ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಅಧಿಕಾರ ದುರುಪಯೋಗಕ್ಕೆ ಮುಂದಾಗಿದೆ. ರಾಜ್ಯದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರಗಳೇ ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಕಿಡಿಕಾರಿದ ಸಂಸದ ಡಾ.ಕೆ.ಸುಧಾಕರ್ 

ಚಿಕ್ಕಬಳ್ಳಾಪುರ(ಜ.24): 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ನವರ ಸುಳ್ಳು ಭರವಸೆ, ಪ್ರಚಾರಗಳನ್ನು ನಂಬಿ ಆಡಳಿತ ನಡೆಸಲು ಅವಕಾಶ ಕೊಟ್ಟಿದ್ದಾರೆ. ಆದರೆ, ಕಾಂಗ್ರೆಸ್‌ ಸರ್ಕಾರ ಅಭಿವೃದ್ಧಿ ಶೂನ್ಯಗೊಳಿಸಿ, ಕೇವಲ ಮುಖ್ಯಮಂತ್ರಿ ಬದಲಾವಣೆ ಚರ್ಚೆಯಲ್ಲೇ ತಲ್ಲೀನವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ತಾಲೂಕಿನ ಅಲಾಸ್‌ ತಿಮ್ಮನಹಳ್ಳಿಯ ದೊಡ್ಡಮ್ಮ ದೇವಿಯ 41ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಅಧಿಕಾರ ದುರುಪಯೋಗಕ್ಕೆ ಮುಂದಾಗಿದೆ. ರಾಜ್ಯದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರಗಳೇ ಹೆಚ್ಚಾಗಿದ್ದು, ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಕಿಡಿಕಾರಿದರು.

ಜಮೀನು ದಾಖಲೆ ರಕ್ಷಣೆಗೆ ಭೂ ಸುರಕ್ಷಾ ಯೋಜನೆ ಸಹಕಾರಿ: ಸಚಿವ ಕೃಷ್ಣ ಬೈರೇಗೌಡ

ಕಾಂಗ್ರೆಸ್‌ ಆಡಳಿತದಲ್ಲಿ ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಇದ್ಯಾವುದನ್ನೂ ಲೆಕ್ಕಿಸದ ಸರ್ಕಾರವು ಯಾವಾಗ, ಯಾರು ಮುಖ್ಯಮಂತ್ರಿ ಆಗಬೇಕು, ಯಾವಾಗ ಮುಖ್ಯಮಂತ್ರಿಯನ್ನು ಕೆಳಗೆ ಇಳಿಸಬೇಕು ಎಂಬ ಚರ್ಚೆಯಲ್ಲೇ ಮುಳುಗಿದೆ ಎಂದು ಕುಟುಕಿದರು.

ಕ್ಷೇತ್ರವು ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಂಸದರು, ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ತಂದಿದ್ದ 100 ಕೋಟಿ ಅನುದಾನದ ಕಾಮಗಾರಿಗಳು ಮಾತ್ರ ಕ್ಷೇತ್ರದಲ್ಲಿ ಆಗಿವೆ. ಅದರ ಉದ್ಘಾಟನೆ, ಶಂಕು ಸ್ಥಾಪನೆ ಕಾಮಗಾರಿಗಷ್ಟೇ ಈ ಸರ್ಕಾರದ ಜನಪ್ರತಿನಿಧಿಗಳು ಹೋಗುತ್ತಿದ್ದಾರೆ. ಅದನ್ನು ಹೊರತುಪಡಿಸಿದರೆ ಕ್ಷೇತ್ರಕ್ಕೆ ಯಾವುದೇ ಅನುದಾನ ತಂದಿಲ್ಲ ಎಂದರು.

6 ತಿಂಗಳೊಳಗೆ ಡಿಕೆಶಿಗೆ ಮುಖ್ಯಮಂತ್ರಿ ಪಟ್ಟ: ಬಿಜೆಪಿ ಸಂಸದ ಸುಧಾಕರ್ ಸ್ಫೋಟಕ ಹೇಳಿಕೆ

ಉನ್ನತ ಶಿಕ್ಷಣ ಇಲಾಖೆ ಸಂಪೂರ್ಣ ವಿಫಲವಾಗಿದೆ. ಇತ್ತ ಅತಿಥಿ ಉಪನ್ಯಾಸಕರಿಗೂ ನ್ಯಾಯ ಒದಗಿಸಿಲ್ಲ. ಪ್ರತಿ ವರ್ಷ ಹಲವು ಕಾಲೇಜುಗಳಿಗೆ, ಹಲವು ಕೋರ್ಸ್‌ಗಳಿಗೆ ಹಣ ನಿಗದಿ ಮಾಡಿ, ಹಣ ಪಡೆಯುತ್ತಿದ್ದಾರೆ. ಈ ಮೂಲಕ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಪರೋಕ್ಷವಾಗಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ವಿರುದ್ಧ ಆರೋಪಿಸಿದರು.

ಶಾಸಕರು ಹೊಸದಾಗಿ ಹಳ್ಳಿ ನೋಡುತ್ತಿದ್ದಾರೆ. ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆ ಸಮೀಪಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಮುಖಭಂಗವಾಗಿದೆ. ಒಂದೇ ಬಾರಿಗೆ 36 ಸಾವಿರ ಮತಗಳು ವಿರುದ್ಧವಾಗಿ ಹೋಗಿವೆ ಎಂಬ ಕಾರಣಕ್ಕೆ ರಾತ್ರೋರಾತ್ರಿ ಭಯಬಿದ್ದು ಗ್ರಾಮಗಳಿಗೆ ಬೇಟಿ ನೀಡುವ ಕೆಲಸಕ್ಕೆ ಮುಂದಾಗಿದ್ದಾರೆ ಅಷ್ಟೇ, ಹೃದಯದಿಂದ ಕೆಲಸ ಮಾಡುತ್ತಿಲ್ಲ. ಹುಟ್ಟಿದಾಗಿನಿಂದಲೂ ನಾಟಕವೇ ಅವರ ವೃತ್ತಿಯಾಗಿದೆ. ನಟನೆಯ ಮುಖವನ್ನಿಟ್ಟುಕೊಂಡು ಇದೀಗ ಜನರ ಮುಂದೆ ಹೋಗುತ್ತಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವ‌ರ್ ಅವರ ನಮ್ಮೂರು, ನಮ್ಮ ಶಾಸಕ ಕಾರ್ಯಕ್ರಮದ ಕುರಿತು ವ್ಯಂಗ್ಯವಾಡಿದರು.