ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಜೂನ್ ತಿಂಗಳಲ್ಲೇ ಕೆ.ಆರ್.ಎಸ್. ಜಲಾಶಯಕ್ಕೆ ಬಾಗಿನ ಅರ್ಪಿಸಿದರು. ಒಗ್ಗಟ್ಟಿನಿಂದ ಇರುವುದಾಗಿ ಪ್ರದರ್ಶಿಸಿದರು. ಶ್ರೀರಾಮುಲು ಅವರ ಟೀಕೆಗೆ ತಿರುಗೇಟು ನೀಡಿದರು.

ಮೈಸೂರು (ಜೂ.30): ನಾನು ಡಿ.ಕೆ. ಶಿವಕುಮಾರ್ ಚೆನ್ನಾಗಿಯೇ ಇದ್ದೇವೆ. ನಮ್ಮ ಸರ್ಕಾರ 5 ವರ್ಷ ಬಂಡೆ ರೀತಿ ಇರುತ್ತದೆ. ನಮ್ಮಿಬ್ಬರ ನಡುವೆ ತಂದಾಕುವ ಪ್ರಯತ್ನ ಮಾಡಿದರೂ ಅದು ಯಶಸ್ವಿ ಆಗುವುದಿಲ್ಲ. ನಾವಿಬ್ಬರೂ ಒಟ್ಟಾಗಿಯೇ ಇದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಕೈ ಹಿಡಿದು ಎತ್ತುವ ಮೂಲಕ ಒಗ್ಗಟ್ಟಾಗಿ ಇದ್ದೇವೆ ಎಂಬುದನ್ನು ಪ್ರದರ್ಶನ ಮಾಡಿದರು.

ಮಂಡ್ಯದಲ್ಲಿ ಕೆ.ಆರ್.ಎಸ್. ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮದ ಮುಂಚೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕೈ ಹಿಡಿದು ಮೇಲೆತ್ತುವ ಮೂಲಕ ಮಾಧ್ಯಮದ ಮುಂದೆ 'ನಾವು ಒಟ್ಟಾಗಿದ್ದೇವೆ, ಚೆನ್ನಾಗಿದ್ದೇವೆ' ಎಂಬ ಸಂದೇಶವನ್ನು ಸಿಎಂ ಸಿದ್ದರಾಮಯ್ಯ ನೀಡಿದರು. 'ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇದೆ ಎಂಬುದು ಸುಳ್ಳು. ಕಾಂಗ್ರೆಸ್ ನಾಯಕತ್ವ ಸಂಘಟಿತವಾಗಿದೆ. ಶ್ರೀರಾಮುಲು ನಮಗಾಗಿ ಮಾತನಾಡಬೇಕಾದರೆ ಮೊದಲು ತಾನು ಎಷ್ಟು ಚುನಾವಣೆ ಸೋತಿದ್ದಾರೆ ಎಂಬುದನ್ನು ಜನರಿಗೆ ತಿಳಿಸಲಿ' ಎಂದು ತಿರುಗೇಟು ನೀಡಿದರು.

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ನಾನೇ ದಸರಾ ಉದ್ಘಾಟನೆ ಮಾಡುತ್ತೇನೆ ಎಂದು ಮಾಧ್ಯಮದವರಿಗೆ ಅನಿಸಿದೆ ಅಲ್ವಾ? ಅದೇ ಸತ್ಯ. ಇನ್ನು ರಣದೀಪ್ ಸಿಂಗ್ ಸುರ್ಜೇವಾಲಾ ಈ ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಆಗಿದ್ದಾರೆ. ಕಾಂಗ್ರೆಸ್ ಶಾಸಕರ ಕಷ್ಟ-ಸುಖ ಕೇಳುತ್ತಾರೆ. ಈ ಮೂಲಕ ಅವರು ಪಕ್ಷ ಸಂಘಟನೆ ಬಗ್ಗೆ ಸಲಹೆ ಕೊಡುತ್ತಾರೆ‌. ಅದು ಅವರ ಕೆಲಸ, ಇದರಲ್ಲಿ ಬೇರೆ ಏನು ವಿಶೇಷ ಇಲ್ಲ ಎಂದು ತಿಳಿಸಿದರು.

