ತಮ್ಮ ಬಳಿ ಇರುವ 1,400 ಕೋಟಿ ರೂ. ಮೌಲ್ಯದ ಆಸ್ತಿ ಕಾನೂನುಬದ್ಧವಾಗಿ ಸಂಪಾದಿಸಿದ್ದೇನೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ಕುಮಾರಸ್ವಾಮಿ ಅವರ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ. ನೈಸ್ ರಸ್ತೆ ಯೋಜನೆ ಮತ್ತು ಬಿಡದಿ ಟೌನ್‌ಶಿಪ್‌ನಲ್ಲಿ ಬಗ್ಗೆ ಧೈರ್ಯವಿದ್ದರೆ ವಿಧಾನಸಭೆಯೊಳಗೆ ಚರ್ಚೆಗೆ ಬರಲು ಸವಾಲ್

ನವದೆಹಲಿ (ಸೆ.30): ‘ಹೌದು, ಇಂದಿನ ಮೌಲ್ಯದಲ್ಲಿ ನನ್ನ ಬಳಿ ₹1,400 ಕೋಟಿ ಮೌಲ್ಯದ ಆಸ್ತಿ ಇದೆ. ನಾನು ಕಾನೂನು ಚೌಕಟ್ಟಿನಲ್ಲಿ ಆಸ್ತಿ ಸಂಪಾದಿಸಿದ್ದೇನೆ. ಕುಮಾರಸ್ವಾಮಿ ಅವರು ಹತಾಶಾರಾಗಿ ಈ ರೀತಿ ಮಾತನಾಡುತ್ತಿದ್ದಾರೆ’ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ನವದೆಹಲಿಯಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ಕುಮಾರಸ್ವಾಮಿ ಅವರ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ‘ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಬಿರುಕು, ತಾ ಮುಂದು ನಾ ಮುಂದು ಎಂಬ ಪೈಪೋಟಿಯಲ್ಲಿ ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಅವರು ಇಷ್ಟು ದಿನ ಏಕೆ ಸುಮ್ಮನಿದ್ದರು. ಅವರ ತಂದೆ ದೇವೇಗೌಡರೇ ಆ ಯೋಜನೆಗೆ ಸಹಿ ಹಾಕಿದ್ದರು. ಜೊತೆಗೆ ಇವರು ಸಹ ಮುಖ್ಯಮಂತ್ರಿಯಾಗಿದ್ದರು. ಅಲ್ಲದೇ ಗಾಂಧಿ ಎನ್ನುವವರೊಬ್ಬರಿಗೆ ಇವರೇ ಪ್ರಯತ್ನಿಸಿ ಟೆಂಡರ್ ಕೊಡಿಸಿದರು. ಈ ವಿಚಾರವಾಗಿ ನ್ಯಾಯಾಲಯವು ಛಿಮಾರಿ ಹಾಕಿತ್ತು. ಬೇನಾಮಿ ಹೆಸರಿನಲ್ಲಿ ಅಲ್ಲಲ್ಲಿ ಸಾಕಷ್ಟು ವ್ಯವಹಾರಗಳು ನಡೆದವು. ಅವರಂತೆ ನಾನು ಹೆಸರುಗಳನ್ನು ತೆಗೆದುಕೊಳ್ಳಲು ಹೋಗುವುದಿಲ್ಲ’ ಎಂದು ತಿಳಿಸಿದರು.

ಕುಮಾರಸ್ವಾಮಿ ಅವರು ಐಟಿ ಅಧಿಕಾರಿಯೇ?:

‘ನನ್ನ ಆಸ್ತಿ ವಿಚಾರವಾಗಿ ಮಾತನಾಡಿದ್ದಾರೆ. ರೈತನ ಮಗ, ಉದ್ಯಮಿಯಾದ ನನಗೆ ಆಸ್ತಿ ಇರಬಾರದೇ? ನನ್ನ ಮಕ್ಕಳು ಆಸ್ತಿ ಕೊಂಡುಕೊಳ್ಳಬಾರದೇ? ಕಾನೂನಾತ್ಮಕ ಇರುವ ಅವಕಾಶದಲ್ಲೇ ನಾನು ಆಸ್ತಿ ಮಾಡಿದ್ದೇ‌ನೆ. ತಪ್ಪೇನಿದೆ?ಕುಮಾರಸ್ವಾಮಿ ಅವರು ಏನಾದರೂ ಆದಾಯ ತೆರಿಗೆ ಅಧಿಕಾರಿಯೇ? ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಿ’ ಎಂದು ಸವಾಲು ಹಾಕಿದರು.

