ಸಿಎಂ ಬೊಮ್ಮಾಯಿ ಅವರದ್ದು ತಾಯಿ ಪ್ರೀತಿಯ ಸರ್ಕಾರ: ಸಚಿವ ಅಶೋಕ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ತಾಯಿ ಪ್ರೀತಿಯ ಸರ್ಕಾರ. ಸರ್ಕಾರದ ಸವಲತ್ತುಗಳನ್ನು ಮನೆಯ ಬಾಗಿಲಿಗೇ ತಲುಪಿಸುವ ಕ್ರಾಂತಿಕಾರಕ ಬದಲಾವಣೆಯನ್ನು ಸರ್ಕಾರ ತಂದಿದೆ. ಶೀಘ್ರದಲ್ಲೇ ಇನ್ನೂ ಒಂದು ಲಕ್ಷ ಜನರಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಬೆಂಗಳೂರು (ಮಾ.21): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ತಾಯಿ ಪ್ರೀತಿಯ ಸರ್ಕಾರ. ಸರ್ಕಾರದ ಸವಲತ್ತುಗಳನ್ನು ಮನೆಯ ಬಾಗಿಲಿಗೇ ತಲುಪಿಸುವ ಕ್ರಾಂತಿಕಾರಕ ಬದಲಾವಣೆಯನ್ನು ಸರ್ಕಾರ ತಂದಿದೆ. ಶೀಘ್ರದಲ್ಲೇ ಇನ್ನೂ ಒಂದು ಲಕ್ಷ ಜನರಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರು ಬಡವರ ಬಗ್ಗೆ ತಾಯಿಯ ಪ್ರೀತಿ ತೋರಿಸುತ್ತಿದ್ದಾರೆ. ಈಗ 5 ಸಾವಿರ ಜನರಿಗೆ ಹಕ್ಕುಪತ್ರ ವಿತರಿಸಲಾಗಿದ್ದು ಇನ್ನೂ ಒಂದು ಲಕ್ಷ ಜನರಿಗೆ ಶೀಘ್ರದಲ್ಲೇ ಹಕ್ಕುಪತ್ರ ನೀಡಲಾಗುವುದು.
ಇಂತಹ ಕ್ರಾಂತಿಕಾರಕ ಬದಲಾವಣೆಯನ್ನು ನಮ್ಮ ಸರ್ಕಾರ ತಂದಿದೆ ಎಂದು ಬಣ್ಣಿಸಿದರು. ಬಸವರಾಜ ಬೊಮ್ಮಾಯಿ ಅವರು ಕಾಮನ್ ಸಿಎಂ. ಬಡವರ ಶ್ರೇಯೋಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಕೆಲವು ತಾಂಡಾ, ಹಟ್ಟಿ, ಕಾಲೋನಿಗಳಿಗೆ ಹೆಸರೇ ಇರಲಿಲ್ಲ. ಇಂತಹವರಿಗೆ ಹಕ್ಕುಪತ್ರ ನೀಡಲಾಗಿದೆ. ಕೃಷ್ಣರಾಜ ಸಾಗರ ಜಲಾಶಯ ನಿರ್ಮಿಸಲು ಆಗಮಿಸಿದ್ದ 4 ಸಾವಿರ ಜನರಿಗೆ ನಿವೇಶನ, ಮನೆ ಇರಲಿಲ್ಲ. ಇವರಿಗೆ ಶ್ರೀರಂಗಪಟ್ಟಣ ಸಮೀಪದ ಗ್ರಾಮವೊಂದನ್ನು ಘೋಷಿಸಲಾಗಿದೆ. ಇದು ನಮ್ಮ ಸರ್ಕಾರದ ಬದ್ಧತೆ ಎಂದು ತಿಳಿಸಿದರು.
ಐದು ವರ್ಷ ಜೆಡಿಎಸ್-ಬಿಜೆಪಿಯಿಂದ ರಾಜ್ಯದಲ್ಲಿ ಕೆಟ್ಟ ಆಡಳಿತ: ಚಲುವರಾಯಸ್ವಾಮಿ
ಹೆಗಡೆ ನಂತರ ಸಚಿವರಿಗೆ ಸ್ವಾತಂತ್ರ್ಯ: ಕೋವಿಡ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಉಚಿತವಾಗಿ ವ್ಯಾಕ್ಸಿನ್ ನೀಡಿದರು. ಕೋವಿಡ್‌ನಿಂದ ಮೃತಪಟ್ಟಬಡವರಿಗೆ ಕೇಂದ್ರ ಸರ್ಕಾರ 50 ಸಾವಿರ ಮತ್ತು ರಾಜ್ಯ ಸರ್ಕಾರ ಒಂದು ಲಕ್ಷ ರು. ಪರಿಹಾರ ವಿತರಿಸಿತು. ರಾಮಕೃಷ್ಣ ಹೆಗಡೆಯವರ ನಂತರ ಸಚಿವರಿಗೆ ಪೂರ್ಣ ಸ್ವಾತಂತ್ರ್ಯ ನೀಡಿರುವುದು ಬಸವರಾಜ ಬೊಮ್ಮಾಯಿ ಅವರು ಮಾತ್ರ ಎಂದು ಪ್ರಶಂಸಿಸಿದರು.
