ಶ್ರೀರಂಗಪಟ್ಟಣ (ಆ.22):  ಮಹಾರಾಷ್ಟ್ರದ ಘಟ್ಟಪ್ರದೇಶಗಳಲ್ಲಿ ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಸಂಭವಿಸಬಹುದಾದ ವಿಪತ್ತನ್ನು ಕಡಿಮೆ ಮಾಡುವಲ್ಲಿ ಸಚಿವ ರಮೇಶ್‌ ಜಾರಕಿಹೊಳಿ ಪಾತ್ರ ದೊಡ್ಡದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ತಾಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ ಜಲಸಂಪನ್ಮೂಲ ಇಲಾಖೆಯ ಒಂದು ವರ್ಷದ ಸಾಧನೆಗಳ ಕಿರುಹೊತ್ತಿಗೆ ಜಲಯಜ್ಞ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರತಿವರ್ಷ ಮಹಾರಾಷ್ಟ್ರ ಭಾಗದಲ್ಲಿ ಕುಂಭದ್ರೋಣ ಮಳೆ ಆದಾಗಲೆಲ್ಲಾ ಬೆಳಗಾವಿ ಸೇರಿದಂತೆ ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದಲ್ಲಿ ಪ್ರವಾಹ ಪರಿಸ್ಥಿತಿ ಏರ್ಪಡುತ್ತಿತ್ತು. ಮುಂಜಾಗ್ರತಾ ಕ್ರಮ ಕೈಗೊಂಡರೂ ಪ್ರತಿವರ್ಷ ಸಂಭವಿಸುವ ಸಾವು-ನೋವನ್ನು ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಪ್ರಸಕ್ತ ವರ್ಷ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಜನ ಮತ್ತು ಜಾನುವಾರುಗಳ ಪ್ರಾಣಹಾನಿಯನ್ನು ತಡೆಯಲಾಗಿದೆ ಎಂದರು.

ಸಚಿವರ ಕಾರ್ಯವೈಖರಿ ಮೇಲೆ ಪಕ್ಷ ನಿಗಾ, ಕುತೂಹಲ ಮೂಡಿಸಿದ ಹೈಕಮಾಂಡ್ ನಡೆ...

ಮಹಾರಾಷ್ಟ್ರದಲ್ಲಿ ಆಗುವ ಭಾರೀ ಮಳೆಯಿಂದ ರಾಜ್ಯದಲ್ಲಿ ಉದ್ಭವಿಸುವ ಸಂಕಷ್ಟದ ವಾತಾವರಣವನ್ನು ಮೊದಲೇ ಮನಗಂಡು ಸಚಿವ ರಮೇಶ್‌ ಜಾರಕಿಹೊಳಿ ಮಹಾರಾಷ್ಟ್ರ ಸರ್ಕಾರದೊಂದಿಗೆ ಹಲವುಬಾರಿ ಮಾತುಕತೆ ನಡೆಸಿದ ಪರಿಣಾಮ ಪ್ರವಾಹ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ಗಲಭೆ: ಕಾಂಗ್ರೆಸ್‌ಗೆ ಸಿಎಂ ಯಡಿಯೂರಪ್ಪ ತಿರುಗೇಟು.

ಬಳಿಕ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಮಾತನಾಡಿ, ಇಲಾಖೆಯ ವಾರ್ಷಿಕ ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಡಲು ಈ ಕಿರುಹೊತ್ತಿಗೆ ಮುದ್ರಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಮಾರ್ಗದರ್ಶನದಂತೆ ಕೋವಿಡ್‌ ಜಾಗತಿಕ ಸಾಂಕ್ರಾಮಿಕದ ನಡುವೆಯೂ ಮಹಾರಾಷ್ಟ್ರ ಪ್ರವಾಸ ಕೈಗೊಂಡು ಅಲ್ಲಿನ ಸಚಿವರೊಂದಿಗೆ ನಡೆಸಿದ ಸಮಾಲೋಚನೆ ಮತ್ತು ಸತತ ಪ್ರಯತ್ನದ ಫಲವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ಜಂಟಿಯಾಗಿ ಪ್ರವಾಹ ಪರಾಮರ್ಶನಾ ಸಮಿತಿಗಳನ್ನು ರಚಿಸಲಾಯಿತು ಎಂದು ಹೇಳಿದರು.

ನೀರಾವರಿಗೆ ಆದ್ಯತೆ: ರಾಜ್ಯದಲ್ಲಿ ಹನಿ ನೀರಾವರಿ ಮತ್ತು ಸಣ್ಣ ನೀರಾವರಿಗೆ ಆದ್ಯತೆ ನೀಡಲಾಗಿದೆ. ರಾಮಥಾಲ-ಮರೋಳ ಹನಿ ನೀರಾವರಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಹಾಗೆಯೇ ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ ತ್ವರಿತ ಜಾರಿಗಾಗಿ ಸಿಎಂ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಸಚಿವರ ನಿಯೋಗದೊಂದಿಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್‌ ಶೇಖಾವತ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಪ್ರಯತ್ನದ ಫಲವಾಗಿ ಕೇಂದ್ರಸರ್ಕಾರ ಅಂದೇ ಸುಪ್ರೀಂಕೋರ್ಟ್‌ ಆದೇಶದಂತೆ ರಾಜ್ಯದ ಪಾಲಿನ ನೀರಿನ ಬಳಕೆಗೆ ಅನುವಾಗುವಂತೆ ಗೆಜೆಟ್‌ ಅಧಿಸೂಚನೆ ಹೊರಡಿಸಿತು ಎಂದರು.