ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ನಡುವೆ ಸೋಮವಾರ ಭಾಷಾ ಜುಗಲ್ ಬಂದಿ ನಡೆಯಿತು.
ಮೈಸೂರು (ಸೆ.02): ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ನಡುವೆ ಸೋಮವಾರ ಭಾಷಾ ಜುಗಲ್ ಬಂದಿ ನಡೆಯಿತು. ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಸೋಮವಾರ ನಡೆದ ವಜ್ರ ಮಹೋತ್ಸವ ಸಮಾರಂಭದಲ್ಲಿ ಈ ಘಟನೆ ಜರುಗಿತು. ಮೊದಲಿಗೆ ಭಾಷಣ ಮಾಡಿದ ಸಿಎಂ ಸಿದ್ದರಾಮಯ್ಯ ಅವರು, ಭಾಷಣ ಪ್ರಾರಂಭಿಸುವ ಮುನ್ನ ‘ಯು ನೋ ಕನ್ನಡ? (ನಿಮಗೆ ಕನ್ನಡ ಬರುತ್ತದೆಯೇ?)’ ಎಂದು ರಾಷ್ಟ್ರಪತಿಗಳಿಗೆ ತಮಾಷೆಯಿಂದ ಕೇಳಿದರು.
ಸಿಎಂ ಪ್ರಶ್ನೆಗೆ ರಾಷ್ಟ್ರಪತಿ ಹಾಗೂ ವೇದಿಕೆಯ ಆಹ್ವಾನಿತರು ನಕ್ಕರು. ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು ‘ಐ ಸ್ಪೀಕ್ ಇನ್ ಕನ್ನಡ (ನಾನು ಕನ್ನಡದಲ್ಲಿ ಮಾತನಾಡುತ್ತೇನೆ)’ ಎಂದು ಭಾಷಣ ಆರಂಭಿಸಿದರು. ಸಿದ್ದರಾಮಯ್ಯ ಅವರ ನಂತರ ಭಾಷಣ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ‘ದೇಶದ ಎಲ್ಲಾ ಭಾಷೆಗಳು ನನಗೆ ಇಷ್ಟ. ಎಲ್ಲಾ ಭಾಷೆಗಳನ್ನು ನಾನು ಗೌರವಿಸುತ್ತೇನೆ. ಪ್ರೀತಿಸುತ್ತೇನೆ. ಕನ್ನಡವು ಸ್ವಲ್ಪ ಸ್ವಲ್ಪ ಅರ್ಥ ಆಗುತ್ತೆ’ ಎಂದು ಹೇಳಿದರು.
ಮೋಸದಿಂದ ಲೋಕಸಭಾ ಚುನಾವಣೆಯಲ್ಲಿ ಸೋತೆ: ಎರಡನೇ ಬಾರಿಗೆ 1991ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಮೋಸದಿಂದ ನನ್ನನ್ನು ಸೋಲಿಸಲಾಯಿತು. ಆಗ ಅದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಲು ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು ನೆರವು ನೀಡಿದ್ದರು ಎಂದು ಸ್ಮರಿಸಿದರು. ನನಗೆ ಯಾವುದೇ ಕಾನೂನು ತೊಡಕು ಎದುರಾದಾಗಲೂ ಪ್ರೊ. ರವಿವರ್ಮ ಕುಮಾರ್ ಅವರ ಬಳಿ ಸಲಹೆ ಕೇಳುತ್ತೇನೆ. 1991ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಮೋಸದಿಂದ ಸೋತೆ. ಆಗಲೂ ಪ್ರೊ. ರವಿವರ್ಮ ಕುಮಾರ್ ಅವರು ನನಗೆ ನೆರವಾಗಿದ್ದರು. ಅದಕ್ಕೆ ಯಾವುದೇ ಶುಲ್ಕವನ್ನೂ ತೆಗೆದುಕೊಂಡಿರಲಿಲ್ಲ. ಹೀಗೆ ನನ್ನಂತೆಯೇ ಅನೇಕರಿಗೆ ಅವರು ಕಾನೂನು ನೆರವು ನೀಡಿದ್ದಾರೆ. ಅದರಲ್ಲೂ ಸಮಾಜದಲ್ಲಿ ಧ್ವನಿಯಿಲ್ಲದವರಿಗೆ ಶುಲ್ಕ ಪಡೆಯದೆಯೇ ನೆರವು ನೀಡುತ್ತಾರೆ. ಅವರ ಈ ಸಮಾಜವಾದಿ ಮನೋಭಾವ ಈಗಿನ ಯುವ ವಕೀಲರಿಗೆ ಮಾದರಿಯಾಗಿದೆ ಎಂದರು.
ರೈತ ಹೋರಾಟಗಾರ ಪ್ರೊ. ನಂಜುಂಡಸ್ವಾಮಿ ಅವರು ನನ್ನ ಮತ್ತು ಪ್ರೊ. ರವಿವರ್ಮ ಕುಮಾರ್ ಸೇರಿದಂತೆ ಅನೇಕ ಯುವಕರನ್ನು ಕಾಲೇಜು ದಿನಗಳಲ್ಲಿ ಸಮಾಜವಾದಿ ಜನಸಭಾಕ್ಕೆ ಸೇರ್ಪಡೆ ಮಾಡಿದರು. ಆಗಿನಿಂದಲೂ ನಾವು ಸಮಾಜವಾದಿಗಳಾಗಿ ಸಾಗಿದ್ದೇವೆ. ನಾನು ವಕೀಲನಾಗಿ 10 ವರ್ಷಗಳ ಕಾಲ ಚಿಕ್ಕಬೋರಯ್ಯ ಅವರ ಬಳಿ ಜ್ಯೂನಿಯರ್ ಆಗಿ ಕೆಲಸ ಮಾಡಿದ್ದೆ. ಶಾಸಕನಾದ ನಂತರ ವಕೀಲಿ ವೃತ್ತಿಯನ್ನು ನಿಲ್ಲಿಸಿದೆ. ಆದರೆ, ಪ್ರೊ. ರವಿವರ್ಮ ಕುಮಾರ್ ಸಮಾಜವಾದಿ ಪಕ್ಷದಲ್ಲಿದ್ದುಕೊಂಡೇ ವಕೀಲಿ ವೃತ್ತಿ ಮುಂದುವರಿಸಿದರು. ಅವರ ವಕೀಲಿ ವೃತ್ತಿಗೆ 50 ವರ್ಷ ಪೂರ್ಣಗೊಂಡಿದ್ದು, ಅದು ಮತ್ತಷ್ಟು ವರ್ಷ ಮುಂದುವರಿಯಲಿ ಎಂದು ಆಶಿಸಿದರು.
