* ಖಾತೆ ಕ್ಯಾತೆ ತೆಗೆದಿದ್ದ ಆನಂದ್ ಸಿಂಗ್‌ಗೆ ಬಂಪರ್ ಗಿಫ್ಟ್* ಬಂಪರ್ ಕೊಡುಗೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ* ಈ ಮೂಲಕ ಆನಂದ್ ಸಿಂಗ್ ಮನವೊಲಿಸುವ ಪ್ರಯತ್ನ

ವಿಜಯನಗರ, (ಸೆ.06): ಖಾತೆ ಬಗ್ಗೆ ಕ್ಯಾತೆ ತೆಗೆದು ಮುನಿಸಿಕೊಂಡಿದ್ದ ಸಚಿವ ಆನಂದ್ ಸಿಂಗ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಂಪರ್ ಗಿಫ್ಟ್ ಕೊಟ್ಟಿದ್ದಾರೆ.

ಹೌದು...ಕೇಳಿದ ಖಾತೆ ಕೊಡದಿದ್ದಕ್ಕೆ ಮುನಿಸಿಕೊಂಡಿದ್ದ ಆನಂದ್ ಸಿಂಗ್ ಅವರ ತವರು ಜಿಲ್ಲೆಗೆ 53 ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಈ ಮೂಲಕ ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಆನಂದ್ ಸಿಂಗ್‌ ಸಿಟ್ಟು ತಣ್ಣಗಾಗಿಸಿದ್ದಾರೆ.

ಸಂಧಾನ ನಡೆದರೂ ಇನ್ನೂ ಸಿಗದ ಆನಂದ..!

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಗೆ ಮೂಲಸೌಕರ್ಯ ಒದಗಿಸುವ ಬಗ್ಗೆ ಚರ್ಚಿಸಲು ಇಂದು (ಸೆ.06) ಸಿಎಂ ಬೊಮ್ಮಾಯಿ ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ 53 ಕೋಟಿ ರೂ. ಅನುದಾನ ಘೋಷಿಸಿದರು.

ಅಲ್ಲದೇ ಎರಡು ಹಂತಗಳಲ್ಲಿ ಹುದ್ದೆಗಳ ಸೃಜನೆ ಮಾಡಲಾಗುವುದು. ಮೊದಲ ಹಂತದಲ್ಲಿ ಸಾರ್ವಜನಿಕರು ಹೆಚ್ಚಾಗಿ ಭೇಟಿ ನೀಡುವ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತಿ ಕಚೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ, ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿ, ಭೂದಾಖಲೆಗಳ ಉಪನಿರ್ದೇಶಕರ ಕಚೇರಿ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ನಗರ ಯೋಜನೆ ಹಾಗೂ ಅರಣ್ಯ ಇಲಾಖೆಗಳ ಕಚೇರಿಗಳನ್ನು ಪ್ರಾರಂಭಿಸಲಾಗುವುದು' ಎಂದು ಬೊಮ್ಮಾಯಿ ತಿಳಿಸಿದರು.

ರಾಜೀನಾಮೆಗೆ ಮುಂದಾಗಿದ್ದ ಆನಂದ್ ಸಿಂಗ್‌ಗೆ ಸಿಎಂ ಖಡಕ್ ಸೂಚನೆ

ಈ ಹಿಂದೆ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಬರುತ್ತೇನೆ ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡಬೇಕೆಂದು ಬಿಎಸ್‌ವೈ ಮುಂದೆ ಬೇಡಿಕೆ ಇಟ್ಟಿದ್ದರು. ಅದಂತೆ ಬಿಎಸ್‌ವೈ ವಿಜಯನಗರವನ್ನು ಹೊಸ ಜಿಲ್ಲೆಯನ್ನಾಗಿ ಘೋಷಣೆ ಮಾಡಿದ್ದರು.

ಇದೀಗ ಬೊಮ್ಮಾಯಿ ಕ್ಯಾಬಿನೆಟ್‌ನಲ್ಲಿ ಪ್ರವಾಸೋದ್ಯಮ ಮತ್ತು ಪರಿಸರ ಇಲಾಖೆ ಬಿಟ್ಟು ಬೇರೆ ದೊಡ್ಡ ಖಾತೆ ಕೊಡಿ ಎಂದು ಮನವಿ ಮಾಡಿದ್ದರು. ಆದ್ರೆ, ಬೊಮ್ಮಾಯಿ ಆನಂದ್ ಸಿಂಗ್ ಮನವಿಗೆ ಸ್ಪಂದಿಸಿರಲಿಲ್ಲ. ಇದರಿಂದ ಆನಂದ್ ಸಿಂಗ್ ಅವರು ಬೊಮ್ಮಾಯಿ ಮೇಲೆ ಮುನಿಸಿಕೊಂಡು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಹಂತಕ್ಕೆ ಹೋಗಿದ್ರು. ನಂತರ ಅವರನ್ನ ಕರೆದು ಮುಂದೆ ಒಳ್ಳೆಯ ದಿನಗಳು ಬರ್ತವೆ ಅವಸರದ ನಿರ್ಧಾರ ಕೈಗೊಳ್ಳುವುದು ಬೇಡ. ನಿಮ್ಮ ಹಿಂದೆ ನಾನು ಇದ್ದೇನೆ ಎಂದು ಮನವೊಲಿಸಿದ್ರು.

ಅದರಂತೆ ಇದೀಗ ಆನಂದ್ ಸಿಂಗ್ ಕನಸಿನ ವಿಜಯನಗರ ಜಿಲ್ಲೆಗೆ 53 ಕೋಟಿ ಅನುದಾನ ಘೋಷಣೆ ಮಾಡುವ ಮೂಲಕ ಅವರ ಕೋಪ ತಣ್ಣಗಾಗಿಸುವ ಪ್ರಯತ್ನ ಮಾಡಲಾಗಿದೆ.