‘ಇವರು ಮಾತ್ರ ಯಾವುದೋ ಊರಿಂದ ಬಂದು ಇಲ್ಲೆಲ್ಲಾ ಆಸ್ತಿಗಳನ್ನು ತೆಗೆದುಕೊಳ್ಳಬಹುದಾ? ಬಿಎಂಐಸಿಎಪಿಎ, ನೈಸ್ ರಸ್ತೆ ಯೋಜನೆಯೊಳಗೆ ಇವರ ಆಸ್ತಿ ಇಲ್ಲವೇ? ಆಸ್ತಿಗಳನ್ನು ಯಾರ್ಯಾರು ತಗೊಂಡಿದ್ದಾರೆ? ಯಾಕೆ ಇವರ ಆಸ್ತಿಗಳೆಲ್ಲಾ ನೈಸ್‌ ವ್ಯಾಪ್ತಿಯಲ್ಲಿ, ಬಿಡದಿ ಟೌನ್ ಶಿಪ್ ಯೋಜನೆಯೊಳಗೆ ಹೇಗೆ ಆಸ್ತಿ ಬಂದಿತು?’ ಎಂದು ಪ್ರಶ್ನಿಸಿದರು.

‘ಕುಮಾರಸ್ವಾಮಿ ಅವರು ಏನಾದರೂ ಮಾಡಿಕೊಳ್ಳಲಿ. ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳೋದಿಲ್ಲ. ನನಗೆ ಆಸ್ತಿ ಇದೆ. ನನ್ನ ಮಕ್ಕಳಿಗೆ ಇನ್ನೂ ತೆಗೆದುಕೊಳ್ಳುವ ಶಕ್ತಿ ಇದ್ದರೆ ತೆಗೆದುಕೊಳ್ಳುತ್ತಾರೆ. ಕಾನೂನಲ್ಲಿ ಅವಕಾಶ ಇದೆ, ಖರೀದಿ ಮಾಡುವ ಸಾಮರ್ಥ್ಯವಿದೆ, ಬದುಕುತ್ತಾರೆ’ ಎಂದು ಸ್ಪಷ್ಟಪಡಿಸಿದರು.

ನಾನು ಲಂಚ ಪಡೆದಿದ್ದೇನಾ ಅಥವಾ ಹಗರಣದಲ್ಲಿ ಸಿಕ್ಕಿಬಿದ್ದಿದ್ದೇನಾ?:

ಶೋಭಾ ಡೆವಲಪರ್ಸ್ ಜೊತೆ ₹5 ಕೋಟಿ ಹೂಡಿಕೆ ಮಾಡಿ ಈಗ ₹2,000 ಕೋಟಿ ಮಾಡಿದ್ದಾರೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, ‘ಹೌದು, ನಾವು ಎಷ್ಟಾದರೂ ಮಾಡುತ್ತೇವೆ. ನನಗೆ ಮಾಜಿ ಸಿಎಂ ದಿವಂಗತ ಬಂಗಾರಪ್ಪ ಅವರು ₹1 ಲಕ್ಷಕ್ಕೆ ಆಗ ಒಂದು ನಿವೇಶನ ನೀಡಿದ್ದರು. ಇಂದು ಅದರ ಬೆಲೆ ₹20 ಕೋಟಿ ಇದೆ. ಇದರಲ್ಲಿ ಏನಾದರೂ ತಪ್ಪಿದೆಯೇ? ನಾನು ಲಂಚ ಹೊಡೆದಿದ್ದೇನೆಯೇ? ಇಲ್ಲ ಯಾವುದಾದರೂ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದೆನೆಯೇ? ಯಾವುದೂ ಇಲ್ವವಲ್ಲಾ’ ಎಂದು ವ್ಯಂಗ್ಯವಾಡಿದರು.

