Asianet Suvarna News Asianet Suvarna News

ಇಂದು ಶಾ, ಸಿಎಂ ಭೋಜನ ಸಭೆ: ನಾಯಕತ್ವ ಬದಲಾವಣೆಯಾಗುತ್ತಾ?, ಭಾರೀ ಕುತೂಹಲ

*    ಬೊಮ್ಮಾಯಿ ಸರ್ಕಾರಿ ನಿವಾಸದಲ್ಲಿ ಭೋಜನ ಕೂಟ
*   ನಾಯಕತ್ವ, ಸಂಪುಟ ಕಸರತ್ತಿನ ಕುರಿತು ಸ್ಪಷ್ಟ ಚಿತ್ರಣ
*  ಸಿಎಂ ಮನೆಯಲ್ಲಿ ಅಮಿತ್‌ ಶಾ ಔತಣ ರಾಜಕೀಯ
 

CM Basavaraj Bommai Will Be Meet Amit Shah On May 3rd in Bengaluru grg
Author
Bengaluru, First Published May 3, 2022, 4:29 AM IST

ಬೆಂಗಳೂರು(ಮೇ.03): ರಾಷ್ಟ್ರೀಯ ಬಿಜೆಪಿಯ ಪ್ರಭಾವಿ ನಾಯಕ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್‌ ಶಾ(Amit Shah) ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ಸರ್ಕಾರಿ ನಿವಾಸದಲ್ಲಿ ನಡೆಸಲಿರುವ ‘ಭೋಜನ ಕೂಟ ರಾಜಕೀಯ’ ತೀವ್ರ ಕುತೂಹಲ ಮೂಡಿಸಿದೆ.

ಮಂಗಳವಾರ ಮಧ್ಯಾಹ್ನ ಬೊಮ್ಮಾಯಿ ಅವರ ನಿವಾಸದಲ್ಲಿ ಅಮಿತ್‌ ಶಾ ಅವರ ಗೌರವಾರ್ಥ ಆಯೋಜಿಸಿರುವ ಭೋಜನ ಕೂಟದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌(Arun Singh), ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌(Nanli Kumar Kateel), ಸಚಿವರು, ಪಕ್ಷದ ಸಂಸದರು, ಶಾಸಕರು ಹಾಗೂ ಪ್ರಮುಖ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ಬೊಮ್ಮಾಯಿ ಬದಲಾವಣೆ ಖಚಿತನಾ? ಯಡಿಯೂರಪ್ಪ ಹೇಳಿದ್ದು ಹೀಗೆ...

ನಾಯಕತ್ವ, ಸಂಪುಟ ಕಸರತ್ತು, ಮುಂಬರುವ ರಾಜ್ಯಸಭಾ ಮತ್ತು ವಿಧಾನ ಪರಿಷತ್‌ ಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಈ ಭೋಜನ ಕೂಟ ಹಾಗೂ ಅದರ ಬೆನ್ನಲ್ಲೇ ನಡೆಯುವ ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ, ರಾಜ್ಯ ಪದಾಧಿಕಾರಿಗಳ ಸಭೆಯ ಬಳಿಕ ಸ್ಪಷ್ಟಚಿತ್ರಣ ಹೊರಬೀಳಬಹುದು. ಮುಂಬರುವ ಚುನಾವಣೆ ದೃಷ್ಟಿಯಿಂದ ಸರ್ಕಾರ ಮತ್ತು ಪಕ್ಷದ ಸಂಘಟನೆ ಹೇಗಿರಬೇಕು ಎಂಬುದರ ಬಗ್ಗೆಯೂ ಅವರು ದಿಕ್ಸೂಚಿ ತೋರಬಹುದು. ಜತೆಗೆ ಹಲವು ಅನುಮಾನಗಳಿಗೆ ತೆರೆ ಎಳೆಯುವ ನಿರೀಕ್ಷೆಯಿದೆ.