ಹಾಸನದ ಹೃದಾಯಘಾತ ಹೆಚ್ಚಾದ ವಿಚಾರದಲ್ಲಿ ಮಾತನಾಡಿ, ಅದರ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಹೃದಯಘಾತ ಹೆಚ್ಚಾಗಲು ಕಾರಣ ಏನು ಎಂಬುದಕ್ಕೆ ತಜ್ಞರ ಮೂಲಕ ಮಾಹಿತಿ ತರಿಸಿಕೊಳ್ಳುತ್ತೇನೆ. ಅದರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಖುತ್ತೇನೆ. ಮಹಾರಾಷ್ಟ್ರದಲ್ಲಿ ದ್ವಿಭಾಷಾ ಶಿಕ್ಷಣಕ್ಕೆ ಅಸ್ತು ವಿಚಾರ‌ದ ಬಗ್ಗೆ ಮಾತನಾಡಿ, ನಾವು ದ್ವಿಭಾಷಾ ಶಿಕ್ಷಣದ ಪರ ಇದ್ದೇವೆ. ಮೊದಲಿನಿಂದಲೂ ನಮ್ಮದು ದ್ವಿಭಾಷಾ ಶಿಕ್ಷಣದ ಪರವಾಗಿ ವಾದ ಇದೆ. ಈಗಲೂ ದ್ವಿಭಾಷಾ ಪ್ರದೇಶಗಳಲ್ಲಿ ಶಿಕ್ಷಣಕ್ಕೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

ಈ ಬಾರಿ ವಿಶೇಷವೆಂದರೆ – ಸಿದ್ದರಾಮಯ್ಯ ಜೂನ್ ತಿಂಗಳಲ್ಲಿಯೇ ಬಾಗಿನ ಅರ್ಪಿಸಿರುವ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು 93 ವರ್ಷಗಳ ಕೆಆರ್‌ಎಸ್‌ (ಕೃಷ್ಣರಾಜ ಸಾಗರ) ಅಣೆಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ನದಿ ಭರ್ತಿ ಆಗಿರುವುದರಿಂದ ಸಂಭವಿಸಿರುವ ಅಪೂರ್ವ ಸಂದರ್ಭವಾಗಿದೆ. ಈ ಮೂಲಕ ಸಿದ್ದರಾಮಯ್ಯ ಅವರು ನಾಲ್ಕನೇ ಬಾರಿಗೆ ಸಿಎಂ ಆಗಿ ಬಾಗಿನ ಸಮರ್ಪಣೆ ಮಾಡಿದ ದಾಖಲೆ ಮಾಡಿದ್ದಾರೆ. ವೇದಮೂರ್ತಿ ಭಾನುಪ್ರಕಾಶ್ ಶರ್ಮ ಅವರ ನೇತೃತ್ವದಲ್ಲಿ ವೇದಮಂತ್ರಗಳ ನಡುವೆ ಬಾಗಿನ ಅರ್ಪಣೆ ನಡೆಯಿತು.

ಈ ಬಾಗಿನ ಸಮರ್ಪಣೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಸಿಎಂಗೆ ಸಾಥ್ ನೀಡಿದರು. ಅವರೊಂದಿಗೆ ಸಚಿವರಾದ ಕೆ.ಚಲುವರಾಯಸ್ವಾಮಿ, ಎಚ್.ಸಿ. ಮಹದೇವಪ್ಪ, ಸತೀಶ ಜಾರಕಿಹೊಳಿ, ಬೋಸರಾಜು, ನಾರಾಯಣಗೌಡ, ವೆಂಕಟೇಶ್ ಮತ್ತು ಹಲವು ಶಾಸಕರು ಉಪಸ್ಥಿತರಿದ್ದರು.