ಕದ್ದು ಏನನ್ನೂ ಮಾಡಿಕೊಂಡಿಲ್ಲ:

‘ನನಗೆ ಉದ್ದಿಮೆ ಮಾಡಲು ಎಲ್ಲಾ ರೀತಿಯ ಹಕ್ಕು, ಅವಕಾಶವಿದೆ. ನನ್ನ ಮಕ್ಕಳಿಗೂ ಸಾಮರ್ಥ್ಯವಿದೆ. ಇನ್ನೂ ಖರೀದಿ ಮಾಡುವ ಸಾಮರ್ಥ್ಯವಿದೆ. ನಾನು ಕದ್ದುಮುಚ್ಚಿ ಮಾಡೋ ಅವಶ್ಯಕತೆಯಿಲ್ಲ. ನನ್ನ ಆಸ್ತಿಯನ್ನ ಈಗಾಗಲೇ ಘೋಷಣೆ ಮಾಡಿಕೊಂಡಿದ್ದೇನೆ’ ಎಂದರು.

‘ಕುಮಾರಸ್ವಾಮಿ ಅವರದ್ದು ಏನೇನಿದೆ ಅಂತ ನಾನು ಈಗ ಮಾತನಾಡಲು ಹೋಗುವುದಿಲ್ಲ. ನನಗೆ ಈ ವಿಚಾರಗಳನ್ನು ಯಾರೋ ಹೇಳಿದರು. ಕುಮಾರಸ್ವಾಮಿ ಅವರು ಎಲ್ಲಾ ಎತ್ತಿಕೊಂಡು ಹೋಗಿ ಸಂಸ್ಥೆಗಳಿಗೆಲ್ಲಾ ಈಗಾಗಲೇ ಕೊಟ್ಟಿದ್ದಾರಲ್ಲಾ? ಇನ್ನೆಷ್ಟು ಬಾರಿ ಕೊಡುತ್ತಾರೆ. ಅವರಿಗೆ ಲಾರಿ ಬೇಕಾದರೆ ಕಳುಹಿಸಿಕೊಡೋಣ’ ಎಂದು ಲೇವಡಿ ಮಾಡಿದರು.

ವಿಧಾನಸಭೆಗೆ ಬಂದು ಚರ್ಚೆ ಮಾಡಲಿ:

ಕುಮಾರಸ್ವಾಮಿ ಅವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಚರ್ಚೆಗೆ ಸವಾಲು ಹಾಕಿರುವ ಬಗ್ಗೆ ಕೇಳಿದಾಗ, ‘ವಿಧಾನಸೌಧದ ಮೆಟ್ಟಿಲುಗಳ ಮೇಲೆ ಯಾಕೆ? ಧೈರ್ಯವಿದ್ದರೆ ಯಾರನ್ನಾದರೂ ಕೌನ್ಸಿಲ್ ಅಥವಾ ಅಸೆಂಬ್ಲಿ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಿ, ಅಸೆಂಬ್ಲಿ ಒಳಗಡೆ ಬಂದು ಚರ್ಚೆ ಮಾಡಲಿ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಚರ್ಚೆ ಮಾಡುವ ಬದಲು ಫ್ರೀಡಂ ಪಾರ್ಕ್ ಇದೆ, ಅಲ್ಲಿಗೆ ಹೋಗಿ ಚರ್ಚೆ ಮಾಡಿಕೊಳ್ಳಲಿ’ ಎಂದರು.

