Asianet Suvarna News Asianet Suvarna News

ಅಸಮತೋಲನ ಸಮಾಜದಲ್ಲಿ ಪ್ರಗತಿ ಅಸಾಧ್ಯ: ಸಿಎಂ ಬಸವರಾಜ ಬೊಮ್ಮಾಯಿ

ಸಾಮಾಜಿಕ ನ್ಯಾಯ ಎನ್ನುವುದು ಭಾಷಣದ ಸರಕಾಗಬಾರದು. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವವರು ಏನು ಕೊಡುಗೆ ಕೊಟ್ಟಿದ್ದರು? ಕೆಲವರು ನಾವೇ ಸಾಮರ್ಥ್ಯವಿರುವವರು ಎಂಬ ಭ್ರಮೆಯಲ್ಲಿದ್ದರು. ಅಂತಹವರಿಗೆ ಜನರೇ ಅವರ ಸ್ಥಾನ ತೋರಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Progress in an imbalanced society is impossible says karnataka cm basavaraj bommai gvd
Author
Bangalore, First Published May 2, 2022, 3:15 AM IST

ಬೆಂಗಳೂರು (ಮೇ.02): ಸಾಮಾಜಿಕ ನ್ಯಾಯ ಎನ್ನುವುದು ಭಾಷಣದ ಸರಕಾಗಬಾರದು. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವವರು ಏನು ಕೊಡುಗೆ ಕೊಟ್ಟಿದ್ದರು? ಕೆಲವರು ನಾವೇ ಸಾಮರ್ಥ್ಯವಿರುವವರು ಎಂಬ ಭ್ರಮೆಯಲ್ಲಿದ್ದರು. ಅಂತಹವರಿಗೆ ಜನರೇ ಅವರ ಸ್ಥಾನ ತೋರಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದ್ದಾರೆ. ಮೈಸೂರು ರಸ್ತೆಯ ರಾಮಾನುಜ ಮಠದ ಆವರಣದಲ್ಲಿ ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ ಆಯೋಜಿಸಿದ್ದ ಕೃತಜ್ಞತಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪರೋಕ್ಷವಾಗಿ ಕಾಂಗ್ರೆಸ್‌ (Congress) ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿದರು.

ತಕ್ಕಡಿ ಸಮಾನವಾಗಿದ್ದಾಗ ಮಾತ್ರ ಸಮಾನತೆ ಸಾಧ್ಯ. ಈ ನಿಟ್ಟಿನಲ್ಲಿ ಒಂದು ಸರ್ಕಾರವಾಗಿ ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ಸಾಮಾಜಿಕ ನ್ಯಾಯ ಭಾಷಣದ ವಸ್ತುವಾಗಬಾರದು. ಈವರೆಗೂ ಭಾಷಣ ಮಾಡಿರುವವರು ಏನು ಸಾಮಾಜಿಕ ನ್ಯಾಯವನ್ನು ಕೊಟ್ಟಿದ್ದಾರೆ? ಯಾರಿಗೆ ನ್ಯಾಯ ಕೊಟ್ಟಿದ್ದೀರಿ. ಒಂದು ವರ್ಗಕ್ಕಾದರೂ ನ್ಯಾಯ ಕೊಟ್ಟಿದ್ದೀರಾ? ಯಾವುದೇ ವರ್ಗಕ್ಕಾಗಲಿ ಮೂಲಭೂತವಾಗಿ ಬೇಕಾಗಿರುವುದನ್ನು ಒದಗಿಸಿದರೆ ಅವರೇ ನ್ಯಾಯವನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಿದರು.