ಬೆಳಿಗ್ಗೆಯಿಂದ ರಾತ್ರಿವರೆಗೂ ಕಾರ್ಯಕ್ರಮ:

ಸೋಮವಾರ ತಡರಾತ್ರಿ ಅಮಿತ್‌ ಶಾ ಅವರು ದೆಹಲಿಯಿಂದ ಬೆಂಗಳೂರಿಗೆ(Bengaluru) ಆಗಮಿಸಿದರು. ಮಂಗಳವಾರ ಬೆಳಗ್ಗೆ ಹಲವು ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಜತೆಗೆ ಪಕ್ಷ ಸಂಘಟನೆಗೆ ಅವರು ಹೆಚ್ಚಿನ ಸಮಯ ಮೀಸಲಿಡಲಿದ್ದಾರೆ. ನಂತರ ರಾತ್ರಿ ದೆಹಲಿಗೆ ವಾಪಸಾಗಲಿದ್ದಾರೆ. ಆದರೆ, ಈ ಒಂದು ದಿನದ ಸರಣಿ ಸಭೆಗಳು ರಾಜ್ಯ ಬಿಜೆಪಿ(BJP) ಮಟ್ಟಿಗೆ ಮಹತ್ವದ ತಿರುವು ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಕಳೆದ ಹಲವು ತಿಂಗಳುಗಳಿಂದ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಬೊಮ್ಮಾಯಿ ಅವರು ದೆಹಲಿಗೆ ಎಡತಾಕುತ್ತಲೇ ಇದ್ದಾರೆ. ಆದರೆ, ಪಕ್ಷದ ವರಿಷ್ಠರು ಮಾತ್ರ ಹಸಿರು ನಿಶಾನೆ ತೋರುತ್ತಿಲ್ಲ. ಯಾವುದೇ ಗುಟ್ಟನ್ನೂ ಬಿಟ್ಟು ಕೊಡುತ್ತಿಲ್ಲ. ಸ್ವಲ್ಪ ಕಾಲ ಇರಿ ಎಂಬ ಮಾತನ್ನೇ ಹೇಳುತ್ತಿದ್ದಾರೆ ಹೊರತು ಏನು ಕಾರಣ ಎಂಬುದನ್ನು ಬಿಡಿಸಿ ಹೇಳುತ್ತಿಲ್ಲ.

ಕಳೆದ ತಿಂಗಳು ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳುವ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ಅವರು ಹೊಸಪೇಟೆಗೆ ಆಗಮಿಸಿದ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ಸುಮಾರು ಅರ್ಧ ಗಂಟೆ ಕಾಲ ಮಾತುಕತೆ ನಡೆಸಿದ್ದರು. ತಾವು ದೆಹಲಿಗೆ ತೆರಳಿ ಕರ್ನಾಟಕದ ಬಿಜೆಪಿ ಬಗ್ಗೆ ವಿಶೇಷ ಸಭೆ ನಡೆಸಲಾಗುವುದು. ಅಗತ್ಯ ಕಂಡು ಬಂದರೆ ನಿಮ್ಮನ್ನೂ ದೆಹಲಿಗೆ ಕರೆಸಲಾಗುವುದು ಎಂದು ಹೇಳಿ ಹೋದವರು ಮತ್ತೆ ಆ ಬಗ್ಗೆ ಚಕಾರ ಎತ್ತಿಲ್ಲ. ಅದಕ್ಕೂ ಮೊದಲು ಅಮಿತ್‌ ಶಾ ಅವರು ಬೆಂಗಳೂರಿಗೆ ಆಗಮಿಸಿ ಕೋರ್‌ ಕಮಿಟಿ ಸಭೆ ನಡೆಸಿದರೂ ಸಂಪುಟ ಬಗ್ಗೆ ಯಾವುದೇ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ. ಕಳೆದ ಶನಿವಾರ ಮುಖ್ಯಮಂತ್ರಿಗಳು ದೆಹಲಿಗೆ ಹೋದರೂ ವರಿಷ್ಠರ ಭೇಟಿಗೆ ಅವಕಾಶ ಸಿಗಲಿಲ್ಲ. ಈ ಬೆಳವಣಿಗೆಗಳು ಸಹಜವಾಗಿಯೇ ಕುತೂಹಲ ಮೂಡಿಸಿವೆ.

