ಕಾಂಗ್ರೆಸ್ ಮತ್ತು ಸಿಜೆಪಿ ಒಂದೇ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಿನ ಕಾಂಗ್ರೆಸ್ ದೇಶ ವಿರೋಧಿ ಪಕ್ಷವಾಗಿದ್ದು, ವಿದೇಶಿ ಟೂಲ್ ಕಿಟ್ ಭಾಗವಾಗಿರುವ ಸಿಜೆಪಿ ಮೂಲಕ ಸರ್ಕಾರ ಉರುಳಿಸಲು ಯತ್ನಿಸುತ್ತಿದೆ ಎಂದು ಆರೋಪ.
- ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಆಕ್ರೋಶ
-- -- - ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಆಕ್ರೋಶ
- ಈಗಿರೋದು ಸ್ವಾತಂತ್ರ್ಯ ಹೋರಾಟದ ಕಾಂಗ್ರೆಸ್ ಅಲ್ಲ
- ದೇಶ ವಿರೋಧಿ ಸೋನಿಯಾ-ರಾಹುಲ್ ಕಾಂಗ್ರೆಸ್ ಪಕ್ಷ
- ಸರ್ಕಾರ ಉರುಳಿಸಲು ಸಿಜೆಪಿಯಿಂದ ಪ್ರಯತ್ನ ನಡೆಸ್ತಿದೆ
- ಸಿಜೆಪಿಯ ಹುಟ್ಟು ವಿದೇಶಿ ಟೂಲ್ ಕಿಟ್ನ ಭಾಗ: ಆರೋಪ
ಬೆಂಗಳೂರು (ಅ.17): ‘ಸಿಜೆಪಿ-ಕಾಂಗ್ರೆಸ್ ಒಂದೇ ಎಂದು ಹೇಳುವ ಮೂಲಕ ಈಗ ಇರುವುದು ಸ್ವಾತಂತ್ರ್ಯ ಹೋರಾಟದ ಕಾಂಗ್ರೆಸ್ ಅಲ್ಲ. ದೇಶ ವಿರೋಧಿ ಸೋನಿಯಾ, ರಾಹುಲ್ ಕಾಂಗ್ರೆಸ್ ಎಂಬುದನ್ನು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎತ್ತಿ ತೋರಿಸಿದ್ದಾರೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರೇ ಕಾಂಗ್ರೆಸ್ ಮತ್ತು ಸಿಜೆಪಿ ಎರಡೂ ಒಂದೇ ಎಂದು ಹೇಳಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಭಾರತದ ಚುನಾಯಿತ ಸರ್ಕಾರವನ್ನು ಬುಡಮೇಲು ಮಾಡುವುದಕ್ಕೋಸ್ಕರವೇ ವಿದೇಶಿ ಟೂಲ್ ಕಿಟ್ ಭಾಗವಾಗಿ ಹುಟ್ಟಿದ್ದು ಈ ಸಿಜೆಪಿ ಎಂದು ಹರಿಹಾಯ್ದಿದ್ದಾರೆ.
ಸತ್ಯ ಮುಚ್ಚಿಡಲು ಸಾಧ್ಯವಿಲ್ಲ:
ಸತ್ಯವನ್ನು ಬಹಳ ದಿನ ಮುಚ್ಚಿಡಲು ಸಾಧ್ಯವಿಲ್ಲ. ಸುಳ್ಳನ್ನೇ ಹೇಳಿಕೊಂಡು ಹೆಚ್ಚು ದಿನ ಬದುಕಲೂ ಸಾಧ್ಯವಿಲ್ಲ ಎಂಬುದನ್ನು ನಿಮ್ಮ ಮಾತುಗಳೇ ಸಾರಿ ಹೇಳುತ್ತಿವೆ. ಕೇಂದ್ರದ ಬಿಜೆಪಿ ಸರ್ಕಾರವನ್ನು ಬೀಳಿಸುವುದೇ ಅಂತಿಮ ಗುರಿ ಎಂದು ಸಿಜೆಪಿ ಬೆಂಬಲಿಗ ನಟ ಪ್ರಕಾಶ್ ರಾಜ್ ಹಾಗೂ ಸಿಜೆಪಿ ಮತ್ತು ಕಾಂಗ್ರೆಸ್ನ ಇತರ ನಾಯಕರು ಹೇಳುತ್ತಿದ್ದಾರೆ. ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಬಂದಿದ್ದು ಅಮೆರಿಕದಿಂದ. ಸಿಜೆಪಿ ಬೆಂಬಲಿಗ ಧ್ರುವ ರಾಠಿ ಬಂದಿದ್ದು ಜರ್ಮನಿಯಿಂದ. ಇವರಿಬ್ಬರ ಬಳಿಕ ಬೆಳಕಿಗೆ ಬಂದ ನೇಹಾ ಬೋರಾ ಹೇಳುತ್ತಾಳೆ. ಈ ಹೋರಾಟದ ಐಡಿಯಾ ಸಿಕ್ಕಿದ್ದು ಬಾಂಗ್ಲಾದಲ್ಲಿ ಶುರುವಾದ ಇಸ್ಲಾಮಿಕ್ ಮೂಲಭೂತವಾದಿ ಬಂಡುಕೋರರಿಂದ ಎಂದು. ಅದೇ ನೇಹಾ ಬೋರ ಹೆಗಲ ಮೇಲೆ ಕೈಹಾಕಿ ನಿಂತು ರಾಹುಲ್ ಗಾಂಧಿ ಪೋಸ್ ಕೊಡುತ್ತಾರೆ ಎಂದು ವಿಜಯೇಂದ್ರ ಸಾಮಾಜಿಕ ಜಾಲತಾಣದ ಮೂಲಕ ಲೇವಡಿ ಮಾಡಿದ್ದಾರೆ.
ಸಿಎಎ ವಿರುದ್ಧ ಗದ್ದಲ ಮಾಡಿದವರು ಯಾರು?
ಸಿಎಎ ವಿರುದ್ಧ ಗದ್ದಲ ಮಾಡಿದವರು ಯಾರು? 370ನೇ ವಿಧಿ ರದ್ದತಿ ವಿರೋಧದ ಹಿಂದೆ ಇದ್ದವರು ಯಾರು? ನೀಟ್ ವಿರುದ್ಧ ಅನಗತ್ಯ ಗೊಂದಲ ಸೃಷ್ಟಿ ಮಾಡಿದವರು ಯಾರು? ಎಸ್ಐಆರ್ ವಿರುದ್ಧ ಅಪಪ್ರಚಾರ ಮಾಡುತ್ತಿರುವುದರ ಹಿಂದೆ ಇದ್ದವರು ಯಾರು, ಉದ್ದೇಶ ಏನು ಎಂಬುದೆಲ್ಲ ಈಗ ಬಟಾ ಬಯಲಾಗಿದೆ ಎಂದು ಟೀಕಿಸಿದ್ದಾರೆ.