ಮಾ.23ರಂದು ‘ಅಮೃತ ಕುರಿಗಾಹಿ’ ಮಂಜೂರಾತಿ ಪತ್ರ: ಕುರಿ ಮತ್ತು ಮೇಕೆ ಸಾಕಾಣಿಕೆದಾರರನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಘೋಷಿಸಿದ ‘ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ’ ಅಡಿ ಆಯ್ಕೆಯಾದ 10 ಸಾವಿರ ಫಲಾನುಭವಿಗಳಿಗೆ ಮಂಜೂರಾತಿ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಮಾ.23ರಂದು (ಗುರುವಾರ) ಬೆಂಗಳೂರಿನಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 10.30ಕ್ಕೆ ವಿಧಾನಸೌಧ ಮುಂಭಾಗ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸಚಿವರು ಮಂಜೂರಾತಿ ಪ್ರಮಾಣ ಪತ್ರ ನೀಡಲಿದ್ದಾರೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.
ಕುರಿ ಮತ್ತು ಉಣ್ಣೆ ಉತ್ಪಾದಕ ಸಹಕಾರ ಸಂಘಗಳಿಂದ ಆಯ್ಕೆಯಾದ ಅರ್ಹ 20 ಸಾವಿರ ಸದಸ್ಯರಿಗೆ 20 ಕುರಿ, ಒಂದು ಮೇಕೆ ಸಾಕಾಣಿಕೆ ಘಟಕ ಸ್ಥಾಪನೆಗೆ 1.75 ಲಕ್ಷ ರು. ನೀಡಲಾಗುವುದು. ಈ ಪೈಕಿ ಶೇ.50ರಷ್ಟುಸಾಲದ ರೂಪದಲ್ಲಿ, ಶೇ. 25 ಸಹಾಯಧನ, ಉಳಿದ ಶೇ. 15ರಷ್ಟನ್ನು ಫಲಾನುಭವಿ ವಂತಿಕೆ ರೂಪದಲ್ಲಿ ಭರಿಸಲಿದ್ದಾನೆ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಬಿಜೆಪಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಉರಿ: ಮಾಜಿ ಸಚಿವೆ ಉಮಾಶ್ರೀ
ಗೋವುಗಳ ದತ್ತು ಸ್ವೀಕಾರ ಸಮಾರಂಭ: ಪುಣ್ಯಕೋಟಿ ದತ್ತು ಯೋಜನೆಯಡಿ ಪುಣ್ಯಕೋಟಿ ಪೋರ್ಟಲ್‌ನಲ್ಲಿ ನೋಂದಣಿಯಾಗಿರುವ ಗೋವುಗಳ ದತ್ತು ಸ್ವೀಕಾರ ಕಾರ್ಯಕ್ರಮ ಮಾ.23ರಂದು ಮಧ್ಯಾಹ್ನ 2.30ಕ್ಕೆ ಪಶುಭವನ ಹಿಂಭಾಗದ ಕರ್ನಾಟಕ ಪಶುವೈದ್ಯಕೀಯ ಪರಿಷತ್ ಸಭಾಂಗಣದಲ್ಲಿ ನಡೆಯಲಿದೆ. ಈಗಾಗಲೇ 28 ಸಾವಿರಕ್ಕೂ ಹೆಚ್ಚು ಗೋವುಗಳು ನೋಂದಣಿಯಾಗಿದ್ದು, ಈವರೆಗೆ ಸಾರ್ವಜನಿಕರ ದೇಣಿಗೆಯಿಂದ 31.89 ಲಕ್ಷ ರು., ಕೆಎಂಎಫ್‌ನಿಂದ 23.07 ಲಕ್ಷ ರು., ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 3.92 ಲಕ್ಷ ರು. ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದಿಂದ 26.89 ಲಕ್ಷ ರು. ಸಂಗ್ರಹವಾಗಿದೆ. ನೋಂದಣಿಯಾಗಿರುವ ಗೋಶಾಲೆಗಳ ಖಾತೆಗಳಿಗೆ ಡಿಬಿಟಿ ಮೂಲಕ ನೇರವಾಗಿ ಹಣ ವರ್ಗಾವಣೆ ಮಾಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.