* ಶೆಟ್ಟರ್ ಸಿಎಂ ಆಗಿದ್ದಾಗ 3 ಡಿಸಿಎಂ ಸೃಷ್ಟಿಸಿದ್ದರೂ ಲಾಭವಾಗಿರಲಿಲ್ಲ* ಅಮಿತ್ ಶಾ ಭೇಟಿ ವೇಳೆಯೂ ಚರ್ಚೆ ಆಗಿಲ್ಲ* ಡಿಸಿಎಂ ಪ್ರಸ್ತಾಪವಿಲ್ಲ
ಬೆಂಗಳೂರು(ಮೇ.05): ‘ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸ್ಪಷ್ಟಪಡಿಸಿದ್ದಾರೆ.
ಬುಧವಾರ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರೊಂದಿಗೆ ಚರ್ಚೆ ವೇಳೆ ಡಿಸಿಎಂ(DCM) ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ ಪ್ರಸ್ತಾಪವಾಗಿಲ್ಲ. ಇದೆಲ್ಲ ಮಾಧ್ಯಮಗಳಲ್ಲಿ ಬಂದಿರುವ ವಿಷಯ ಅಷ್ಟೇ ಎಂದು ಹೇಳಿದರು. ಇದೇ ವೇಳೆ ಸಂಪುಟ ಪುನಾರಚನೆ(Cabinet Expansion) ಮಾಡಿದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಮಾಡುವ ಪ್ರಸ್ತಾಪ ಸದ್ಯಕ್ಕಂತೂ ಇಲ್ಲ ಎಂದು ಆಡಳಿತಾರೂಢ ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.
‘ಈ ಹಿಂದೆ 2013ರ ವಿಧಾನಸಭಾ ಚುನಾವಣೆಗೂ ಒಂದು ವರ್ಷ ಮೊದಲು ಜಗದೀಶ್ ಶೆಟ್ಟರ್(Jagadish Shettar) ಅವರು ಮುಖ್ಯಮಂತ್ರಿಯಾದ ಬಳಿಕ ಮೂರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲಾಗಿತ್ತು. ಆದರೆ, ಬಳಿಕ ಅದರಿಂದ ಚುನಾವಣೆಯಲ್ಲಿ ಯಾವುದೇ ರೀತಿಯಲ್ಲೂ ನೆರವಾಗಲಿಲ್ಲ. ಹೋಗಲಿ ಆಡಳಿತದಲ್ಲಾದರೂ ಅನುಕೂಲವಾಗಬಹುದು ಎಂದರೆ ಅದೂ ಆಗಲಿಲ್ಲ. ಜಾತಿವಾರು ಮೂವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದರೂ ಅದು ಮತದಾರರ ಮೇಲೆ ಪ್ರಭಾವ ಬೀರಲಿಲ್ಲ. ಹೀಗಾಗಿ, ಇದೀಗ ಮುಂದಿನ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಉಳಿದಿರುವಾಗ ಮತ್ತೆ ಹೊಸದಾಗಿ ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸುವುದು ಪ್ರಯೋಜನವಾಗುವುದಿಲ್ಲ’ ಎಂದು ಪಕ್ಷದ ಹಿರಿಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
News Hour ಬೊಮ್ಮಾಯಿ ಸರ್ಕಾರದ ಸರ್ವೇ ರಿಪೋರ್ಟ್, ಹೈಕಮಾಂಡ್‌ನಿಂದ ಬಂತು ಖಡಕ್ ಸೂಚನೆ!
ಮಂಗಳವಾರ ಅಮಿತ್ ಶಾ ಅವರೊಂದಿಗೆ ರಾಜ್ಯ ನಾಯಕರ ಮಾತುಕತೆ ನಡೆದಿದ್ದು ಕೇವಲ ಕೆಲವು ನಿಮಿಷಗಳು ಮಾತ್ರ. ಅದು ಆಡಳಿತ ಮತ್ತು ಪಕ್ಷ ಸಂಘಟನೆ ಬಗ್ಗೆ. ಹೆಚ್ಚಿನ ಸಮಯ ವಿವಿಧ ಸಮಾರಂಭಗಳಲ್ಲೇ ಕಳೆದು ಹೋಯಿತು. ಹೀಗಿರುವಾಗ ಹೊಸದಾಗಿ ಡಿಸಿಎಂ ಹುದ್ದೆ ಸೃಷ್ಟಿಸುವ ವಿಷಯ ಪ್ರಸ್ತಾಪವೇ ಆಗಿಲ್ಲ. ಅಮಿತ್ ಶಾ ಅವರೂ ಈ ಬಗ್ಗೆ ಏನನ್ನೂ ಹೇಳಿಲ್ಲ ಎನ್ನಲಾಗಿದೆ.
