ಪೀಣ್ಯದ ಇಸ್ರೋ ಕಚೇರಿಯ ರಸ್ತೆಯನ್ನು ‘ವಶ’ಕ್ಕೆ ಪಡೆದಿರುವ ಪೊಲೀಸರು ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಿದ್ದು, ಶುಕ್ರವಾರ ಬೆಳಿಗ್ಗೆ 9 ಗಂಟೆಯವರೆಗೂ ವಾಹನ, ಜನ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದಾರೆ.

ಬೆಂಗಳೂರು (ಆ.26): ಚಂದ್ರಯಾನ-3 ಯಶಸ್ವಿಗೊಳಿಸಿ ದೇಶದ ಕೀರ್ತಿಪಾತಾಕೆ ಹಾರಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪೀಣ್ಯದ ಇಸ್ರೋ ಕಚೇರಿಯ ರಸ್ತೆಯನ್ನು ‘ವಶ’ಕ್ಕೆ ಪಡೆದಿರುವ ಪೊಲೀಸರು ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಿದ್ದು, ಶುಕ್ರವಾರ ಬೆಳಿಗ್ಗೆ 9 ಗಂಟೆಯವರೆಗೂ ವಾಹನ, ಜನ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದಾರೆ.

ಪೀಣ್ಯದ ಚೊಕ್ಕಸಂದ್ರದಲ್ಲಿರುವ ಐ-ಸ್ಟ್ರ್ಯಾಕ್‌ (ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್‌ ಅಂಡ್‌ ಕಮಾಂಡ್‌ ನೆಟ್‌ವರ್ಕ್) ಕೇಂದ್ರಕ್ಕೆ ಶನಿವಾರ ಬೆಳಿಗ್ಗೆ 7 ಗಂಟೆಗೆ ಆಗಮಿಸುವ ನರೇಂದ್ರ ಮೋದಿ ಅವರು ವಿಜ್ಞಾನಿಗಳನ್ನು ಅಭಿನಂದಿಸಲಿದ್ದು, ಬಳಿಕ 8 ಗಂಟೆಯವರೆಗೂ ಸಭೆ ನಡೆಸಲಿದ್ದಾರೆ. ಆದ್ದರಿಂದ ಐ-ಸ್ಟ್ರ್ಯಾಕ್‌ ಕೇಂದ್ರದ ಪಕ್ಕದಲ್ಲಿರುವ ಹಲವು ಕಾರ್ಖಾನೆಗಳಿಗೆ ಬೆಳಗ್ಗೆ 9 ಗಂಟೆಯ ಬಳಿಕವೇ ಕೆಲಸ ಪ್ರಾರಂಭಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಇಸ್ರೋ ವಿಜ್ಞಾನಿಗಳ ಭೇಟಿಗೆ ಶನಿವಾರ ಬೆಂಗಳೂರಿಗೆ ಪ್ರಧಾನಿ ಮೋದಿ: 1 ಕಿಮೀ ರೋಡ್​ ಶೋ

ಜಾಲಹಳ್ಳಿ ಸರ್ಕಲ್‌ ಸಮೀಪದ ಸಿಸ್ಟಂ ವೃತ್ತದಿಂದ ಐ-ಸ್ಟ್ರ್ಯಾಕ್‌ ಕೇಂದ್ರ ಮುಂದೆ ಹಾದು ಹೋಗುವ ರಸ್ತೆಯಲ್ಲಿ ಶನಿವಾರ ಮೋದಿ ಅವರು ತೆರಳುವವರೆಗೂ ಸಾರ್ವಜನಿಕರು ಮತ್ತು ವಾಹನ ಸಂಚಾರ ನಿರ್ಬಂಧಿಸಲಾಗಿದೆ. ರಸ್ತೆಯ ಅಕ್ಕಪಕ್ಕವೂ ವಾಹನಗಳನ್ನು ಪಾರ್ಕಿಂಗ್‌ ಮಾಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಶುಕ್ರವಾರವೇ ಈ ರಸ್ತೆಯ ಎರಡೂ ಬದಿಯಲ್ಲಿ ಬ್ಯಾರಿಕೇಡ್‌ ಅಳವಡಿಸಿದ್ದು, ಬಿಗಿ ಪೊಲೀಸ್‌ ಬಂದೋಬಸ್‌್ತ ಮಾಡಲಾಗಿತ್ತು.

ಬಿಬಿಎಂಪಿಯಿಂದ ಸ್ವಚ್ಛತಾ ಕಾರ್ಯ: ಪ್ರಧಾನಿಗಳು ಆಗಮಿಸುವ ರಸ್ತೆ ಮತ್ತು ಪಾದಚಾರಿ ಮಾರ್ಗದಲ್ಲಿ ಯಾವುದೇ ತ್ಯಾಜ್ಯ ಇರದಂತೆ ಬಿಬಿಎಂಪಿ ಸಿಬ್ಬಂದಿ ಶುಕ್ರವಾರ ಸ್ವಚ್ಛತಾ ಕಾರ್ಯ ಕೈಗೊಂಡರು. ರಾಜರಾಜೇಶ್ವರಿ ನಗರ ಮತ್ತು ದಾಸರಹಳ್ಳಿ ವಲಯದ ನೂರಾರು ಪೌರ ಕಾರ್ಮಿಕರು ರಸ್ತೆ ಬದಿಯಲ್ಲಿದ್ದ ತ್ಯಾಜ್ಯ, ಬ್ಲ್ಯಾಕ್‌ ಸ್ಪಾಟ್‌ಗಳನ್ನು ತೆರವುಗೊಳಿಸಿದರು. ಎರಡು ರೋಡ್‌ ಸ್ವೀಪಿಂಗ್‌ ಮೆಷಿನ್‌(ಕಸ ಗುಡಿಸುವ ಯಂತ್ರ)ಗಳೂ ಸಹ ಸ್ವಚ್ಛತಾ ಕಾರ್ಯಕೈಗೊಂಡವು.

ಚಂದ್ರ​ಯಾನ ಯಶಸ್ಸಿನ ಹಿಂದೆ ಪ್ರಧಾನಿ ಮೋದಿ ಪ್ರಬ​ಲ ಸ್ಫೂರ್ತಿ: ಸಂಸದ ರಾಘವೆಂದ್ರ

ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಯಶವಂತಪುರದ ಗೋವರ್ಧನ್‌, ಮೆಟ್ರೋ ಸೇರಿದಂತೆ ಅಲ್ಲಲ್ಲಿ ಗುಡ್ಡೆ ಬಿದ್ದಿದ್ದ ಬಾಳೆಕಂದಿನ ತ್ಯಾಜ್ಯವನ್ನು ಸಹ ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದ್ದು ಕಂಡುಬಂತು. ಯಶವಂತಪುರ ಮೇಲ್ಸೇತುವೆಯ ರಸ್ತೆ ವಿಭಜಕದಲ್ಲಿ ಇರಿಸಿದ್ದ ಸಸಿಗಳ ಕುಂಡಗಳನ್ನೂ ಸಹ ಸ್ವಚ್ಛಗೊಳಿಸಿ ವ್ಯವಸ್ಥಿತವಾಗಿ ಇರಿಸಲಾಯಿತು.