ಪ್ರಧಾನಿ ಮೋದಿ ಸ್ವಾಗತಿಸುವ ಗಣ್ಯರಲ್ಲಿ ಸಿಎಂ, ರಾಜ್ಯಪಾಲರೇ ಇಲ್ಲ!
ಚಂದ್ರಯಾನ-3 ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಬರ ಮಾಡಿಕೊಳ್ಳುವವರ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರ ಹೆಸರು ಇಲ್ಲ.
ಬೆಂಗಳೂರು (ಆ.26): ಚಂದ್ರಯಾನ-3 ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಬರ ಮಾಡಿಕೊಳ್ಳುವವರ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರ ಹೆಸರು ಇಲ್ಲ. ಶನಿವಾರ ಬೆಳಗ್ಗೆ ಎಚ್‌ಎಎಲ್ ವಿಮಾನ ನಿಲ್ದಾಣ ಹಾಗೂ ಇಸ್ಟ್ರಾಕ್ ಕೇಂದ್ರದಲ್ಲಿ ಪ್ರಧಾನಮಂತ್ರಿಗಳನ್ನು ಸ್ವಾಗತಿಸುವವರ ಪಟ್ಟಿಯನ್ನು ಪ್ರಧಾನಮಂತ್ರಿಗಳ ಕಚೇರಿಯು ಪ್ರಕಟಿಸಿದೆ.
ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಡಿಜಿ-ಐಜಿಪಿ ಅಲೋಕ್ ಮೋಹನ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ, ಬೆಂಗಳೂರು ವಿಭಾಗೀಯ ಆಯುಕ್ತ ಅಮ್ಲಾನ್ ಆದಿತ್ಯಾ ಬಿಸ್ವಾಸ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಸ್ವಾಗತ ಮಾಡಲಿದ್ದಾರೆ. ಇಸ್ಟ್ರಾಕ್ ಕೇಂದ್ರದಲ್ಲಿ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, ಯು.ಆರ್. ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ ಎಂ. ಶಂಕರನ್, ಇಸ್ಟ್ರಾಕ್ ನಿರ್ದೇಶಕ ಬಿ.ಎನ್. ರಾಮಕೃಷ್ಣ ಬರ ಮಾಡಿಕೊಳ್ಳಲಿದ್ದಾರೆ.
ಬೆಂಗಳೂರಿಗೆ ಮೋದಿ ಆಗಮನ ಹಿನ್ನೆಲೆ: ಇಸ್ರೋ ರಸ್ತೆ ಪೊಲೀಸ್ ‘ವಶ’
ಪ್ರಧಾನಮಂತ್ರಿಗಳು ರಾಜ್ಯಕ್ಕೆ ಆಗಮಿಸುವಾಗ ರೂಢಿ ಶಿಷ್ಟಾಚಾರದ ಪ್ರಕಾರ ವಿಮಾನ ನಿಲ್ದಾಣದ ಬಳಿ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರು ಸಹ ಸ್ವಾಗತ ಕೋರಲು ತೆರಳುತ್ತಿದ್ದರು. ಆದರೆ, ಶನಿವಾರ ಬೆಂಗಳೂರಿಗೆ ಆಗಮಿಸುತ್ತಿರುವ ನರೇಂದ್ರ ಮೋದಿ ಅವರನ್ನು ಬರ ಮಾಡಿಕೊಂಡು ಸ್ವಾಗತ ಕೋರುವವರ ಪಟ್ಟಿಯಲ್ಲಿ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರ ಹೆಸರು ಇಲ್ಲ. ಗ್ರೀಸ್ ಪ್ರವಾಸದಿಂದ ವಾಪಸಾಗುತ್ತಿದ್ದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಬೆಳಗ್ಗೆ 