿದ್ದಾರೆ. ಇದರ ಹಿನ್ನಲೆಯಲ್ಲಿಯೇ ಯತೀಂದ್ರ ಮಾತನಾಡಿದ್ದು ಪೊಲೀಸ್ ಇಲಾಖೆ ಇನ್ಸ್‌ಪೆಕ್ಟರ್ ಗಳ ವರ್ಗಾವಣೆ ಬಗ್ಗೆನಾ? ಎನ್ನುವ ಅನುಮಾನ ಕಾಡಿದೆ. ವಿಡಿಯೋದಲ್ಲಿ ಹೇಳಿರುವ ವಿವೇಕಾನಂದ ಬಿಇಓ ಎಂದು ಸಿಎಂ ಸಿದ್ಧರಾಮಯ್ಯ ಸಮಜಾಯಿಷಿ ನೀಡಿದ್ದರು. ಅದಲ್ಲದೆ. ಸಿಎಸ್‌ಆರ್ ಫಂಡ್ ವಿಚಾರವಾಗಿ ಮಾತನಾಡಿರೋದು ಎಂದು ಸಿಎಂ ಸ್ಪಷ್ಟನೆ ನೀಡಿದ್ದರು. ಆದರೆ, ಪೊಲೀಸ್ ಇನ್ಸ್ಪೆಕ್ಟರ್ ಗಳ ವರ್ಗಾವಣೆ ಪಟ್ಟಿಯ ಮೂಲಕ‌ ಅಸಲಿ ಸತ್ಯ ಬಯಲಾಗಿದೆಯೇ ಎನ್ನುವ ಅನುಮಾನ ಬಂದಿದೆ.

ಶುಕ್ರವಾರ ಪೊಲೀಸ್ ಇಲಾಖೆ 71 ಮಂದಿ ಪೊಲೀಸ್ ಇನ್ಸ್‌ಪೆಕ್ಟರ್ ವರ್ಗಾವಣೆ ಪಟ್ಟಿಯಲ್ಲಿ ವಿವೇಕಾನಂದ ಅವರ ಹೆಸರು ಕಾಣಿಸಿಕೊಂಡಿದೆ. ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಗೆ ವಿವೇಕಾನಂದ ವರ್ಗಾವಣೆ ಆಗಿದ್ದಾರೆ. ರಾಜ್ಯ ಗುಪ್ತ ವಾರ್ತೆಯಿಂದ ಮೈಸೂರಿನ ವಿವಿ ಪುರಂ ಪೊಲೀಸ್ ಸ್ಟೇಷನ್ ಗೆ ವಿವೇಕಾನಂದ ವರ್ಗಾವಣೆ ಆಗಿದ್ದಾರೆ.

