ಬೊಮ್ಮಾಯಿ ಬದಲಾವಣೆ ಖಚಿತನಾ? ಯಡಿಯೂರಪ್ಪ ಹೇಳಿದ್ದು ಹೀಗೆ...
* ಬಿಎಲ್ ಸಂತೋಷ್ ಮಹತ್ವದ ಸುಳಿವು
* ಬಸವರಾಜ ಬೊಮ್ಮಾಯಿ ಬದಲಾವಣೆ ಖಚಿತನಾ?
* ಮಾಜಿ ಸಿಎಂ ಯಡಿಯೂರಪ್ಪ ಹೇಳುವುದೇನು?
ಶಿವಮೊಗ್ಗ, (ಮೇ.02): ರಾಜ್ಯ ಸಚಿವ ಸಂಪುಟ ಸರ್ಕಸ್‌ಗೆ (Cabinet Expansion) ತೆರೆಮರೆಯಲ್ಲಿ ಚಟುವಟಿಕೆಗಳು ಶುರುವಾಗಿವೆ. ಇದರ ಜೊತೆಗೆ ಸಿಎಂ ಬದಲಾವಣೆ ಬಗ್ಗೆ ಮಾತುಗಳು ಕೇಳಿಬಂದಿದ್ದು, ಮುಂದಿನ ಚುನಾವಣೆಯಲ್ಲಿ ಮಹಾ ಬದಲಾವಣೆ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ನಾಯಕತ್ವ ಬದಲಾವಣೆ ವಿಚಾರವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ, ಬೊಮ್ಮಾಯಿ ಒಳ್ಳೆ ಕೆಲಸ ಮಾಡ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ಅಮಿತ್ ಶಾ ಬೆಂಗಳೂರಿಗೆ ಬರ್ತಾ ಇದ್ದಾರೆ. ರಾಜ್ಯದ ರಾಜಕೀಯ ಪರಿಸ್ಥಿತಿಯನ್ನ ತಿಳಿಯಲು ಅವರು ರಾಜ್ಯಕ್ಕೆ ಬರ್ತಾ ಇದ್ದಾರೆ ಅವರನ್ನ ನಾನು ಸಹ ಭೇಟಿಯಾಗುತ್ತಿದ್ದೇನೆ. ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆಗೆ 11 ತಿಂಗಳಿವೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ರಾಜ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಲು ಬರ್ತಾ ಇದ್ದಾರೆ, ಬಿಜೆಪಿ ಈಗಾಗಲೇ 150 ಸ್ಥಾನ ಗುರಿಯಿಟ್ಟುಕೊಂಡು ಮುಂದು ಸಾಗುತ್ತಿದೆ.ಇದಕ್ಕೆ ಪೂರಕವಾಗಿ ಗುರಿ ಮುಟ್ಟಲು ಏನೇನು ಮಾಡಬೇಕು ಎಂಬುದನ್ನ ಸಲಹೆ ನೀಡಲು ಅಮಿತ್ ಶಾ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದರು.
ಶಾ ಆಗಮನಕ್ಕೂ ಮುನ್ನವೇ ಸಂತೋಷ್ ಎಂಟ್ರಿ, ಬಿಜೆಪಿಯಲ್ಲಿ ಮಹತ್ವದ ಬದಲಾವಣೆಯ ಸುಳಿವು
ಸಿಎಂ ಬೊಮ್ಮಾಯಿ ಬದಲಾವಣೆ ಇಲ್ಲ, ಸಿಎಂ ಆಗಿ ಬಸವರಾಜ ಬೊಮ್ಮಾಯಿ ಚೆನ್ನಾಗಿ ಕೆಲಸ ಮಾಡ್ತಾ ಇದ್ದಾರೆ. ಈ ಬಾರಿ ಚುನಾವಣೆಗೆ ಹಾಲಿ ಶಾಸಕರಿಗೆ ಟಿಕೆಟ್ ಸಿಗುವ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ, ಅದರ ಬಗ್ಗೆ ಹೆಚ್ಚು ಚರ್ಚೆ ಮಾಡೊಲ್ಲ ಅದನ್ನ ಪಕ್ಷದ ಮುಖಂಡರು ನೋಡಿಕೊಳ್ಳುತ್ತಾರೆ. ಬಿಜೆಪಿ ಗುರಿ ತಲುಪಲು ಸಾಧ್ಯವಿಲ್ಲವೆಂದು ಆಂತರಿಕ ಸಮೀಕ್ಷೆಯಲ್ಲಿ ತಿಳಿದು ಬಂದಿದೆ, ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನಾನು ಮತ್ತು ಪಕ್ಷದ ಮುಖಂಡರು ಪ್ರತಿ ಜಿಲ್ಲೆಗೆ ಹೋಗಿ ಕಾರ್ಯಕರ್ತರ ಜೊತೆ ಸಮಾಲೋಚನೆ ಮಾಡಲಿದ್ದೇವೆ, ಪ್ರತಿ ಬೂತ್ ಅನ್ನು ಬಲಪಡಿಸಲಾಗುವುದು. ಬೂತ್ ಗೆದ್ದರೆ ದೇಶ ಗೆಲ್ಲಲಿದ್ದೇವೆ. ಈ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ಮಾಡಲಿದ್ದೇವೆ ಎಂದು ತಿಳಿಸಿದರು.
ಬೊಮ್ಮಾಯಿ ಬೆನ್ನಿಗೆ ನಿಲ್ತಾರಾ ಬಿಎಸ್‌ವೈ?
ಯೆಸ್...ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ನಾಯಕತ್ವ ಬದಲಾವಣೆಯ ಸುಳಿವು ಕೊಟ್ಟಿದ್ದಾರೆ. ಅವರ ಮಾತಿನಂತೆ ಬೊಮ್ಮಾಯಿ ಬದಲಾವಣೆ ಖಚಿತವಾದ್ರೆ, ಬಿಎಸ್ ಯಡಿಯೂರಪ್ಪ ಬೊಮ್ಮಾಯಿ ಬೆಂಬಲಕ್ಕೆ ನಿಲ್ಲುವ ಸಾಧ್ಯತೆಗಳಿವೆ. ಯಾಕಂದ್ರೆ ತಮ್ಮ ಕುರ್ಚಿಯನ್ನು ಬೊಮ್ಮಾಯಿಗೆ ಕೊಡಿಸಿದ್ದಾರೆ. ಇದೀಗ ಬೊಮ್ಮಾಯಿ ಬದಲಾವಣೆ ಮಾತುಗಳು ಕೇಳಿಬಂದಿದ್ದರಿಂದ ಬಿಎಸ್‌ವೈ ನಿಲುವು ಏನು ಎನ್ನುವುದು ಕುತೂಹಲ ಮೂಡಿಸಿದೆ. ಒಂದು ವೇಳೆ ಬೊಮ್ಮಾಯಿ ಬದಲಾವಣೆ ಅನಿರ್ವಾಯ ಎಂದು ಹೈಕಮಾಂಡ್ ಹೇಳಿದ್ರೆ, ಮುಂದಿನ ಸಿಎಂ ಯಾರು ಆಗ್ತಾರೆ ಎನ್ನುವುದು ಸಹ ಕುತೂಹಲ ಮೂಡಿಸಿದೆ.