ಇದೀಗ ಖುದ್ದು ಅಮಿತ್‌ ಶಾ ಅವರೇ ಬೆಂಗಳೂರಿಗೆ ಆಗಮಿಸಿದ್ದಾರೆ. ಪಕ್ಷದ ಕೋರ್‌ ಕಮಿಟಿ, ರಾಜ್ಯ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಅವರ ನಿವಾಸದಲ್ಲಿ ಆಯೋಜಿಸುವ ಭೋಜನ ಕೂಟದಲ್ಲಿ ಭಾಗಿಯಾಗಲಿದ್ದಾರೆ. ಈಗಲಾದರೂ ಬಹುಕಾಲದಿಂದ ಮುಂದುವರೆಯುತ್ತಿರುವ ಕುತೂಹಲಕ್ಕೆ ತೆರೆ ಬೀಳಲಿದೆಯೇ ಎಂಬುದನ್ನು ಕಾದು ನೋಡಬೇಕು.

40ಕ್ಕೂ ಹೆಚ್ಚು ಬಗೆಯ ಖಾದ್ಯಗಳು

ನಗರದ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರ ಅಧಿಕೃತ ನಿವಾಸದಲ್ಲಿ ನಡೆಯಲಿರುವ ಭೋಜನ ಕೂಟದಲ್ಲಿ 40ಕ್ಕೂ ಹೆಚ್ಚು ಬಗೆಯ ಖಾದ್ಯಗಳು ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ಮುಖಂಡರನ್ನು ತಣಿಸಲಿವೆ. ಪಂಜಾಬಿ, ಗುಜರಾತಿ ಹಾಗೂ ದಕ್ಷಿಣ ಭಾರತೀಯ ಶೈಲಿಯ ಭೋಜನ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುಮಾರು 350ರಿಂದ 400 ಮಂದಿ ಭೋಜನ ಸ್ವೀಕರಿಸುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ.

ಅಸಮತೋಲನ ಸಮಾಜದಲ್ಲಿ ಪ್ರಗತಿ ಅಸಾಧ್ಯ: ಸಿಎಂ ಬಸವರಾಜ ಬೊಮ್ಮಾಯಿ

ನಾಯಕತ್ವ ಬದಲಾವಣೆ ಇಲ್ಲ: ಕಟೀಲ್‌, ಬಿಎಸ್‌ವೈ

ಶಿವಮೊಗ್ಗ/ಹೊಸಪೇಟೆ: ನಾಯಕತ್ವ ಬದಲಾವಣೆ ಕುರಿತ ಬಿಜೆಪಿ ನಾಯಕ ಬಿ.ಎಲ್‌.ಸಂತೋಷ್‌ ಹೇಳಿಕೆಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕಟೀಲ್‌ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yerdiyurappa) ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಕೇಂದ್ರ ಗೃಹಮಂತ್ರಿ ಅಮಿತ್‌ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಆದರೆ, ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗುವುದಿಲ್ಲ ಎಂದಿದ್ದಾರೆ.

ಇಂದು ಬಿಜೆಪಿ ಕೋರ್‌ ಕಮಿಟಿ ಸಭೆ: ಶಾ ಭಾಗಿ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ರಾಜ್ಯ ಬಿಜೆಪಿಯ ಕೋರ್‌ ಕಮಿಟಿ ಸಭೆ ಮತ್ತು ಪದಾಧಿಕಾರಿಗಳ ಸಭೆ ನಡೆಯಲಿದೆ. ಮುಂಬರುವ ಚುನಾವಣೆ ಗುರಿಯಾಗಿಸಿಕೊಂಡು ಪಕ್ಷ ಸಂಘಟನೆಯ ಬಗ್ಗೆ ಹಲವು ಸಲಹೆ ಸೂಚನೆಗಳನ್ನು ಅಮಿತ್‌ ಶಾ ನೀಡಲಿದ್ದಾರೆ. ಮಧ್ಯಾಹ್ನ 2.50ರಿಂದ ಸಂಜೆ 5 ಗಂಟೆವರೆಗೆ ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ಸುದೀರ್ಘ ಸಭೆ ನಡೆಯಲಿದ್ದು, ಸಂಘಟನೆ ಬಲಪಡಿಸುವ ಹಾದಿಯನ್ನು ವಿವರಿಸಲಿದ್ದಾರೆ ಎನ್ನಲಾಗಿದೆ.
 

Follow Us:
Download App:
  • android
  • ios