PSI Recruitment Scam: ಬಿರುಸು ಆಡಳಿತ ಮಾಡಿದರೆ ಡಿಕೆಶಿ ತಡೆದುಕೊಳ್ಳಲ್ಲ: ಸಿಎಂ ಬೊಮ್ಮಾಯಿ

ಕೃತಿಯಲ್ಲಿ ನನ್ನನ್ನು ಅಳೆಯಿರಿ: ಅಸಮತೋಲನವಿರುವ ಸಮಾಜದಲ್ಲಿ ಕ್ಷೋಭೆ ಉಂಟಾಗಿ ಪ್ರಗತಿ ಸಾಧ್ಯವಾಗುವುದಿಲ್ಲ. ಮಾತಿನಲ್ಲಿ ಅಲ್ಲ ಕೃತಿಯಲ್ಲಿ ನನ್ನನ್ನುಅಳೆಯಿರಿ. ಸರ್ಕಾರ ಮಾಡಿರುವ ಕೆಲಸಗಳ ರಿಪೊರ್ಚ್‌ ಕಾರ್ಡನ್ನು ಮುಂದಿಟ್ಟು ಸಕಾರಾತ್ಮಕ ಚಿಂತನೆಯೊಂದಿಗೆ ಜನರ ಮುಂದೆ ಬರಲಾಗುವುದು. ಇನ್ನೊಬ್ಬರನ್ನು ಹೀಗಳೆದು ನಕಾರಾತ್ಮಕತೆಯೊಂದಿಗೆ ವೋಟು ಕೇಳುವ ಕೆಲಸವನ್ನು ಮಾಡುವುದಿಲ್ಲ. ಸರ್ಕಾರ ಮಾಡಿರುವ ಕೆಲಸಗಳ ಸಾಮರ್ಥ್ಯಗಳ ಮೇಲೆ ಜನರಿಂದ ವೋಟು ಕೇಳುತ್ತೇವೆ. ನಮ್ಮನ್ನು ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ದುರ್ಬಲ ವರ್ಗದ ಜನರಿಗೆ ಶಕ್ತಿಯ ಜೊತೆ ಸಂಸ್ಕಾರದ ಅಗತ್ಯವಿದೆ. ಅದನ್ನು ಕೊಡಲು ಮಠಗಳು ಸಿದ್ಧವಾಗಿವೆ. ಹೀಗಾಗಿ ಮಠಗಳ ಮೂಲಕ ಸಂಸ್ಕಾರ, ವಿದ್ಯೆ ಸಿಗಲಿ ಎನ್ನುವ ಮಹದಾಸೆಯಿಂದ ಬಜೆಟ್‌ನಲ್ಲಿ ಅನುದಾನ ನೀಡುವ ಕೆಲಸವನ್ನು ಮಾಡಿದ್ದೇನೆ. ಒಳ್ಳೆಯ ಕೆಲಸ ಮಾಡುತ್ತಿರುವ ಮಠಗಳಿಗೆ ಸರ್ಕಾರದ ಸಹಕಾರವಿರುತ್ತದೆ. ಅರ್ಹತೆ ಇರುವವರಿಗೆ, ಮುಂದೆ ಬರಬೇಕೆನ್ನುವ ಹಂಬಲವಿರುವವರಿಗೆ ಸರ್ಕಾರ ಬೆನ್ನೆಲುಬಾಗಿ ನಿಲ್ಲಲಿದೆ. ಎಲ್ಲಾ ವರ್ಗದ ಜನರನ್ನು ಸರಿ ಸಮಾನವಾಗಿ ನೋಡಿಕೊಳ್ಳುವ ಕೆಲಸವನ್ನು ಮಾಡಲಾಗುವುದು ಎಂದು ಹೇಳಿದರು.

ಕಾಗಿನೆಲೆ ಕನಕ ಗುರುಪೀಠದ ಅಧ್ಯಕ್ಷರಾದ ನಿರಂಜನಾನಂದಪುರಿ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಾದಾರ ಚನ್ನಯ್ಯ ಶ್ರೀಗಳು, ಭಗೀರಥ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ರಾಮಾನುಜ ಸ್ವಾಮೀಜಿ ಸೇರಿದಂತೆ ಹಲವರು ಸ್ವಾಮೀಜಿಗಳು ಹಾಜರಿದ್ದರು. ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟದೊಂದಿಗೆ ಹೆಚ್ಚು ಗುರುತಿಸಿಕೊಂಡಿದ್ದ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಗೈರು ಹಾಜರಾಗಿದ್ದರು.