ಡಿಸಿಎಂ ಪ್ರಸ್ತಾಪವಿಲ್ಲ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆ ವೇಳೆ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ ಪ್ರಸ್ತಾಪವಾಗಿಲ್ಲ. ಇದೆಲ್ಲ ಮಾಧ್ಯಮಗಳಲ್ಲಿ ಬಂದಿರುವ ವಿಷಯ ಅಷ್ಟೇ. ಈ ಬಗ್ಗೆ ಪಕ್ಷದಲ್ಲೂ ಚರ್ಚೆಯಾಗಿಲ್ಲ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆಡಳಿತಕ್ಕೆ ಬೊಮ್ಮಾಯಿ ಚುರುಕು
ಚುನಾವಣೆ, ರಾಜಕೀಯ ನಮಗೆ ಬಿಡಿ, ನೀವು ಆಡಳಿತ ನೋಡಿಕೊಳ್ಳಿ ಎಂದು ರಾಷ್ಟ್ರೀಯ ಬಿಜೆಪಿಯ ಪ್ರಭಾವಿ ನಾಯಕ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಡಳಿತ ಚುರುಕುಗೊಳಿಸುವತ್ತ ಗಮನ ಹರಿಸಿದ್ದಾರೆ.
ಬಜೆಟ್‌ನಲ್ಲಿ ಮಾಡಿರುವ ಘೋಷಣೆಗಳ ಅನುಷ್ಠಾನಕ್ಕೆ ಮತ್ತಷ್ಟುವೇಗ ನೀಡಲು ತೀರ್ಮಾನಿಸಿರುವ ಬೊಮ್ಮಾಯಿ ಅವರು ಬುಧವಾರ ಹಲವು ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳ ಜತೆ ಪ್ರಗತಿ ಪರಿಶೀಲನೆ ನಡೆಸಿದರು. ಗುರುವಾರವೂ ವಿವಿಧ ಇಲಾಖೆಗಳ ಪರಿಶೀಲನೆ ಮುಂದುವರೆಸಲಿದ್ದಾರೆ. ಮುಂದಿನ ವಾರ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಲೂ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ.
Amit shah Visit ನೀವು ಆಡಳಿತ ನಡೆಸಿ ಉಳಿದಿದ್ದು ನಮಗೆ ಬಿಡಿ,ಬೊಮ್ಮಾಯಿಗೆ ಶಾ ಸಂದೇಶ!
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಂದಿನ ವಾರ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಸರ್ಕಾರದ ಯೋಜನೆಗಳ ಅನುಷ್ಠಾನ ಸೇರಿದಂತೆ ಇತರೆ ವಿಚಾರಗಳ ಕುರಿತು ಚರ್ಚೆ ನಡೆಸುತ್ತೇನೆ. ವಿವಿಧ ಇಲಾಖೆಗಳ ಕಾರ್ಯಕ್ರಮ, ಅಭಿವೃದ್ಧಿ ಕೆಲಸಗಳು ಮತ್ತು ಫಲಾನುಭವಿಗಳ ಆಯ್ಕೆಯಾಗಲು ಅಲ್ಲಿರುವ ಸಮಸ್ಯೆಗಳ ಕುರಿತು ಚರ್ಚೆ ಮಾಡಿ ಜಿಲ್ಲಾಮಟ್ಟದ ಆಡಳಿತಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಲಾಗುವುದು’ ಎಂದು ತಿಳಿಸಿದರು.
ಇಂದು ಯಾವ ಸಭೆ?:
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಜಲಸಂಪನ್ಮೂಲ, ಸಮಾಜ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ, ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ಜತೆ ಪರಿಶೀಲನಾ ಸಭೆ ನಡೆಸಿದರು. ಗುರುವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿಂದುಳಿದ ವರ್ಗಗಳ ಕಲ್ಯಾಣ, ಸಹಕಾರ ಇಲಾಖೆಯೊಂದಿಗೆ ಸಭೆ ನಡೆಸಲಿದ್ದಾರೆ. ಬಜೆಟ್ ಅನುಷ್ಠಾನವಾಗಲು ಆದೇಶಗಳನ್ನು ಹೊರಡಿಸುವುದು ಮೊದಲ ಹಂತವಾಗಿದೆ. ಹೀಗಾಗಿ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲು ಸಭೆಗಳನ್ನು ನಡೆಸಲಾಗುತ್ತಿದೆ.
‘ಸಂಬಂಧಪಟ್ಟ ಇಲಾಖೆಯ ಪ್ರಸ್ತಾವನೆ ತೆಗೆದುಕೊಂಡು ಹಣಕಾಸು ಇಲಾಖೆಯ ಅನುಮೋದನೆ ಪಡೆದು ಆದೇಶ ಪಡೆಯಬೇಕಾಗಿದೆ. ಈ ಕಾರ್ಯವು ಬಹುತೇಕ ಮುಗಿದಿದೆ. ಕೆಲವು ಕಾನೂನು ಮತ್ತು ತಾಂತ್ರಿಕ ಕಾರಣಕ್ಕೆ ಅನುಮೋದನೆ ನೀಡಬೇಕಾಗಿದೆ. ಅನುಮೋದನೆ ಸಿಕ್ಕಿರುವ ಪ್ರಸ್ತಾವನೆಗಳ ಅನುಷ್ಠಾನ ಮಾಡಲು ಕಾಲಮಿತಿ ನಿಗದಿ ಮಾಡುವ ಸಂಬಂಧ ಚರ್ಚೆ ನಡೆಸಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.
