ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಹಾಗೂ ಬರ ನಿರ್ವಹಣೆ ವೈಫಲ್ಯ ಖಂಡಿಸಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕನಕಪುರದಲ್ಲಿ 'ರೈತ ಸ್ವಾಭಿಮಾನಿ ಯಾತ್ರೆ' ಆರಂಭಿಸಿದ್ದಾರೆ. ಇದಕ್ಕೆ ಸಿಎಂ ಡಿಕೆ ಶಿವಕುಮಾರ್ ಅಚ್ಚರಿಯ ಪ್ರತಿಕ್ರಿಯೆ
ಕನಕಪುರ (ಸೆ.29): ರಾಜ್ಯದಲ್ಲಿ ಮಳೆ ಕೊರತೆಯಿಂದ ಅಂತರ್ಜಲ ಕುಸಿದು, ಕೆರೆ-ಕಟ್ಟೆಗಳು ಬರಿದಾಗಿ, ಬರ ಪರಿಸ್ಥಿತಿ ತಾಂಡವವಾಡುತ್ತಿದ್ದರೂ ರೈತರ ನೆರವಿಗೆ ಬರಲು ಸರ್ಕಾರ ಮೀನಮೇಷ ಎಣಿಸುತ್ತಿದೆ. ಹೀಗಾಗಿ, ತೀವ್ರ ಬರದಿಂದ ಸಂಕಷ್ಟಕ್ಕೆ ಈಡಾಗಿರುವ ರೈತರ ಸಮಸ್ಯೆ ಆಲಿಸುವ ಉದ್ದೇಶದಿಂದ ‘ರೈತ ಸ್ವಾಭಿಮಾನಿ ಯಾತ್ರೆ’ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಡಿಕೆ ತವರು ಕ್ಷೇತ್ರದಿಂದಲೇ ರೈತ ಸ್ವಾಭಿಮಾನಿ ಯಾತ್ರೆ
ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ‘ರೈತ ಸ್ವಾಭಿಮಾನಿ ಯಾತ್ರೆ’ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತವರು ಕ್ಷೇತ್ರ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದಲ್ಲಿ ಸೋಮವಾರ ಅದ್ಧೂರಿ ಚಾಲನೆ ಸಿಕ್ಕಿತು.
ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಖಿಲ್ ವಾಗ್ದಾಳಿ
ಪಟ್ಟಣದ ರೈಸ್ ಮಿಲ್ ಬಳಿಯ ಶಿವ-ಪಾರ್ವತಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ ನಿಖಿಲ್, 3 ಕಿ.ಮೀ. ಪಾದಯಾತ್ರೆಗೆ ಚಾಲನೆ ನೀಡಿದರು. ಬಳಿಕ, ಸಾವಿರಾರು ಕಾರ್ಯಕರ್ತರ ಜೊತೆ ನಗರದ ಚನ್ನಬಸಪ್ಪ ವೃತ್ತದವರೆಗೆ ಪಾದಯಾತ್ರೆಯಲ್ಲಿ ಆಗಮಿಸಿದರು. ನಂತರ, ಚನ್ನಬಸಪ್ಪ ವೃತ್ತದಲ್ಲಿ ಬೃಹತ್ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಬರಗಾಲದಲ್ಲಿ ರೈತರ ನೆರವಿಗೆ ಬಾರದ ಸರ್ಕಾರ
ರೈತರ ಹೆಸರೇಳಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಮೂರೂವರೆ ಸಾವಿರಕ್ಕೂ ಹೆಚ್ಚು ರೈತರು ಆತ್ಮ೧ಹತ್ಯೆ ಮಾಡಿಕೊಂಡಿದ್ದು, ಅನ್ನ ಹಾಕುವ ರೈತನ ಬದುಕು ಬೀದಿಗೆ ಬಂದಿದೆ. ಸರ್ಕಾರದಲ್ಲಿ ಕುಳಿತಿರುವ ಜನಪ್ರತಿನಿಧಿಗಳು ಜಿಲ್ಲೆಯ ಹೆಸರನ್ನು ಮಾತ್ರ ಬದಲಿಸಿದ್ದಾರೆಯೇ ಹೊರತು, ರೈತರ ಸಮಸ್ಯೆ ಆಲಿಸಿಲ್ಲ. ಅವರೀಗ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಬ್ಯುಸಿ ಇದ್ದು, ರೈತರ ಬಗ್ಗೆ ಅವರಿಗೆ ಕಾಳಜಿಯೇ ಇಲ್ಲ ಎಂದು ಕಿಡಿಕಾರಿದರು.
