ಇಬ್ರಾಹಿಂ ಪುತ್ರ ಫಯಾಜ್, ಮಾಜಿ ಸಚಿವ ಶಂಕರ್ ಕಾಂಗ್ರೆಸ್‌ಗೆ ಸೇರ್ಪಡೆ
ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಪುತ್ರ ಸಿ.ಎಂ.ಫಯಾಜ್, ಮಾಜಿ ಸಚಿವ ಆರ್.ಶಂಕರ್ ಹಾಗೂ ತುಮಕೂರು ಜೆಡಿಎಸ್ ನಾಯಕ ಗೋವಿಂದರಾಜು ಅವರು ನೂರಾರು ಬೆಂಬಲಿಗರೊಂದಿಗೆ ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಬೆಂಗಳೂರು (ಏ.06): ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಪುತ್ರ ಸಿ.ಎಂ.ಫಯಾಜ್, ಮಾಜಿ ಸಚಿವ ಆರ್.ಶಂಕರ್ ಹಾಗೂ ತುಮಕೂರು ಜೆಡಿಎಸ್ ನಾಯಕ ಗೋವಿಂದರಾಜು ಅವರು ನೂರಾರು ಬೆಂಬಲಿಗರೊಂದಿಗೆ ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೂರೂ ಮಂದಿ ನಾಯಕರನ್ನು ಪ್ರತ್ಯೇಕವಾಗಿ ಪಕ್ಷಕ್ಕೆ ಬರ ಮಾಡಿಕೊಂಡರು.
ಮೊದಲಿಗೆ ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಕೇವಲ 3 ಸಾವಿರ ಮತಗಳಿಂದ ಸೋತಿದ್ದ ಗೋವಿಂದರಾಜು ಅವರಿಗೆ ಪಕ್ಷದ ಬಾವುಟ ನೀಡಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಅವರ ಜತೆ ಪ್ರೇಮಾ ಮಹಾಲಿಂಗಪ್ಪ, ಬೋರೇಗೌಡ ಸೇರಿ ಹಲವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ಸಚಿವ ಡಾ.ಜಿ. ಪರಮೇಶ್ವರ್, ಕಾಂಗ್ರೆಸ್ ಅಭ್ಯರ್ಥಿ ಮುದ್ದ ಹನುಮೇಗೌಡ ಹಾಜರಿದ್ದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮೂವರು ಸುರೇಶ್, ಐವರು ಮಂಜುನಾಥ್ ಸ್ಪರ್ಧೆ!
ಇದೇ ವೇಳೆ ಮಾಜಿ ಸಚಿವ ಆರ್. ಶಂಕರ್ ಅವರು ಕುಂದಾಪುರ ರತ್ನಾಕರ್, ಷಣ್ಮುಗಪ್ಪ ಕಂಬಳಿ, ಭೀಮಣ್ಣ ಹಳಕಟ್ಟಿ ಸೇರಿದಂತೆ ನೂರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಇನ್ನು ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಪುತ್ರ ಸಿ.ಎಂ. ಫಯಾಜ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.
ಕ್ಷೇತ್ರದ ಜನ ನನಗೆ ರಾಜಕೀಯ ಮರುಜನ್ಮ ನೀಡಬೇಕು: ತಂದೆ ಸಮಾನರಾದ ಸಿದ್ದರಾಮಯ್ಯ ಹಾಗೂ ಭವಿಷ್ಯದ ನಾಯಕರಾದ ಡಿ.ಕೆ.ಶಿವಕುಮಾರ್ ಇದ್ದಾರೆ. ಈಗಾಗಲೇ ಶಾಸಕನಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಸ್ಥಳೀಯ ವಿಧಾನಸಭಾ ಕ್ಷೇತ್ರದಲ್ಲಿನ ನನ್ನ ಬೆಂಬಲಿಗರು, ಅಭಿಮಾನಿಗಳು, ಕಾರ್ಯಕರ್ತರ ಏಳಿಗೆಗೆ ಶ್ರಮಿಸುತ್ತೇನೆ ಎಂದರು. ಮುಂದಿನ ದಿನಗಳಲ್ಲಿ ನನ್ನ ರಾಜಕೀಯ ನಡೆ ಕುರಿತು ಚರ್ಚಿಸಲು ನಡೆಸಿದ ಅಭಿಮಾನಿಗಳ ಸಭೆಯಲ್ಲಿ ನಾನು ಎಲ್ಲೇ ಇದ್ದರೂ ಬೆಂಬಲ ಕೊಡುತ್ತೇವೆ. ಹೆಚ್ಚಾಗಿ ಕಾಂಗ್ರೆಸ್‌ಗೆ ಬೆಂಬಲ ಕೊಡಿ ಅಂತ ಹೇಳಿದ್ದಾರೆ. ನಾನು ಮೊದಲ ಬಾರಿಗೆ 2013ರಲ್ಲಿ ಸ್ಥಳೀಯ ವಿಧಾನಸಭೆ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸಿದಾಗ 46 ಸಾವಿರ ಮತ ನೀಡಿದರು.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಕೋಟ ಶ್ರೀನಿವಾಸ ಪೂಜಾರಿಗೆ ಸಮನ್ಸ್
2018ರಲ್ಲಿ ವಿಧಾನಸಭೆಗೆ ಆಯ್ಕೆಯಾಗುವಂತೆ ಆಶೀರ್ವಾದ ಮಾಡಿದರು. 2023ರಲ್ಲಿ 36 ಸಾವಿರ ಮತ ನೀಡಿದ್ದಾರೆ. 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ನಿಕಟಪೂರ್ವ ಶಾಸಕರನ್ನು ಸಾರಥಿಯಂತೆ ನಿಂತು ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬಂದೆ. ಆದರೆ ಆಯ್ಕೆಯಾದ ನಂತರ ಅವರು ನನ್ನನ್ನು ಹಾಗೂ ನನ್ನ ಕಾರ್ಯಕರ್ತರನ್ನು ಕಡೆಗಣಿಸಿದರು. ಯಾರು ನನಗೆ ತೇಜೋವಧೆ ಮಾಡಿ ಚಿತ್ರಹಿಂಸೆ ನೀಡಿದ್ದಾರೆಯೋ ಅವರಿಗೆ ಪಾಠ ಕಲಿಸಲು ಹಾಗೂ ತಾಲೂಕಿನ ಅಭಿವೃದ್ಧಿ ಸಲುವಾಗಿ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿರುವೆ ಎಂದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ ಶಕುನಿ ಎಂದರು.