ಸಚಿವ ಜಮೀರ್‌ ಅಹ್ಮದಖಾನ್‌ ಹೈದರಾಬಾದ್‌ನಲ್ಲಿ ನೀಡಿರುವ ಹೇಳಿಕೆ ಯಾವುದೇ ಶಾಸಕರಿಗೆ ಅಗೌರವ ತೋರುವಂತದ್ದಲ್ಲ. ಹಕ್ಕುಚ್ಯುತಿಯೂ ಆಗಿಲ್ಲ. ಅಸಂಸದೀಯ ಪದವನ್ನೂ ಬಳಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. 

ಸುವರ್ಣಸೌಧ (ಡಿ.11): ಸಚಿವ ಜಮೀರ್‌ ಅಹ್ಮದಖಾನ್‌ ಹೈದರಾಬಾದ್‌ನಲ್ಲಿ ನೀಡಿರುವ ಹೇಳಿಕೆ ಯಾವುದೇ ಶಾಸಕರಿಗೆ ಅಗೌರವ ತೋರುವಂತದ್ದಲ್ಲ. ಹಕ್ಕುಚ್ಯುತಿಯೂ ಆಗಿಲ್ಲ. ಅಸಂಸದೀಯ ಪದವನ್ನೂ ಬಳಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಇದೇ ವೇಳೆ ಬಿಜೆಪಿಗರು ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಉತ್ತರ ಕರ್ನಾಟಕದ ವಿರೋಧಿಗಳು ಎಂದು ಅವರು ಹರಿಹಾಯ್ದಿದ್ದಾರೆ. ಸದನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸುಗಮವಾಗಿ ಸದನ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. ಆಗ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ‘ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ನಿಮ್ಮ ಸಚಿವರನ್ನು ಸಂಪುಟದಿಂದ ಕೈಬಿಟ್ಟಿದ್ದೇನೆ’ ಎಂದು ಹೇಳಿ ಸಾಕು ಎಂದು ಸಿದ್ದರಾಮಯ್ಯಗೆ ಒತ್ತಾಯಿಸಿದರು.

ಮಾತು ಮುಂದುವರೆಸಿದ ಸಿದ್ದರಾಮಯ್ಯ, ಜಮೀರ್‌ ಹೇಳಿದ್ದನ್ನು ಕೇಳಿದ್ದೇನೆ. ಹೈದರಾಬಾದ್‌ನಲ್ಲಿ ಅವರು ಮುಸ್ಲಿಂ ಮುಖಂಡರ ಸಭೆಯಲ್ಲಿ ಕರ್ನಾಟಕದಲ್ಲಿ ನಮ್ಮ ಸಮುದಾಯಕ್ಕೆ ಸ್ಪೀಕರ್‌ ಹುದ್ದೆಯಂತಹ ಉನ್ನತ ಸ್ಥಾನವನ್ನು ಕಾಂಗ್ರೆಸ್‌ ನೀಡಿದೆ. ಹೀಗಾಗಿ ನಾವು (ಕಾಂಗ್ರೆಸ್‌) ಅವರಿಗೆ ನಮಸ್ಕರಿಸುತ್ತೇವೆ. ಬಿಜೆಪಿಗರು ನಮಸ್ಕರಿಸುತ್ತಾರೆ ಎಂದು ಹೇಳಿದ್ದಾರೆ. ಯಾವುದೇ ಅಸಂಸದೀಯ ಪದವನ್ನೂ ಬಳಸಿಲ್ಲ. ಸಂವಿಧಾನ ವಿರೋಧಿ ಹೇಳಿಕೆ ನೀಡಿಲ್ಲ. ಯಾವ ಶಾಸಕರ ಅಗೌರವ ತೋರಿಲ್ಲ ಎಂದು ಸ್ಪಪ್ಟಪಡಿಸಿದರು.

ಉತ್ತರ ಕರ್ನಾಟಕ ಹಾಗೂ ಬರದ ಕುರಿತು ಚರ್ಚೆ ನಡೆಸಬೇಕು. ಎಲ್ಲದಕ್ಕೂ ನಾವು ಉತ್ತರ ಕೊಡಲು ಸಿದ್ಧವಿದ್ದೇವೆ. ಆದರೆ ಪ್ರತಿಪಕ್ಷಕ್ಕೆ ಇದು ಬೇಕಾಗಿಲ್ಲ. ಮೊದಲ ವಾರ ಐದು ದಿನ ಸದನ ನಡೆಯಲು ಬಿಟ್ಟಿದ್ದಾರೆ. ಇವತ್ತು ಬೆಳಿಗ್ಗೆ ಪ್ರಶ್ನೋತ್ತರಕ್ಕೂ ಅವಕಾಶ ಕೊಟ್ಟು, ಏಕಾಏಕಿ ಧರಣಿ ನಡೆಸುವ ಮೂಲಕ ಗದ್ದಲ ಎಬ್ಬಿಸಿ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದೀರಿ. ನಿಮಗೆ ಉತ್ತರ ಕರ್ನಾಟಕ ಹಾಗೂ ಬರದ ಬಗ್ಗೆ ಚರ್ಚೆ ಬೇಕಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಆಗ ಮುಸ್ಲಿಮರ ಓಲೈಸುತ್ತಿದ್ದ ಯತ್ನಾಳ್‌ ಈಗ ಹಿಂದೂ ಹುಲಿ: ಸಚಿವ ಎಂ.ಬಿ.ಪಾಟೀಲ್‌

ನಿಮಗೆ ಸಚಿವ ಜಮೀರ್‌ ಹೇಳಿಕೆ ಬಗ್ಗೆ ಚರ್ಚೆ ನಡೆಸಬೇಕೆಂದರೆ ಉತ್ತರ ಕೊಡಲು ಸರ್ಕಾರ ಸಿದ್ಧವಿದೆ. ನಿಯಮಾವಳಿಯಂತೆ ನೋಟಿಸ್‌ ಕೊಟ್ಟು ಚರ್ಚೆ ನಡೆಸಿ. ಅದು ಬಿಟ್ಟು ಅನಗತ್ಯವಾಗಿ ಗದ್ದಲ ಎಬ್ಬಿಸುವುದು ಸರಿಯಲ್ಲ. ನೀವು ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿಗಳು ಎಂದು ಟೀಕಿಸಿದರು. ಈ ವೇಳೆ ಬಾವಿಯೊಳಗಿದ್ದ ಪ್ರತಿಪಕ್ಷದ ಸದಸ್ಯರು ಮಧ್ಯಪ್ರವೇಶಿಸಿ ಮಾತನಾಡಲು ಮುಂದಾದಾಗ ಬಾವಿಯೊಳಗಿದ್ದಾಗ ಮಾತನಾಡಲು ಅವಕಾಶವಿಲ್ಲ. ಹೀಗೆಲ್ಲ ಮಾತನಾಡಬೇಡಿ ಎಂದು ಬಿಜೆಪಿ ಶಾಸಕ ಚಂದ್ರಪ್ಪಗೆ ತಾಕೀತು ಮಾಡಿದರು.