ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಪುನಾರಚನೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಹೈಕಮಾಂಡ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ರಾಹುಲ್ ಗಾಂಧಿಯವರು ನಿಗದಿಪಡಿಸಿದ ಕಠಿಣ ಮಾನದಂಡಗಳ ಆಧಾರದ ಮೇಲೆ ಸಚಿವರ ಆಯ್ಕೆ ನಡೆಯಲಿದ್ದು, ಹಲವು ಹೊಸ ಮುಖಗಳಿಗೆ ಅವಕಾಶ ಸಿಗುವ ಮತ್ತು ಕೆಲ ಹಿರಿಯರಿಗೆ ಕೊಕ್ ಸಿಗುವ ಸಾಧ್ಯತೆಯಿದೆ.

ನವದೆಹಲಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ಪುನಾರಚನೆಯ ಚಟುವಟಿಕೆಗಳು ಗರಿಗೆದರಿವೆ. ಈ ಸಂಬಂಧ ಇಂದು ದೆಹಲಿಯಲ್ಲಿ ಹೈಕಮಾಂಡ್ ಹೈವೋಲ್ಟೇಜ್ ಸಭೆ ನಡೆಸಲಿದ್ದು, ರಾಜ್ಯ ನಾಯಕರ ಭವಿಷ್ಯ ನಿರ್ಧಾರವಾಗಲಿದೆ.

ಹೈಕಮಾಂಡ್ ಮಟ್ಟದಲ್ಲಿ ಸರಣಿ ಸಭೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಿವಾಸದಲ್ಲಿ ಇಂದು ಮೊದಲ ಹಂತದ ಸಭೆ ನಡೆಯುವ ಸಾಧ್ಯತೆಯಿದೆ. ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಬಿಕೆ ಹರಿಪ್ರಸಾದ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ದೆಹಲಿಗೆ ತಲುಪಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ರಾಹುಲ್ ಗಾಂಧಿ ಡೆಡ್ಲಿ ಟಾಸ್ಕ್

ಈಗಾಗಲೇ ರಾಜ್ಯ ನಾಯಕರೊಂದಿಗೆ ಮೊದಲ ಹಂತದ ಸಭೆ ನಡೆಸಿ ಸಂಭಾವ್ಯ ಪಟ್ಟಿ ಸಿದ್ಧಪಡಿಸುವಂತೆ ರಾಹುಲ್ ಗಾಂಧಿ ಅವರು ಸೂಚನೆ ನೀಡಿದ್ದಾರೆ. ಈ ಬಾರಿ ಸಚಿವ ಸ್ಥಾನ ನೀಡಲು ರಾಹುಲ್ ಗಾಂಧಿ ಕೆಲವು ಕಠಿಣ ಮಾನದಂಡಗಳನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ರಾಹುಲ್ ಗಾಂಧಿ ಸಲಹೆಗಳೇನು?

ಸಚಿವ ಸಂಪುಟದಲ್ಲಿ 55 ವರ್ಷದೊಳಗಿನ ಶಾಸಕರಿಗೆ ಹೆಚ್ಚಿನ ಸ್ಥಾನ ನೀಡಬೇಕು. ಸಂಪುಟದ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎನ್ನುವುದು ಹೈಕಮಾಂಡ್ ಲೆಕ್ಕಾಚಾರ. ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಿರಿಯ ಸಚಿವರ ಬಗ್ಗೆ ಸಮಗ್ರ ವರದಿ ಪಡೆಯಲು ಸೂಚಿಸಲಾಗಿದೆ. ಸಿದ್ದರಾಮಯ್ಯ , ಡಿಕೆಶಿಕುಮಾರ್ ಬಳಿ ಚರ್ಚೆ ನಡೆಸಿ ವರದಿ ಪಡೆಯುವಂತೆ ಸೂಚನೆ ನೀಡಲಾಗಿದೆ. ಸಚಿವರಾಗಿದ್ದಾಗ ಅವರು ತಮ್ಮ ಇಲಾಖೆಗಳಲ್ಲಿ ಎಷ್ಟು ಕೆಲಸ ಮಾಡಿದ್ದಾರೆ? ಎಷ್ಟು ಬಾರಿ ಕೆಡಿಪಿ (KDP) ಸಭೆಗಳನ್ನು ನಡೆಸಿದ್ದಾರೆ? ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಎಷ್ಟು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದಾರೆ? ಎಂಬ ಅಂಶಗಳ ಆಧಾರದ ಮೇಲೆ ಸಚಿವರ ಪಟ್ಟಿ ಸಿದ್ಧವಾಗಲಿದೆ.

ಸಚಿವರ ಇಲಾಖಾ ಪ್ರಗತಿ ಮತ್ತು ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸದ ಸಚಿವರಿಗೆ ಈ ಬಾರಿ ಕೊಕ್ ನೀಡುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ಇಂದಿನ ದೆಹಲಿ ಸಭೆಯು ರಾಜ್ಯ ಸಚಿವ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗಲಿದೆ ಮತ್ತು ಯಾರ ಕುರ್ಚಿ ಅಲುಗಾಡಲಿದೆ ಎಂಬ ಕುತೂಹಲಕ್ಕೆ ತೆರೆ ಎಳೆಯಲಿದೆ.