ಜಮೀನು ದಾಖಲೆ ರಕ್ಷಣೆಗೆ ಭೂ ಸುರಕ್ಷಾ ಯೋಜನೆ ಸಹಕಾರಿ: ಸಚಿವ ಕೃಷ್ಣ ಬೈರೇಗೌಡ

ಎಲ್ಲಾ ದಾಖಲೆಗಳು ಆನ್ ಲೈನ್ ಮೂಲಕ ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗಿಸುವ ರಾಜ್ಯ ಸರ್ಕಾರದ ‘ಭೂಸುರಕ್ಷಾ ಯೋಜನೆ’ಗೆ ಇಂದು ಗುಡಿಬಂಡೆ ತಾಲೂಕಿನ ಮೂಲಕ ಚಾಲನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. 

Land Security Scheme helpful in protecting land records Says Minister Krishna Byre Gowda

ಚಿಕ್ಕಬಳ್ಳಾಪುರ/ಗುಡಿಬಂಡೆ (ಜ.09): ಚಿಕ್ಕಬಳ್ಳಾಪುರ ತಾಲೂಕು ಕಚೇರಿ, ಭೂ‌ಮಾಪನ‌ ಇಲಾಖೆ ಹಾಗೂ ಸಬ್ ರಿಜಿಸ್ಟ್ರಾರ್ ಕಚೇರಿಯ ಎ ಮತ್ತು ಬಿ ವರ್ಗದ ಕಡತಗಳ ಎಲ್ಲಾ ದಾಖಲೆಗಳನ್ನು ಕಂಪ್ಯೂಟರ್ ನಲ್ಲಿ ಸ್ಕ್ಯಾನ್ ಮಾಡಿ ಆ ಎಲ್ಲಾ ದಾಖಲೆಗಳು ಆನ್ ಲೈನ್ ಮೂಲಕ ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗಿಸುವ ರಾಜ್ಯ ಸರ್ಕಾರದ ‘ಭೂಸುರಕ್ಷಾ ಯೋಜನೆ’ಗೆ ಇಂದು ಗುಡಿಬಂಡೆ ತಾಲೂಕಿನ ಮೂಲಕ ಚಾಲನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭೂ ಸುರಕ್ಷಾ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಕಳೆದ ಮಾರ್ಚ್ 2024ರಲ್ಲಿ ಭೂ ಸುರಕ್ಷಾ ಯೋಜನೆಯನ್ನು ಜಾರಿ ಮಾಡಲಾಗಿತ್ತು. 

ಆರಂಭದಲ್ಲಿ ಪೈಲಟ್ ಯೋಜನೆಯ ಭಾಗವಾಗಿ ಪ್ರತಿ ಜಿಲ್ಲೆಯಿಂದ ಒಂದು ತಾಲೂಕನ್ನು ಆಯ್ಕೆ ಮಾಡಿಕೊಂಡು ಒಟ್ಟು 31 ತಾಲೂಕುಗಳಲ್ಲಿ ಯೋಜನೆಯನ್ನು ಜಾರಿ ಮಾಡಲಾಗಿತ್ತು. ಈಗ ಉಳಿದ 209 ತಾಲೂಕುಗಳಲ್ಲಿ ಭೂ ಸುರಕ್ಷಾ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಈ ಯೋಜನೆಯಿಂದ ರೈತರು, ಸಾರ್ವಜನಿಕರಿಗೆ ಸುಮಾರು 150 ವರ್ಷಗಳ ಹಳೆಯ ದಾಖಲೆಗಳು ಸ್ಕ್ಯಾನ್ ಆಗಿ ಕಂಪ್ಯೂಟರೀಕರಣಗೊಂಡು ಆನ್ ಲೈನ್ ನಲ್ಲಿ ಲಭ್ಯವಾಗಲಿವೆ. ಈ ದಾಖಲೆಗಳನ್ನು ಸಂಬಂಧಿಸಿದ ಕಚೇರಿಗಳಿಗೆ ಹೋಗದೆ ಇಂದು ಆರ್.ಟಿ.ಸಿ ಪಹಣಿಯನ್ನು ಆನ್ಲೈನ್ ನಲ್ಲಿ ಪಡೆಯುವ ವ್ಯವಸ್ಥೆಯಂತೆ ಮನೆಯಲ್ಲೇ ಕುಳಿತು ನೋಡಲು, ಮುದ್ರಿಸಿಕೊಳ್ಳಲು ಹಾಗೂ ದೃಢೀಕೃತ ಪ್ರತಿಗಳನ್ನು ಪಡೆಯಲು ಅವಕಾಶವಾಗಲಿದೆ ಎಂದರು.