ಗೊಡ್ಡು ಬೆದರಿಕೆಗೆಲ್ಲಾ ಡಿಕೆ ಹೆದರುವುದಿಲ್ಲ:

ನೈಸ್ ಯೋಜನೆ ಜಾರಿಗೆ ತಮಗೆ ಬೆಂಬಲ ಇರಲಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಮಾತನಾಡಿ, ‘2007ರಲ್ಲಿ ಅವರಿಗೆ ಅಧಿಕಾರವಿತ್ತಲ್ಲ. ಇವರೇ ಹರಾಜಿನಲ್ಲಿ ನಿಖಿಲ್ ಗಾಂಧಿ ಎಂಬುವರು ಕೊಟ್ಟಿದ್ದರಲ್ಲ. ಯಾಕೆ ಮಾಡಲು ಆಗಿಲ್ಲ? ಅಧಿಕಾರದಲ್ಲಿದ್ದಾಗ ಟೋಲ್ ರದ್ದು ಮಾಡದವರು ಈಗ ದೇಶಾದ್ಯಂತ ಟೋಲ್ ಬಂದ್ ಮಾಡಿಸಲು ಪ್ರಧಾನಿ ಮೋದಿಯವರಿಗೆ ಹೇಳಲಿ. ಈ ಗೊಡ್ಡು ಬೆದರಿಕೆಗೆಲ್ಲಾ ಡಿ.ಕೆ.ಶಿವಕುಮಾರ್ ಹೆದರುವುದಿಲ್ಲ. ಈ ನಾಟಕ, ಡ್ರಾಮಾ, ಫಿಲಾಸಫಿ, ಬ್ಲ್ಯಾಕ್‌ಮೇಲ್‌ ಎಲ್ಲಾ ಬೇಕಾದಷ್ಟು ನೋಡಿದ್ದೀನಿ. ಇವಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಮಾಡುವ ಕೆಲಸ ಮಾಡೋಣ. ನಮ್ಮ ಸರ್ಕಾರದ ಜನಪ್ರಿಯತೆಯನ್ನು ಅವರಿಗೆ ತಡೆದುಕೊಳ್ಳಲಾಗುತ್ತಿಲ್ಲ. ಅಸೂಯೆಗೆ ಮದ್ದಿಲ್ಲ ಎಂದು ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ, ನಾಳೆಯೂ ಹೇಳುತ್ತೇನೆ’ ಎಂದರು.

ತಂತ್ರಕ್ಕೆ ಹೆದರುವುದಿಲ್ಲ:

ಕುಮಾರಸ್ವಾಮಿ ಅವರು ಇದು ಭಾಗ 1 ಎಂದು ಹೇಳಿದ್ದಾರೆ ಎಂದು ಕೇಳಿದಾಗ, ‘ಪಾರ್ಟ್ 1, 2, 3,4 ಸ್ಟಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಅವರ ಹತ್ರ ಇರೋದೆಲ್ಲಾ ಗೊತ್ತಿದೆ. ಚೆನ್ನಿಗಪ್ಪನ ಕಾಲದಿಂದಲೂ ಗೊತ್ತಿದೆ. ಬಾಲ ಗಂಗಾಧರನಾಥ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ ಫೋನನ್ನೇ ಟ್ಯಾಪ್ ಮಾಡಿಸಿದವರು, ಅವರನ್ನೇ ಬಿಟ್ಟಿಲ್ಲಾ, ನನ್ನನ್ನು ಬಿಡುತ್ತಾರೆಯೇ? ಹಾಗೆಂದು ಭಾವಿಸಿದರೆ ನಮ್ಮಂಥ ಮುಠ್ಠಾಳರು ಯಾರೂ ಇಲ್ಲ. ಅವರು ಮುಖ್ಯಮಂತ್ರಿ ಆಗಿದ್ದಾಗ ನಾನು ಹೆದರಲಿಲ್ಲ, ಈಗ ಹೆದರುತ್ತೇನೆಯೇ? ನನ್ನನ್ನು ದೊಡ್ಡ ಬೆದರಿಕೆ ಹಾಕಿ ಹೆದರಿಸುವ ಅಥವಾ ಬ್ಲ್ಯಾಕ್‌ಮೇಲ್ ಮಾಡುವ ಜಾಯಮಾನ ನನ್ನದಲ್ಲ’ ಎಂದರು.