ಬೆಂಗಳೂರು ಇಸ್ರೋ ಕೇಂದ್ರಕ್ಕೆ ಇಂದು ಮೋದಿ: ಇಸ್ರೋ ವಿಜ್ಞಾನಿಗಳ ಭೇಟಿ

‘ಚಂದ್ರಯಾನ-3’ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೋ ಸಂಸ್ಥೆಯ ವಿಜ್ಞಾನಿಗಳನ್ನು ಖುದ್ದು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. 

pm narendra modi to bengaluru on 26th to meet isro scientists gvd

ಬೆಂಗಳೂರು (ಆ.26): ‘ಚಂದ್ರಯಾನ-3’ ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೋ ಸಂಸ್ಥೆಯ ವಿಜ್ಞಾನಿಗಳನ್ನು ಖುದ್ದು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇದೇ ವೇಳೆ ಮೋದಿ ಭೇಟಿಯನ್ನೇ ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ವತಿಯಿಂದ ಆಯೋಜಿಸಲು ಉದ್ದೇಶಿಸಿದ್ದ ಒಂದು ಕಿ.ಮೀ. ರೋಡ್‌ ಶೋ ಕೊನೆ ಕ್ಷಣದಲ್ಲಿ ರದ್ದಾಗಿದೆ. ಇದಕ್ಕೆ ಸ್ಪಷ್ಟಕಾರಣ ತಿಳಿದು ಬಂದಿಲ್ಲ.

ಗ್ರೀಸ್‌ ಪ್ರವಾಸದಲ್ಲಿರುವ ಪ್ರಧಾನಿ ಅಲ್ಲಿಂದ ನೇರವಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಶನಿವಾರ ಬೆಳಗ್ಗೆ 6 ಗಂಟೆಯ ಸುಮಾರಿಗೆ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಮೋದಿ ಅವರನ್ನು ಸ್ವಾಗತಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಸರ್ಕಾರದ ಗೌರವಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಯವರನ್ನು ಬರಮಾಡಿಕೊಳ್ಳಲಿದ್ದಾರೆ. ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಪೀಣ್ಯದಲ್ಲಿನ ಇಸ್ರೋ ಕಚೇರಿಯವರೆಗೆ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ.

ಇಸ್ರೋ ವಿಜ್ಞಾನಿಗಳ ಭೇಟಿಗೆ ಶನಿವಾರ ಬೆಂಗಳೂರಿಗೆ ಪ್ರಧಾನಿ ಮೋದಿ: 1 ಕಿಮೀ ರೋಡ್​ ಶೋ

ವಿಮಾನ ನಿಲ್ದಾಣದ ಹೊರಗೆ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರಲು ಬಿಜೆಪಿ ಮುಖಂಡರು ಸೇರಿದಂತೆ ಕಾರ್ಯಕರ್ತರು ಜಮಾಯಿಸಲಿದ್ದಾರೆ. ಕಾರ್ಯಕರ್ತರು ನಿಲ್ಲಲು ಬ್ಯಾರಿಕೇಡ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಅಲ್ಲದೇ, ವೇದಿಕೆಯನ್ನು ನಿರ್ಮಿಸಲು ಸಹ ಬಿಜೆಪಿ ಸಿದ್ಧತೆ ಕೈಗೊಂಡಿದೆ. ಈ ಮೊದಲು ಮೋದಿ ಅವರ ರೋಡ್‌ ಶೋ ನಡೆಸಲು ಬಿಜೆಪಿ ತೀರ್ಮಾನಿಸಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅದನ್ನು ಕೈ ಬಿಡಲಾಗಿದೆ. ಬೆಳಗ್ಗೆ 7.15ರ ವೇಳೆಗೆ ಪೀಣ್ಯ ಇಸ್ರೋ ಕಚೇರಿಗೆ ಪ್ರಧಾನಿ ತೆರಳಲಿದ್ದಾರೆ. ಇಸ್ರೋ ಮುಖ್ಯಸ್ಥ ಸೋಮನಾಥ್‌ ಸೇರಿದಂತೆ ಚಂದ್ರಯಾನ ಯೋಜನೆಯಲ್ಲಿ ತೊಡಗಿಸಿಕೊಂಡ ವಿಜ್ಞಾನಿಗಳನ್ನು ಅಭಿನಂದಿಸಲಿದ್ದಾರೆ. 

ಬೆಳಗ್ಗೆ 8.30ರ ವೇಳೆಗೆ ದೆಹಲಿಗೆ ತೆರಳಲಿದ್ದಾರೆ. ಇಸ್ರೋ ಕಚೇರಿಯ ರಸ್ತೆಯ ಬದಿಯಲ್ಲಿ ಮೋದಿ ವೀಕ್ಷಿಸಲು ಜನತೆಗೆ ಅವಕಾಶ ನೀಡಲಾಗಿದೆ. ಅಲ್ಲಿ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ. ಇಸ್ರೋ ಕಚೇರಿಯ ಎದುರು ಸಹ ಮೋದಿ ಅವರನ್ನು ಸ್ವಾಗತಿಸಲು ಭರದ ಸಿದ್ಧತೆ ಕೈಗೊಳ್ಳಲಾಗಿದೆ.

ಚಂದ್ರ​ಯಾನ ಯಶಸ್ಸಿನ ಹಿಂದೆ ಪ್ರಧಾನಿ ಮೋದಿ ಪ್ರಬ​ಲ ಸ್ಫೂರ್ತಿ: ಸಂಸದ ರಾಘವೆಂದ್ರ

ಪ್ರಧಾನಿ ನರೇಂದ್ರ ಮೋದಿ ಆಗಮನ ಕುರಿತು ಮಾತನಾಡಿದ ದಾಸರಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರಾಜು, ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಬರುತ್ತಿದ್ದಾರೆ. ಕಳೆದ ಬಾರಿ ಮಂಗಳಯಾನದ ವೇಳೆಯಲ್ಲಿಯೂ ಮೋದಿ ಅವರು ವಿಜ್ಞಾನಿಗಳ ಜತೆ ಇದ್ದು ಪ್ರೋತ್ಸಾಹ ನೀಡಿದ್ದರು. ಶನಿವಾರ ಬೆಳಗ್ಗೆ ಎಚ್‌ಎಎಲ್‌ ವಿಮಾನ ನಿಲ್ದಾಣ ಬಳಿ ಬಿಜೆಪಿ ಕಾರ್ಯಕರ್ತರು ಮೋದಿ ಅವರಿಗೆ ಸ್ವಾಗತ ಕೋರಲಿದ್ದಾರೆ. ಅಲ್ಲಿಂದ ಜಾಲಹಳ್ಳಿ ಮಾರ್ಗವಾಗಿ ಇಸ್ರೋಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಸ್ಥಳೀಯ ಬಿಜೆಪಿ ನಾಯಕರು ಸೇರಿದಂತೆ 10ಕ್ಕೂ ಹೆಚ್ಚು ಶಾಸಕರು ಹಾಜರಿರಲಿದ್ದಾರೆ. ಇಸ್ರೋದಲ್ಲಿ ವಿಜ್ಞಾನಿಗಳ ಜತೆ ಪ್ರಧಾನಿಗಳು ಒಂದು ಗಂಟೆ ಕಾಲ ಕಳೆಯಲಿದ್ದಾರೆ ಎಂದರು.

Latest Videos
Follow Us:
Download App:
  • android
  • ios