ಯತೀಂದ್ರ ವೀಡಿಯೋದಲ್ಲಿ ವಿವೇಕಾನಂದ ಎನ್ನುವ ಹೆಸರು ಉಲ್ಲೇಖವಾಗಿತ್ತು. ಈ ವೇಳೆ ವಿವೇಕಾನಂದ ಯಾರು ಎಂದು ಸ್ವತಃ ಯತೀಂದ್ರ ಕೇಳಿದ್ದರು. ಆದರೆ, ಯತೀಂದ್ರ ವೀಡಿಯೋ ವರ್ಗಾವಣೆಗೆ ಸಂಬಂಧಿಸಿದ್ದೇ ಅಲ್ಲ ಎಂದು ಸಿಎಂ ಸಿದ್ಧರಾಮಯ್ಯ ಗರಂ ಆಗಿದ್ದರು. ಶುಕ್ರವಾರ ವರ್ಗಾವಣೆ ಪಟ್ಟಿಯಲ್ಲಿ  ವಿವೇಕಾನಂದ ಹೆಸರು ಕಾಣಿಸಿಕೊಳ್ಳುತ್ತಿದ್ದಂತೆ ಮತ್ತೆ ಯತೀಂದ್ರ ವಿಡಿಯೋ ಜೀವ ಪಡೆದುಕೊಂಡಿದೆ. ಅದರಲ್ಲೂ ಮೈಸೂರು ಜಿಲ್ಲೆಗೇ ಸಂಬಂಧಿಸಿದ ನಾಲ್ಕು ಇನಸ್ಪೆಕ್ಟರ್ ಗಳ ವರ್ಗಾವಣೆ ಮಾಡಲಾಗಿದೆ. ಯತೀಂದ್ರ ವೀಡಿಯೋದಲ್ಲೂ ನಾಲ್ಕೈದು ಲಿಸ್ಟ್ ಮಾತ್ರ ಸಾಕು ಎಂದು ಪ್ರಸ್ತಾಪ ಮಾಡಲಾಗಿತ್ತು. ಇದು ಕೇವಲ ಕಾಕತಾಳೀಯವೋ ನೈಜ ಸಂಬಂಧವೋ ಎಂಬ ಅನುಮಾನ ಹುಟ್ಟುಹಾಕಿದೆ. ಅಲ್ಲದೇ ವರ್ಗಾವಣೆ ಆದೇಶದಲ್ಲಿ ದಿನಾಂಕ ತಿದ್ದುಪಡಿ ಮಾಡಿರುವುದು ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಈ ನಡುವೆ ಕುಮಾರಸ್ವಾಮಿ ಕೂಡ ಇದೇ ವಿಚಾರವನ್ನು ಶನಿವಾರ ತಮ್ಮ ಶಬ್ದಕೋಶವನ್ನೆಲ್ಲಾ ಬಳಸಿ ಟ್ವೀಟ್‌ನಲ್ಲಿ ಕಿಡಿಕಾರಿದ್ದಾರೆ. 'ಅಬ್ಬಬ್ಬಾ.. ಬಾಯಿ ತೆರೆದರೆ ಭಗವದ್ಗೀತೆ! ನಾಲಿಗೆ ಮೇಲೆ ನೈತಿಕತೆಯ ನಾಟ್ಯ!! ಮಾತಿ ಮಾತಿನಲ್ಲೂ ಮೌಲ್ಯಗಳದ್ದೇ ಮಥನ!! ಕೊನೆಗೆ, ಝಣ ಝಣ ಕಾಂಚಾಣ... ಇದೇ ನೋಡಿ ಬಹಿರಂಗವಾದ ಸಿಎಂ ಸಾಹೇಬರ ಸದ್ಯದ ಅಂತರಂಗ ಶುದ್ಧಿ! ಥೂ.. ನಾಚಿಕೆ ಆಗಬೇಕು. ಕರ್ನಾಟಕದ ಕಲೆಕ್ಷನ್‌ ಪ್ರಿನ್ಸ್‌ ವಿಡಿಯೋದಲ್ಲಿ ನುಸುಳಿದ್ದ ವಿವೇಕಾನಂದ, 48 ಗಂಟೆಗಳ ಒಳಗಾಗಿಯೇ ವರ್ಗದ ಪಟ್ಟಿಯಲ್ಲಿ ಒಳನುಸಳಿದ್ದು ಹೇಗೆ!? ಓಹ್! ಒಂದು ಸರಕಾರ! ವಿಸ್ಮಯಗಳ ಆಗರ!! ಡೂಪ್ಲಿಕೇಟ್‌ ಸಿಎಂ-DCM ಸಲಹೆ ಮೇರೆಗೆ ಕಾಸಿಗಾಗಿ ಹುದ್ದೆ ವಿಡಿಯೋಗೆ CSR ಕಥೆ ಕಟ್ಟಿದ್ದ ಮುಖ್ಯಮಂತ್ರಿಗಳ ನೈತಿಕತೆಗೆ ನಯಗಾರಿಕೆಗೆ ನೂರೆಂಟು ನಮನ. ವಿಡಿಯೋ ವಿವೇಕಾನಂದ, ಗುಪ್ತವಾರ್ತೆಯಿಂದ ಮೈಸೂರು ವಿ.ವಿ.ಪುರಂಗೆ ಪೋಸ್ಟಿಂಗ್‌ ಪಡೆದಿದ್ದು ಹೇಗೆ? ʼಬರ್ಮುಡಾ ಟ್ರ್ಯಾಂಗಲ್‌ʼ ರಹಸ್ಯವನ್ನೇ ಮೀರಿಸಿದೆ ಈ ಚಿದಂಬರ ರಹಸ್ಯ. ಪ್ರಶ್ನೆ ಕೇಳುವುದು ನನ್ನ ವಿಧಿ, ಉತ್ತರ ಹೇಳಲೇಬೇಕು.. ಅದು ನಿಮ್ಮ ದುರ್ವಿಧಿ. ಆನ್ಸರ್‌ ಮಾಡಿ ಸಿದ್ದರಾಮಯ್ಯನವರೇ..' ಎಂದು ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಡಿಕೆಶಿ ಸಲಹೆಯಂತೆ ಯತೀಂದ್ರ ವಿಡಿಯೋಗೆ ಸಿಎಸ್‌ಆರ್‌ ಸ್ವರೂಪ: ಎಚ್‌ಡಿಕೆ