ಬರ ಪರಿಹಾರಕ್ಕೆ ಕೇಂದ್ರದ ಕಡೆ ಕೈ ತೋರಿಸುವುದು ನಾಚಿಕೆಗೇಡು
ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಕಡೆ ಕೈ ತೋರಿಸಿ ಸುಮ್ಮನೆ ಕುಳಿತುಕೊಂಡಿರುವುದು ನಾಚಿಕೆಗೇಡಿನ ವಿಷಯ. ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಬರಗಾಲದ ಸಮಯದಲ್ಲಿ ಕೇಂದ್ರದತ್ತ ನೋಡದೇ ರೈತರ ಸಾಲಮನ್ನಾ ಮಾಡಿದ್ದರು. ಈಗ ಸಿಎಂ ಕ್ಷೇತ್ರದಲ್ಲೇ ಬರ ಪರಿಸ್ಥಿತಿ ಇದೆ. ಆದರೆ, ಈವರೆಗೂ ಅವರು ತಾಲೂಕಿಗೆ ಬಂದು ರೈತರ ಸಮಸ್ಯೆ ಆಲಿಸಿಲ್ಲ. ಕೇವಲ ಎಕರೆಗೆ 2,500 ರು. ಬರ ಪರಿಹಾರ ಘೋಷಣೆ ಮಾಡಿ, ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಹೀಗಾಗಿ, ಸಿಎಂ ತವರು ಕ್ಷೇತ್ರದಿಂದಲೇ ರೈತ ಸ್ವಾಭಿಮಾನ ಯಾತ್ರೆ ಆರಂಭಿಸಿದ್ದೇವೆ ಎಂದರು.
ಈಗ ಜಿಲ್ಲೆಯವರು ಸಿಎಂ ಆಗಿದ್ದಾರೆ. ದೇವೇಗೌಡರು, ಕುಮಾರಸ್ವಾಮಿ, ನಾನು, ನೀವು ಸೇರಿದಂತೆ ಯಾರೂ ಕೂಡ ಅವರು ಸಿಎಂ ಆಗಿರುವುದಕ್ಕೆ ಹೊಟ್ಟೆಕಿಚ್ಚು ಪಡುವುದಿಲ್ಲ. ಇಲ್ಲಿ ಅವರಿಗೆ ಮತ ಹಾಕಿರುವ ಜನ ಇದ್ದಾರೆ. ಅವರ ಪರವಾಗಿ ಕೆಲಸ ಮಾಡಿ. ಆಗ ನಾವೇ ನಿಮಗೆ ಶಾಲು, ಹಾರ ಹಾಕಿ, ಸನ್ಮಾನ ಮಾಡುತ್ತೇವೆ. ಆದರೆ, ಕಳೆದ ಹಲವು ದಿನಗಳಿಂದ ಬೈರಮಂಗಲದಲ್ಲಿ ಮಹಿಳೆಯರಿಗೆ ಕಣ್ಣೀರು ಹಾಕಿಸಿದ್ದೀರಿ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬಹಳ ದಿನ ನೀವು ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದರು.
ಕನಕಪುರದಲ್ಲೇ ವೃದ್ಧಾಪ್ಯ ವೇತನವಿಲ್ಲ; ವೃದ್ಧೆಯ ಅಳಲು:
ನಿಖಿಲ್ ಕುಮಾರಸ್ವಾಮಿ ನೇತೃತ್ವದ ರೈತ ಸ್ವಾಭಿಮಾನ ಯಾತ್ರೆಯ ವೇದಿಕೆಯಲ್ಲಿ ವೃದ್ಧೆಯೊಬ್ಬರು ವೃದ್ಧಾಪ್ಯ ವೇತನ ಬಾರದ ಬಗ್ಗೆ ತಮ್ಮ ಅಳಲು ತೋಡಿಕೊಂಡರು.
ನಿಖಿಲ್ ಕುಮಾರಸ್ವಾಮಿಯವರ ಎದುರೇ ಕಣ್ಣೀರು ಹಾಕಿ, ‘ಮಗಾ, 3 ತಿಂಗಳಿಂದ ಪಿಂಚಣಿ ಬಂದಿಲ್ಲ. ಬದುಕೋದು ಕಷ್ಟ ಆಗಿದೆ’ ಎಂದು ದುಃಖ ತೋಡಿಕೊಂಡರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ನಿಖಿಲ್ ಕುಮಾರಸ್ವಾಮಿ, ವೃದ್ಧೆಗೆ ಧೈರ್ಯ ತುಂಬಿ, ‘ಅಜ್ಜಿ ಚಿಂತೆ ಮಾಡಬೇಡಿ, ನಾನು ಇದ್ದೇನೆ, ಅಧಿಕಾರಿಗಳ ಜೊತೆ ಮಾತನಾಡಿ ನಿಮ್ಮ ಪಿಂಚಣಿ ಕೊಡಿಸುತ್ತೇನೆ’ ಎಂದು ಭರವಸೆ ನೀಡಿದರು.
ನಮ್ಮ ಮನೆಯಿಂದಲೇ ಹೋರಾಟ ಆರಂಭಿಸಲಿ
ಜೆಡಿಎಸ್‌ನವರು ನಮ್ಮ ಮನೆಯಿಂದ ರೈತ ಯಾತ್ರೆ ಶುರು ಮಾಡಲಿ. ಎಲ್ಲದಕ್ಕೂ ಅವರೇ ಸಹಿ ಮಾಡಿದ್ದಾರೆ. ಎಲ್ಲಿ ಯಾರ ಹತ್ತಿರ ಏನು ಕೊಟ್ಟು ಕಳಿಸಿದ್ದಾರೆ ಎಲ್ಲವೂ ಗೊತ್ತು. ಹೋರಾಟ ಮಾಡಲು ನಾನು ಬೇಡ ಎನ್ನಲ್ಲ.
-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ.