7.15 ಗಂಟೆಗೆ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಇಸ್ಟ್ರಾಕ್ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಚಂದ್ರಯಾನ -3 ಯಶಸ್ಸಿನ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆ. ಜತೆಗೆ ಪ್ರಗತಿ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಇಸ್ರೋದಿಂದ ಹೊಸ ಇತಿಹಾಸ ಸೃಷ್ಟಿ: ದೇಶಕ್ಕೆ ಒಬ್ಬ ಸಮರ್ಥ ನಾಯಕ ಸಿಕ್ಕಾಗ ದೇಶದ ಸಾಮಾನ್ಯ ಪ್ರಜೆ ತನ್ನ ನಾಯಕನ ಜೊತೆಗೂಡಿ ಇತಿಹಾಸ ಸೃಷ್ಟಿಸುವ ಕೆಲಸ ಮಾಡುತ್ತದೆ ಎಂದು ಬಿಜೆಪಿ ಮುಖಂಡ, ಮಧುಮೇಹ ತಜ್ಞ ಡಾಕ್ಟರ್ ಬಾಬುರಾಜೆಂದ್ರ ನಾಯಿಕ ಹೇಳಿದರು. ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಮುಂಭಾಗದಲ್ಲಿ ದೇಶ ರಕ್ಷಕರ ಪಡೆ ಐದನೇ ವಾರ್ಷಿಕೋತ್ಸವ ಹಾಗೂ ಚಂದ್ರಯಾನ ಮೂರು ವಿಕ್ರಂ ಲ್ಯಾಂಡರ್ ನೇರಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅಂತಹ ಜಗಮೆಚ್ಚಿದ ಧೀಮಂತ ನಾಯಕ ಮತ್ತು ಇಸ್ರೋ ವಿಜ್ಞಾನಗಳ ಕಾರ್ಯಸಿದ್ಧಿಯಿಂದ ಫಲಶ್ರುತಿಯಾಗಿ ನಮ್ಮ ನಿಮ್ಮಂಥ ಪ್ರತಿಯೊಬ್ಬರಿಗೂ ನಾನು ಕೂಡ ವಿಜ್ಞಾನಿ ಈ ಚಂದ್ರಯಾನದಲ್ಲಿ ನನ್ನದೂ ಕೂಡ ಪಾಲಿದೆ ಎಂಬುದನ್ನು ಪ್ರತಿ ಭಾರತೀಯರ ಮನಸ್ಸಿಗೆ ಮುಟ್ಟುವ ತರಹ ಕೆಲಸ ಮಾಡಿದ ಇಸ್ರೋಗೆ ಧನ್ಯವಾದಗಳು ಎಂದರು.
ಬೆಂಗಳೂರು ಇಸ್ರೋ ಕೇಂದ್ರಕ್ಕೆ ಇಂದು ಮೋದಿ: ಇಸ್ರೋ ವಿಜ್ಞಾನಿಗಳ ಭೇಟಿ
ಗೆಜ್ಜಿ ಕರಿಯರ್ ಅಕಾಡೆಮಿ ಸಂಸ್ಥಾಪಕ ಸುರೇಶ್ ಗೆಜ್ಜಿ ಮಾತನಾಡಿ, ಭಾರತ ದೇಶ ಐತಿಹಾಸಿಕ ಚಂದ್ರಯಾನ-3 ಕಾರ್ಯಾಚರಣೆಯಲ್ಲಿ ಯಶಸ್ಸು ಸಾಧಿಸಿದ್ದು ಭಾರತ ಇನ್ನು ಮುಂದೆ ಜಗದ್ಗುರು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. ಶಿಕ್ಷಕ ನಾರಾಯಣ ಬಾಬಾನಗರ ಮಾತನಾಡಿ, ಇಸ್ರೋ ವಿಜ್ಞಾನಿಗಳು ಚಂದ್ರನ ದಕ್ಷಿಣ ಧ್ರುವ ಮೇಲೆ ವಿಕ್ರಂ ಲ್ಯಾಂಡರ್ ಅನ್ನು ಇಳಿಸಿ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಬೇರೆ ದೇಶಗಳು ಸತತ ಪ್ರಯತ್ನ ಮಾಡಿದರೂ ಸಾಧ್ಯವಾಗಿರದ ಕೆಲಸವನ್ನು ಭಾರತೀಯ ವಿಜ್ಞಾನಿಗಳು ಮಾಡಿ ತೋರಿಸಿದ್ದಾರೆ ಎಂದರು.