'ಕುಮಾರಸ್ವಾಮಿಗೆ ಹೊಟ್ಟೆಕಿಚ್ಚು. ದ್ವೇಷದಿಂದ ಮಗನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದಲ್ಲವೇ ನೀವು ಹೇಳಿದ್ದು. ಹಾಗಾದರೆ; 71 ಪೊಲೀಸ್‌ ಇನಸ್ಪೆಕ್ಟರ್‌ʼಗಳ ವರ್ಗದ ಈ ಯಾದಿಯ 4ನೇ ಹೆಸರಿನಲ್ಲೇ ಅಡಗಿದೆಯಲ್ಲಾ ನಿಮ್ಮ 'ಸುಲಿಗೆಪುತ್ರ'ನ ಕೆಚ್ಚು!  ಕ್ಷೇತ್ರತ್ಯಾಗದ ತ್ಯಾಗಮಯಿ, ಈಗ ವರುಣಾಕ್ಕೆ ವಕ್ಕರಿಸಿದ ಕೆಡಿಪಿ ಕಲಿ. ಏನಂತೀರಿ? ಈ ಪಾಪದ ಕಾಸಿನ ಕಮಟು ದುರ್ನಾತ ಅಸಹ್ಯಕರ. 'ವರ್ಗಾವರ್ಗಿ ಬಜೆಟ್‌'ನಲ್ಲಿ ನಿಮ್ಮ ಪಟಾಲಂದು ಶಿಖರಸಾಧನೆ! 6 ತಿಂಗಳ ಭರ್ಜರಿ ʼಅತೀಂದ್ರೀಯʼ ಅಟ್ಟಹಾಸ!! 'ಕಾಸಿಗಾಗಿ ಹುದ್ದೆ& ಕಾಂಗ್ರೆಸ್‌ ಹುಂಡಿ' ಎಂಬ ಸಿನಿಮಾವನ್ನೂ ಮಾಡಿ, ಕೆಡಿಪಿ ಕಲಿಯೇ ನಾಯಕ, ಟೆಂಪರರಿ ಸಿಎಂ-TCM ನಿರ್ಮಾಪಕ, ಡೂಪ್ಲಿಕೇಟ್‌ ಸಿಎಂ-DCM ನಿರ್ದೇಶಕ.. ಹೇಗಿದೆ? ಸತ್ಯ ಹೇಳಿದರೆ ಗುಂಪುಗುಂಪಾಗಿ ಮೇಲೆ ಬೀಳುತ್ತೀರಿ.. ಬೆದರಿಸುತ್ತೀರಿ. ಕುಮಾರಸ್ವಾಮಿಯದು ಹಿಟ್‌ & ರನ್‌ ಅಂತೀರಿ, ಸುಳ್ಳು ಎನ್ನುತ್ತೀರಿ. ಕಣ್ಮುಂದೆ ವಿಡಿಯೋ ಸಾಕ್ಷ್ಯವಿದೆ. ರಾಜ್ಯದ ಜನ ನೋಡಿದ್ದಾರೆ. ಪಲಾಯನಕ್ಕೆ ಅವಕಾಶವೇ ಇಲ್ಲ. ನಿಮ್ಮ ಕೌರವ ದುರ್ನೀತಿ ನನ್ನ ಮುಂದೆ ನಡೆಯಲ್ಲ. ನಾನು ಒಬ್ಬನೇ ಒಬ್ಬ, ಅಂಜಿಕೆ ನನ್ನ ರಕ್ತದಲ್ಲೇ ಇಲ್ಲ' ಎಂದು ಕುಮಾರಸ್ವಾಮಿ ಕಟು ಶಬ್ದಗಳಲ್ಲಿ ಸಿಎಂ ಸಿದ್ಧರಾಮಯ್ಯ ಅವರನ್ನು ಟೀಕಿಸಿದ್ದಾರೆ.

ಯತೀಂದ್ರ ಮೊಬೈಲ್ ಸಂಭಾಷಣೆ ವಿಚಾರ ತನಿಖೆಯಾಗಲಿ: ಆರಗ ಜ್ಞಾನೇಂದ್ರ

Latest Videos
Follow Us:
Download App:
  • android
  • ios