6 ತಿಂಗಳೊಳಗೆ ಡಿಕೆಶಿಗೆ ಮುಖ್ಯಮಂತ್ರಿ ಪಟ್ಟ: ಬಿಜೆಪಿ ಸಂಸದ ಸುಧಾಕರ್ ಸ್ಫೋಟಕ ಹೇಳಿಕೆ
ಡಿಕೆಶಿ ಸಿಎಂ ಆಗುವ ದಿನ ಹತ್ತಿರ ಬರುತ್ತಿವೆ. 6 ತಿಂಗಳೊಳಗೆ ಅವರು ಸಿಎಂ ಆಗಲಿದ್ದಾರೆ. ಹೀಗಾಗಿ, ಡಿನ್ನರ್ ಪಾರ್ಟಿಗಳನ್ನು ಮಾಡುತ್ತಿದ್ದಾರೆ. ಡಿಕೆಶಿಯವರು ವಿದೇಶ ಪ್ರವಾಸಕ್ಕೆ ತೆರಳಿದ ಸಮಯದಲ್ಲಿಯೇ ಡಿನ್ನರ್ ಪಾರ್ಟಿಗಳನ್ನು ಆಯೋಜನೆ ಮಾಡಿದ್ದಾರೆ ಎಂದ ಬಿಜೆಪಿ ಸಂಸದ ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರ(ಜ.05): ಮುಂದಿನ 6 ತಿಂಗಳೊಳಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಶನಿವಾರ ಸುದ್ದಿಗಾರರ ಜತೆ ಮಾತನಾಡಿ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಡಿನ್ನರ್ ಪಾರ್ಟಿ ಕುರಿತು ಪ್ರತಿಕ್ರಿಯಿಸಿದ ಡಾ। ಸುಧಾಕರ್, 'ಡಿಕೆಶಿ ಸಿಎಂ ಆಗುವ ದಿನ ಹತ್ತಿರ ಬರುತ್ತಿವೆ. 6 ತಿಂಗಳೊಳಗೆ ಅವರು ಸಿಎಂ ಆಗಲಿದ್ದಾರೆ. ಹೀಗಾಗಿ, ಡಿನ್ನರ್ ಪಾರ್ಟಿಗಳನ್ನು ಮಾಡುತ್ತಿದ್ದಾರೆ. ಡಿಕೆಶಿಯವರು ವಿದೇಶ ಪ್ರವಾಸಕ್ಕೆ ತೆರಳಿದ ಸಮಯದಲ್ಲಿಯೇ ಡಿನ್ನರ್ ಪಾರ್ಟಿಗಳನ್ನು ಆಯೋಜನೆ ಮಾಡಿದ್ದಾರೆ' ಎಂದರು.
ಮೋದಿ ನೇತೃತ್ವದ ಎನ್‌ಡಿಎ ಅವಧೀಲಿ ಕರ್ನಾಟಕಕ್ಕೆ 2 ಲಕ್ಷ ಕೋಟಿ ಅನುದಾನ: ಸಂಸದ ಸುಧಾಕರ್
ಬಿಜೆಪಿಯಲ್ಲಿ ಗುಂಪುಗಾರಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಗುಂಪುಗಾರಿಕೆ ಎಲ್ಲ ಪಕ್ಷಗಳಲ್ಲಿ ಇದೆ. ಕೇವಲ ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್ ನಲ್ಲೂ ಇದೆ. ಸಿಎಂ ಅವರೇ ಡಿನ್ನರ್‌ಮೀಟಿಂಗ್ ಮಾಡಿದ್ದಾರೆ. 35 ಮಂದಿ ಡಿನ್ನರ್‌ಮೀಟಿಂಗ್ ನಲ್ಲಿ ಭಾಗಿಯಾಗಿದ್ದರು. ಡಿಕೆಶಿ ಫಾರಿನ್ ಟೂರ್‌ನಲ್ಲಿ ಇರಬೇಕಾದರೆ ಸಿಎಂ ಮೀಟಿಂಗ್ ಮಾಡಿದ್ದು ಗುಂಪುಗಾರಿಕೆ ಅಲ್ಲವೇ? ಸಿದ್ದು ಗುಂಪುಗಾರಿಕೆ ಮಾಡುತ್ತಿದ್ದಾರೆ' ಎಂದರು.
ಬಾಣಂತಿಯರ ಸಾವಿಗೆ ನ್ಯಾಯ ಕೊಡಿಸಿ: ಕೇಂದ್ರಕ್ಕೆ ಸುಧಾಕರ್ ಪತ್ರ
ಚಿಕ್ಕಬಳ್ಳಾಪುರ: ಕರ್ನಾಟಕದಲ್ಲಿ ಹೆಚ್ಚುತ್ತಿರುವ ಬಾಣಂತಿಯರ ಸಾವಿಗೆ ನ್ಯಾಯ ಕೊಡಿಸಲು, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಹಾಗೂ ಕೇಂದ್ರ ಸರ್ಕಾರದಿಂದ ಸಂಶೋಧನಾ ತಂಡವನ್ನು ಕಳುಹಿಸಿ ಪರಿಶೀಲಿಸಬೇಕೆಂದು ಸಂಸದ ಡಾ.ಕೆ. ಸುಧಾಕರ್ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕೆಲವು ತಿಂಗಳಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಿನ ಸಂಖ್ಯೆ ವರದಿಯಾಗುತ್ತಿವೆ. 2024 ರ ನವೆಂಬರ್‌ವರೆಗೆ 348 ತಾಯಂದಿರು ಮೃತಪಟ್ಟಿದ್ದಾರೆ. ಆಗಸ್ಟ್‌ನಿಂದ ನವೆಂಬರ್‌ವರೆಗೆ ಕೇವಲ 4 ತಿಂಗಳಲ್ಲಿ 217 ಪ್ರಕರಣ ವರದಿಯಾಗಿವೆ. ಈ 217 ಪ್ರಕರಣಗಳಲ್ಲಿ 179 ಪ್ರಕರಣಗಳು ಸರ್ಕಾರಿ ಆಸ್ಪತ್ರೆಗಳಿಗೆ ಸಂಬಂಧಿಸಿದ್ದಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಸಿಎಂ ಆಕಾಂಕ್ಷಿ ಪಟ್ಟಿ ಕ್ರಿಕೆಟ್ ಟೀಂ ಕಟ್ಟುವಷ್ಟಿದೆ: ಸಂಸದ ಸುಧಾಕರ್
ಹೆಚ್ಚಿನ ಪ್ರಕರಣಗಳು ಪಿಪಿಎಚ್ ಹಾಗೂ ಎಎಫ್‌ಇ, ಅನೀಮಿಯ ಹಾಗೂ ನಿರ್ವಹಣೆಯಲ್ಲಿ ಲೋಪಕ್ಕೆ ಸಂಬಂಧಿಸಿವೆ. ಆಂಟಿಬಯೋಟಿಕ್ ಕೊರತೆ, ತರಬೇತಿ ಹೊಂದಿರುವ ಸಿಬ್ಬಂದಿ ಕೊರತೆ ಮೊದಲಾದವು ಕೂಡ ಇದಕ್ಕೆ ಕಾರಣ. ಇದರಲ್ಲಿ ಲಿಂಜರ್ಸ್ ಲ್ಯಾಕ್ಟೇಟ್ ದ್ರಾವಣದಲ್ಲಿ ದೋಷ ಕೂಡ ಕಾರಣ ಎನ್ನಲಾಗುತ್ತಿದೆ. ಆದ್ದರಿಂದ ಈ ಕುರಿತು ಸಮಗ್ರವಾದ ಪರಿಶೀಲನೆ ನಡೆಯುವ ಅಗತ್ಯವಿದೆ. ಮೊದಲಿಗೆ, ತಾಯಂದಿರ ಮರಣಕ್ಕೆ ಕಾರಣಗಳನ್ನು ಪತ್ತೆ ಮಾಡಲು ತುರ್ತಾಗಿ ಕಾರ್ಯಯೋಜನೆ ರೂಪಿಸಬೇಕು. ಜೊತೆಗೆ ಕೇಂದ್ರ ಸರ್ಕಾರದಿಂದ ಸಂಶೋಧನಾ ತಂಡವನ್ನು ಕಳುಹಿಸಿ, ಕಾರಣ ಪತ್ತೆ ಜೊತೆಗೆ, ಪರಿಹಾರವನ್ನು ಶಿಫಾರಸು ಮಾಡಬೇಕೆಂದು ಮನವಿ ಮಾಡಿದ್ದಾರೆ.
ಗರ್ಭಿಣಿಯರ ಆರೈಕೆ ಹಾಗೂ ಹೆರಿಗೆ ಸಮಯದಲ್ಲಿ ಉತ್ತಮ ಸೇವೆ ನೀಡಲು ಸರ್ಕಾರಿ ಆಸ್ಪತ್ರೆಗಳ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕಿದೆ. ಕಬ್ಬಿಣಾಂಶದ ಆಹಾರ ಸೇವನೆ, ತುರ್ತು ಆರೈಕೆ, ಪ್ರತಿ ದಿನ ಆರೋಗ್ಯ ತಪಾಸಣೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಗರ್ಭಿಣಿಯರಿಗೆ ಮಾಹಿತಿ ನೀಡಿ ಅರಿವು ಮೂಡಿಸಬೇಕೆಂದು ಪತ್ರದಲ್ಲಿ ಕೋರಿದ್ದಾರೆ.