Jana Sankalpa Yatra: ಇಂದಿನಿಂದ ಬಿಜೆಪಿ ಜೋಡೆತ್ತು ಜನ ಸಂಕಲ್ಪ ಯಾತ್ರೆ ಪ್ರಾರಂಭ
* 50 ಕ್ಷೇತ್ರಗಳಲ್ಲಿ ಬೊಮ್ಮಾಯಿ, ಬಿಎಸ್‌ವೈ ಜಂಟಿ ಪ್ರವಾಸ
* ರಾಯಚೂರಲ್ಲಿ ಆರಂಭ, ಡಿ.25ಕ್ಕೆ ರಾಮನಗರದಲ್ಲಿ ತೆರೆ
* ರಾಹುಲ್ ಗಾಂಧಿ ಪಾದಯಾತ್ರೆಗೆ ಬಿಜೆಪಿಯಿಂದ ಟಕ್ಕರ್
ಬೆಂಗಳೂರು (ಅ.11): ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ರಾಜಕೀಯ ಪಕ್ಷಗಳು ಭರದಿಂದ ಸಿದ್ಧತೆ ಆರಂಭಿಸಿದ್ದು, ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ವೇಳೆಯಲ್ಲಿಯೇ ಬಿಜೆಪಿಯ ಜನಸಂಕಲ್ಪ ಯಾತ್ರೆ ಕೂಡ ಮಂಗಳವಾರ ಆರಂಭವಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಜಂಟಿಯಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಯಾತ್ರೆ ಸಂಚರಿಸಲಿದೆ. ಮಂಗಳವಾರ ರಾಯಚೂರು ಜಿಲ್ಲೆಯಿಂದ ಆರಂಭಗೊಳ್ಳುವ ಯಾತ್ರೆಯು ಡಿ.25ಕ್ಕೆ ರಾಮನಗರ ಜಿಲ್ಲೆಯಲ್ಲಿ ಅಂತ್ಯವಾಗಲಿದೆ.
ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡೇ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಡೆಸಿದೆ. ರಾಜ್ಯದಲ್ಲಿಯೂ ರಾಹುಲ್ ಗಾಂಧಿ ಯಾತ್ರೆ ಭರ್ಜರಿಯಾಗಿ ಸಾಗಿದ್ದು, ಅಭೂತಪೂರ್ವ ಜನಬೆಂಬಲವೂ ವ್ಯಕ್ತವಾಗುತ್ತಿದೆ. ಅದಕ್ಕೆ ಸ್ಪರ್ಧೆಯೊಡ್ಡಲು ಹಾಗೂ ಚುನಾವಣೆಯಲ್ಲಿ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ರಾಜ್ಯ ಪ್ರವಾಸ ಹಮ್ಮಿಕೊಂಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಿರಂತರ ಸಭೆ, ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ.
ಮಣಿಪಾಲ್ ಆಸ್ಪತ್ರೆಯಲ್ಲಿರುವ ಆನಂದ್ ಮಾಮನಿ ಮತ್ತು ಶ್ರೀಮಂತ ಇಲ್ಲಾಳ್ ಆರೋಗ್ಯ ವಿಚಾರಿಸಿದ ಸಿಎಂ
ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆಯುವ ಯಾತ್ರೆಯು ಆಡಳಿತಾರೂಢ ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್ ಶಾಸಕರ ಕ್ಷೇತ್ರದಲ್ಲಿಯೂ ಸಂಚರಿಸಲಿದ್ದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಗಳನ್ನು ನಡೆಸಲಾಗುವುದು. ಅಲ್ಲದೆ, ಬೃಹತ್ ಸಮಾವೇಶಗಳನ್ನು ಸಹ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಎರಡು ಕ್ಷೇತ್ರಗಳಂತೆ 50ಕ್ಕಿಂತ ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆ ಸಂಚರಿಸಲಿದೆ. ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಆರಂಭವಾಗುವ ಸಂಕಲ್ಪ ಯಾತ್ರೆಯು ದಿನಕ್ಕೆ ಎರಡು ವಿಧಾನಸಭಾ ಕ್ಷೇತ್ರಗಳಂತೆ ಸಂಚರಿಸಲಿದೆ. ಅಲ್ಲದೆ, ಎಸ್‌ಸಿ ಮೋರ್ಚಾ, ಎಸ್‌ಟಿ ಮೋರ್ಚಾ, ಮಹಿಳಾ ಮೋರ್ಚಾ ಸೇರಿದಂತೆ ಇತರೆ ಮೋರ್ಚಾಗಳ ಬೃಹತ್ ಸಮಾವೇಶಗಳನ್ನು ಆಯೋಜಿಸಲಾಗಿದೆ.
ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳವನ್ನು ಮುಂದಿಟ್ಟುಕೊಂಡು ಆ ಸಮುದಾಯಗಳ ಮತಗಳನ್ನು ಸೆಳೆಯಲು ಬಿಜೆಪಿ ಮುಂದಾಗಿದೆ. ಜತೆಗೆ ಇತರೆ ಸಮುದಾಯಗಳ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳುತ್ತಿರುವ ಬಗ್ಗೆ ಜನರ ಮನ ಗೆಲ್ಲಲು ಮುಂದಾಗಿದೆ. ನೀರಾವರಿ ಯೋಜನೆಗಳ ಜಾರಿ ಸೇರಿದಂತೆ ಇತರೆ ಅಭಿವೃದ್ಧಿ ಜನಪರ ಕಾರ್ಯಕ್ರಮಗಳನ್ನು ಮತ್ತು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಅಕ್ರಮಗಳನ್ನು ಮುಂದಿಟ್ಟುಕೊಂಡು ಯಾತ್ರೆಯ ವೇಳೆ ತಿರುಗೇಟು ನೀಡಲು ಬಿಜೆಪಿ ರಾಜಕೀಯ ರಣತಂತ್ರ ರೂಪಿಸಿದೆ. ಪಕ್ಷದ ಸಂಘಟನೆ ದೃಷ್ಟಿಯಿಂದ ಕಾರ್ಯಕರ್ತದ ಸರಣಿ ಸಭೆಗಳನ್ನು ನಡೆಸಲಿದೆ.
ಒಂದೆಡೆ ಕಾಂಗ್ರೆಸ್ ಜೋಡೋ ಯಾತ್ರೆ, ಮತ್ತೊಂದೆಡೆ ಬಿಜೆಪಿಯ ಸಂಕಲ್ಪ ಯಾತ್ರೆ ನಡೆಯಲಿದೆ. ಇದರ ನಡುವೆ, ನವೆಂಬರ್ ತಿಂಗಳಿನಿಂದ ಜೆಡಿಎಸ್‌ನ ರಥಯಾತ್ರೆ ಆರಂಭವಾಗಲಿದೆ. ಈ ವೇಳೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಆರೋಪ-ಪ್ರತ್ಯಾರೋಪ ಮತ್ತಷ್ಟು ತೀವ್ರವಾಗಲಿದೆ.
ಮೀಸಲಾತಿ ಹೆಚ್ಚಿಸಿದ್ದಕ್ಕೆ ಸಿಎಂ ಬೊಮ್ಮಾಯಿಗೆ ವಿವಿಧ ಮಠಾಧೀಶರಿಂದ ಅಭಿನಂದನೆ
50 ಸಾವಿರ ಜನರು ಭಾಗಿ ನಿರೀಕ್ಷೆ
- ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಗಿಲ್ಲೆಸುಗೂರಿನಲ್ಲಿ ಯಾತ್ರೆಗೆ ಚಾಲನೆ
- ಬಿಜೆಪಿಯ ಸಮಾವೇಶಕ್ಕೆ ಸಕಲ ಸಿದ್ಧತೆ ಪೂರ್ಣ. ಎಲ್ಲೆಡೆ ರಾರಾಜಿಸುತ್ತಿವೆ ಬ್ಯಾನರ್‌ಗಳು
- ಸಮಾವೇಶಕ್ಕಾಗಿ ಪ್ರೌಢಶಾಲಾ ಮೈದಾನದಲ್ಲಿ ಪೆಂಡಾಲ್ ಅಳವಡಿಕೆ, ವೇದಿಕೆ ನಿರ್ಮಾಣ
- ಸುಮಾರು 50 ಸಾವಿರ ಜನರು ಜನಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ
- ಬಳ್ಳಾರಿಯೇ ಜಿಂದಾಲ್ ವಿಮಾನ ನಿಲ್ದಾಣದಿಂದ ಆಗಮಿಸಲಿರುವ ಸಿಎಂ, ಯಡಿಯೂರಪ್ಪ
- ಮಧ್ಯಾಹ್ನ 12.15ಕ್ಕೆ ಯಾತ್ರೆಗೆ ಚಾಲನೆ. ಎಸ್ಸಿ, ಎಸ್ಟಿಮೀಸಲು ಹೆಚ್ಚಿಸಿದ್ದಕ್ಕೆ ಇಬ್ಬರಿಗೂ ಸನ್ಮಾನ
- ಸಮಾವೇಶ ಬಳಿಕ ಮಂತ್ರಾಲಯ ಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆವ ನಾಯಕರು