ಎಲ್ಲ ಸಮುದಾಯದ ಸಿಎಂ: ಸಚಿವ ಬೈರತಿ ಬಸವರಾಜು ಮಾತನಾಡಿ, ಮುಂದೆ ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕು. ಅದಕ್ಕೆ ಸ್ವಾಮೀಜಿಗಳ ಆಶೀರ್ವಾದ ಬೇಕು. ಬಸವರಾಜ ಬೊಮ್ಮಾಯಿ ಅವರು ಎಲ್ಲಾ ಸಮುದಾಯಗಳ ಮುಖ್ಯಮಂತ್ರಿಗಳಾಗಿದ್ದಾರೆ. ಎಲ್ಲಾ ಸಮುದಾಯಗಳನ್ನೂ ಸಮಾನವಾಗಿ ಕಾಣುತ್ತಾರೆ. ಅವರಿಗೆ ಆಶೀರ್ವಾದ ನೀಡಿ ಎಂದು ಮನವಿ ಮಾಡಿದರು. ಸಚಿವ ಮುನಿರತ್ನ ಮಾತನಾಡಿ, ಮುಖ್ಯಮಂತ್ರಿಗಳದ್ದು ತಾಯಿ ಹೃದಯ. ಅವರ ಮನಸು, ಕಷ್ಟಕ್ಕೆ ನೆರವಾಗುವ ಗುಣ, ಶೋಷಿತರ ರಕ್ಷಣೆ ಮಾಡುವ ಹೃದಯ ಸದಾ ಹಿಂದುಳಿದ, ಶೋಷಿತ ವರ್ಗಗಳ ಪರ ಮಿಡಿಯುತ್ತಿರುತ್ತದೆ. ಹೀಗಾಗಿಯೇ ಹಿಂದುಳಿದ, ದಲಿತ ಸಮುದಾಯಗಳ ಮಠಗಳನ್ನು ಗುರುತಿಸಿ ಅನುದಾನ ಕೊಟ್ಟಿದ್ದಾರೆ ಎಂದರು.

ಕಾಮನ್‌ ಮ್ಯಾನ್‌ ಬೊಮ್ಮಾಯಿ: ಇದಕ್ಕೂ ಮೊದಲು ಸ್ವಾಮೀಜಿಗಳ ಸಮಾನವಾಗಿ ಹಾಕಲಾಗಿದ್ದ ದೊಡ್ಡ ಗಾತ್ರದ ಆಸನದಲ್ಲಿ ಕೂರಲು ಮುಖ್ಯಮಂತ್ರಿಗಳು ನಿರಾಕರಿಸಿದರು. ನಿರಂಜನಾನಂದಪುರ ಸ್ವಾಮೀಜಿ ಅವರು ಒತ್ತಾಯ ಮಾಡಿದರೂ ಸಾಮಾನ್ಯ ಕುರ್ಚಿಯಲ್ಲಿ ಕುಳಿತರು. ಇದಕ್ಕೆ ಸ್ವಾಮೀಜಿ, ನಮ್ಮ ಸಿಎಂ ಕಾಮನ್‌ ಮ್ಯಾನ್‌ ಎಂದು ಪ್ರಶಂಸಿಸಿದರು.

Cabinet Expansion: ಬೊಮ್ಮಾಯಿ ದಿಲ್ಲಿಗೆ: ಆದರೆ, ಸಚಿವ ಸಂಪುಟ ಸಮಾಲೋಚನೆ ಮೇ 3ಕ್ಕೆ?

ಸ್ವಾಮೀಜಿಗಳು ಇತ್ತೀಚೆಗೆ ದೊಡ್ಡ ಆಶೀರ್ವಾದ ಮಾಡುತ್ತಿಲ್ಲ: ಕಾಗಿನೆಲೆಯ ಶ್ರೀಗಳು ಸದಾ ನನಗೆ ಮಾರ್ಗದರ್ಶನ ಮಾಡಿದ್ದಾರೆ. ಅಧಿಕಾರ ಇರಲಿ ಇಲ್ಲದಿರಲಿ ನನಗೆ ಶಕ್ತಿ ತುಂಬಿದ್ದಾರೆ. ಅವರ ಹಾಗೂ ನನ್ನ ಸಂಬಂಧ ಗುರು ಹಾಗೂ ಭಕ್ತನ ಸಂಬಂಧ. ಸ್ವಾಮೀಜಿಗಳು ಮೊದಲೇ ಚೆನ್ನಾಗಿ ಆಶೀರ್ವಾದ ಮಾಡುತ್ತಿದ್ದರು. ಇತ್ತೀಚೆಗೆ ದೊಡ್ಡ ಆಶೀರ್ವಾದ ಮಾಡುತ್ತಿಲ್ಲ. ಆದರೂ ಯಾವತ್ತೂ ಅವರ ಆಶೀರ್ವಾದ ನನ್ನ ಮೇಲಿದೆ ಎಂಬ ನಂಬಿಕೆಯಿಂದಲೇ ನಾನು ಗಟ್ಟಿಹೆಜ್ಜೆ ಇಡುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Follow Us:
Download App:
  • android
  • ios