ಬೆಳಗಾವಿ ವಿಭಜನೆ ಸದ್ಯಕ್ಕಿಲ್ಲ: ಸಚಿವ ಕೃಷ್ಣ ಬೈರೇಗೌಡ

ಜಮೀನಿನ‌ ಮಾಲೀಕತ್ವದ ಗ್ಯಾರಂಟಿ: ಭೂ ಸುರಕ್ಷಾ ಯೋಜನೆಯ ಮೂಲಕ ರೈತರಿಗೆ ಜಮೀನಿನ‌ ಮಾಲೀಕತ್ವದ ಗ್ಯಾರಂಟಿಯನ್ನು ನೀಡಲು ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈಗಾಗಲೇ 31 ತಾಲೂಕುಗಳಲ್ಲಿ 08 ತಿಂಗಳ ಹಿಂದೆ ಆರಂಭವಾದ ಪೈಲಟ್ ಕಾರ್ಯಕ್ರಮದಡಿ 14,87,000 ಕಡತಗಳನ್ನು ಸ್ಕ್ಯಾನ್ ಮಾಡಿ ಒಟ್ಟು 7 ಕೋಟಿ 95ಲಕ್ಷ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಉಳಿದ 209 ತಾಲೂಕುಗಳ ಒಟ್ಟು 150 ಕೋಟಿ ಪುಟಗಳ ದಾಖಲೆಗಳನ್ನು ಸ್ಕ್ಯಾನ್ ಮಾಡುವ ಗುರಿ ಹೊಂದಲಾಗಿದೆ. ಈ ಮಹತ್ವದ ಯೋಜನೆಯಿಂದ ತಾಲೂಕು ಕಚೇರಿಯ ಸಿಬ್ಬಂದಿ ಮೇಲಿನ ಕೆಲಸದ ಒತ್ತಡ ಕಡಿಮೆಯಾಗಲಿದೆ. ರೈತರಿಗೆ ಜಮೀನಿನ‌ ಮಾಲೀಕತ್ವದ ದಾಖಲೆಗಳು ಸುರಕ್ಷಿತವಾಗಿ ಮತ್ತು ಸುಲಭವಾಗಿ ಲಭ್ಯವಾಗುತ್ತವೆ. ಜೊತೆಗೆ ಹಳೆಯ ದಾಖಲೆಗಳು ಶಾಶ್ವತವಾಗಿ ಮತ್ತು ಬಂದೋಬಸ್ತ್ ಆಗಿ ಉಳಿಯುತ್ತವೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಮಾತನಾಡಿ, ಬಹು ದಶಕಗಳಿಂದ ಸವಾಲಾಗಿದ್ದ ಜೋಡಿ ಗ್ರಾಮಗಳ ಭೂ ದಾಖಲೆಗಳನ್ನು ಸರಿಪಡಿಸಲು ದಿಟ್ಟ ಕ್ರಮವಹಿಸುವಲ್ಲಿ ಈಗಿನ ಕಂದಾಯ ಸಚಿವರು ಮತ್ತು ನಮ್ಮ ಸರ್ಕಾರದ ಇಚ್ಛಾಶಕ್ತಿಯೇ ಪ್ರಮುಖ ಕಾರಣ, ಅದೇ ರೀತಿ ರೈತರಿಗೆ ಅತ್ಯಗತ್ಯವಾಗಿ ಬೇಕಾಗಿರುವ ಭೂ ದಾಖಲೆಗಳ ಸಮಸ್ಯೆಗಳನ್ನು ಶಾಶ್ವತವಾಗಿ ದೂರವಾಗಿಸಲು ನಮ್ಮ ಸರ್ಕಾರ ರೂಪಿಸಿರುವ ‘ಭೂ ಸುರಕ್ಷಾ ಯೋಜನೆ’ ತುಂಬಾ ಸಹಕಾರಿಯಾಗಿದೆ. ಬೆಂಗಳೂರಿನ ತ್ಯಾಜ್ಯ ನೀರನ್ನು ಈ ಭಾಗದ ಕೆರೆಗಳಿಗೆ ತುಂಬಿಸುವ ಎಚ್.ಎನ್ ಮತ್ತು ಕೆ.ಸಿ ವ್ಯಾಲಿ ಯೋಜನೆಗೆ ಕೃಷ್ಣಬೈರೇಗೌಡರ ದೂರದೃಷ್ಟಿಯೇ ಮುಖ್ಯ ಕಾರಣ ಎಂದು ಬಣ್ಣಿಸಿದರು.

ಅಮೃತ್ 2 ಯೋಜನೆಯಡಿ 18 ಕೋಟಿ: ಅಮಾನಿ ಬೈರ ಸಾಗರ ಕೆರೆಯಿಂದ ಗುಡಿಬಂಡೆ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶಕ್ಕಾಗಿ ಅಮೃತ್ 2 ಯೋಜನೆಯಡಿ 18 ಕೋಟಿ ನಿಗದಿಪಡಿಸಲಾಗಿದೆ. ಸದ್ಯದಲ್ಲೇ ಈ ಕಾಮಗಾರಿಗೆ ಚಾಲನೆ ನೀಡಲು ಯೋಜಿಸಲಾಗಿದೆ. ಅಲ್ಲದೆ ಬಾಗೇಪಲ್ಲಿ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ, ಈ ಭಾಗದ ವಿದ್ಯಾವಂತರಿಗೆ ಉದ್ಯೋಗ ಕೊಡುವ ಉದ್ದೇಶದಿಂದ ಈಗಾಗಲೇ ಬಾಗೇಪಲ್ಲಿ ತಾಲೂಕಿನಲ್ಲಿ 600 ಎಕರೆ ಜಮೀನಿಗೆ ಅಧಿಸೂಚನೆ ಹೊರಡಿಸಲಾಗಿದೆ. ಚಿಕ್ಕಬಳ್ಳಾಪುರ ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೂವಿನ ಮಾರುಕಟ್ಟೆಯನ್ನು 140 ಕೋಟಿ ರು. ವೆಚ್ಚದಲ್ಲಿ 20 ಎಕರೆ ಜಾಗದಲ್ಲಿ ನಿರ್ಮಿಸಲು ಗುರಿಹೊಂದಲಾಗಿದೆ ಎಂದು ತಿಳಿಸಿದರು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಫಲಾನುಭವಿಗಳಾದ ಮೌಲ, ಗಂಗಾದೇವಿ, ಕೋಮಲ, ನಾರಾಯಣಮ್ಮ, ಶಶಿಕಲಾ, ಸುಶಿಲಮ್ಮರಿಗೆ ಪಿಂಚಣಿ ಮಂಜೂರು ಪತ್ರಗಳನ್ನು ವಿತರಿಸಲಾಯಿತು. ಕಂದಾಯ ಆಯುಕ್ತ ಸುನಿಲ್ ಕುಮಾರ್, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಎಸ್ ಪಿ ಕುಶಾಲ್ ಚೌಕ್ಸೆ, ಎಡೀಸಿ ಡಾ. ಎನ್. ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಕೆ.ಎನ್, ಕೇಶವರೆಡ್ಡಿ, ಗುಡಿಬಂಡೆ ಪಟ್ಟಣ ಪಂಚಾಯತಿ ಅಧ್ಯಕ್ಷ ವಿಕಾಸ್ , ಉಪಾಧ್ಯಕ್ಷ ಗಂಗರಾಜು, ತಹಸೀಲ್ದಾರ್ ಸಿಗ್ಬತ್ ವುಲ್ಲ, ಗುಡಿಬಂಡೆ ತಾಪಂ ಇಒ ಎಂ. ನಾಗಮಣಿ ಹಾಗೂ ವಿವಿಧ ರೈತ ಸಂಘಟನೆಗಳ ಮುಖಂಡರು, ಜಿಲ್ಲಾ, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ರೈತರು ಇದ್ದರು.

ಬಿ.ವೈ.ವಿಜಯೇಂದ್ರ ವಿರುದ್ಧ ಸಿಬಿಐ ತನಿಖೆಯಾಗಲಿ: ಸಚಿವ ಕೃಷ್ಣ ಬೈರೇಗೌಡ

ಚೇಳೂರಿಗೆ ತಾಲೂಕು ಕಚೇರಿ ಕಟ್ಟಡ ಮಂಜೂರು: ಜಿಲ್ಲೆಯಲ್ಲಿ ನೂತನವಾಗಿ ರಚನೆಯಾಗಿರುವ ಚೇಳೂರಲ್ಲಿ ತಾಲೂಕು ಕಚೇರಿ ನಿರ್ಮಾಣಕ್ಕೆ ಹಣವನ್ನು ಈ ವರ್ಷ ಮಂಜೂರು ಮಾಡಲಾಗುವುದು. ಮುಂದಿನ ವರ್ಷ ಮಂಚೇನಹಳ್ಳಿ ತಾಲೂಕಿನ ಕಚೇರಿಗೆ ಮಂಜೂರು ಮಾಡಲಾಗುವುದು. ಮುಖ್ಯವಾಗಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಭಾಗಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಶಾಶ್ವತ ಕುಡಿಯುವ ನೀರಿನ ಎತ್ತಿನ ಹೊಳೆ ಯೋಜನೆ ತರುವ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios